BJP-JDS: ಭವಿಷ್ಯದಲ್ಲಿ ರಾಜ್ಯದಲ್ಲಿ ಕಮಲಕ್ಕೆ ತೆನೆ ಭಾರ
ರಾಜ್ಯ ಬಿಜೆಪಿ ನಾಯಕ ಬಗ್ಗೆ ವರಿಷ್ಠರ ಅಸಡ್ಡೆಗೆ ಬೇಸರ: "ಕೇಸರಿ ಕಲಿ'ಗಳ ಮೇಲೆ ತೆನೆ ಹೊತ್ತ ಮಹಿಳೆ ಸವಾರಿ ಆತಂಕ
Team Udayavani, Sep 23, 2023, 10:33 PM IST
ಬೆಂಗಳೂರು: ಲೋಕಸಭಾ ಚುನಾವಣೆ ದೃಷ್ಟಿಯಿಂದ ರಾಷ್ಟ್ರೀಯ ನಾಯಕರು ಜೆಡಿಎಸ್ ಅನ್ನು ಅಪ್ಪಿಕೊಳ್ಳಲು ತೋರುತ್ತಿರುವ ಧಾವಂತ ಬಿಜೆಪಿ ರಾಜ್ಯ ನಾಯಕರಲ್ಲಿ ಬೇಸರ ಮೂಡಿಸಿದೆ. ಭವಿಷ್ಯದಲ್ಲಿ ಕಮಲಕ್ಕೆ ತೆನೆ ಭಾರವಾಗುವ ಆತಂಕ ಕೇಸರಿಪಡೆಯನ್ನು ಆವರಿಸಿಕೊಂಡಿದೆ. ಆದರೆ ಇದು “ನರಿಯ ಕೂಗು ಗಿರಿ’ಗೆ ಮುಟ್ಟಿàತೇ ಎಂಬ ಗಾದೆ ಮಾತಿನಂತಾಗಿದ್ದು, ರಾಜ್ಯ ನಾಯಕರ ಅಭಿಪ್ರಾಯ ವರಿಷ್ಠರನ್ನು ತಲುಪದ ಸ್ಥಿತಿಯಲ್ಲಿದೆ.
ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ಸದನದ ಒಳಗೆ ಹಾಗೂ ಹೊರಗೆ ಹೊಂದಾಣಿಕೆಯ ಹೋರಾಟ ನಡೆಸೋಣ ಎಂಬ ಮಾತುಕತೆ ಬಿಜೆಪಿ-ಜೆಡಿಎಸ್ ರಾಜ್ಯ ನಾಯಕರ ಹಂತದಲ್ಲಿತ್ತು. ಹೀಗಾಗಿ ವರ್ಗಾವಣೆ, ಐಎನ್‌ಡಿಐಎ ಒಕ್ಕೂಟದ ಸಭೆಗೆ ಬಂದ ನಾಯಕರ ಆತಿಥ್ಯಕ್ಕೆ ಐಎಎಸ್ ಅಧಿಕಾರಿಗಳ ನಿಯೋಜನೆ ವಿವಾದ, ನೈಸ್ ವರದಿ ಸಹಿತ ಅನೇಕ ವಿಚಾರಗಳಲ್ಲಿ ಜಂಟಿ ಹೋರಾಟ ನಡೆಸಲಾಗಿತ್ತು. ಶಾಸಕರ ಅಮಾನತು ಪ್ರಕರಣದಲ್ಲಂತೂ ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ನಿಯೋಗದ ಜತೆಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ದೂರು ನೀಡುವವರೆಗೂ ಸಾಥ್ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಬಸವರಾಜ ಬೊಮ್ಮಾಯಿ ಅವರು ಕುಮಾರಸ್ವಾಮಿ ಕಚೇರಿಯಲ್ಲಿ ರಾಜ್ಯ ಸರಕಾರದ ವಿರುದ್ಧ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದರು.
ಪ್ರಸ್ತುತ ಮೈತ್ರಿ ವಿಚಾರದಲ್ಲಿ ರಾಷ್ಟ್ರೀಯ ನಾಯಕರು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಸಹಿತ ರಾಜ್ಯ ನಾಯಕರೆಲ್ಲರನ್ನೂ ಕತ್ತಲೆಯಲ್ಲಿಟ್ಟು ದೇವೇಗೌಡರ ಜತೆ ಮಾತುಕತೆ ನಡೆಸಿರುವುದು, ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಷಿಯವರನ್ನೂ ದೂರವಿಟ್ಟು ಗೋವಾ ಸಿಎಂ ಪ್ರಮೋದ್ ಸಾವಂತ್ ಉಪಸ್ಥಿತಿಯಲ್ಲಿ ಕುಮಾರಸ್ವಾಮಿ ಜತೆ ಅಮಿತ್ ಶಾ ಹಾಗೂ ಜೆ.ಪಿ.ನಡ್ಡಾ ಮೈತ್ರಿ ಮಾತುಕತೆ ನಡೆಸಿರುವುದು ರಾಜ್ಯ ನಾಯಕರ ಆತಂಕಕ್ಕೆ ಕಾರಣವಾಗಿದೆ. ಅಮಿತ್ ಶಾ ಜತೆಗಿನ ಚರ್ಚೆ ಸಹಿತ ಸಣ್ಣ ಮಾಹಿತಿಗೂ ರಾಜ್ಯ ನಾಯಕರು ಟಿವಿ ಬ್ರೇಕಿಂಗ್ ನ್ಯೂಸ್ ಅನ್ನೇ ಆಶ್ರಯಿಸುವಂತಾಗಿದೆ. ರಾಜ್ಯ ನಾಯಕರ ಬಗ್ಗೆ ವರಿಷ್ಠರ ಅಸಡ್ಡೆ ಆತಂಕ ಮೂಡಿಸಿದೆ.
ಲೆಕ್ಕಾಚಾರವೇ ಬದಲು
ಈ ಮೈತ್ರಿಯಿಂದ ಬಿಜೆಪಿಗೆ ಭವಿಷ್ಯದಲ್ಲಿ ನಷ್ಟ ಎಂಬುದು ಪಕ್ಷದ ಆಂತರಿಕ ಅಭಿಪ್ರಾಯ. ಇದು ದೂರಗಾಮಿ ಮೈತ್ರಿ ಎಂದು ಜೆಡಿಎಸ್ ಪಾಳಯದಿಂದ ಹಾರಿಸುತ್ತಿರುವ ಗಾಳಿಪಟವಂತೂ ರಾಜ್ಯ ನಾಯಕರು ಪಕ್ಷದಲ್ಲಿ ಹೊಂದಿರುವ ಬಿಗಿಹಿಡಿತವನ್ನೇ ಅಲುಗಾಡಿಸುವ ಸಾಧ್ಯತೆ ಇದೆ. ಬಿಜೆಪಿ ವರಿಷ್ಠರ ಜತೆಗೆ ದೇವೇಗೌಡ ಹಾಗೂ ಕುಮಾರಸ್ವಾಮಿ ಹಾಟ್‌ಲೆçನ್ ಸಂಪರ್ಕದಲ್ಲಿರುವುದರಿಂದ ಕೇಸರಿ ಕಲಿಗಳ ಮೇಲೆ ತೆನೆ ಹೊತ್ತ ಮಹಿಳೆ ಸದಾ ಸವಾರಿ ಮಾಡುವ ಆತಂಕ ಹೆಚ್ಚಾಗಿದೆ. ರಾಜ್ಯದ ವಿದ್ಯಮಾನಗಳಿಗೆ ಸಂಬಂಧಪಟ್ಟಂತೆ ಮೋದಿ-ಶಾ ಜೋಡಿ ಕುಮಾರಣ್ಣನನ್ನೇ ಸುದ್ದಿಮೂಲವಾಗಿಸಿಕೊಳ್ಳಬಹುದು ಎಂಬ ಭಯವೂ ಇಲ್ಲಿ ಅಡಗಿದೆ.
ಮೂಲಗಳ ಪ್ರಕಾರ ರಾಜ್ಯ ಬಿಜೆಪಿ ನಾಯಕ
ರನ್ನು ದಂಡಿಸುವುದಕ್ಕಾಗಿಯೇ ಮೋದಿ-ಶಾ ಜೋಡಿ ಕುಮಾರಸ್ವಾಮಿಗೆ ಹೆಚ್ಚು ಆದ್ಯತೆ ನೀಡುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯ ಸೋಲಿಗೆ ಕಾರಣ “ಬಿಎಸ್‌ವೈ’ (ಬೊಮ್ಮಾಯಿ, ಸಂತೋಷ್, ಯಡಿಯೂರಪ್ಪ ) ಎಂದು ಇವರಿಬ್ಬರು ಬಲವಾಗಿ ನಿರ್ಧರಿಸಿದ್ದಾರೆ. ಈ ಮೂವರು ನೀಡಿದ್ದ ತಪ್ಪು ಮಾಹಿತಿ ಹಾಗೂ ವೈಯಕ್ತಿಕ ಪ್ರತಿಷ್ಠೆಯೇ ಸೋಲಿನ ಮೂಲ ಎಂಬುದು ಮೋದಿ-ಶಾ ನಿಲುವು. ಹೀಗಾಗಿ ಲೋಕಸಭಾ ಚುನಾವಣೆ ವಿಚಾರದಲ್ಲಿ ಈ ಮೂವರ ಮಾತನ್ನು ಅಗತ್ಯ ಬಿದ್ದರೆ ಮಾತ್ರ ಆಲಿಸಲು ಮುಂದಾಗಿದ್ದು, ಕುಮಾರಸ್ವಾಮಿಗೆ ಹೆಚ್ಚು ಪ್ರಾಮುಖ್ಯ ನೀಡುತ್ತಿದ್ದಾರೆ. ಇದು ಬಿಜೆಪಿಯ ಎರಡನೇ ಹಂತದ ನಾಯಕರಲ್ಲೂ ಬೇಸರ ಸೃಷ್ಟಿಸಿದೆ.
ಬಿಜೆಪಿಯ ಎರಡನೇ ಹಂತದ ನಾಯಕರ ಪ್ರಕಾರ ಈ ಮೈತ್ರಿಯಿಂದ ಬಿಜೆಪಿಗಿಂತಲೂ ಜೆಡಿಎಸ್‌ಗೆ ಹೆಚ್ಚು ಲಾಭವಾಗುತ್ತದೆ. ಸೋತು ಸುಣ್ಣವಾಗಿದ್ದ ಜೆಡಿಎಸ್‌ಗೆ ಜೀವ ಬಂದಂತಾಗುತ್ತದೆ. ಹಳೆ ಮೈಸೂರು ಭಾಗದಲ್ಲಿ ಮತ್ತೆ ಬಲಶಾಲಿಯಾಗಿ ಮುಂದಿನ ಚುನಾವಣೆ ವೇಳೆಗೆ “ಸ್ಟಾಂಡರ್ಡ್ ಸೀಟ್’ ಗಳಿಸುವಷ್ಟು ಬಲ ಜಾತ್ಯತೀತ ಜನತಾ ದಳಕ್ಕೆ ಲಭಿಸುತ್ತದೆ. ಹೀಗಾಗಿ ಹಳೆ ಮೈಸೂರು ಭಾಗದಲ್ಲಿ ಸ್ವತಂತ್ರವಾಗಿ ಬೆಳೆಯಬೇಕೆಂಬ ಬಿಜೆಪಿಯ ಆಸೆ ಕನಸಾಗಿಯೇ ಉಳಿಯುತ್ತದೆ. ಮಾತ್ರವಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲೂ ಜೆಡಿಎಸ್ ಪಾಲು ಕೇಳಬಹುದಾಗಿದೆ.
ಆದರೆ ರಾಜ್ಯ ನಾಯಕರ ಈ ಯಾವ ಆತಂಕಗಳಿಗೂ ವರಿಷ್ಠರು ಸೊಪ್ಪು ಹಾಕುವ ಸ್ಥಿತಿಯಲ್ಲೇ ಇಲ್ಲ. ಸೋರುತ್ತಿರುವ ಮನೆಯ ದುರಸ್ತಿಗೆ ನೆರೆಹೊರೆಯವರ ಅಭಿಪ್ರಾಯವೇ ಆಪ್ಯಾಯಮಾನವೆನ್ನಿಸುತ್ತಿದೆ. ಹೀಗಾಗಿ ಪಕ್ಷದ ಘಟಾನುಘಟಿ ನಾಯಕರಿಗಿಂತಲೂ ಜೆಡಿಎಸ್ ಸಖ್ಯ ವರಿಷ್ಠರಿಗೆ ಹಿತವಾಗಿ ಕಾಣುತ್ತಿದೆ.
ಸಿದ್ದರಾಮಯ್ಯ ಕಳವಳ
ಇದೆಲ್ಲದರ ಮಧ್ಯೆ ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್ ಪಾಳಯದಲ್ಲಿ ಹೆಚ್ಚು ಆತಂಕಕ್ಕೆ ಒಳಗಾದವರು ಸಿಎಂ ಸಿದ್ದರಾಮಯ್ಯ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಕೆಯ ಉತ್ಸಾಹದಲ್ಲಿದ್ದ ಅವರಿಗೆ ಮೈತ್ರಿ ತುಸು ಬೇಸರ ಮೂಡಿಸಿದೆ. ಜತೆಗೆ ತಮ್ಮ ಪುತ್ರ ಡಾ| ಯತೀಂದ್ರ ಅವರನ್ನು ಮೈಸೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಹೊಂದಿದ್ದ ಲೆಕ್ಕಾಚಾರದ ಬಗ್ಗೆ ಮಗದೊಮ್ಮೆ ಯೋಚಿಸುವಂತೆ ಮಾಡಿದೆ.
ಜೆಡಿಎಸ್‌ನಲ್ಲಿ ಜಾತ್ಯತೀತ ತತ್ವ ಉಳಿದಿಲ್ಲ: ಮುನಿಯಪ್ಪ
ಚಿತ್ರದುರ್ಗ: ಜೆಡಿಎಸ್ ಜಾತ್ಯತೀತ ನಿಲುವಿನ ಪಕ್ಷ. ಆ ಪಕ್ಷದ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರ ಹಾದಿ ಇತಿಹಾಸದುದ್ದಕ್ಕೂ ಉತ್ತಮವಾಗಿತ್ತು. ಆದರೆ ಈಗ ಹಾದಿ ತಪ್ಪುತ್ತಿದ್ದಾರೆ ಎಂದನ್ನಿಸುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಜಾತ್ಯತೀತ ತತ್ವವನ್ನು ಪ್ರತಿಪಾದಿಸುವ ಎಚ್.ಡಿ. ದೇವೇಗೌಡರನ್ನು ಕಾಂಗ್ರೆಸ್ ಪ್ರಧಾನಿಯಾಗಿ ಮಾಡಿತ್ತು. ಅದೇ ಹಾದಿಯಲ್ಲಿ ದೇವೇಗೌಡರು ಹಾಗೂ ಜೆಡಿಎಸ್ ಇರಬೇಕಾಗಿತ್ತು. ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಆದರೆ ಕಾರಣಾಂತರಗಳಿಂದ ಅವರು ಅಧಿ ಕಾರ ನಡೆಸಲು ಸಾಧ್ಯವಾಗಲಿಲ್ಲ. ಈಗ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಆದ್ದರಿಂದ ಮುಂದೆ ಜೆಡಿಎಸ್‌ನಲ್ಲಿ ಜಾತ್ಯತೀತ ತತ್ವ ಉಳಿಯುವುದಿಲ್ಲ ಅನ್ನಿಸುತ್ತದೆ ಎಂದರು.
ರಾಘವೇಂದ್ರ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.