ನಮೋ ಸಂಪುಟದಲ್ಲಿ ಕರ್ನಾಟಕದ ನಾಲ್ವರಿಗೆ ಮಂತ್ರಿ ಸ್ಥಾನ
Team Udayavani, May 31, 2019, 3:09 AM IST
ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದು, ಅವರ ಜತೆ ಸಚಿವ ಸಂಪುಟದಲ್ಲಿ ರಾಜ್ಯದ ನಾಲ್ವರು ಸ್ಥಾನ ಪಡೆದಿದ್ದಾರೆ. ರಾಜ್ಯದಿಂದ ರಾಜ್ಯ ಸಭೆ ಪ್ರವೇಶಿಸಿರುವ ನಿರ್ಮಲಾ ಸೀತಾರಾಮನ್, ಬೆಂಗಳೂರು ಉತ್ತರ ಕ್ಷೇತ್ರದ ಡಿ.ವಿ. ಸದಾನಂದ ಗೌಡ, ಹುಬ್ಬಳ್ಳಿ-ಧಾರವಾಡ ಕ್ಷೇತ್ರದ ಸಂಸದ ಪ್ರಹ್ಲಾದ್ ಜೋಶಿ ಮತ್ತು ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರ ಕಿರು ಪರಿಚಯ ಇಲ್ಲಿದೆ.
ಆರ್ಥಿಕ ತಜ್ಞೆ, ಮಾಜಿ ರಕ್ಷಣಾ ಸಚಿವೆ
ಬೆಂಗಳೂರು: ತಮಿಳುನಾಡಿನ ಮಧುರೈ ಮೂಲದ ನಿರ್ಮಲಾ ಸೀತಾರಾಮನ್, 1984ರಲ್ಲಿ ದೆಹಲಿಯ ಜೆಎನ್‌ಯು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇಂಗ್ಲೆಂಡ್‌ನ ಕೃಷಿ ಎಂಜಿನಿಯರ್ನ ಸಹಾಯಕ ಆರ್ಥಿಕ ತಜ್ಞೆಯಾಗಿಯೂ ಕೆಲಸ ಮಾಡಿದರು. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಯೂ ಕಾರ್ಯ ನಿರ್ವಹಿಸಿದ್ದಾರೆ.
ಆಂಧ್ರಪ್ರದೇಶದ ನರಸಾಪುರಂ ಮೂಲದ ಪ್ರಕಾಲ ಪ್ರಭಾಕರ್ ಅವರನ್ನು ವಿವಾಹವಾದರು. ಪ್ರಕಾಲ ಪ್ರಭಾಕರ್ ಅವರು ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಸಂವಹನಾ ಸಲಹೆಗಾ ರರಾಗಿದ್ದರು. ನಿರ್ಮಲಾ, 2008ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು. 2014ರಲ್ಲಿ ಮೋದಿ ಸಂಪುಟದಲ್ಲಿ ಸಹಾಯಕ ಸಚಿವರಾಗಿ ಸೇರ್ಪಡೆಯಾದರು.
2014ರಲ್ಲಿ ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 2016ರಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ 2ನೇ ಬಾರಿಗೆ ಆಯ್ಕೆಯಾದರು. 2017ರಲ್ಲಿ ರಕ್ಷಣಾ ಸಚಿವೆಯಾಗಿ ಬಡ್ತಿ ಪಡೆದರು. ಇಂದಿರಾಗಾಂಧಿ ನಂತರ ರಕ್ಷಣಾ ಸಚಿವರಾಗಿ ಕೆಲಸ ಮಾಡಿದ ಮಹಿಳೆ ಎಂಬ ಖ್ಯಾತಿಯೂ ಇವರದು.
ಜನನ: 18 ಆಗಸ್ಟ್, 1959, ಮಧುರೈ.
ಪಾಲಕರು: ನಾರಾಯಣನ್ ಸೀತಾರಾಮನ್ (ತಂದೆ), ಸಾವಿತ್ರಿ (ತಾಯಿ).
***
ಜನಸಂಘದ ಮೂಲಕ ರಾಜಕೀಯ ಪ್ರವೇಶ
ಪುತ್ತೂರು: ಜನಸಂಘದ ಮೂಲಕ ರಾಜಕೀಯ ಪ್ರವೇಶಿಸಿದ ಡಿ.ವಿ.ಸದಾನಂದ ಗೌಡರು ಸುಳ್ಯ ವಿಧಾನಸಭೆ ಘಟಕದ ಅಧ್ಯಕ್ಷರಾದರು. ನಂತರ, ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ, ರಾಷ್ಟ್ರೀಯ ಕಾರ್ಯದರ್ಶಿ ಹೊಣೆಗಾರಿಕೆ ನಿಭಾಯಿಸಿದ್ದರು.
* 1994ರಲ್ಲಿ ಮೊದಲ ಬಾರಿಗೆ ಪುತ್ತೂರು ವಿಧಾನಸಭೆಗೆ ಆಯ್ಕೆಯಾದ ಇವರು, 1999ರಲ್ಲಿ ಎರಡನೇ ಬಾರಿ ಆಯ್ಕೆಯಾದಾಗ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕನಾಗಿ ಕಾರ್ಯ ನಿರ್ವಹಿಸಿದ್ದರು.
* 2004ರಲ್ಲಿ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದ ಗೌಡರು, 2005ರಲ್ಲಿ ಕೇಂದ್ರ ಕಾಫಿ ಮಂಡಳಿಯ ನಿರ್ದೇಶಕರಾದರು. 2006ರಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದರು. 2009ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ನಂತರ, 2011ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ನಂತರ, ವಿಧಾನಪರಿಷತ್‌ನಲ್ಲಿ ಪ್ರತಿಪಕ್ಷದ ನಾಯಕರೂ ಆಗಿದ್ದರು.
* 2014ರಲ್ಲಿ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಗೌಡರು, ಮೊದಲಿಗೆ ರೈಲ್ವೆ ಸಚಿವರಾಗಿ, ನಂತರ ಅಂಕಿ-ಸಾಂಖೀÂಕ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.
* ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಎರಡನೇ ಬಾರಿಗೆ ಮತ್ತೆ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದೀಗ, ಎರಡನೇ ಬಾರಿಗೆ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಪುತ್ತೂರಿನಿಂದ ರಾಜಕೀಯ ಅಸ್ತಿತ್ವ ಪಡೆದ ಡಿ.ವಿ.: ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡದ ವೆಂಕಪ್ಪ ಗೌಡ ಮತ್ತು ಕಮಲಾ ದಂಪತಿಯ ಪುತ್ರನಾಗಿ 1953ರಲ್ಲಿ ಜನಿಸಿದ ಡಿವಿ, ಪುತ್ತೂರು ತಾಲೂಕಿನ ಕೆಯ್ಯೂರು ಮತ್ತು ಸುಳ್ಯದಲ್ಲಿ ಶಿಕ್ಷಣ ಪಡೆದು, ನಂತರ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿಎಸ್ಸಿ ಪದವಿ, ಉಡುಪಿಯಲ್ಲಿ ಕಾನೂನು ಪದವಿ ಪಡೆದವರು.
ಗೌಡರ ಮೂಲವೃತ್ತಿ ವಕೀಲಿಕೆ. 1976ರಲ್ಲಿ ಪುತ್ತೂರು ಮತ್ತು ಸುಳ್ಯದಲ್ಲಿ ವೃತ್ತಿ ಆರಂಭಿಸಿದ ಅವರು, ಪುತ್ತೂರಿನ ಹಿರಿಯ ನ್ಯಾಯವಾದಿ ಯು.ಪಿ.ಶಿವರಾಮ ಗೌಡರ ಬಳಿ ಕಿರಿಯ ನ್ಯಾಯವಾದಿಯಾಗಿದ್ದರು. ಶಿರಸಿಯಲ್ಲಿ ಸ್ವಲ್ಪ ಕಾಲ ಸಹಾಯಕ ಸರಕಾರಿ ಅಭಿಯೋಜಕರಾಗಿ ಕಾರ್ಯ ನಿರ್ವಹಿಸಿ ಬಳಿಕ ಪುತ್ತೂರಿಗೆ ಮರಳಿ ಆರೆಸ್ಸೆಸ್ ಪ್ರೇರಣೆಯಿಂದ ಬಿಜೆಪಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು.
ಪುತ್ತೂರಿನಿಂದ ರಾಜಕೀಯ ಜೀವನ: ಆರಂಭದಲ್ಲಿ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷರಾಗಿದ್ದ ಡಿ.ವಿ.,1989ರಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಪ್ರಥಮ ಬಾರಿಗೆ ಸ್ಪರ್ಧಿಸಿ ವಿನಯ ಕುಮಾರ್ ಸೊರಕೆ ಎದುರು ಸೋಲು ಕಂಡರು. ಬಳಿಕ ಪುತ್ತೂರನ್ನೇ ತಮ್ಮ ರಾಜಕೀಯ ಹೋರಾಟದ ಪ್ರಧಾನ ಕ್ಷೇತ್ರವನ್ನಾಗಿ ಆಯ್ದುಕೊಂಡರು.
ಈ ಭಾಗದ ಸಮಸ್ಯೆಗಳಿಗೆ ಧ್ವನಿಯಾಗಿ ನಿರಂತರ ಹೋರಾಟ ನಡೆಸಿದರು. ಅಡಿಕೆಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಸುಳ್ಯದಿಂದ ಮಂಗಳೂರು ತನಕ ಪಾದಯಾತ್ರೆ, ಎಚ್‌ಪಿಸಿಎಲ್ ಪೈಪ್‌ಲೈನ್ ಅಳವಡಿಕೆ ವಿರೋಧಿಸಿ ಶಿರಾಡಿಯಿಂದ ಪುತ್ತೂರು ತನಕ ರೈತರ ಪಾದಯಾತ್ರೆ ಇವು ಡಿವಿ ಜನಪರ ಹೋರಾಟಗಳಲ್ಲಿ ಪ್ರಮುಖವಾದವು.
***
ಗುರಿ ನಿರ್ದಿಷ್ಟ, ನಿರ್ಧಾರ ಅಚಲ, ಸಾಧನೆ ನಿರಂತರ
ಬೆಳಗಾವಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟದಲ್ಲಿ ನೂತನ ಸಚಿವರಾಗಿರುವ ಸುರೇಶ ಅಂಗಡಿ, ಉದ್ಯಮ ಹಾಗೂ ರಾಜಕಾರಣ ಹೀಗೆ ಎರಡೂ ದಡಗಳ ಮೇಲೆ ಕಾಲಿಟ್ಟು ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಯುವ ರಾಜಕಾರಣಿಗಳಿಗೆ ಹೊಸ ಹಾದಿ ತೋರಿಸಿದ್ದಾರೆ.
ರಾಜಕೀಯ ಹಿನ್ನೆಲೆಯ ಮನೆತನ ಅಲ್ಲ. ಆರಂಭದಲ್ಲಿ ರಾಜಕೀಯವಾಗಿ ಪಳಗಿದವರೂ ಅಲ್ಲ.
ಆದರೆ, ರಾಜಕಾರಣ ಪ್ರವೇಶ ಮಾಡಿದ ಮೇಲೆ ಗುರಿ ನಿರ್ದಿಷ್ಟ. ನಿರ್ಧಾರ ಅಚಲ. ಸಾಧನೆ ನಿರಂತರ. ಇದು ಬೆಳಗಾವಿ ಲೋಕಸಭಾ ಕ್ಷೇತ್ರದ ಸದಸ್ಯ ಸುರೇಶ ಅಂಗಡಿಯ ವ್ಯಕ್ತಿತ್ವದ ವಿಶೇಷ. ಬಿಜೆಪಿಯ ದಿಗ್ಗಜ ನಾಯಕರಾದ ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜತೆಗಿನ ಉತ್ತಮ ಬಾಂಧವ್ಯ, ಅಂಗಡಿಗೆ ಸಾಕಷ್ಟು ಉತ್ತಮ ಅವಕಾಶಗಳನ್ನು ಕೊಟ್ಟವು.
90ರ ದಶಕದಲ್ಲಿ ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿ ರಾಜಕೀಯ ಪ್ರವೇಶ ಮಾಡಿದ ಸುರೇಶ ಅಂಗಡಿ, ಪಕ್ಷದ ಅನೇಕ ಹೋರಾಟಗಳಲ್ಲಿ ಭಾಗಿಯಾದರು. 1990ರಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸ್ಥಾನ ಕೊಡಿಸುವಲ್ಲಿ ಈ ಹೋರಾಟ ಫಲ ನೀಡಿತು. ನಂತರ, 2001ರಲ್ಲಿ ಜಿಲ್ಲಾ ಅಧ್ಯಕ್ಷ ಸ್ಥಾನ ಅಲಂಕರಿಸಿದರು.
2004ರಲ್ಲಿ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಿಕ್ಕಿತು. 2008ರಲ್ಲಿ ಎರಡನೇ ಬಾರಿಗೆ ಗೆದ್ದ ಅಂಗಡಿ, ಮೂರನೇ ಪ್ರಯತ್ನದಲ್ಲಿ ಕಾಂಗ್ರೆಸ್‌ನಿಂದ ಪೈಪೋಟಿ ಎದುರಿಸಿದರೂ ಅದು ಅವರ ಹ್ಯಾಟ್ರಿಕ್ ಸಾಧನೆಗೆ ಅಡ್ಡಿ ಬರಲಿಲ್ಲ. ಮೋದಿ ಅಲೆಯಲ್ಲಿ ಈ ಸಾಧನೆ ಮಾಡಿದ ಅಂಗಡಿ, 2019ರ ಚುನಾವಣೆಯಲ್ಲಿ 3.87 ಲಕ್ಷಕ್ಕೂ ಅಧಿಕ ಮತಗಳಿಂದ ಜಯಗಳಿಸಿ, ಕಾಂಗ್ರೆಸ್‌ನ ಮಾಜಿ ಸಂಸದ ಎಸ್.ಬಿ.ಸಿದ್ನಾಳ ಅವರ ಸತತ ನಾಲ್ಕು ಬಾರಿ ಗೆಲುವಿನ ದಾಖಲೆ ಸರಿಗಟ್ಟಿದರು.
ಅಜಾತಶತ್ರು ಎನಿಸಿಕೊಂಡಿರುವ ಇವರ ಹೋರಾಟದ ಫಲವಾಗಿ ಬೆಳಗಾವಿ ರೈಲ್ವೆ ನಿಲ್ದಾಣ ಕಳೆದ ಐದಾರು ವರ್ಷಗಳ ಅವಧಿಯಲ್ಲಿ ಗಣನೀಯ ಅಭಿವೃದ್ಧಿ ಕಂಡಿದೆ. ಹೊಸ ರೈಲುಗಳ ಓಡಾಟ ಆರಂಭವಾಗಿದೆ. ರೈಲ್ವೆ ಮೇಲು ಸೇತುವೆ ನಿರ್ಮಾಣವಾಗಿದೆ. ಉದ್ಯಮಿಗಳಿಗೆ ಅನುಕೂಲವಾಗಲು ರಫ್ತು ಮಹಾನಿರ್ದೇಶಕರ ಕಚೇರಿ ಸ್ಥಾಪನೆ ಮಾಡಲಾಗಿದೆ. ಸಾಂಬ್ರಾ ವಿಮಾನ ನಿಲ್ದಾಣ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ರೂಪುಗೊಂಡಿದೆ.
ರಾಜಕೀಯದ ದಾರಿ
* 1990ರ ದಶಕದಲ್ಲಿ ರಾಜಕೀಯ ಪ್ರವೇಶ.
* 1996 ರಿಂದ 1999 ರವರೆಗೆ ಬೆಳಗಾವಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ.
* 2000 2004 ರವರೆಗೆ ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆ ಕಾರ್ಯಕಾರಿ ಸದಸ್ಯ.
* 2001 -2004 ರವರೆಗೆ ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷ.
* 2004 ಪ್ರಥಮ ಬಾರಿಗೆ ಬೆಳಗಾವಿ ಲೋಕಸಭಾ ಸದಸ್ಯರಾಗಿ ಆಯ್ಕೆ.
* 2004 ಸಂಸತ್‌ನಲ್ಲಿ ಆಹಾರ, ಸಾರ್ವಜನಿಕರ ಪಡಿತರ ವಿತರಣೆ ಸ್ಥಾಯಿ ಸಮಿತಿ ಸದಸ್ಯರಾಗಿ ನೇಮಕ. ಹಣಕಾಸು ಇಲಾಖೆಯ ಕನ್ಸುಲೇಟಿವ್ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಣೆ
* 2009: ಲೋಕಸಭೆಗೆ ಪುನರಾಯ್ಕೆ. 1.18 ಲಕ್ಷ ಮತಗಳಿಂದ ಭಾರೀ ಅಂತರದಿಂದ ಗೆಲುವು.
* 2014ರಲ್ಲಿ ಮತ್ತೆ ಜಯಭೇರಿ. ಹ್ಯಾಟ್ರಿಕ್ ಸಾಧನೆ.
* 2019: ಸತತ ನಾಲ್ಕನೇ ಜಯ. ಕಾಂಗ್ರೆಸ್‌ನ ಮಾಜಿ ಸಂಸದ ಎಸ್.ಬಿ.ಸಿದ್ನಾಳ ಅವರ ದಾಖಲೆ ಸಮ.
* 3.87 ಲಕ್ಷ ಕ್ಕೂ ಅಧಿಕ ಮತಗಳಿಂದ ದಾಖಲೆಯ ಜಯ. ಲೋಕಸಭೆ ವಸತಿ ಸಮಿತಿ, ರಕ್ಷಣಾ ಇಲಾಖೆ ಸ್ಥಾಯಿ ಸಮಿತಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿ, ಪಿಂಚಣಿ, ವೇತನ ಮತ್ತು ಸಂಸತ್ ಸದಸ್ಯರ ಭತ್ಯೆ ಸಮಿತಿ ಸದಸ್ಯರಾಗಿ ನೇಮಕ. ಕೇಂದ್ರ ನೇರ ತೆರಿಗೆ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಣೆ.
ಹೆಸರು: ಸುರೇಶ ಚನ್ನಬಸಪ್ಪ ಅಂಗಡಿ,
ಜನ್ಮಸ್ಥಳ: ಕೆ ಕೆ ಕೊಪ್ಪ, ಬೆಳಗಾವಿ ತಾಲೂಕು.
ಜನ್ಮದಿನ: 1 ಜೂನ್ 1955
ತಾಯಿ ಹೆಸರು: ಸೋಮವ್ವ ಸಿ.ಅಂಗಡಿ
ವಿದ್ಯಾರ್ಹತೆ: ಬಿ ಕಾಂ. ಎಲ್‌ಎಲ್‌ಬಿ (ಸ್ಪೆಷಲ್)
ಪತ್ನಿ ಹೆಸರು: ಮಂಗಳಾ ಸುರೇಶ ಅಂಗಡಿ.
ದೂರವಾಣಿ ಸಂಖ್ಯೆ: 0831-2452916. 2405141.
ಕಾರ್ಯಕ್ಷೇತ್ರ: ಬೆಳಗಾವಿ ಲೋಕಸಭಾ ಕ್ಷೇತ್ರ.
ಕ್ರೀಡೆ ಮತ್ತು ಹವ್ಯಾಸ: ಗಾಲ್ಫ್.
***
ನಾಲ್ಕು ದಶಕದ ಬಳಿಕ ವಿದ್ಯಾಕಾಶಿ ಧಾರವಾಡಕ್ಕೆ ಒಲಿದ ಅವಕಾಶ
ಹುಬ್ಬಳ್ಳಿ: ಸುಮಾರು ನಾಲ್ಕು ದಶಕಗಳ ನಂತರ ಮೊದಲ ಬಾರಿಗೆ ಧಾರವಾಡ ಜಿಲ್ಲೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ದೊರೆತಿದೆ. ಸಂಘ ನಿಷ್ಠೆ, ಪಕ್ಷ ಬದ್ಧತೆಯೊಂದಿಗೆ ಸತತವಾಗಿ ನಾಲ್ಕು ಬಾರಿ ಲೋಕಸಭೆಗೆ ಆಯ್ಕೆ ಯಾಗಿರುವ ಸಂಸದ ಪ್ರಹ್ಲಾದ ಜೋಶಿ ಅವರಿಗೆ ಕೇಂದ್ರ ಸಚಿವ ಸ್ಥಾನದ ಭಾಗ್ಯ ಲಭಿಸಿದೆ.
ಡಿ.ಪಿ.ಕರಮಕರ್, ಸರೋ ಜಿನಿ ಮಹಿಷಿ ಹಾಗೂ ಎಫ್.ಎಚ್.ಮೊಹ್ಸಿನ್ ಅವರು ಕೇಂದ್ರ ಸಚಿವರಾದ ನಂತರ ಧಾರವಾಡ ಜಿಲ್ಲೆಗೆ ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಹ್ಲಾದ ಜೋಶಿ ಅವರ ಮೂಲಕ ಸ್ಥಾನ ದೊರೆತಂತಾಗಿದೆ. ಅವಿಭಜಿತ ಧಾರವಾಡ ಜಿಲ್ಲೆಗೆ 1976-77ರ ನಂತರದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಸ್ಥಾನ ಒಲಿದು ಬಂದಿದೆ.
ಧಾರವಾಡ ಉತ್ತರ ಲೋಕಸಭೆ ಕ್ಷೇತ್ರ(ಈಗಿನ ಧಾರವಾಡ ಲೋಕಸಭೆ ಕ್ಷೇತ್ರ) ಪ್ರತಿನಿಧಿಸಿದ್ದ ಡಿ.ಪಿ.ಕರಮಕರ್ ಅವರು 1952-57ರವರೆಗೆ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಆರೋಗ್ಯ ವಿಜ್ಞಾನ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅದೇ ರೀತಿ ಇದೇ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದ ಸರೋಜಿನಿ ಮಹಿಷಿಯವರು 1971-76ರವರೆಗೆ ಕೇಂದ್ರ ಸಹಾಯಕ ಸಚಿವರಾಗಿ ಪ್ರವಾಸೋದ್ಯಮ, ವಿಮಾನಯಾನ, ಕಾನೂನು, ಕಂಪನಿ ವ್ಯವಹಾರ ಖಾತೆ ನಿಭಾಯಿಸಿದ್ದರು.
ಧಾರವಾಡ ದಕ್ಷಿಣ ಲೋಕಸಭೆ ಕ್ಷೇತ್ರ(ಈಗಿನ ಹಾವೇರಿ ಲೋಕಸಭೆ ಕ್ಷೇತ್ರ)ವನ್ನು 1962-80ರವರೆಗೆ ಸತತ ಐದು ಬಾರಿ ಪ್ರತಿನಿಧಿಸಿದ್ದ ಎಫ್.ಎಚ್.ಮೊಹ್ಸಿನ್ ಅವರು 1971-77ರವರೆಗೆ ಕೇಂದ್ರ ಗೃಹ ವ್ಯವಹಾರಗಳ ಉಪ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅದು ಬಿಟ್ಟರೆ ಇದೀಗ ನರೇಂದ್ರ ಮೋದಿ ನೇತೃತ್ವದ ಎರಡನೇ ಬಾರಿಯ ಕೇಂದ್ರ ಸರ್ಕಾರದಲ್ಲಿ ಧಾರವಾಡ ಕ್ಷೇತ್ರದ ಸಂಸದ ಪ್ರಹ್ಲಾದ ಜೋಶಿ ಅವರಿಗೆ ಕೇಂದ್ರ ಸಚಿವ ಸ್ಥಾನದ ಅವಕಾಶ ಲಭಿಸಿದೆ.
ವಾಮನಿಂದ ತ್ರಿವಿಕ್ರಮನಾದ: ಪ್ರಹ್ಲಾದ ಜೋಶಿ ವಿದ್ಯಾರ್ಥಿಯಾಗಿದ್ದಾಗಿನಿಂದಲೇ ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದವರು, ಸಂಘದಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. ಹಲವು ಹೋರಾಟಗಳ ಮೂಲಕ ರಾಜಕೀಯ ಪ್ರವೇಶಿಸಿದ ಜೋಶಿ, ಬಿಜೆಪಿಯಲ್ಲಿ ವಾಮನಮೂರ್ತಿಯಂತೆ ಸಾಮಾನ್ಯ ಕಾರ್ಯಕರ್ತರಾಗಿ ಪ್ರವೇಶ ಪಡೆದ ಪಕ್ಷದ ಜಿಲ್ಲಾಧ್ಯಕ್ಷರಿಂದ ರಾಜ್ಯಾಧ್ಯಕ್ಷ ಸ್ಥಾನದವರೆಗೂ ತಿವಿಕ್ರಮರಾಗಿ ಬೆಳೆದು ನಿಂತವರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು, ಮುಂದೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದರು. 2013-16ರವರೆಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ಹೊಂದುವ ಪೂರ್ವದಲ್ಲಿ ವಿವಿಧ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು.
ಡಾ| ಮುರಳಿ ಮನೋಹರ ಜೋಶಿ ನೇತೃತ್ವದಲ್ಲಿ ಆರಂಭಿಸಿದ್ದ ಕಾಶ್ಮೀರ ಉಳಿಸಿ ಆಂದೋಲನದಡಿ ಸ್ಥಳೀಯ ಆಂದೋಲನ ಸಮಿತಿ ನೇತೃತ್ವ ವಹಿಸಿದ್ದರು. ಅದೇ ರೀತಿ 1992-94ರವರೆಗೆ ತೀವ್ರ ಸ್ವರೂಪ ಪಡೆದಿದ್ದ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.
ಹೆಸರು: ಪ್ರಹ್ಲಾದ ಜೋಶಿ
ಜನನ: 1962, ನ.27, ವಿಜಯಪುರ ಜಿಲ್ಲೆ.
ತಂದೆ-ತಾಯಿ: ತಂದೆ ವೆಂಕಟೇಶ ಜೋಶಿ (ರೈಲ್ವೆ ಉದ್ಯೋಗಿಯಾಗಿದ್ದರು), ತಾಯಿ ಮಾಲತಿಬಾಯಿ.
ಶಿಕ್ಷಣ: ಪ್ರಾಥಮಿಕ ಶಿಕ್ಷಣ-ಹುಬ್ಬಳ್ಳಿಯ ರೈಲ್ವೆ ಶಾಲೆ, ಪ್ರೌಢ ಶಿಕ್ಷಣ-ನ್ಯೂ ಇಂಗ್ಲಿಷ್ ಸ್ಕೂಲ್, ಬಿಎ ಪದವಿ-ಕೆಎಲ್‌ಇ ಸಂಸ್ಥೆ ಕಾಡಸಿದ್ದೇಶ್ವರ ಕಲಾ ಕಾಲೇಜು.
ಕುಟುಂಬ: 1992ರ ನವೆಂಬರ್‌ನಲ್ಲಿ ಬಾಗಲಕೋಟೆ ಐಹೊಳೆಯ ಗುಮಾಸ್ತೆ ಮನೆತನದವರಾದ ಜ್ಯೋತಿ ಅವರೊಂದಿಗೆ ವಿವಾಹ. ಅರ್ಪಿತಾ, ಅನುಷಾ, ಅನನ್ಯ ಮಕ್ಕಳು ಹಾಗೂ ಇಬ್ಬರು ಸಹೋದರರು.
ಆರೆಸ್ಸೆಸ್ ನಂಟು: 9 ವರ್ಷದವರಿದ್ದಾಗಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದರು. ಸಂಘದ ವಿವಿಧ ಜವಾಬ್ದಾರಿ ನಿಭಾಯಿಸಿದರು.
ಹೋರಾಟ: ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಪೂರ್ವದಲ್ಲೇ ಡಾ| ಮುರಳಿ ಮನೋಹರ ಜೋಶಿ ನೇತೃತ್ವದಲ್ಲಿ ನಡೆದಿದ್ದ ಕಾಶ್ಮೀರ ಉಳಿಸಿ ಆಂದೋಲನದಲ್ಲಿ ಭಾಗಿ. ಸ್ಥಳೀಯ ಆಂದೋಲನ ಸಮಿತಿ ನೇತೃತ್ವ. ಹುಬ್ಬಳ್ಳಿಯಲ್ಲಿ ನಡೆದ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿ.
ಸಕ್ರಿಯ ರಾಜಕೀಯ: ಬಿಜೆಪಿಯಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾಧ್ಯಕ್ಷರಾಗಿ ಸೇವೆ. ನಂತರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, 2013-16ರ ವರೆಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಣೆ. 2004ರಲ್ಲಿ ಮೊದಲ ಬಾರಿಗೆ ಧಾರವಾಡ ಕ್ಷೇತ್ರದಿಂದ ಗೆದ್ದು, ಲೋಕಸಭೆ ಪ್ರವೇಶ. 2009, 2014, 2019 ಹೀಗೆ ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆ.
15ನೇ ಲೋಕಸಭೆಯಲ್ಲಿ ರೈಲ್ವೆ ಇಲಾಖೆ ಸ್ಥಾಯಿ ಸಮಿತಿ ಸದಸ್ಯರಾಗಿ, ನಗರಾಭಿವೃದ್ಧಿ ಇಲಾಖೆ ಸಲಹಾ ಸಮಿತಿ ಸದಸ್ಯರಾಗಿ, ತಂಬಾಕು ಮಂಡಳಿ ನಿರ್ದೇಶಕರಾಗಿ, 16ನೇ ಲೋಕಸಭೆಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ. ಪ್ರಹ್ಲಾದ ಜೋಶಿಯವರು ಉದ್ಯಮಿಯೂ ಆಗಿದ್ದು, ವಿಭವ ಕೆಮಿಕಲ್ಸ್‌ನ ಪಾಲುದಾರರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.