ಹೆಚ್ಚಾಯ್ತು ಸೋಂಕು.. ಶುರುವಾಯ್ತು ಲೆಕ್ಕಾಚಾರ….
ಸುದ್ದಿ ಸುತ್ತಾಟ
Team Udayavani, Jul 6, 2020, 6:07 AM IST
ಕೇವಲ ತಿಂಗಳ ಅಂತರದಲ್ಲಿ ನಗರ ಮತ್ತೆ “ಲಾಕ್‌ಡೌನ್’ ಮಂತ್ರ ಪಠಣ. ಸೋಂಕಿನ ಪ್ರಕರಣ ತೀವ್ರಗೊಳ್ಳುತ್ತಿದ್ದು ಇನ್ನಷ್ಟು ದಿನ ಜನರನ್ನು “ಗೃಹ ಬಂಧನ’ದಲ್ಲಿ ಇಡುವುದೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ, ಇದೊಂದು ತಾತ್ಕಾಲಿಕ ಪರಿಹಾರ ಅಷ್ಟೇ. ಈಗಾಗಲೇ ಸುದೀರ್ಘ ಲಾಕ್‌ಡೌನ್‌ನಿಂದ ಆರ್ಥಿಕ ಎಂಜಿನ್ ಸ್ಥಗಿತಗೊಂಡಿತ್ತು. ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಹೀಗಿರುವಾಗ, ಪುನಃ ಬಂದ್ ಮಾಡುವುದರಿಂದ ಉದ್ಯೋಗ ಮತ್ತು ವೇತನ ಕಡಿತ ಸೇರಿದಂತೆ ಕೋವಿಡ್‌ಯೇತರ ಗಂಭೀರ ಸಮಸ್ಯೆ ಸೃಷ್ಟಿಯಾಗಲಿವೆ ಎಂಬ ವಾದವೂ ಕೇಳಿಬರುತ್ತಿದೆ. ಸರ್ಕಾರ ಮಾತ್ರ ಈ ನಿಟ್ಟಿನಲ್ಲಿ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಈ ಮಧ್ಯೆ ಜನ ನಗರ ತೊರೆಯುತ್ತಿದ್ದಾರೆ. ಹಾಗಿದ್ದರೆ, ಲಾಕ್‌ಡೌನ್ ಜಾರಿ ಸೂಕ್ತವೇ? ಅಥವಾ ಸ್ವತಃ ಜನ ಮುನ್ನೆಚ್ಚರಿಕೆ ವಹಿಸಿಕೊಂಡು ಕಡಿವಾಣ ಹಾಕಲು ಸಾಧ್ಯವೇ? ಈ ಕುರಿತು ತಜ್ಞರು, ಉದ್ಯಮಿಗಳು, ಸಾರ್ವಜನಿಕರು ಏನಂತಾರೆ? ಒಂದು ನೋಟ ಸುದ್ದಿ ಸುತ್ತಾಟದಲ್ಲಿ…
ನಗರದಲ್ಲಿ ವಾರದಿಂದ ಮೂರಂಕಿಯಲ್ಲಿದ್ದ ಸೋಂಕಿನ ಪ್ರಕರಣ, ಕಳೆದೆರಡು ದಿನಗಳಿಂದ ನಾಲ್ಕಂಕಿಗೆ ಜಿಗಿದಿವೆ. ಇದು ಇನ್ನಷ್ಟು ಹೆಚ್ಚಳವಾಗುವ ಸ್ಪಷ್ಟ ಲಕ್ಷಣಗಳಿದ್ದು ಬೆಂಗಳೂರಿಗರನ್ನು ಬೆಚ್ಚಿಬೀಳಿಸಿದೆ. ಶುಕ್ರವಾರ ಮೂರು ತಾಸು ರಸ್ತೆಯಲ್ಲೇ ಶವ ಬಿದ್ದಿತ್ತು. ಆ್ಯಂಬುಲನ್ಸ್ ಇಲ್ಲದೆ ಹಲವು ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಇದು ಭೀಕರತೆಯೊಂದಿಗೆ ಅವ್ಯವಸ್ಥೆಯನ್ನೂ ಅನಾವರಣಗೊಳಿಸುತ್ತಿದೆ. ಹೀಗಾಗಿ, ರಾಜಧಾನಿಯನ್ನು ಲಾಕ್‌ಡೌನ್ ಮಾಡುವಂತೆ ವಿರೋಧ ಪಕ್ಷಗಳು ಸೇರಿದಂತೆ ಸಾರ್ವಜನಿಕರಿಂದ ಬೇಡಿಕೆ ವ್ಯಕ್ತವಾಗುತ್ತಿದೆ.
ಈ ಹಿಂದೆ ಸುದೀರ್ಘ ಲಾಕ್‌ಡೌನ್‌ನಿಂದ ಬಡ ಹಾಗೂ ಮಧ್ಯಮ ವರ್ಗದವರು ಸಾಲಕ್ಕೆ ಸಿಲುಕಿಕೊಂಡಿದ್ದು, ಈಗಷ್ಟೇ ಸಾಲದ ಸುಳಿಯಿಂದ ಹೊರಬರುತ್ತಿದ್ದಾರೆ. ಜತೆಗೆ ಹೋಟೆಲ್, ಜವಳಿ ಸೇರಿ ಇನ್ನಿತರ ಉತ್ಪಾದನಾ ವಲಯವೂ ತೆರೆದುಕೊಂಡಿದೆ. ಈಗ, ದಿಢೀರ್ ಸೃಷ್ಟಿಯಾಗಿರುವ ಕೋವಿಡ್ 19ಕ್ಕೆ ಲಾಕ್‌ಡೌನ್ ಒಂದೇ ಮದ್ದಲ್ಲ. ಶನಿವಾರ-ಭಾನುವಾರ ಲಾಕ್ ಡೌನ್ ಮಾಡಲಿ. ಮತ್ತಷ್ಟು ನಿಯಮ ಜಾರಿಗೆ ತರಲಿ. ಆದರೆ, ಸಂಪೂರ್ಣ ಲಾಕ್‌ಡೌನ್ ಅಗತ್ಯವಿಲ್ಲ ಎಂಬುದು ಕೈಗಾರಿಕೋದ್ಯಮಿಗಳ ಅಭಿಪ್ರಾಯ. ದೇಶದ ಸೇವಾ ತೆರಿಗೆಯಲ್ಲಿ ಕೈಗಾರಿಕೆಗಳದ್ದೇ ಸಿಂಹಪಾಲು. ಪ್ರತಿ ತಿಂಗಳು ಎರಡು ಸಾವಿರ ಕೋಟಿ ಕೈಗಾರಿಕೆಗಳಿಂದಲೇ ಸೇರುತ್ತದೆ.
ಮುದ್ರಾಂಕ ಸೇರಿದಂತೆ ಇನ್ನಿತರ ಶುಲ್ಕಗಳೂ ಸರ್ಕಾರದ ಬೊಕ್ಕಸಕ್ಕೆ ಸೇರುತ್ತಿದೆ. ಕಳೆದ 3 ತಿಂಗಳ ಲಾಕ್‌ಡೌನ್ ವೇಳೆ ಕೈಗಾರಿಕಾ ವಲಯಕ್ಕೆ ದೊಡ್ಡಪೆಟ್ಟು ಬಿದ್ದಿದೆ. ಪ್ರತಿ ತಿಂಗಳು 10 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಅಧ್ಯಕ್ಷ ಜನಾರ್ದನ್ ಹೇಳುತ್ತಾರೆ. ಈಗಾಗಲೇ ಕೈಗಾರಿಕೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಲಾಕ್ ಡೌನ್ ಮಾಡಿದರೂ ವಿದ್ಯುತ್ ಬಿಲ್ ಮತ್ತು ಕಾರ್ಮಿಕರಿಗೆ ಸಂಬಳ ನೀಡಬೇಕು. ಹೀಗಾಗಿ ಲಾಕ್‌ಡೌನ್ ಬಿಟ್ಟು ಸರ್ಕಾರ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು, ಸಾರ್ವಜನಿಕರೂ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಾರ್ಮಿಕರ ಹಿತ ಕಾಯಬೇಕು: “ಈಗಾಗಲೇ ಮಾಡಿರುವ ಲಾಕ್‌ಡೌನ್‌ನಿಂದ ಕಾರ್ಮಿಕರು ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈಗ ಮತ್ತೆ ಲಾಕ್‌ಡೌನ್ ಮಾಡಿ ಅದೇ ತಪ್ಪು ಮರುಕಳಿಸುವಂತೆ ಮಾಡುವುದು ಬೇಡ. ಒಂದು ವೇಳೆ ಸರ್ಕಾರ ಲಾಕ್ ಡೌನ್ ಮಾಡುವುದೇ ಆದಲ್ಲಿ ಕಾರ್ಮಿಕರಿಗೆ ಆರ್ಥಿಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಿ’ ಎಂದು ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ವರಲಕ್ಷ್ಮೀ ಆಗ್ರಹಿಸಿದರು. ಲಾಕ್‌ಡೌನ್ ಮಾಡುವುದಕ್ಕಿಂತ ಕೋವಿಡ್ 19 ಸಂಬಂಧ ರ್‍ಯಾಂಡಮ್ ಪರೀಕ್ಷೆ ನಡೆಸಲಿ ಎಂದೂ ಸಲಹೆ ನೀಡಿದರು.
ಶೇ.20 ಮುಚ್ಚುವ ಸ್ಥಿತಿಯಲ್ಲಿವೆ!: ದೇಶದ ಆರ್ಥಿಕತೆಗೆ ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳ ಪಾತ್ರ ದೊಡ್ಡದು. ಲಾಕ್‌ಡೌನ್ ಸಡಿಲಿಕೆ ನಂತರ ಸಣ್ಣ ಕೈಗಾರಿಕಾ ವಲಯ ಶೇ. 80ರಷ್ಟು ಚೇತರಿಸಿಕೊಂಡಿದೆ. ಮತ್ತೆ ಲಾಕ್‌ಡೌನ್ ಎಂದರೆ ಕಾರ್ಮಿಕರು ಭಯಪಟ್ಟು ಬೆಂಗಳೂರಿನತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ. ಮುಂದೆ ಕೈಗಾರಿಕಾ ವಲಯದಲ್ಲಿ ದೊಡ್ಡ ಮಟ್ಟದ ಕಾರ್ಮಿಕರ ಸಮಸ್ಯೆ ಕಾಡಲಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕಾ ಸಂಘ (ಕಾಸಿಯಾ) ಅಧ್ಯಕ್ಷ ಕೆ.ರಾಜು ತಿಳಿಸುತ್ತಾರೆ. ಅಲ್ಲದೆ, ಶೇ.20 ಕೈಗಾರಿಕೆಗಳು ಮುಚ್ಚುವ ಸ್ಥಿತಿಯಲ್ಲಿವೆ. ಇದರಿಂದ ಕಾರ್ಮಿಕರಿಗೂ ಸಮಸ್ಯೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಮಿಕರ ಹಿತ ಕಾಯಬೇಕು: “ಈಗಾಗಲೇ ಮಾಡಿರುವ ಲಾಕ್‌ಡೌನ್‌ನಿಂದ ಕಾರ್ಮಿಕರು ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈಗ ಮತ್ತೆ ಲಾಕ್‌ಡೌನ್ ಮಾಡಿ ಅದೇ ತಪ್ಪು ಮರುಕಳಿಸುವಂತೆ ಮಾಡುವುದು ಬೇಡ. ಒಂದು ವೇಳೆ ಸರ್ಕಾರ ಲಾಕ್ ಡೌನ್ ಮಾಡುವುದೇ ಆದಲ್ಲಿ ಕಾರ್ಮಿಕರಿಗೆ ಆರ್ಥಿಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಿ’ ಎಂದು ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ವರಲಕ್ಷ್ಮೀ ಆಗ್ರಹಿಸಿದರು. ಲಾಕ್‌ಡೌನ್ ಮಾಡುವುದಕ್ಕಿಂತ ಕೋವಿಡ್ 19 ಸಂಬಂಧ ರ್‍ಯಾಂಡಮ್ ಪರೀಕ್ಷೆ ನಡೆಸಲಿ ಎಂದೂ ಸಲಹೆ ನೀಡಿದರು.
ಬಿಬಿಎಂಪಿ ಎಷ್ಟು ಸಿದ್ಧವಾಗಿದೆ?: ಇತ್ತೀಚಿನಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿ ತಲುಪುತ್ತಿದೆ. ಆ್ಯಂಬುಲನ್ಸ್ ವಿಳಂಬ, ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ ಎಂಬ ಹಲವು ಆರೋಪ ಕೇಳಿಬರುತ್ತಲೇ ಇವೆ. ಪ್ರತಿ 2ವಾರ್ಡ್‌ಗೊಂದು ಆ್ಯಂಬುಲನ್ಸ್ ವ್ಯವಸ್ಥೆ ಭರವಸೆಯಾಗಿಯೇ ಉಳಿದಿದೆ. ಇನ್ನು ನಗರದಲ್ಲಿ 22 ಕೋವಿಡ್ ಆರೈಕೆ ಕೇಂದ್ರ ಸ್ಥಾಪಿಸಿದ್ದು 17,705 ಸೋಂಕಿನ ಲಕ್ಷಣ ಇಲ್ಲದ ಸೋಂಕಿತರಿಗೆ ಚಿಕಿತ್ಸೆ ನೀಡುವುದಾಗಿ ಪಾಲಿಕೆ ಹೇಳಿದೆ. ಆದರೆ, ತೀವ್ರ ನಿಗಾ ಘಟಕದ ಸೋಂಕಿತರಿಗೆ ಹಾಗೂ ಹೆಚ್ಚು ಚಿಕಿತ್ಸೆ ಅವಶ್ಯಕತೆ ಇರುವ ಸೋಂಕಿತರಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಪಾಲಿಕೆ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಕ್ರಿಯಾಯೋಜನೆಯೂ ಸಿದ್ಧವಾಗಿಲ್ಲ. ಅಲ್ಲದೆ, ರ್‍ಯಾಂಡಮ್ ಟೆಸ್ಟ್, ಸೋಂಕಿತರ ಸಂಪರ್ಕ ಪತ್ತೆಹಚ್ಚುವ ಕೆಲಸದಲ್ಲೂ ಹಿನ್ನಡೆಯಾಗುತ್ತಿದೆ. ಈ ಮಧ್ಯೆ ಪಾಲಿಕೆ ಕಣ್ಗಾವಲು ತಂಡ, ವಾರ್ ರೂಂನ ಸಿಬ್ಬಂದಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅತ್ಯಾಧುನಿಕ ವಾರ್‌ರೂಮ್ ವ್ಯವಸ್ಥೆ ಇದ್ದಾಗಿಯೂ ಸಮನ್ವಯ ಕೊರತೆ ಉಂಟಾಗುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ.
ಲಾಕ್‌ಡೌನ್ ಅವಶ್ಯಕತೆ ಇಲ್ಲ; ಡಾ.ಸುದರ್ಶನ್ ಬಲ್ಲಾಳ್: “ನಗರದಲ್ಲಿ ಮತ್ತೆ ಲಾಕ್‌ಡೌನ್ ಅಗತ್ಯ ಇಲ್ಲ’ ಎಂದು ಕರ್ನಾಟಕ ಕೋವಿಡ್-19 ತಾಂತ್ರಿಕ ಸಲಹೆಗಾರರ ತಜ್ಞರ ಸಮಿತಿ ಅಧ್ಯಕ್ಷ ಹಾಗೂ ಮಣಿಪಾಲ ಆಸ್ಪತ್ರೆಗಳ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್ ಅಭಿಪ್ರಾಯಪಟ್ಟರು. ಈ ಕುರಿತು “ಉದಯವಾಣಿ’ಯೊಂದಿಗೆ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಲಾಕ್‌ಡೌನ್ ಅವಶ್ಯಕತೆ ಇಲ್ಲ. ಕೋವಿಡ್ 19 ಸೋಂಕಿತರಿಗೆ ಚಿಕಿತ್ಸೆ ವ್ಯವಸ್ಥೆ ಉತ್ತಮ ರೀತಿಯಲ್ಲಿ ಮಾಡಿಕೊಳ್ಳಬೇಕು. ಜನರಿಗೆ ಧೈರ್ಯ ತುಂಬಬೇಕು. ಸಾಮಾಜಿಕ ಅಂತರ, ಸ್ಯಾನಿಟೈಸರ್, ಮುಖಗವಸು ಸದ್ಯದ ಲಸಿಕೆ. ಕೋವಿಡ್ 19 ವಿರುದ್ಧದ ಲಸಿಕೆ ಈ ವರ್ಷ ಬರುವುದಿಲ್ಲ. ಹೀಗಾಗಿ, ಮುಂಜಾಗ್ರತಾ ಕ್ರಮವೇ ಸದ್ಯಕ್ಕೆ ಕೋವಿಡ್ 19 ಸೋಂಕಿಗೆ ಮದ್ದು ಎಂದು ತಿಳಿಸಿದರು.
ಲಾಕ್‌ಡೌನ್ ಬೇಕು…: “ಶನಿವಾರ - ಭಾನುವಾರ ಲಾಕ್‌ಡೌನ್ ಮಾಡಿದರೆ ಉತ್ತಮ. ಕೋವಿಡ್ 19 ಸೋಂಕು ಸರಣಿ ಪಟಾಕಿಯಂತೆ ಒಂದು ಪಟಾಕಿಗೆ ಕಿಡಿಬಿದ್ದರೆ ಇಡೀ ಸಾವಿರ ಪಟಾಕಿ ಸಿಡಿಯುವವರೆಗೆ ನಿಲ್ಲುವುದಿಲ್ಲ. ಹೀಗಾಗಿ, ವಾರಾಂತ್ಯದಲ್ಲಿ ಲಾಕ್ ಡೌನ್ ಬೇಕು’ ಎಂದು ಡಾ.ವಿಜಯಲಕ್ಷಿ¾à ಬಾಳೇಕುಂದ್ರಿ ತಿಳಿಸಿದರು. ರಾಜಧಾನಿ ಜನ ವಾರಾಂತ್ಯದಲ್ಲಿ ಹೆಚ್ಚು ಓಡಾಡುತ್ತಾರೆ. ಅಲ್ಲದೆ, ಊರುಗಳಿಗೆ ಹೋಗುವವರ ಸಂಖ್ಯೆಯೂ ತುಸು ಹೆಚ್ಚೇ ಇದೆ. ಹೀಗಾಗಿ, ವಾರಾಂತ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಬೇಕು. ಆಗ ಸೋಂಕು ಹಬ್ಬುವ ತೀವ್ರತೆಗೆ ಸಹಜವಾಗಿಯೇ ಕಡಿವಾಣ ಬೀಳಲಿದೆ ಎಂದು ಹೇಳಿದರು.
ಒಮ್ಮೆ ಲಾಕ್‌ಡೌನ್ ಘೋಷಣೆಯಾದ ಮೇಲೆ ಜೀವನ ಇನ್ನೂ ಸುಧಾರಿಸಿಲ್ಲ. ಈಗಷ್ಟೇ ಲಾಕ್ ಡೌನ್ ಅವಧಿಯಲ್ಲಿ ಮಾಡಿರುವ ಸಾಲ ತೀರಿಸುತ್ತಿದ್ದೇವೆ. ಲಾಕ್‌ಡೌನ್ ಮಾಡಿ ನರಕಕ್ಕೆ ತಳ್ಳುವುದು ಬೇಡ.
-ಅಸ್ಲಮ್, ಟೆಂಪೋ ಚಾಲಕ
ನಿತ್ಯ ಆತಂಕದಲ್ಲಿ ಬದುಕು ಸಾಗಿಸುವುದಕ್ಕಿಂತ ಲಾಕ್‌ಡೌನ್ ಘೋಷಿಸಿ, ಈ ಸೋಂಕಿಗೆ ಒಂದು ಪರಿಹಾರ ಕಂಡುಕೊಂಡ ಮೇಲೆ ಲಾಕ್‌ಡೌನ್ ಸಡಿಲ ಮಾಡಿದರೆ ಉತ್ತಮ.
-ಮಂಜುಳಾ, ಬೇಕರಿ ಉದ್ಯಮಿ.
ಲಾಕ್‌ಡೌನ್ ಸಡಿಲಿಕೆ ಬಳಿಕ ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಈ ಹಿಂದೆ ಇದ್ದ ಗ್ರಾಹಕರ ಸಂಖ್ಯೆಗೆ ಹೋಲಿಕೆ ಮಾಡಿದರೆ, ಈಗ ಶೇ.30 ಗ್ರಾಹಕರು ಬರುತ್ತಿಲ್ಲ. ಲಾಕ್‌ಡೌನ್ ಮಾಡುವುದೇ ಉತ್ತಮ.
-ಅಂಜನಪ್ಪ, ಆಟೋ ಚಾಲಕ
ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ, ಲಾಕ್‌ಡೌನ್ ಮಾಡುವ ಮೂಲಕ ಸರ್ಕಾರ ಸೋಂಕಿಗೆ ಕಡಿವಾಣ ಹಾಕಬೇಕು.
-ರಾಜಶೇಖರ್, ಪೆಟ್ರೋಲ್ ಬಂಕ್ ಸಿಬ್ಬಂದಿ
* ದೇವೇಶ್ ಸೂರಗುಪ್ಪ/ಹಿತೇಶ್ ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.