India-Canada: ಸಂಘರ್ಷ ಪಾಶ್ಚಾತ್ಯ ರಾಷ್ಟ್ರಗಳನ್ನು ಕಾಡಿದೆ ಆತಂಕ
Team Udayavani, Sep 24, 2023, 12:13 AM IST
ಖಲಿಸ್ಥಾನಿ ವಿಷಯವಾಗಿ ನಡೆಯುತ್ತಿರುವ ಭಾರತ ಹಾಗೂ ಕೆನಡಾ ನಡುವಿನ ಕಿತ್ತಾಟ ಅಂತಾರಾಷ್ಟ್ರೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ. ಖಲಿಸ್ಥಾನಿ ಉಗ್ರರ ಬೆಂಬಲಕ್ಕೆ ನಿಂತಿರುವ ಕೆನಡಾ, ಭಾರತದೊಂದಿಗಿನ ಎಲ್ಲ ರೀತಿಯ ಸಂಬಂಧವನ್ನು ಹಾಳುಮಾಡಿಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಜಿ-20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದ ಭಾರತ ವಿಶ್ವದ ಎಲ್ಲ ನಾಯಕರನ್ನು ಒಂದೆಡೆ ಸೇರಿಸಿ ಜಾಗತಿಕವಾಗಿ ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳುವಲ್ಲಿ ಸಫಲವಾಗಿತ್ತು. ವಿವಿಧ ದೇಶಗಳು ಆರ್ಥಿಕವಾಗಿ ಮುನ್ನುಗ್ಗುತ್ತಿರುವ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತಿವೆ. ಆದರೆ ಈಗ ಭಾರತ ಹಾಗೂ ಕೆನಡಾ ನಡುವಿನ ಈ ತಿಕ್ಕಾಟ ವಿಶ್ವದ ನಾಯಕರನ್ನು ಚಿಂತೆಗೀಡು ಮಾಡಿದೆ. ಅದರಲ್ಲೂ ಪಾಶ್ಚಾತ್ಯ ದೇಶಗಳ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಎದ್ದು ಕಾಣುತ್ತಿದೆ.
ಜಗತ್ತಿನ ಐದನೇ ಅತೀ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ಭಾರತ ಈಗ ಇಡೀ ವಿಶ್ವದ ಗೆಳೆಯ. ಭೌಗೋಳಿಕವಾಗಿ ಮಾತ್ರವಲ್ಲದೆ ರಾಜತಾಂತ್ರಿಕವಾಗಿಯೂ ಭಾರತ ಬಹುಮುಖ್ಯ ರಾಷ್ಟ್ರವಾಗಿ ಹೊರಹೊಮ್ಮಿದೆ. ಅಲ್ಲದೇ ಇಡೀ ವಿಶ್ವದ ಮೇಲೆ ತನ್ನ ಹಿಡಿತವನ್ನು ಸಾಧಿಸಬೇಕೆಂದು ಪ್ರಯತ್ನಿಸುತ್ತಿರುವ ಚೀನಕ್ಕೆ ಪರ್ಯಾಯವಾಗಿ ಭಾರತವನ್ನು ವಿವಿಧ ದೇಶಗಳು ಪರಿಗಣಿಸಲಾರಂಭಿಸಿವೆ.
ಚೀನದ ಪ್ರಭಾವವನ್ನು ಕಡಿಮೆ ಮಾಡಬೇಕಾದರೆ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿರುವುದು ಈ ರಾಷ್ಟ್ರಗಳಿಗೆ ಅತ್ಯಗತ್ಯವಾಗಿದೆ. ಆದರೆ ಭಾರತ ಹಾಗೂ ಕೆನಡಾ ನಡುವಣ ಈ ಕಚ್ಚಾಟವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರಲಿದೆಯೋ? ಎಂಬ ಆತಂಕ ಪಾಶ್ಚಾತ್ಯ ರಾಷ್ಟ್ರಗಳನ್ನು ಕಾಡಲಾರಂಭಿಸಿದೆ. ಈ ಕಾರಣದಿಂದಾಗಿಯೇ ಜಾಗತಿಕ ನಾಯಕರು ಕೆನಡಾ-ಭಾರತ ನಡುವಣ ಸಂಘರ್ಷದಿಂದ ಅಂತರ ಕಾಯ್ದುಕೊಳ್ಳುವ ಸಲುವಾಗಿ ಕಾದು ನೋಡುವ ತಂತ್ರಕ್ಕೆ ಶರಣಾಗಿವೆ. ಬಲಾಡ್ಯ ರಾಷ್ಟ್ರಗಳ ನಾಯಕರು ಕೂಡ ಈ ವಿಷ ಯವಾಗಿ ಉಭಯ ದೇಶಗಳಿಗೆ ಪರಸ್ಪರ ಸಮಾಲೋಚನೆಯ ಮೂಲಕ ಸಮಸ್ಯೆ ಬಗೆ ಹರಿಸಿಕೊಳ್ಳುವಂತೆ ಕಿವಿಮಾತು ಹೇಳುವುದಕ್ಕಷ್ಟೇ ಸೀಮಿತವಾಗಿ ತಟಸ್ಥ ಧೋರಣೆ ತಳೆದಿದ್ದಾರೆ.
ಅಮೆರಿಕ, ಬ್ರಿಟನ್ ನಿರ್ಲಿಪ್ತ
ಈಗಾಗಲೇ ಕೆನಡಾ, ಅಮೆರಿಕ ಹಾಗೂ ಬ್ರಿಟನ್ ಅಧ್ಯಕ್ಷರೊಂದಿಗೆ ಈ ವಿಷಯವನ್ನು ಪ್ರಸ್ತಾವಿಸಿದೆ. ಆದರೆ ಅಮೆರಿಕ ಈ ವಿಷಯದಲ್ಲಿ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದೆ. ಅಮೆರಿಕ, ಭಾರತದೊಂದಿಗೆ ತನ್ನ ಬಾಂಧವ್ಯವನ್ನು ಹೆಚ್ಚಿಸಿಕೊಂಡಿದ್ದು, ಮೋದಿ – ಬೈಡನ್ ಸ್ನೇಹವು ಅಷ್ಟೇ ಗಾಢವಾಗಿದೆ. ಇನ್ನೊಂದೆಡೆ ಕೆನಡಾದ ಆರೋಪ ಒಟ್ಟಾವಾದ ಫೈವ್ ಐ ಗುಪ್ತಚರ ಮಾಹಿತಿಯ ಮೇಲೆ ನೀಡಿದ್ದು , ಈ ಫೈವ್ ಐ ನಲ್ಲಿ ಅಮೆರಿಕವೂ ಸೇರಿಕೊಂಡಿದೆ. ಅತ್ತ ಬ್ರಿಟನ್, ಕೆನಡಾದ ಸಮಸ್ಯೆಯನ್ನು ಸೂಕ್ಷ್ಮವಾಗಿ ಆಲಿಸಿದ್ದೇವೆ ಹಾಗೂ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದೆ. ಬ್ರಿಟನ್‌ಗೆ ಭಾರತ ಹಾಗೂ ಕೆನಡಾ ಎರಡೂ ಅತ್ಯಂತ ಪ್ರಮುಖ ರಾಷ್ಟ್ರಗಳಾಗಿವೆ.
ಸುಖಾಂತ್ಯದ ಆಶಯ
ಕೆನಡಾದ ತನಿಖೆಯು ಪೂರ್ಣವಾಗುವವರೆಗೆ ಕಾದು, ಅನಂತರ ತಮ್ಮ ನಿಲುವನ್ನು ಸ್ಪಷ್ಟ ಪಡಿಸುವುದು ಸದ್ಯ ಪಾಶ್ಚಾತ್ಯ ರಾಷ್ಟ್ರಗಳ ಯೋಚನೆ. “ಅಕ್ಕಿಯ ಮೇಲು ಆಸೆ, ನೆಂಟರ ಮೇಲೂ ಪ್ರೀತಿ’ ಎಂಬ ಮಾತಿನಂತೆ ಭಾರತ ಹಾಗೂ ಕೆನಡಾ ಎರಡೂ ದೇಶಗಳೊಂದಿಗೆ ವೈರತ್ವವನ್ನು ಕಟ್ಟಿಕೊಳ್ಳಲು ಪಾಶ್ಚಾತ್ಯ ರಾಷ್ಟ್ರಗಳು ಸಿದ್ಧವಿಲ್ಲ. ಎರಡು ದೇಶಗಳ ನಡುವಣ ಈ ವಿವಾದವು ಸುಖಾಂತ್ಯವನ್ನು ಕಂಡು ಅಂತಾರಾಷ್ಟ್ರೀಯ ಸಂಬಂಧಗಳು ಯಥಾ ಸ್ಥಿತಿಯಲ್ಲಿ ಮುಂದುವರಿಯಲಿ ಎಂಬುದೇ ಈ ರಾಷ್ಟ್ರಗಳ ಆಶಯ.
ದ್ವಂದ್ವದಲ್ಲಿ ಸಿಲುಕಿದ ಪಾಶ್ಚಾತ್ಯ ನಾಯಕರು
ಖಲಿಸ್ಥಾನಿ ಉಗ್ರರ ವಿಷಯವಾಗಿ ಭಾರತ ಹಾಗೂ ಕೆನಡಾ ಸೃಷ್ಟಿಯಾಗಿರುವ ಬಿಕ್ಕಟ್ಟಿನ ವಿಚಾರದಲ್ಲಿ ಪಾಶ್ಚಾತ್ಯ ನಾಯಕರು ದ್ವಂದ್ವದಲ್ಲಿ ಸಿಲುಕಿದ್ದಾರೆ. ಇತ್ತ ಕೆನಡಾವನ್ನು ಕೈ ಬಿಡುವಂತಿಲ್ಲ ಅತ್ತ ಭಾರತವನ್ನೂ ದೂರ ಮಾಡುವಂತಿಲ್ಲ ಎಂಬ ಸಂದಿಗ್ಧತೆ ಈ ನಾಯಕರದ್ದಾಗಿದೆ. ಭಾರತದೊಂದಿಗೆ ಈ ಹಿಂದಿನಿಂದಲೂ ಉತ್ತಮ ಸಂಬಂಧವನ್ನು ಹೊಂದಿರುವ ಪಾಶ್ಚಾತ್ಯ ದೇಶಗಳು ಈಗ ಈ ವಿಷಯದಲ್ಲಿ ಸಂಕಷ್ಟದಲ್ಲಿ ಸಿಲುಕಿವೆ.
ಕೆನಡಾದ ಪರ ವಕಾಲತ್ತು ಮಾಡಲು ಮುಂದಾದರೆ ಭಾರತದ ಆಕ್ರೋಶಕ್ಕೆ ಗುರಿಯಾಗುವ ಭೀತಿ ಈ ರಾಷ್ಟ್ರಗಳನ್ನು ಕಾಡುತ್ತಿದೆ. ಜಾಗತಿಕವಾಗಿ ದಕ್ಷಿಣದಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ನಾಯಕನಾಗಿ ಹೊರಹೊಮ್ಮಲು ಭಾರತ ಪ್ರಯತ್ನಿಸುತ್ತಿದೆ. ಕೆಲವು ದೇಶಗಳು ಉಕ್ರೇನ್ ಮೇಲಿನ ರಷ್ಯಾ ದಾಳಿ ವಿಚಾರದಲ್ಲಿ ಅನುಸರಿಸಿದ ನಿಲುವನ್ನೇ ಈಗ ಪಾಶ್ಚಾತ್ಯ ದೇಶಗಳು ತಮ್ಮದಾಗಿಸಿಕೊಂಡಿವೆ. ಅಲ್ಲದೇ ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳು ರಾಜತಾಂತ್ರಿಕ ನಡೆಗಳಿಂದ ಈ ದೇಶಗಳ ಮೇಲೆ ಛಾಪು ಮೂಡಿಸಲು ಪ್ರಯತ್ನಿಸುತ್ತಿವೆ. ಈ ಕಾರಣದಿಂದಾಗಿಯೇ ಭಾರತ-ಕೆನಡಾ ನಡುವಣ ಬಿಕ್ಕಟ್ಟು ಎರಡು ಕಾಮನವೆಲ್ತ್ ದೇಶಗಳ ನಡುವಿನ ಬಾಂಧವ್ಯಕ್ಕೆ ಸಂಚಕಾರ ತಂದೊಡ್ಡದಿರಲಿ ಎಂಬ ಆಶಯ ಈ ರಾಷ್ಟ್ರಗಳದ್ದಾಗಿದೆ. ಈ ಮೂಲಕ ಎರಡೂ ದೇಶಗಳೊಂದಿಗಿನ ತಮ್ಮ ಸಂಬಂಧ ಯಥಾಸ್ಥಿತಿಯಲ್ಲಿ ಮುಂದುವರಿಯಲಿ ಎಂಬ ದೂರಾಲೋಚನೆಯೂ ಈ ದೇಶಗಳದ್ದಾಗಿದೆ.
ವಿಧಾತ್ರಿ ಭಟ್, ಉಪ್ಪುಂದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.