ಭಾರತ-ಆಸ್ಟ್ರೇಲಿಯ ವನಿತೆಯರ ಡೇ-ನೈಟ್ ಟೆಸ್ಟ್ ರೋಮಾಂಚನ
15 ವರ್ಷಗಳ ಬಳಿಕ ಭಾರತ-ಆಸ್ಟ್ರೇಲಿಯ ವನಿತಾ ಟೆಸ್ಟ್; ಮೊದಲ ಪಿಂಕ್ ಬಾಲ್ ಟೆಸ್ಟ್ ಸಂಭ್ರಮದಲ್ಲಿ ಭಾರತ
Team Udayavani, Sep 30, 2021, 7:00 AM IST
ಗೋಲ್ಡ್‌ಕೋಸ್ಟ್: ಮಿಥಾಲಿ ರಾಜ್ ಸಾರಥ್ಯದ ಭಾರತದ ವನಿತಾ ಟೆಸ್ಟ್ ತಂಡ ಹೊಸ ಇತಿಹಾಸದ ಹೊಸ್ತಿಲಲ್ಲಿದೆ. ಗುರುವಾರದಿಂದ ಆತಿಥೇಯ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಪಂದ್ಯ ಆಡಲಿಳಿಯಲಿದೆ. ಇದು ಭಾರತದ ವನಿತೆಯರು ಆಡಲಿರುವ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯವೆಂಬುದು ವಿಶೇಷ. ಹಾಗೆಯೇ ವನಿತಾ ಟೆಸ್ಟ್ ಇತಿಹಾಸದ ಕೇವಲ 2ನೇ ಅಹರ್ನಿಶಿ ಪಂದ್ಯವೂ ಹೌದು.
ಇನ್ನೊಂದು ಮೈಲುಗಲ್ಲೆಂದರೆ, ಭಾರತ-ಆಸ್ಟ್ರೇಲಿಯ ವನಿತೆಯರು ಬರೋಬ್ಬರಿ 15 ವರ್ಷಗಳ ಬಳಿಕ ಟೆಸ್ಟ್ ಪಂದ್ಯವೊಂದನ್ನು ಆಡಲಿಳಿದಿರುವುದು. ಅಂದಿನ ಟೆಸ್ಟ್ 2006ರಲ್ಲಿ ಅಡಿಲೇಡ್‌ನಲ್ಲಿ ನಡೆದಿತ್ತು. ಆಸೀಸ್ ಜಯ ಸಾಧಿಸಿತ್ತು. ಅಂದಿನ ಪಂದ್ಯದಲ್ಲಿದ್ದ ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ ಪಿಂಕ್ ಬಾಲ್ ಟೆಸ್ಟ್‌ನಲ್ಲೂ ಆಡುತ್ತಿರುವುದು ವಿಶೇಷ.
ಸೀಮಿತ ಅಭ್ಯಾಸ
ಎರಡೂ ತಂಡಗಳು ಸೀಮಿತ ಅಭ್ಯಾಸದೊಂದಿಗೆ ಈ ಟೆಸ್ಟ್ ಪಂದ್ಯವನ್ನು ಆಡಲಿಳಿಯುತ್ತಿವೆ. ಭಾರತ 7 ವರ್ಷಗಳ ಬಳಿಕ, ಕಳೆದ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಆಡಿತ್ತು. ಇದನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಬಳಿಕ ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಯನ್ನು ಕಳೆದುಕೊಂಡಿ ತಾದರೂ ಅಮೋಘ ಫೈಟಿಂಗ್ ಸ್ಪಿರಿಟ್ ತೋರಿದ್ದನ್ನು ಮರೆಯುವಂತಿಲ್ಲ.
ಹರ್ಮನ್‌ಪ್ರೀತ್ ಔಟ್
ಕೈ ಬೆರಳಿನ ಗಾಯದಿಂದ ಚೇತರಿಸದ ಕಾರಣ ಭಾರತದ ಮಧ್ಯಮ ಕ್ರಮಾಂಕದ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ ಈ ಪಂದ್ಯದಿಂದ ದೂರ ಉಳಿಯಲಿದ್ದಾರೆ. ಪ್ರವಾಸಿ ತಂಡಕ್ಕೆ ಇದೊಂದು ಹೊಡೆತವಾಗಿದೆ.
ಇದನ್ನೂ ಓದಿ:ಅಂತಿಮ ದಿನದ ಎರಡೂ ಲೀಗ್ ಪಂದ್ಯ 7.30ಕ್ಕೆ ಆರಂಭ
ಏಕದಿನದಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿದ ಬ್ಯಾಟ್ಸ್‌ಮನ್ ಯಾಸ್ತಿಕಾ ಭಾಟಿಯಾ ಮತ್ತು ವೇಗಿ ಮೇಘನಾ ಸಿಂಗ್ ಟೆಸ್ಟ್ ಕ್ಯಾಪ್ ಧರಿಸುವ ಸಾಧ್ಯತೆ ಇದೆ. ಸ್ಮೃತಿ ಮಂಧನಾ, ಶಫಾಲಿ ವರ್ಮ, ಜೆಮಿಮಾ ರೋಡ್ರಿಗಸ್ ಭಾರತದ ಬ್ಯಾಟಿಂಗ್ ಸರದಿಯ ಪ್ರಮುಖರು.
ಅನುಭವಿ ಜೂಲನ್ ಗೋಸ್ವಾಮಿ, ಮೇಘನಾ ಮತ್ತು ಪೂಜಾ ವಸ್ತ್ರಾಕರ್ ವೇಗದ ವಿಭಾಗದ ಜವಾಬ್ದಾರಿ ನಿಭಾಯಿ ಸುವುದು ಬಹುತೇಕ ಖಚಿತ. ಸ್ಪಿನ್ ಆಲ್‌ರೌಂಡರ್ ಸ್ನೇಹ್ ರಾಣಾ, ದೀಪ್ತಿ ಶರ್ಮ ಅವರಿಂದ ಬೌಲಿಂಗ್ ವಿಭಾಗ ಭರ್ತಿಗೊಳ್ಳಲಿದೆ.
ಏಕದಿನದಲ್ಲಿ ರಿಚಾ ಘೋಷ್‌ಗೆ ಜಾಗ ಬಿಟ್ಟಿದ್ದ ಕೀಪರ್ ತನಿಯಾ ಭಾಟಿಯಾ ಟೆಸ್ಟ್ ತಂಡವನ್ನು ಸೇರಿಕೊಳ್ಳುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಪೂನಂ ರಾವತ್ ಕೂಡ ಮರಳುವ ಹಾದಿಯಲ್ಲಿದ್ದಾರೆ.
ರಶೆಲ್ ಹೇನ್ಸ್ ಗಾಯಾಳು
ಉಪನಾಯಕಿ ರಶೆಲ್ ಹೇನ್ಸ್ ಗಾಯಾಳಾಗಿ ಹೊರ ಬಿದ್ದಿರುವುದು ಆಸ್ಟ್ರೇಲಿಯಕ್ಕೊಂದು ಹೊಡೆತ. ಅನ್ನಾಬೆಲ್ ಸದರ್‌ಲ್ಯಾಂಡ್ ಟೆಸ್ಟ್ ಪದಾರ್ಪಣೆ ಮಾಡಬಹುದು. ಆತಿಥೇಯರ ವೇಗದ ಬೌಲಿಂಗ್ ವಿಭಾಗವನ್ನು ತೀವ್ರ ಎಚ್ಚರಿಕೆಯಿಂದ ನಿಭಾಯಿಸಿದರೆ ಭಾರತ ಈ ಪಂದ್ಯದಲ್ಲಿ ಉತ್ತಮ ಹೋರಾಟ ನೀಡಬಲ್ಲದು.
ಕೇವಲ ದ್ವಿತೀಯ ಅಹರ್ನಿಶಿ ಟೆಸ್ಟ್
ಇದು ವನಿತಾ ಟೆಸ್ಟ್ ಇತಿಹಾಸದ ಕೇವಲ 2ನೇ ಹಗಲು-ರಾತ್ರಿ ಟೆಸ್ಟ್ ಪಂದ್ಯ. ಮೊದಲ ಪಂದ್ಯ ನಡೆದದ್ದು 2017ರಲ್ಲಿ. ಅಂದು “ನಾರ್ತ್ ಸಿಡ್ನಿ ಓವಲ್’ನಲ್ಲಿ ನಡೆದ ಈ ಮುಖಾಮುಖೀಯಲ್ಲಿ ಆತಿಥೇಯ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ತಂಡಗಳು ಎದುರಾಗಿದ್ದವು. ಆ್ಯಶಸ್ ಸರಣಿಯ ಭಾಗವಾಗಿದ್ದ ಈ 4 ದಿನಗಳ ಟೆಸ್ಟ್ ಡ್ರಾಗೊಂಡಿತ್ತು.
ಭಾರತ-ಆಸ್ಟ್ರೇಲಿಯ ನಡುವಿನ ಈ ಟೆಸ್ಟ್ ಪಂದ್ಯದ ಮೂಲ ತಾಣ ಕ್ಯಾನ್‌ಬೆರಾ ಆಗಿತ್ತು. ಆದರೆ ಕೋವಿಡ್ ನಿಯಮಾವಳಿಯಿಂದಾಗಿ ಗೋಲ್ಡ್ ಕೋಸ್ಟ್‌ಗೆ ಸ್ಥಳಾಂತರಗೊಂಡಿದೆ. ಪಿಂಕ್ ಬಾಲ್ ಟೆಸ್ಟ್ ಆಡುತ್ತಿರುವ ವಿಶ್ವದ ಕೇವಲ 3ನೇ ತಂಡವೆಂಬ ಹೆಗ್ಗಳಿಕೆ ಭಾರತದದ್ದು.
ಆರಂಭ: ಬೆಳಗ್ಗೆ 10.00,
ಪ್ರಸಾರ: ಸೋನಿ ಸಿಕ್ಸ್, ಸೋನಿ ಟೆನ್ 3