Indo-Isreal: ಭಾರತೀಯರ ಸಮರಪಣ-ಇಸ್ರೇಲ್ ಋಣ
Team Udayavani, Oct 13, 2023, 11:40 PM IST
2018ರ ಜ. 14ರಂದು ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತಕ್ಕೆ ಭೇಟಿ ನೀಡಿದಾಗ ದಿಲ್ಲಿ ವಿಮಾನ ನಿಲ್ದಾಣದಿಂದ ನೇರವಾಗಿ ಬಂದದ್ದು ತೀನ್ ಮೂರ್ತಿ ಚೌಕಕ್ಕೆ. ಅವರು ಪ್ರಧಾನಿ ನರೇಂದ್ರ ಮೋದಿ ಸಮ್ಮುಖ “ತೀನ್ ಮೂರ್ತಿ ಹೈಫಾ ಚೌಕ್’ ಪುನರ್ ನಾಮಕರಣಕ್ಕೆ ಸಾಕ್ಷಿಯಾಗಿ 100 ವರ್ಷ ಹಿಂದಿನ ಇತಿಹಾಸದಲ್ಲಿ ಭಾರತೀಯ ಯೋಧರು ಇಸ್ರೇಲ್ ಭೂಭಾಗಕ್ಕೆ ಸಲ್ಲಿಸಿದ ಪ್ರಾಣಾರ್ಪಣೆಯನ್ನು ಸ್ಮರಿಸಿಕೊಂಡು ಭಾವುಕರಾದರೆ, ಮೋದಿ 2017ರಲ್ಲಿ ಇಸ್ರೇಲ್‌ನ ಹೈಫಾ ನಗರಕ್ಕೆ ಭೇಟಿ ನೀಡಿ ಭಾರತೀಯ ಯೋಧರ ಸ್ಮಾರಕಕ್ಕೆ ಗೌರವ ಸಲ್ಲಿಸಿದ್ದರು. ಈ ಯೋಧರಲ್ಲಿ ನಮ್ಮ ಪೂರ್ವಜರಿದ್ದರು ಎಂಬುದನ್ನು ಇಸ್ರೇಲ್ ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಈ ಕಾಲಘಟ್ಟದಲ್ಲಿ ಸ್ಮರಿಸಬೇಕಾಗಿದೆ. ಇಸ್ರೇಲಿನ ಪಠ್ಯಕ್ರಮದಲ್ಲಿ ಭಾರತೀಯರ ಕೊಡುಗೆ ಸ್ಮರಿಸುತ್ತಿದ್ದಾರೆ. ಉಪಕಾರ ಮಾಡಿದ್ದನ್ನು ಮರುದಿನವೇ ಮರೆಯುವ ಈ ಕಾಲಘಟ್ಟದಲ್ಲಿ ನೆತನ್ಯಾಹು ನಡೆ ಮಾದರಿ. ದಿಲ್ಲಿಯ ತೀನ್ ಮೂರ್ತಿ ಚೌಕದ ಪ್ರತೀಕಗಳು, ಭಾರತೀಯ ಯೋಧರು ಇಸ್ರೇಲ್ ಭೂಭಾಗದಲ್ಲಿ ತೋರಿದ ಪರಾಕ್ರಮ ಕಥಾನಕ ಏನೆಂದು ನಮ್ಮ ಪಠ್ಯಪುಸ್ತಕದಲ್ಲಿಲ್ಲ, ಶಿಕ್ಷಿತರಿಗೂ ಗೊತ್ತಿಲ್ಲ.
ಈಗ ಆಯಾ ಪ್ರದೇಶವನ್ನು ಅರಿತ ಸೈನಿಕರೇ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಯುದ್ಧದಲ್ಲಿ ಹೋರಾಡುತ್ತಾರೆ. ಹಿಂದೆ ಹಾಗಲ್ಲ. ಯಾವುದೋ ದೇಶದಲ್ಲಿ, ಯಾವುದೋ ದೇಶದ ಸೈನಿಕರು ಯಾವುದೋ ಸಮರದಾಹಿಗಳಿಗಾಗಿ ಹೋರಾಡುವುದಿತ್ತು. ಮೈಸೂರು, ಜೋಧಪುರ, ಹೈದರಾಬಾದ್ ಪ್ರಾಂತದ ಸೈನಿಕರು ದೇಶ-ಭಾಷೆ -ಆಹಾರ ಗೊತ್ತಿಲ್ಲದ ಊರಿಗೆ ಹೋದದ್ದು ಯಾವಾಗ ಜೀವಸಹಿತ ಮರಳಿ ಬರುತ್ತೇವೋ ಎಂದು ಗೊತ್ತಿಲ್ಲದೆ… ಇದು ಕುದುರೆಗಳ ಮೇಲೆ ಕುಳಿತು ಭರ್ಚಿ, ಈಟಿ ಹಿಡಿದು ಹೋರಾಡಿದ ಜಗತ್ತಿನ ಕೊನೆಯ ಯುದ್ಧವಾಗುತ್ತದೆ ಎನ್ನುವುದು ಆ ಸೈನಿಕರಿಗೇ ಗೊತ್ತಿರಲಿಕ್ಕಿಲ್ಲ.
ಆಗ್ನೇಯ ಯೂರೋಪ್, ಪಶ್ಚಿಮ ಏಷ್ಯಾ, ಉತ್ತರ ಆಫ್ರಿಕಾ ನಡುವಿನ ಭೂಭಾಗದ ಅಟೋಮನ್ ಸಾಮ್ರಾಜ್ಯವನ್ನು 14ರಿಂದ 20ನೆಯ ಶತಮಾನದ ಆರಂಭದವರೆಗೆ ಟರ್ಕಿ ಸುಲ್ತಾನ ತನ್ನದೆಂದು ಅನುಭವಿಸುತ್ತಿದ್ದ. ಮೊದಲ ಮಹಾಯುದ್ಧದಲ್ಲಿ ಜರ್ಮನಿ, ಟರ್ಕಿ, ಆಸ್ಟ್ರಿಯಾ, ಹಂಗೇರಿ, ಬಲ್ಗೇರಿಯಾ ಅಟೋಮನ್ನರ ಕಡೆಯಾದರೆ, ಬ್ರಿಟನ್, ಫ್ರಾನ್ಸ್, ರಷ್ಯಾ, ಇಟಲಿ, ಅಮೆರಿಕ, ಜಪಾನ್ ಇನ್ನೊಂದೆಡೆ. ತುರ್ಕರು ಎಂದು ಕರೆಯುವ ಟರ್ಕಿಯವರು 15 ಲಕ್ಷ ಕ್ರೈಸ್ತರನ್ನು ಅಲ್ಲದೆ, ಗ್ರೀಕರು, ಅಸೀರಿಯನ್‌ರನ್ನೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಕೊಂದಿದ್ದರು. ಜರ್ಮನಿಯಲ್ಲಿ ಹಿಟ್ಲರ್ ಕೊಂದ ಯಹೂದಿಗಳ ಸಂಖ್ಯೆ 90 ಲಕ್ಷವೆಂದು ಅಂದಾಜು. ಈ ನರಬೇಟೆಯನ್ನು ಕೊನೆಗಾಣಿಸಲು ಬ್ರಿಟನ್, ಇತರ ದೇಶಗಳು ಒಂದಾಗಿದ್ದವು. ಬ್ರಿಟಿಷರ ಪರವಾಗಿ ಭಾರತದಿಂದ ಪಾಲ್ಗೊಂಡವರು ಮೈಸೂರು, ಜೋಧಪುರ, ಹೈದರಾಬಾದಿನ ಸೈನಿಕರು.
1914ರ ಅಕ್ಟೋಬರ್‌ನಲ್ಲಿ ಮೈಸೂರಿನ ಚಾಮುಂಡೇಶ್ವರಿಗೆ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಪೂಜೆ ಸಲ್ಲಿಸಿ ತನ್ನ ಸೈನಿಕರನ್ನು ಬೀಳ್ಕೊಟ್ಟರು. ನೇತೃತ್ವ ವಹಿಸಿದವರು ರಾಜನ ಬಂಧು ಕ|ಜೆ. ದೇಸರಾಜ ಅರಸ್. ಯೋಧರು ಮಾತ್ರವಲ್ಲದೆ ಕುದುರೆ, ಹೇಸರಗತ್ತೆಗಳೂ 36 ಹಡಗುಗಳಲ್ಲಿ ಪ್ರಯಾಣ ಮಾಡಿದವು. ಸೂಯೆಜ್ ಕಾಲುವೆ ಮೂಲಕ ಮೂರೂ ಪಡೆಗಳು ಈಜಿಪ್ಟ್ ತಲುಪಿದವು. ಎರಡು ವರ್ಷ ಬ್ರಿಟಿಷರ ಪರವಾಗಿ ಈಜಿಪ್ಟ್ನಲ್ಲಿ ಹೋರಾಡಿದ ಸೈನಿಕರನ್ನು ಟರ್ಕಿಗೆ ಕರೆದೊಯ್ಯಲಾಯಿತು. ಟರ್ಕಿಗೆ ಆಹಾರ, ಯುದ್ಧೋಪಕರಣಗಳು ಸರಬರಾಜು ಆಗುವುದು ಹೈಫಾ ಬಂದರಿನಿಂದ. ಇದರ ಒಂದು ಕಡೆ ಸಮುದ್ರ, ಮೂರು ಕಡೆ ಬೃಹತ್ ಪರ್ವತಗಳಿದ್ದವು. ಅತೀ ಎತ್ತರದ ಪರ್ವತ ಮೌಂಟ್ ಕಾರ್ಮೆಲ್ ಮೇಲೆ ಟರ್ಕಿಯ ಯೋಧರು ಬಂಕರು ತೋಡಿ ಕುಳಿತಿರುತ್ತಿದ್ದರು. ಬ್ರಿಟಿಷರಿಗೆ ಅನೇಕ ದೇಶಗಳ ಸೈನಿಕರು ಇದ್ದರೂ ಕಣ್ಣಿಗೆ ಬಿದ್ದದ್ದು ಭಾರತೀಯ ಯೋಧರು.
ಮೌಂಟ್ ಕಾರ್ಮೆಲ್ ಪರ್ವತವನ್ನು ಹಿಂಬದಿಯಿಂದ ಹತ್ತಿ ಟರ್ಕಿಯ ಬಂಕರ್‌ಗಳನ್ನು ನಾಶಪಡಿಸುವುದು ಮೈಸೂರು ಯೋಧರ ಜವಾಬ್ದಾರಿ. ಅದೇ ವೇಳೆ ಬೆಟ್ಟಕ್ಕೆ ಕಾಡಿನ ಒಳ ದಾರಿ ಬಳಸಿ ಕಿಶೋನ್ ನದಿ ಮೂಲಕ ಎದುರಿನಿಂದ ಹೈಫಾ ಬಂದರಿಗೆ ನುಗ್ಗುವುದು ಜೋಧಪುರ ಯೋಧರ ಜವಾಬ್ದಾರಿ. ಇವರಿಗೆ ನೆರವಾಗುವುದು ಹೈದರಾಬಾದ್ ಯೋಧರ ಜವಾಬ್ದಾರಿ ಎಂಬ ಯೋಜನೆಯನ್ನು ಜೋಧಪುರದ ಅಶ್ವದಳದ ನಾಯಕ ದಳಪತ್ ಸಿಂಗ್ ನೇತೃತ್ವದಲ್ಲಿ ರೂಪಿಸಲಾಯಿತು. ಹೈಫಾದ ಭೌಗೋಳಿಕ ಜ್ಞಾನವಿರದ ಯೋಧರಿಗೆ ಇದು ಬಹು ದೊಡ್ಡ ಸವಾಲು. ಟರ್ಕಿ ಯೋಧರಿಗೆ ಅತ್ಯಾಧುನಿಕ ಶಸ್ತ್ರಗಳಿದ್ದವು. 1918ರ ಸೆಪ್ಟಂಬರ್ 23ರಂದು ಬೆಳಗ್ಗೆ 10ಕ್ಕೆ ಕಾರ್ಯಾರಂಭವಾಗಿ 2 ಗಂಟೆಗೆ ಮುಕ್ತಾಯವಾಗಬೇಕಿತ್ತು.
ತೀರಾ ಕಡಿದಾದ ಅಪರಿಚಿತ ಬೆಟ್ಟವನ್ನು ಹತ್ತಲು ಮೈಸೂರಿನ ಕುದುರೆಗಳು ಹಿಂದೇಟು ಹಾಕಿದರೂ ಅವುಗಳನ್ನು ಹುರಿದುಂಬಿಸಿ ಸಮುದ್ರ ಮಟ್ಟಕ್ಕಿಂತ 1,500 ಅಡಿ ಎತ್ತರದ ಪರ್ವತಕ್ಕೆ ಮುನ್ನಡೆದರೂ ನಿರೀಕ್ಷಿತ ಸಮಯಕ್ಕೆ ಗುರಿ ತಲುಪಲಿಲ್ಲ. ಹೀಗಾಗಿ ದಳಪತ್ ಸಿಂಗ್ ನೇತೃತ್ವದ ಪಡೆ ನದಿ ದಾಟುವಾಗ ಬೆಟ್ಟದ ಮೇಲಿನಿಂದ ಟರ್ಕಿ ಯೋಧರು ಗುಂಡು ಹಾರಿಸಿದರು. ಈ ವೇಳೆ ದಳಪತ್ ಸಿಂಗನ ಪ್ರಾಣಪಕ್ಷಿ ಹಾರಿತು. ತಡವಾದರೂ ಮೈಸೂರು ಯೋಧರು ಬೆಟ್ಟದ ತುದಿ ತಲುಪಿ ಭರ್ಚಿಗಳಿಂದಲೇ ಟರ್ಕಿಯ ಯೋಧರನ್ನು ಕೊಚ್ಚಿ ಹಾಕಿ, ಕೆಳಗಿಳಿದು ಬಂದರಿನತ್ತ ನುಗ್ಗಿದರು. ಉಳಿದ ಜೋಧಪುರದ ಸೇನೆ ನದಿ ದಾಟಿ ಬಂದರಿಗೆ ನುಗ್ಗಿತು.
ಹೈಫಾ ಬಂದರು ಭಾರತೀಯ ಯೋಧರ ಕೈವಶವಾಯಿತು. 35 ಸೇನಾಧಿಕಾರಿಗಳೂ ಸಹಿತ 1,350 ಜನರನ್ನು ಯುದ್ಧ ಕೈದಿಗಳನ್ನಾಗಿ ಭಾರತೀಯ ಪಡೆ ಸೆರೆಹಿಡಿಯಿತು. ಬಹಾವಿಗಳ ನಾಯಕ ಅಬ್ದುಲ್ಲಾ ಬಹಾನನ್ನು ಸೆರೆ ಹಿಡಿದುಕೊಂಡಿದ್ದ ಸುನ್ನಿ ಮುಸ್ಲಿಮರಿಂದ ಬಿಡಿಸಿ ಕೊಟ್ಟಾಗ ಅವರೇ ಭಾರತೀಯ ಸೈನಿಕರ ಮೆರವಣಿಗೆ ಮಾಡಿದರು. ಒಂದು ದಿನ ತಡವಾಗಿದ್ದರೆ ಆತ ಇಲ್ಲವಾಗುತ್ತಿದ್ದ. ಪ್ಯಾಲೆಸ್ತೀನ್ ಸಹಿತ ವಿವಿಧ ಭೂಭಾಗಗಳನ್ನು ಟರ್ಕಿ ಕಳೆದುಕೊಂಡಿತು, ಬ್ರಿಟಿಷರ ಅಧೀನವಾಯಿತು. ಯಹೂದಿಗಳು ತಮ್ಮ ನೆಲವೆಂದು ಬಾಳಿದ್ದ ಇಸ್ರೇಲ್ ಸ್ವತಂತ್ರ ರಾಷ್ಟ್ರಕ್ಕೆ 1948ರಲ್ಲಿ ಅಡಿಗಲ್ಲು ಹಾಕಲು ಬೀಜಾಂಕುರವಾದದ್ದು ಹೀಗೆ…
ಏನಿದು ತೀನ್(ತ್ರಿ)ಮೂರ್ತಿ?
ದಿಲ್ಲಿಯಲ್ಲಿ 1924ರಲ್ಲಿ ಸ್ಥಾಪನೆಗೊಂಡ ತೀನ್ ಮೂರ್ತಿ ಸ್ಮಾರಕ ಇಸ್ರೇಲಿನ ಹೈಫಾ ಬಂದರನ್ನು ಗೆದ್ದುಕೊಟ್ಟ ಮೈಸೂರು, ಜೋಧಪುರ, ಹೈದರಾಬಾದ್ ಯೋಧರ ಪ್ರತೀಕ. 1930ರಲ್ಲಿ ನಿರ್ಮಾಣಗೊಂಡ ಪಕ್ಕದ ತೀನ್ ಮೂರ್ತಿ ಭವನದಲ್ಲಿ ಮೊದಲು ಬ್ರಿಟಿಷ್ ಸೇನಾ ಮುಖ್ಯಸ್ಥ, 1947ರ ಬಳಿಕ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ವಾಸವಿದ್ದರು. ಅನಂತರ ಮ್ಯೂಸಿಯಂ ಆಯಿತು. ಹೈಫಾ ಕದನದ ಗೆಲುವಿನ ದಿನವನ್ನು ಭಾರತೀಯ ಸೇನೆ, ಇಸ್ರೇಲ್ ಸೇನೆ ಸೆ. 23ರಂದು ಆಚರಿಸುತ್ತಿದೆ. ಬೆಂಗಳೂರಿನ ಜೆಸಿ ನಗರದಲ್ಲಿ ಸ್ಮಾರಕಕ್ಕೆ ಯೋಧರ ಪೀಳಿಗೆಯವರು ನಮನ ಸಲ್ಲಿಸುತ್ತಾರೆ. ಹೈಫಾ ಇಸ್ರೇಲಿನ ಪ್ರಮುಖ ನಗರ. ಈಗ ಹೈಫಾ, ಬೆಂಗಳೂರು ಮಾಹಿತಿ ತಂತ್ರಜ್ಞಾನದ ನಗರ.
ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.