ದನ ಕಳವು ತಪ್ಪಿಸಲು ಸಮಿತಿ ರಚನೆಗೆ ಸೂಚನೆ; ಜಿಲ್ಲಾಡಳಿತಗಳಿಗೆ ಸಚಿವ ಪ್ರಭು ಚವ್ಹಾಣ್ ಪತ್ರ
Team Udayavani, Feb 5, 2022, 5:55 AM IST
ಉಡುಪಿ: ಕರಾವಳಿಯ ಜಿಲ್ಲೆಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ದನ ಕಳವು ತಪ್ಪಿಸಲು ಮತ್ತು ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವುದಕ್ಕಾಗಿ ಗೋ ರಕ್ಷಣ ಸಮಿತಿ ರಚಿಸುವಂತೆ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ಜಿಲ್ಲಾಧಿಕಾರಿ, ಜಿಲ್ಲಾ ಎಸ್‌ಪಿಗಳಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ.
ದನ ಕಳವು ಪ್ರಕರಣಗಳ ಕುರಿತು ಮಾಧ್ಯಮ ವರದಿಗಳನ್ನು ಸೂಕ್ಷ್ಮವಾಗಿ ಗಮಿನಿಸಿದ್ದೇನೆ. ಈ ಬಗ್ಗೆ ಆಯಾ ಜಿಲ್ಲಾಧಿಕಾರಿಗಳು, ಎಸ್‌ಪಿಗಳ ನೇತೃತ್ವದಲ್ಲಿ ಗೋ ರಕ್ಷಣ ಸಮಿತಿ ರಚಿಸಬೇಕು. ಗೋವುಗಳನ್ನು ಅಕ್ರಮವಾಗಿ ಸಾಗಿಸುವ ವಾಹನಗಳ ಬಗ್ಗೆ ನಿಗಾ ಇರಿಸಿ, ಅಂಥ ವಾಹನಗಳ ಚಲನವಲನ ಆಧರಿಸಿ ಹಗಲು-ರಾತ್ರಿ ಪಾಳಿಗಳಲ್ಲಿ ಪೊಲೀಸ್ ಬೀಟ್ ವ್ಯವಸ್ಥೆ ಹೆಚ್ಚಿಸಬೇಕು. ಚೆಕ್ ಪೋಸ್ಟ್, ನಾಕಾಬಂದಿಗಳನ್ನು ಪರಿಣಾಮಕಾರಿಯಾಗಿ ಬಲಪಡಿಸಿ, ತಪಾಸಣೆ ಹೆಚ್ಚಿಸಬೇಕು. ಗೋಪಾಲಕರಲ್ಲಿ ಸೃಷ್ಟಿಯಾಗಿರುವ ಭಯದ ವಾತಾವರಣ ನಿವಾರಿಸಿ ಸರಕಾರ ಗೋಪಾಲಕರೊಂದಿಗೆ ಇರಲಿದೆ ಎಂಬ ಸಂದೇಶ ನೀಡಬೇಕು ಎಂದಿದ್ದಾರೆ.
ಮುಚ್ಚಳಿಕೆ ಅಗತ್ಯ
ಈ ಜಿಲ್ಲೆಗಳಲ್ಲಿ ಗೋವುಗಳನ್ನು ಮಾರಾಟ ಮಾಡುವ ಮಾಲಕರು ಮತ್ತು ಕೊಳ್ಳುವವರ ನಡುವೆ ಇ-ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪಡೆಯಬೇಕು.
ಮುಚ್ಚಳಿಕೆಯಲ್ಲಿ ಸಮಯ, ಅದಕ್ಕೆ ಸಂಬಂಧಿಸಿ ಮೊಬೈಲ್‌ಗಳಲ್ಲಿ ಇರುವ “ಡೇಟ್ ಕೆಮರಾ ಆ್ಯಪ್’ ಮೂಲಕ ಸಮಯ ಸಮೇತ ಭಾವಚಿತ್ರ ಸೆರೆ ಹಿಡಿದು ಗೋಸಾಗಣೆ ವೇಳೆ ಪೊಲೀಸರ ತಪಾಸಣೆ ಸಮಯ ಹಾಜರು ಪಡಿಸ ಬೇಕು. ಸಂಶಯ ಬಂದಲ್ಲಿ ತಪಾಸಣೆ ನಡೆಸಿ ಖಚಿತತೆ ಆಧಾರದಲ್ಲಿ ವಾಹನಗಳನ್ನು ಬಿಟ್ಟು ಕಳುಹಿಸುವ ಬಗ್ಗೆ ಠಾಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಕಠಿನ ಕ್ರಮ
ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ದನ ಕಳವು, ಗೋವುಗಳ ಅಕ್ರಮ ಸಾಗಾಣಿಕೆ ನಿರಂತರವಾಗಿದೆ. ದನ ಕಳ್ಳರ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ಗಡಿಪಾರಿನಂತಹ ಕಠಿನ ಕ್ರಮ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ದನ ಕಳವು ಮರುಕಳಿಸದಂತೆ ಜಿಲ್ಲಾಧಿಕಾರಿಗಳು, ಎಸ್‌ಪಿಗಳು ಮುಂಜಾಗ್ರತೆ ವಹಿಸಬೇಕು ಎಂದು ತಿಳಿಸಿದ್ದಾರೆ.
ಅಧಿಕಾರಿ, ಸಿಬಂದಿಯೇ ಹೊಣೆ
ಗೋಪಾಲಕರ ಕುಟುಂಬಗಳನ್ನು ಗೋಕಳ್ಳರಿಂದ ರಕ್ಷಿಸಲು ವಿಫಲರಾದಲ್ಲಿ ಆಯಾ ಭಾಗದ ಪೊಲೀಸ್ ಅಧಿಕಾರಿಗಳು ಮತ್ತು ಸಿಬಂದಿಯನ್ನೇ ಪ್ರಕರಣ ಸಂಬಂಧ ಹೊಣೆಗಾರರನ್ನಾಗಿ ಮಾಡಿ, ಅವರ ಮೇಲೆ ಕಠಿನ ಕ್ರಮಕ್ಕೆ ಸರಕಾರಕ್ಕೆ ಶಿಫಾರಸು ಮಾಡುವ ಮೂಲಕ ದನ ಕಳವು ತಡೆಗಟ್ಟಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರು ಜಿಲ್ಲಾಡಳಿತಗಳಿಗೆ ಸೂಚಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.