ಸಂಗೊಳ್ಳಿ ರಾಯಣ್ಣಗೆ ಅವಮಾನ: ಐತಿಹಾಸಿಕ ಪ್ರಮಾದ
Team Udayavani, Dec 20, 2021, 6:20 AM IST
ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಪ್ರತಿಮೆಗೆ ಮಸಿ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ವಿರೂಪಗೊಳಿಸಿದ ಪ್ರಕರಣಗಳ ಸಂಬಂಧ ಬೆಳಗಾವಿಯಲ್ಲಿ ಹಿಂಸಾಚಾರವಾಗಿದೆ. ಅದರಲ್ಲೂ ಸದ್ಯ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಈ ಸಂದರ್ಭದಲ್ಲೇ ಹಿಂಸಾಚಾರವಾಗಿರುವುದು ಉದ್ದೇಶ ಪೂರ್ವಕ ಕೃತ್ಯದಂತೆ ಕಂಡುಬರುತ್ತಿದೆ.
ಕನ್ನಡ ಅಸ್ಮಿತೆ ವಿಚಾರದಲ್ಲಿ ಯಾವುದೇ ಸರಕಾರಗಳು ನಿರ್ಲಕ್ಷ್ಯ ವಹಿಸುವುದು ತಪ್ಪು. ಅದರಲ್ಲೂ ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಅಲ್ಲಿನ ದುಷ್ಕರ್ಮಿಗಳು ಬೆಂಕಿ ಹಚ್ಚಿದಾಗಲೇ ರಾಜ್ಯ ಸರಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಜತೆಗೆ, ಮಹಾರಾಷ್ಟ್ರ ಸರಕಾರದ ಜತೆ ಮಾತನಾಡಿ, ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಬಹುದಿತ್ತು. ಆದರೆ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟ ಪ್ರಕರಣ ಸಂಬಂಧ ಸರಕಾರದ ಕಡೆಯಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಇದು ಎಲ್ಲೋ ಒಂದು ಕಡೆಯಲ್ಲಿ ಕನ್ನಡಿಗರ ಕೋಪಕ್ಕೂ ಕಾರಣವಾಗಿತ್ತು.
ಈ ವಿಚಾರ ಸಂಬಂಧ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದಲೇ ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಪ್ರತಿಮೆಗೆ ಮಸಿ ಬಳಿಯಲಾಗಿದೆ. ಸದ್ಯ ಈ ಪ್ರಕರಣದಲ್ಲಿ ಏಳು ಮಂದಿಯನ್ನು ಬಂಧಿಸಿದ್ದು, ಇವರು ಕನ್ನಡ ಧ್ವಜಕ್ಕೆ ಅವಮಾನ ಮಾಡಿದ್ದರಿಂದಲೇ ಈ ಕೃತ್ಯ ಎಸಗಿದ್ದಾಗಿ ಪ್ರಾಥಮಿಕ ಮೂಲಗಳು ಹೇಳಿವೆ. ಅಂದರೆ, ಸರಕಾರ ಏನೂ ಕ್ರಮ ಕೈಗೊಳ್ಳಲಿಲ್ಲ ಎಂಬ ಕಾರಣಕ್ಕಾಗಿ ಇವರು ಈ ಕೃತ್ಯಕ್ಕೆ ಮುಂದಾಗಿರುವುದು ಸತ್ಯ. ಒಂದು ವೇಳೆ ಸರಕಾರವೇ ಧ್ವಜ ಸುಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಮಾತನಾಡಿದ್ದರೆ, ಕನ್ನಡಿಗರು ಸಂಯಮದಿಂದ ಇರುತ್ತಿದ್ದರು.
ಇನ್ನು ಬೆಳಗಾವಿಯಲ್ಲಿ ಎಂಇಎಸ್ ಮತ್ತು ಶಿವಸೇನೆ ಪುಂಡರ ಹಾವಳಿಯೂ ಹೆಚ್ಚಾಗಿದೆ. ಇದರ ಪರಿಣಾಮವೇ ಬೆಳಗಾವಿ ಜಿಲ್ಲೆಯ ಅನಗೋಳದ ಕನಕದಾಸ ಕಾಲನಿಯಲ್ಲಿದ್ದ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ವಿರೂಪ ಮಾಡಿದ್ದಾರೆ. ಕನ್ನಡ ನೆಲದಲ್ಲೇ ಇಂಥ ಬೆಳವಣಿಗೆಗಳು ಆಗಬಾರದಿತ್ತು. ಆದರೂ, ಸಮಾಜದಲ್ಲಿ ಅಶಾಂತಿ ಉಂಟು ಮಾಡಲೇಬೇಕು ಎಂಬ ಉದ್ದೇಶದಿಂದಲೇ ಈ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ.
ನಾಡು-ನುಡಿ ಎಂಬ ಭಾವನಾತ್ಮಕ ವಿಚಾರ ಬಂದಾಗ ಅದು ಯಾವುದೇ ಸರಕಾರವಿರಲಿ, ಗಟ್ಟಿ ನಿರ್ಧಾರವನ್ನೇ ತೆಗೆದುಕೊಳ್ಳಬೇಕು. ಇಲ್ಲಿ ರಾಜಕೀಯಕ್ಕಿಂತ ಹೆಚ್ಚಾಗಿ, ಭಾವನಾತ್ಮಕ ವಿಚಾರಗಳಿಗೆ ಹೆಚ್ಚಿನ ಗಮನ ನೀಡಬೇಕು. ಸಂಗೊಳ್ಳಿ ರಾಯಣ್ಣನ ವಿಚಾರವಾಗಲಿ ಅಥವಾ ಛತ್ರಪತಿ ಶಿವಾಜಿಯಾಗಲಿ, ಈ ಇಬ್ಬರ ವಿಚಾರದಲ್ಲೂ ಸರಕಾರ ದೃಢ ನಿರ್ಧಾರವನ್ನೇ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ, ಜನ ಸಾಮರಸ್ಯದಲ್ಲಿ ಜೀವನ ಮಾಡಲು ಸಾಧ್ಯವಾಗುವುದಿಲ್ಲ.
ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹೇಳಿದ ಹಾಗೆ, ದೇಶಕ್ಕಾಗಿ ಹೋರಾಟ ಮಾಡಿದವರಿಗೆ ಅವಮಾನ ಸಲ್ಲದು. ದೇಶ ಎಂಬ ವಿಚಾರ ಬಂದಾಗ, ಕಿತ್ತೂರ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿಗೆ ತಮ್ಮದೇ ಆದ ಮಹತ್ವದ ಸ್ಥಾನವಿದೆ. ಇವರಿಗೆ ಅವಮಾನ ಮಾಡುವ ಸಂಗತಿ ನಾಗರಿಕ ಸಮಾಜ ಒಪ್ಪುವಂಥದ್ದಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Mangaluru: ಡಿ. 20ರಂದು “ಯುಐ’ ಚಲನಚಿತ್ರ ಬಿಡುಗಡೆ: ನಟ ಉಪೇಂದ್ರ
Mangaluru: ಟಾಸ್ಕ್ ಫೋರ್ಸ್‌ನೊಂದಿಗೆ ನುಗ್ಗಿ: ಉಪಲೋಕಾಯುಕ್ತ ನ್ಯಾ| ಮೂ| ಬಿ.ವೀರಪ್ಪ
Kaup: ಜೀರ್ಣೋದ್ಧಾರ ಅತ್ಯದ್ಭುತವಾಗಿ ಕಾಣುತ್ತಿವೆ: ಕಾಳಹಸ್ತೇಂದ್ರ ಶ್ರೀ
Udupi: ನ್ಯಾಯವಾದಿಗಳು ನ್ಯಾಯಾಂಗ ಸೈನಿಕರಂತೆ ಕಾರ್ಯನಿರ್ವಹಿಸಲಿ: ನ್ಯಾ| ಬಿ. ವೀರಪ್ಪ
Kadaba: ಬಿಳಿನೆಲೆ ಸಂದೀಪ್ ಕೊ*ಲೆ ಪ್ರಕರಣ; ಗ್ರಾ.ಪಂ. ಎದುರು ಶವವಿಟ್ಟು ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.