ಮತ್ಸ್ಯಾಶ್ರಯಕ್ಕೆ ಮರುಚಾಲನೆ ಪುರುಷ ಮೀನುಗಾರರಿಗೂ ಬಡ್ಡಿರಹಿತ ಸಾಲ: ಸಿಎಂ ಸಿದ್ದರಾಮಯ್ಯ
Team Udayavani, Nov 22, 2023, 1:31 AM IST
ಬೆಂಗಳೂರು: ಮಹಿಳಾ ಮೀನುಗಾರರಿಗೆ ನೀಡುತ್ತಿರುವಂತೆ ಪುರುಷ ಮೀನುಗಾರರಿಗೂ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂ. ವರೆಗೆ ಸಾಲ, ಮೀನುಗಾರಿಕೆ ವಿಶ್ವವಿದ್ಯಾನಿಲಯ ಸ್ಥಾಪನೆ, ಮತ್ಸ್ಯಾಶ್ರಯಕ್ಕೆ ಮರುಚಾಲನೆ ಸೇರಿ ಮೀನುಗಾರರ ವಿವಿಧ ಬೇಡಿಕೆಗಳನ್ನು ಮುಂದಿನ ವರ್ಷ ಪರಿಗಣಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ವಿಶ್ವ ಮೀನುಗಾರಿಕೆ ದಿನಾಚರಣೆ ಅಂಗವಾಗಿ ವಿಧಾನಸೌಧದಲ್ಲಿ ಮತ್ಸéವಾಹಿನಿ ವಿತರಣೆ ಮಾಡಿ ಅವರು ಮಾತನಾಡಿದರು. ನಮ್ಮ ಸರಕಾರ ಮೀನುಗಾರರ ಸಮಸ್ಯೆಗಳನ್ನು ಪರಿಹರಿಸಲು ಬದ್ಧವಾಗಿದೆ ಎಂದರು.
ಮೀನುಗಾರಿಕೆಗೆ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ಬೇಡಿಕೆ ಇದೆ. ಮುಂದಿನ ವರ್ಷ ಈ ಬಗ್ಗೆ ವಿಚಾರ ಮಾಡುತ್ತೇನೆ. ಮತ್ಸ್ಯಶ್ರಯ ಯೋಜನೆಯಡಿ ಮನೆ ಕಟ್ಟಿಕೊಡುವ ಕಾರ್ಯಕ್ಕೂ ಮುಂದಿನ ವರ್ಷ ಹಣ ಮೀಸಲಿಡುವುದಾಗಿ ಹೇಳಿದರು.
ಸುಟ್ಟು ಹಾನಿಯಾಗಿರುವ ಸುಮಾರು 16 ದೋಣಿಗಳಿಗೆ ಪರಿಹಾರ ಕೇಳಿದ್ದು, ಇಲಾಖೆಯ ಬಳಿ 4 ಕೋಟಿ ರೂ. ಇದೆ. ನಾನೂ ಸ್ವಲ್ಪ ಸೇರಿಸಿ ಕೊಡುತ್ತೇನೆ. ಇಲಾಖೆಯೂ ಕೊಡಬೇಕು ಎಂದು ತಾಕೀತು ಮಾಡಿದರು.
ಮೀನು ಉತ್ಪಾದನೆ, ಸಂಗ್ರಹಣೆ, ಸಂಸ್ಕರಣೆ, ಮಾರಾಟದ ಮೂಲಕ ಆಹಾರ ಭದ್ರತೆಯ ಜತೆಗೆ ಆರ್ಥಿಕ ಶಕ್ತಿಯೂ ಒದಗುತ್ತದೆ. ಪ್ರಸ್ತುತ ಮತ್ಸéವಾಹಿನಿ ವಿತರಣೆಯಿಂದ ತಾಜಾ ಮೀನಿನ ಮಾರಾಟ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆ ಸಾಧ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಲ್ಪೆ ಯಾಂತ್ರೀಕೃತ ಮೀನುಗಾರರ ಪ್ರಾಥಮಿಕ ಸಹಕಾರ ಸಂಘ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರ ಸಂಘ, ಬೀಜಾಡಿ ಮೀನುಗಾರರ ಪ್ರಾಥಮಿಕ ಸಹಕಾರ ಸಂಘ, ತದಡಿ ಮೀನುಗಾರರ ಸಂಘ ಸಹಿತ ವಿವಿಧ ಮೀನುಗಾರಿಕಾ ಸಂಘ-ಸಂಸ್ಥೆಗಳಿಗೆ ಬಹುಮಾನ ವಿತರಿಸಲಾಯಿತು. ಮತ್ಸéವಾಣಿ ಪತ್ರಿಕೆ ಹಾಗೂ ಕಿರುಚಿತ್ರಕ್ಕೆ ಚಾಲನೆ ನೀಡಲಾಯಿತು.
ಬೆಂಗಳೂರಿನಲ್ಲಿ ಮತ್ಸ್ಯಾಭವನ: ಸಚಿವ ವೈದ್ಯ
ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಮಾತನಾಡಿ, ರಾಜ್ಯದಲ್ಲಿ ಒಟ್ಟು 320 ಕಿ.ಮೀ. ಉದ್ದದ ಕರಾವಳಿ ತೀರವಿದ್ದು, 85 ಲಕ್ಷ ಮೀನು ಗಾರ ರಿದ್ದಾರೆ. ರಾಜ್ಯದಲ್ಲಿ 10 ಲಕ್ಷ ಮೆಟ್ರಿಕ್ ಟನ್ ಮೀನು ಕೃಷಿ ಮಾಡ ಲಾಗುತ್ತಿದೆ. 25 ಕೋಟಿ ರೂ. ವೆಚ್ಚದಲ್ಲಿ ಮೀನು ಮರಿ ಸಾಕಾಣಿಕೆ ಕೇಂದ್ರ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇವೆ. ಡೀಸೆಲ್ ಪ್ರಮಾಣವನ್ನು 2 ಲಕ್ಷ ಕಿ.ಲೀಟರ್‌ಗೆ ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ 3 ಎಕರೆ ಭೂಮಿಯಲ್ಲಿ ಮತ್ಸ್ಯಭವನ, ಮ್ಯೂಸಿಯಂ, ತರಬೇತಿ ಕೇಂದ್ರ ನಿರ್ಮಿಸಲು ತೀರ್ಮಾನಿಸ ಲಾಗಿದೆ. ಮೀನುಗಾರಿಕೆ ವಿ.ವಿ. ಸ್ಥಾಪನೆ ಆಗಬೇಕಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.