“ಕೋವಿಡ್-19ದಿಂದ ಕೃಷಿ ಕ್ಷೇತ್ರದತ್ತ ಆಸಕ್ತಿ’
Team Udayavani, May 5, 2020, 6:03 AM IST
ಉಡುಪಿ: ಕೋವಿಡ್-19 ಕಾರಣದಿಂದ ಕೃಷಿ ಕ್ಷೇತ್ರದತ್ತ ಆಸಕ್ತಿ ಹೆಚ್ಚಾಗಿದೆ. ಬೆಂಗಳೂರು, ಮುಂಬಯಿಯಂತಹ ದೂರದ ಊರಿಗೆ ಹೋಗಿರುವವರು ಮತ್ತೆ ಕೃಷಿ ಕ್ಷೇತ್ರದತ್ತ ಆಸಕ್ತಿ ತೋರಿಸುತ್ತಿದ್ದಾರೆ ಎಂದು ರಾಜ್ಯದ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಜಿ.ಪಂ. ಸಭಾಂಗಣದಲ್ಲಿ ಸೋಮವಾರ ಕೃಷಿ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮತ್ತು ಸುದ್ದಿಗಾರರ ಜತೆ ಮಾತನಾಡಿದ ಅವರು, ಇದುವರೆಗೆ ಮಾಡಿದಂತೆ ಹೊಲವನ್ನು ಯಾರೂ ಹಡೀಲು ಬೀಳಲು ಬಿಡುವುದಿಲ್ಲ. ಕೃಷಿ ಕ್ಷೇತ್ರದ ಮೇಲೆ ಆಸಕ್ತಿ ಹೆಚ್ಚಿದೆ ಎಂದರು.
ಕೃಷಿ ಮಾಡದವರಿಗೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಸಿಕ್ಕಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಇದರ ಬಗ್ಗೆ ಕೇಂದ್ರ ಸರಕಾರಕ್ಕೆ ತಿಳಿಸುತ್ತೇವೆ ಎಂದರು.
ಗುಣಮಟ್ಟದ ಬಿತ್ತನೆ ಬೀಜ
ರೈತರಿಗೆ ವಿತರಿಸಲಾಗುವ ಬಿತ್ತನೆ ಬೀಜ, ಕೀಟನಾಶಕಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಈ ಕುರಿತಂತೆ ಬಿತ್ತನೆ ಬೀಜ, ಕೀಟನಾಶಕಗಳ ಮಾದರಿಯನ್ನು ಕೃಷಿ ಇಲಾಖೆಯ ಅಧಿಕಾರಿಗಳು ಪ್ರಯೋಗಾಲಯಗಳ ಮೂಲಕ ಪರೀಕ್ಷಿಸಿ ರೈತರಿಗೆ ದೊರೆಯುವಂತೆ ಮಾಡಬೇಕು. ಕಳಪೆ ಗುಣ ಮಟ್ಟದ್ದಾಗಿದ್ದರೆ ಸರಬರಾಜು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಪ್ಪುಪಟ್ಟಿಗೆ: ಎಚ್ಚರಿಕೆ
ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸಲಾಗುವ ಯಂತ್ರೋಪಕರಣ ಬೆಲೆ, ಮಾರುಕಟ್ಟೆಯಲ್ಲಿರುವ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಇಲಾಖೆಗೆ ಸಬ್ಸಿಡಿ ದರದಲ್ಲಿ ಸರಬರಾಜು ಮಾಡುವ ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಸೇರ್ಪಡಿಸಲಾಗುವುದು. ಯಂತ್ರೋಪಕರಣ ಸಬ್ಸಿಡಿ ಮೊತ್ತ ವನ್ನು ನೇರವಾಗಿ ಫಲಾನುಭವಿ ರೈತರ ಖಾತೆಗೆ ಹಾಕುವ ಕುರಿತಂತೆ ಪರಿಶೀಲಿಸಲಾಗುವುದು ಎಂದರು.
ಕಾಡುಪ್ರಾಣಿಗಳ ಹಾವಳಿ,
ಕೃಷಿ ಕಾಲೇಜು
ಕೃಷಿಕರ ಬೆಳೆಗೆ ಕಾಡುಪ್ರಾಣಿಗಳಿಂದ ಹಾವಳಿಯಾಗುತ್ತಿರುವ ಕುರಿತು ಅರಣ್ಯ ಸಚಿವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೂ ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಪ್ರಾರಂಭಿಸುವ ಕುರಿ ತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿ ಸುವುದಾಗಿ ಶಾಸಕ ಕೆ. ರಘುಪತಿ ಭಟ್ ಅವರಿಗೂ ಸಚಿವರು ಹೇಳಿದರು.
ವಿವಿಧ ರೈತರ ಸಂಘಟನೆಗಳ ಮುಖಂಡರು ಕೋರಿದಂತೆ, ಎಪಿಎಂಸಿ ಯಲ್ಲಿ ಶೇ. 1.5 ತೆರಿಗೆ ರದ್ದುಗೊಳಿಸುವುದು, ಜಿಲ್ಲೆಯಲ್ಲಿ ಭತ್ತದ ಬೆಂಬಲ ಬೆಲೆಯನ್ನು ಸಾಕಷ್ಟು ಮುಂಚಿತವಾಗಿ ಘೋಷಣೆ ಮಾಡುವುದು, ಕೋಲ್ಡ್ ಸ್ಟೋರೇಜ್ ಸ್ಥಾಪನೆ, ಭತ್ತದ ಬೆಳೆಗೆ ಮಳೆ ಆಧಾರಿತ ಸಿರಿಧಾನ್ಯಗಳಿಗೆ ನೀಡುವ ರೀತಿಯಲ್ಲಿ ಪ್ರೋತ್ಸಾಹಧನ ನೀಡು ವುದು, ಬೆಳೆ ವಿಮೆಯಲ್ಲಿ ಗೊಂದಲಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಜಿಲ್ಲೆಯ ವರದಿ ಮಂಡಿಸಿದರು. ಶಾಸಕರಾದ ಲಾಲಾಜಿ ಮೆಂಡನ್, ಬಿ.ಎಂ. ಸುಕುಮಾರ ಶೆಟ್ಟಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಿಲ್ಲಾ ಧಿಕಾರಿ ಜಿ. ಜಗದೀಶ್, ಜಿ.ಪಂ. ಸಿಇಒ ಪ್ರೀತಿ ಗೆಹಲೋತ್ ಉಪಸ್ಥಿತರಿದ್ದರು.
ಭಾರತೀಯ ಕಿಸಾನ್ ಸಂಘದ ನವೀನ್‌ಚಂದ್ರ ಜೈನ್, ಸತ್ಯ ನಾರಾಯಣ ಉಡುಪ, ಜಿಲ್ಲಾ ಕೃಷಿಕ ಸಂಘದ ರಾಮಕೃಷ್ಣ ಶರ್ಮಾ, ಕೃಷಿಕ ಸಮಾಜದ ಅಶೋಕ ಕುಮಾರ್ ಕೊಡ್ಗಿ ಬೇಡಿಕೆ ಮಂಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.