ಆಂತರಿಕ ಸಿಟ್ಟು; ಯಾರಿಗೆ ಏಟು?
ಹಳೇ ಹುಲಿ ಕೋಳಿವಾಡಗೆ ಅರುಣಕುಮಾರ ಪೂಜಾರ ಟಕ್ಕರ್
Team Udayavani, Nov 29, 2019, 4:13 AM IST
ರಾಣಿಬೆನ್ನೂರು: “ಬರ-ನೆರೆ ಬಂದರೂ, ಮನೆ ಬಿದ್ದು, ಕುರಿ ಸತ್ತರೂ ನಮ್ಮ ನೋವನ್ನು ಆಲಿಸಿ ಸೂಕ್ತ ಪರಿಹಾರ ದೊರಕಿಸಲಿಲ್ಲ’ ಎಂಬುದು ಸೇರಿ ವಿವಿಧ ಸಮಸ್ಯೆಗಳ ಬಗ್ಗೆ ರಾಣಿಬೆನ್ನೂರು ವಿಧಾನಸಭೆ ಕ್ಷೇತ್ರದ ಜನರ ಹೊಟ್ಟೆಯೊಳಗಿನ ಆ ಸಿಟ್ಟು ಉಪ ಚುನಾವಣೆಯಲ್ಲಿ ಯಾರಿಗೆ ವರ-ಯಾರಿಗೆ ಶಾಪವಾಗಲಿದೆ ಎಂಬುದರ ಜತೆಗೆ, ಅಭ್ಯರ್ಥಿ ನೋಡಬೇಕೋ?, ರಾಜ್ಯ ಸರ್ಕಾರ ಹಾಗೂ ಪಕ್ಷವನ್ನು ನೋಡಬೇಕೋ ಎಂಬ ಜಿಜ್ಞಾಸೆ ತನ್ನದೇ ರೂಪದಲ್ಲಿ ಸುಳಿದಾಡುತ್ತಿದೆ.
ಮೊದಲ ಬಾರಿಗೆ ಉಪ ಚುನಾವಣೆ: ಚುನಾವಣೆ ಇತಿಹಾಸದಲ್ಲೇ ಮೊದಲ ಬಾರಿಗೆ ಉಪ ಚುನಾವಣೆಗೆ
ರಾಣಿಬೆನ್ನೂರು ಮೈಯೊಡ್ಡಿಕೊಂಡಿದೆ. ಪಕ್ಷ, ಜಾತಿ, ಅಭ್ಯರ್ಥಿ ವಿಷಯಗಳು ಮಹತ್ವದ ಪ್ರಭಾವ ಬೀರತೊಡಗಿವೆ. ರಾಣಿಬೆನ್ನೂರಿನಿಂದ ಕೆಪಿಜೆಪಿಯಿಂದ ಆಯ್ಕೆಯಾಗಿದ್ದ ಆರ್.ಶಂಕರ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿದ್ದರಿಂದ ಉಪ ಚುನಾವಣೆ ಎದುರಾಗಿದ್ದು, ಆರ್.ಶಂಕರ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ.
ರಾಣಿಬೆನ್ನೂರು ಕ್ಷೇತ್ರದಲ್ಲಿ ಸುಮಾರು 10 ಬಾರಿ ಸ್ಪರ್ಧಿಸಿ, ಐದು ಬಾರಿ ಗೆದ್ದು, ಐದು ಬಾರಿ ಸೋಲು
ಕಂಡಿರುವ ಅನುಭವಿ ಕೆ.ಬಿ.ಕೋಳಿವಾಡ ಅವರು ಕಾಂಗ್ರೆಸ್ ನಿಂದ ಮತ್ತೂಮ್ಮೆ ಸ್ಪರ್ಧೆಗಿಳಿದಿದ್ದರೆ, ಬಿಜೆಪಿ
ಯಿಂದ ಅರುಣ ಕುಮಾರ ಪೂಜಾರ, ಜೆಡಿಎಸ್‌ನಿಂದ ಮಲ್ಲಿಕಾರ್ಜುನ ಹಲಗೇರಿ ಸೇರಿ ಒಟ್ಟು 9 ಜನ ಕಣ
ದಲ್ಲಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. 1972ರಲ್ಲೇ ವಿಧಾನಸಭೆ ಪ್ರವೇಶಿದ್ದ ಕೆ.ಬಿ.ಕೋಳಿವಾಡ ಶಾಸಕ, ಸಚಿವ, ಸ್ಪೀಕರ್ ಹುದ್ದೆ ನಿಭಾಯಿಸಿದ್ದಾರೆ. 2018ರ ಚುನಾವಣೆಯಲ್ಲಾದ ಹಿನ್ನಡೆ ಮರೆಯಲು ಉಪ ಚುನಾವಣೆಯಲ್ಲಿ ಗೆಲುವಿನ ಕಸರತ್ತಿಗಿಳಿದಿದ್ದಾರೆ.
ಗೆಲ್ಲಲೇಬೇಕೆಂಬ ತವಕದೊಂದಿಗೆ ಬಿಜೆಪಿಯ ಅರುಣ ಕುಮಾರ ತೀವ್ರ ಸ್ಪರ್ಧೆಯೊಡ್ಡಿದ್ದಾರೆ.
ಕೆ.ಬಿ.ಕೋಳಿವಾಡ ಅವರು ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತ ಹೊಂದಿದ್ದಾರೆಯಾದರೂ ವಯಸ್ಸು, ಕೆಲವೊಂ ದು ವಿಷಯಗಳು ವ್ಯತಿರಿಕ್ತ ಪರಿಣಾಮ ಬೀರಬಹುದಾಗಿದೆ. ಬಿಜೆಪಿಯ ಅರುಣಕುಮಾರ ಕ್ಷೇತ್ರಕ್ಕೆ
ಪರಿಚಯವಿದ್ದರೂ ಪ್ರಭಾವ ಬೀರಬಹುದಾದ ನಿಕಟ ಎನ್ನುವಷ್ಟಿಲ್ಲ. ಅಭ್ಯರ್ಥಿಗಿಂತ ಬಿಜೆಪಿ ನೋಡಿ ಮತ
ಪಡೆಯಬೇಕಾದ ಸ್ಥಿತಿ ಇದೆ. ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಕೆಲವೊಂದಿಷ್ಟು ಮತ ಸೆಳೆಯಬಹುದಷ್ಟೇ.
ನಿರ್ಣಾಯಕರು ಯಾರು?: ರಾಣಿಬೆನ್ನೂರು ಕ್ಷೇತ್ರದಲ್ಲಿ ಲಿಂಗಾಯತರ ಪ್ರಾಬಲ್ಯವಿದೆ. ಕುರುಬರು,
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮುಸ್ಲಿಮರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಮೂವರೂ ಲಿಂಗಾಯತರಾಗಿದ್ದು, ಪ್ರತ್ಯೇಕ ಒಳಪಂಗಡಗಳಿಗೆ ಸೇರಿದ್ದಾರೆ. ಕೆ.ಬಿ.ಕೋಳಿವಾಡ ಅವರು ರಡ್ಡಿ ಲಿಂಗಾಯತರಾದರೆ, ಅರುಣಕುಮಾರ ಪಂಚಮಸಾಲಿ ಲಿಂಗಾಯತ, ಜೆಡಿಎಸ್‌ನ ಮಲ್ಲಿಕಾರ್ಜುನ ಹಲಗೇರಿ ಸಾಧು ಲಿಂಗಾಯತರಾಗಿದ್ದಾರೆ.
ಲಿಂಗಾಯತ ಮತಗಳನ್ನು ಸೆಳೆಯಲು ಕಾಂಗ್ರೆಸ್- ಬಿಜೆಪಿ ಜಿದ್ದಾಜಿದ್ದಿಗೆ ಬಿದ್ದಿವೆ. ಗೃಹ ಸಚಿವ ಬಸವರಾಜ
ಬೊಮ್ಮಾಯಿ, ಸಂಸದ ಬಿ.ವೈ.ರಾಘವೇಂದ್ರ ಕ್ಷೇತ್ರದಲ್ಲೇ ಠಿಕಾಣಿ ಹೂಡಿ ರಣತಂತ್ರ ರೂಪಿಸುತ್ತಿದ್ದರೆ, ಕೆ.ಬಿ. ಕೋಳಿವಾಡ ತಮ್ಮದೇ ಸಾಮರ್ಥ್ಯ ಹಾಗೂ ಪಕ್ಷದ ನಾಯಕರೊಂದಿಗೆ ಪ್ರತಿ ಪಟ್ಟು ಹಾಕುತ್ತಿದ್ದಾರೆ.
ಬಿಜೆಪಿ, ಲಿಂಗಾಯತ ಮತಗಳನ್ನು ಹೆಚ್ಚಿಗೆ ಅವಲಂಬಿಸಿದ್ದು, ಕುರುಬ, ಪರಿಶಿಷ್ಟ ಜಾತಿ-ಪಂಗಡ,
ಇನ್ನಿತರ ಹಿಂದುಳಿದ ಮತಗಳನ್ನು ಸೆಳೆಯಲು ಮುಂದಾಗಿದೆ. ಕಾಂಗ್ರೆಸ್, ಲಿಂಗಾಯತ ಮತಗಳ
ಜತೆಗೆ ಕುರುಬ, ಮುಸ್ಲಿಂ ಹಾಗೂ ಪರಿಶಿಷ್ಟ ಜಾತಿ- ಪಂಗಡ, ಹಿಂದುಳಿದ ಮತಗಳಿಗೆ ಯತ್ನಿಸುತ್ತಿದೆ. ಸಾಧು ಲಿಂಗಾಯತರಿಗೆ ಟಿಕೆಟ್ ನೀಡಿಲ್ಲ ಎಂಬ ಕೊರಗು ಇದ್ದು, ಜೆಡಿಎಸ್ ಅಭ್ಯರ್ಥಿ ಸಾಧು ಲಿಂಗಾಯತ
ಆಗಿದ್ದು, ಅವರು ಎಷ್ಟು ಮತ ಪಡೆಯುತ್ತಾರೋ ಅದು ಬಿಜೆಪಿಗೆ ವ್ಯತಿರಿಕ್ತ ಎನ್ನಲಾಗುತ್ತಿದೆ.
ಬಿಜೆಪಿಯಿಂದ ಡಾ|ಬಸವರಾಜ ಕೆಲಗಾರ ಅವರಿಗೆ ಟಿಕೆಟ್ ನೀಡಿದ್ದರೆ ಬಿಜೆಪಿಗೆ ಗೆಲುವು ಸುಲಭವಾಗುತ್ತಿತ್ತು ಎಂಬುದನ್ನು ಎದುರಾಳಿ ಪಕ್ಷದ ಕೆಲವರು ಒಪ್ಪುತ್ತಿದ್ದಾರೆ. ಕೆಲಗಾರಗೆ ಟಿಕೆಟ್ ಕೈ ತಪ್ಪಿರುವುದು ಬೆಂಬಲಿಗರಲ್ಲಿ ನೋವಿದೆ. ಆ ನೋವು ಯಾವ ಪರಿಣಾಮ ಬೀರುತ್ತದೆ ಎಂಬ ಆತಂಕ ಬಿಜೆಪಿಯನ್ನು ಕಾಡತೊಡಗಿದೆ. ಸಿಎಂ ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಭಾವ ಹೊಂದಿದ್ದು, ಈಗಾಗಲೇ ಇಬ್ಬರು ನಾಯಕರು ಕ್ಷೇತ್ರದಲ್ಲಿ ಪ್ರಚಾರ ಮಾಡಿ ತಮ್ಮ ಸಂದೇಶ ರವಾನಿಸಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ಕೆಲವೇ ಸಾವಿರ ಮತಗಳ ಅಂತರದಿಂದ ಗೆಲುವು ನೀಡುತ್ತಿರುವ ರಾಣಿಬೆನ್ನೂರು ಕ್ಷೇತ್ರದ ಜನತೆ ಈ ಬಾರಿಯ ತೀವ್ರ ಹಣಾಹಣಿಯಲ್ಲಿ ಯಾರಿಗೆ “ಜೈ’
ಅನ್ನುತ್ತಾರೆ ಕಾದು ನೋಡಬೇಕು.
ಕ್ಷೇತ್ರದ ಇತಿಹಾಸ
ಬೀಜೋತ್ಪಾದನೆ ಹಾಗೂ ಉಣ್ಣೆ ಉತ್ಪನ್ನಗಳ ಖ್ಯಾತಿಯ ರಾಣಿಬೆನ್ನೂರು ಕ್ಷೇತ್ರ, 1962ರಲ್ಲಿಯೇ ಮಹಿಳೆಯೊಬ್ಬರನ್ನು ವಿಧಾನಸಭೆಗೆ ಆಯ್ಕೆ ಮಾಡಿದ ಖ್ಯಾತಿ ಹೊಂದಿದೆ. 1957ರಲ್ಲಿ ದ್ವಿಸದಸ್ಯ ಕ್ಷೇತ್ರವಾಗಿತ್ತು. ಕಾಂಗ್ರೆಸ್‌ನ ಕೆ.ಎಫ್. ಪಾಟೀಲ ಮೊದಲ ಶಾಸಕರಾಗಿದ್ದರು. 1962ರಲ್ಲಿ ಪರಿಶಿಷ್ಟ
ಜಾತಿಗೆ ಕ್ಷೇತ್ರ ಮೀಸಲಾಗಿದ್ದರಿಂದ ಕಾಂಗ್ರೆಸ್‌ನ ಯಲ್ಲವ್ವ ಸಾಂಬ್ರಾಣಿ ಆಯ್ಕೆಯಾಗಿದ್ದರು. 1957ರಿಂದ2018ರವರೆಗಿನ ಚುನಾವಣೆಯಲ್ಲಿ 8 ಬಾರಿ ಕಾಂಗ್ರೆಸ್, 2 ಬಾರಿ ಜನತಾ ಪಕ್ಷ,
ಪಿಎಸ್‌ಪಿ, ಬಿಜೆಪಿ ಹಾಗೂ ಕೆಪಿಜೆಪಿ ತಲಾ ಒಂದು ಬಾರಿ ಗೆಲುವು ಸಾಧಿಸಿವೆ. 2018ರ ಚುನಾವಣೆಯಲ್ಲಿ ಕೆಪಿಜೆಪಿಯ ಆರ್.ಶಂಕರ 53,402 ಮತ ಪಡೆದರೆ, ಕಾಂಗ್ರೆಸ್‌ನ ಕೆ.ಬಿ. ಕೋಳಿವಾಡ 49,373 ಹಾಗೂ ಬಿಜೆಪಿಯ ಡಾ|ಬಸವರಾಜ ಕೆಲಗಾರ 41,248 ಮತ ಪಡೆದಿದ್ದರು. ಆರ್.ಶಂಕರ 4,029
ಮತಗಳ ಅಂತರದ ಗೆಲುವು ಕಂಡಿದ್ದರು.
ಪ್ರಮುಖ ವಿಷಯ
ಕೆಪಿಜೆಪಿಯಿಂದ ಆಯ್ಕೆಯಾಗಿದ್ದ ಆರ್. ಶಂಕರ ಅನರ್ಹಗೊಂಡಿದ್ದರಿಂದ ಉಪ ಚುನಾವಣೆ ಎದುರಾಗಿರುವುದು ಪ್ರಮುಖ ವಿಷಯವಾಗಿದೆ. ಶಂಕರ ಬಗ್ಗೆ ಸಿಟ್ಟು ಸಾಕಷ್ಟಿದೆ. ನೀರಾವರಿ ಸೌಲಭ್ಯ ಸೇರಿದಂತೆ ಇತ್ತೀಚೆಗಿನ ನೆರೆ ಸಂಕಷ್ಟಕ್ಕೆ ಸಮರ್ಪಕ ನೆರವು ದೊರೆತಿಲ್ಲ. ಸಮರ್ಪಕ ಪರಿಹಾರ ಕೈ ಸೇರಿಲ್ಲ ಎಂಬ ನೋವು-ಆಕ್ರೋಶ ಇದೆ. ಮರಳು ದಂಧೆ ಸಹ ತನ್ನದೇ ಪ್ರಭಾವ
ತೋರತೊಡಗಿದೆ. ಅಭ್ಯರ್ಥಿಗೆ ಆದ್ಯತೆ ಎಂಬುದು ಕೆಲವರಾದರೆ, ಇನ್ನು ಕೆಲವರು ರಾಷ್ಟ್ರದ ಸುಭದ್ರತೆಯಿಂದ ಪ್ರಧಾನಿ ಹಾಗೂ ಮುಖ್ಯಮಂತ್ರಿಯವರನ್ನು ನೋಡಿ ಮತ ನೀಡಬೇಕೆಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
– ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
MUST WATCH
ಹೊಸ ಸೇರ್ಪಡೆ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.