ಒಳ ಮೀಸಲು ಕೇಂದ್ರದ ಹೆಗಲಿಗೆ- ಪರಿಶಿಷ್ಟ ಜಾತಿಗೆ ಒಳಮೀಸಲು: ರಾಜ್ಯ ಸಚಿವ ಸಂಪುಟ ನಿರ್ಧಾರ
Team Udayavani, Jan 19, 2024, 1:41 AM IST
ಬೆಂಗಳೂರು: ಅಧಿಕಾರಕ್ಕೆ ಬಂದರೆ ನ್ಯಾ| ಸದಾಶಿವ ಆಯೋಗದ ವರದಿ ಜಾರಿ ಮಾಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ “ಭರವಸೆಯ ಹೊರೆ’ ಇಳಿಸಿಕೊಳ್ಳಲು ರಾಜ್ಯ
ಸರಕಾರ ಮುಂದಾಗಿದೆ. ಈ ಉದ್ದೇಶಕ್ಕಾಗಿ ಪರಿಶಿಷ್ಟ ಜಾತಿಗಳ ಮೀಸಲು ವರ್ಗೀಕರಣಕ್ಕಾಗಿ ಸಂವಿಧಾನದ 341ನೇ ವಿಧಿಗೆ ತಿದ್ದುಪಡಿ ಮಾಡುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಒಳ ಮೀಸಲು ಜಾರಿಗಾಗಿ ದಲಿತ ಸಮುದಾಯ ಪಟ್ಟು ಹಿಡಿದಿದ್ದರೂ ಕಾಂಗ್ರೆಸ್‌ನ “ಉನ್ನತ’ ಹಂತದ ನಾಯಕರೊಬ್ಬರು ಈ ಬಗ್ಗೆ ಒಲವು ಹೊಂದಿಲ್ಲದಿರು ವುದು ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಹೀಗಾಗಿ ಬೀಸುವ ದೊಣ್ಣೆಯಿಂದ ಬಚಾವ್ ಆಗಲು ಮುಂದಾಗಿರುವ ಈಗಿನ ಕಾಂಗ್ರೆಸ್ ಸರಕಾರವು ಈ ಹಿಂದಿನ ಬಿಜೆಪಿ ಸರಕಾರದ ಕಾಲದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸಭೆ ತೆಗೆದು ಕೊಂಡ ನಿರ್ಧಾರವನ್ನೇ ಗುರಾಣಿಯಾಗಿ ಬಳಸಿ ಕೊಂಡು ಮೀಸಲು ವರ್ಗೀಕರಣದ ಹೊಣೆಯನ್ನು ಕೇಂದ್ರ ಸರಕಾರದ ಹೆಗಲಿಗೆ ವರ್ಗಾಯಿಸುವ ಪ್ರಯತ್ನ ನಡೆಸಿದೆ.
ಆ ಸಂದರ್ಭದಲ್ಲಿ ಸಚಿವರಾಗಿದ್ದ ಜೆ.ಸಿ. ಮಾಧು ಸ್ವಾಮಿ ಸಮಿತಿಯ ವರದಿ ಆಧರಿಸಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೀಸಲು ಪ್ರಮಾಣ ಹೆಚ್ಚಳ ಮಾಡುವಾಗ ಅಂದಿನ ಸಚಿವ ಸಂಪುಟ ಸಭೆಯು “ಸದಾಶಿವ ಆಯೋಗದ ವರದಿ ಅಪ್ರಸ್ತುತ ಹಾಗೂ ಮುಕ್ತಾಯಗೊಂಡ ವಿಚಾರ’ ಎಂದು ನಿರ್ಧರಿಸಿತ್ತು. ಹಿಂದಿನ ಯಾವ ಸರಕಾರಗಳೂ ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಿ ಅಂಗೀಕರಿಸಿಲ್ಲ.
ಹಿಂದಿನ ಬಿಜೆಪಿ ಸರಕಾರವು ಸಚಿವ ಸಂಪುಟ ಸಭೆಯಲ್ಲಿ ಅಪ್ರಸ್ತುತ ಎಂದು ಪರಿಗಣಿಸಿದ ವರದಿಯನ್ನು ಮತ್ತೆ ಜಾರಿ ಮಾಡಲು ಸಾಧ್ಯವಿಲ್ಲ ಎಂಬ ವಾದವನ್ನು ಮುಂದಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಹೀಗಾಗಿ ಸದಾಶಿವ ಆಯೋಗದ ವರದಿ ಜಾರಿ ಮಾಡಲಾಗುವುದು ಎಂದು ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಚಿತ್ರದುರ್ಗದಲ್ಲಿ ನಡೆದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮಾವೇಶದಲ್ಲಿ ಕಾಂಗ್ರೆಸ್ ನೀಡಿದ್ದ “ಗ್ಯಾರಂಟಿ’ಯ “ವಾರಂಟಿ’ ಮುಕ್ತಾಯಗೊಂಡಂತಾಗಿದೆ.
ಯುಪಿಎ ಸರಕಾರದ ಅವಧಿಯಲ್ಲಿ ನ್ಯಾ| ಉಷಾ ಮೆಹ್ರಾ ನೇತೃತ್ವದಲ್ಲಿ ರಚನೆಯಾಗಿದ್ದ ಮೀಸಲು ವರ್ಗೀಕರಣಕ್ಕಾಗಿನ ರಾಷ್ಟ್ರೀಯ ಆಯೋಗದ ಶಿಫಾರಸಿನ ಅನ್ವಯ ಸಂವಿಧಾನದ 341ನೇ ವಿಧಿಗೆ ಹೊಸದಾಗಿ ಉಪವಿಧಿ (3)ನ್ನು ಸೇರಿಸಿ ತಿದ್ದುಪಡಿ ಮಾಡಿ ರಾಜ್ಯ ಸರಕಾರದ ಜಾತಿಪಟ್ಟಿಯಲ್ಲಿರುವ 101 ಜಾತಿಗಳಿಗೆ ಮೀಸಲು ವರ್ಗೀಕರಣ ಮಾಡುವುದಕ್ಕೆ ಅವಕಾಶ ಕಲ್ಪಿಸಬೇಕೆಂಬುದು ಸಂಪುಟದ ನಿರ್ಧಾರವಾಗಿದೆ. ಜತೆಗೆ ಭೋವಿ, ಬಂಜಾರ, ಕೊರಮ, ಕೊರಚ ಜಾತಿಗಳನ್ನು ರಾಜ್ಯ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಮುಂದುವರಿಸು ವಂತೆಯೂ ಕೇಂದ್ರಕ್ಕೆ ಮನವಿ ಮಾಡಲಾಗಿದೆ.
ಸಬ್ ಜ್ಯುಡೀಸ್‌ಆದರೆ ಸರಕಾರದ ಈ ನಿರ್ಧಾರ ನ್ಯಾಯಾಲಯದ ವಿಚಾರಣಾಧೀನ ವಿಷಯದಲ್ಲಿ ಮೂಗು ತೂರಿಸಿದಂತಾಗುವ ಅಪಾಯವಿದೆ. ಏಕೆಂದರೆ 2020ರಲ್ಲಿ ನ್ಯಾ| ಅರುಣ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್‌ನ ಪಂಚ ಸದಸ್ಯ ಪೀಠದ ತೀರ್ಪಿನ ಅನುಸಾರ ಏಳು ಸದಸ್ಯರ ವಿಸ್ತೃತಪೀಠವನ್ನು ಸುಪ್ರೀಂ ಕೋರ್ಟ್‌ನಲ್ಲಿ ರಚಿಸಲಾಗಿದ್ದು, ಅದರ ವಿಚಾರಣೆ ಬುಧವಾರ ಪ್ರಾರಂಭವಾಗಿದೆ. ಹೀಗಾಗಿ ರಾಜ್ಯ ಸರಕಾರದ ವಾದ ಊರ್ಜಿತವಾಗುವ ಸಾಧ್ಯತೆ ಕ್ಷೀಣಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.