ಬೆಂಗಳೂರು-ಹೈದರಾಬಾದ್ : ಎಕ್ಸ್ ಪ್ರಸ್ ಮ್ಯಾಚ್!
Team Udayavani, Apr 23, 2022, 7:35 AM IST
ಮುಂಬಯಿ: ಈ ಐಪಿಎಲ್ನ ತೀವ್ರ ಕೌತುಕದ ಪಂದ್ಯವೊಂದಕ್ಕೆ ಶನಿವಾರ ರಾತ್ರಿ ಆರ್ಸಿಬಿ ಮತ್ತು ಹೈದರಾಬಾದ್ ಸಾಕ್ಷಿಯಾಗಲಿವೆ. ಎರಡೂ ಗೆಲುವಿನ ದೋಣಿಯನ್ನೇರಿ ಹೊರಟ ತಂಡಗಳಾದ್ದರಿಂದ ಸಹಜವಾಗಿಯೇ ಸ್ಪರ್ಧೆ ತೀವ್ರಗೊಳ್ಳುವ ಎಲ್ಲ ಸಾಧ್ಯತೆ ಇದೆ.
ಈ ಬಾರಿ ಫಾ ಡು ಪ್ಲೆಸಿಸ್ ನೇತೃತ್ವದಲ್ಲಿ ಕಣಕ್ಕಿಳಿದಿರುವ ಆರ್ಸಿಬಿ ಕೆಲವು ವೈಯಕ್ತಿಕ ಪ್ರದರ್ಶನದ ಹಿನ್ನಡೆಯ ಹೊರತಾಗಿಯೂ ಏಳರಲ್ಲಿ 5 ಪಂದ್ಯ ಗೆದ್ದು ಹೊಸ ಭರವಸೆ ಮೂಡಿಸಿದೆ. ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಗಿದೆ.
ಇನ್ನೊಂದೆಡೆ ಹೈದರಾಬಾದ್ ಮೊದಲೆರಡು ಸೋಲುಗಳ ಬಳಿಕ ದಿಢೀರ್ ಚೇತರಿಕೆ ಕಂಡು ಸತತ 4 ಗೆಲುವು ಸಾಧಿಸಿದ ಅತ್ಯುತ್ಸಾಹದಲ್ಲಿದೆ. ಸದ್ಯ 5ನೇ ಸ್ಥಾನದಲ್ಲಿದ್ದು, ಟಾಪ್-4 ಯಾದಿಯನ್ನು ಅಲಂಕರಿಸುವ ಯೋಜನೆ ವಿಲಿಯಮ್ಸನ್ ಬಳಗದ್ದು.
ಸಮಬಲರ ಹೋರಾಟ
ಮೇಲ್ನೋಟಕ್ಕೆ ಎರಡೂ ತಂಡಗಳು ಸಮಬಲವಾಗಿ ಗೋಚರಿಸುತ್ತಿವೆ. ಇತ್ತಂಡಗಳಲ್ಲೂ ಉತ್ತಮ ದರ್ಜೆಯ ಬ್ಯಾಟರ್, ಬಿಗ್ ಹಿಟ್ಟರ್, ಬೌಲರ್ ಇದ್ದಾರೆ. ಸೂಕ್ಷ್ಮವಾಗಿ ಅವಲೋಕಿಸಿದಾಗ ಹೈದರಾಬಾದ್ ಬೌಲಿಂಗ್ ಹೆಚ್ಚು ಘಾತಕ ಹಾಗೂ ವೈವಿಧ್ಯಮಯವಾಗಿ ಕಂಡುಬರುತ್ತದೆ. ಹೀಗಾಗಿ ಈ ಪಂದ್ಯವನ್ನು ಕ್ರಿಕೆಟ್ ಪಂಡಿತರು ದಿನೇಶ್ ಕಾರ್ತಿಕ್ ವರ್ಸಸ್ ಉಮ್ರಾನ್ ಮಲಿಕ್ ನಡುವಿನ ಹೋರಾಟವೆಂದು ವಿಶ್ಲೇಷಿಸುತ್ತಿದ್ದಾರೆ.
ಅನುಭವಿ ಭುವನೇಶ್ವರ್ ಕುಮಾರ್, ಯಾರ್ಕರ್ ಸ್ಪೆಷಲಿಸ್ಟ್ ಟಿ. ನಟರಾಜನ್, ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸೆನ್, ಕರ್ನಾಟಕದ ಜಗದೀಶ್ ಸುಚಿತ್ ಅವರೆಲ್ಲ ಹೈದರಾಬಾದ್ ತಂಡದ ಪ್ರಮುಖ ಬೌಲರ್. ಇವರಲ್ಲಿ ಬಹುಪಾಲು ಪೇಸ್ ಬೌಲರ್ಗಳೇ ಆಗಿದ್ದಾರೆ. ರಶೀದ್ ಖಾನ್ ಬೇರ್ಪಟ್ಟ ಬಳಿಕ ಸ್ಪಿನ್ ವಿಭಾಗದಲ್ಲಿ ಸನ್ರೈಸರ್ ತುಸು ಹಿಂದುಳಿದಿದೆ ಎನ್ನಲಡ್ಡಿಯಿಲ್ಲ.
ಫಾರ್ಮ್ ಕಂಡುಕೊಂಡ ಡು ಪ್ಲೆಸಿಸ್
ಆದರೆ ಆರ್ಸಿಬಿ ನಾಯಕ ಫಾ ಡು ಪ್ಲೆಸಿಸ್ ಮರಳಿ ಫಾರ್ಮ್ ಕಂಡುಕೊಂಡಿರುವುದು, ದಿನೇಶ್ ಕಾರ್ತಿಕ್ ಪ್ರಚಂಡ ಬ್ಯಾಟಿಂಗ್ ಲಯದದಲ್ಲಿರುವುದು ಹೈದರಾಬಾದ್ಗೆ ತಲೆನೋವಾಗಿ ಪರಿಣಮಿಸುವುದು ಖಂಡಿತ. ಜತೆಗೆ ಗ್ಲೆನ್ ಮ್ಯಾಕ್ಸ್ವೆಲ್, ಸುಯಶ್ ಪ್ರಭುದೇಸಾಯಿ, ಶಬಾಜ್ ಅಹ್ಮದ್ ಕೂಡ ಹೊಸ ಜೋಶ್ನಲ್ಲಿದ್ದಾರೆ. ವಿರಾಟ್ ಕೊಹ್ಲಿ ಅವರ ಸತತ ವೈಫಲ್ಯ ಮತ್ತು ಎಡಗೈ ಆರಂಭಕಾರ ಅನುಜ್ ರಾವತ್ ಅವರ ಅಸ್ಥಿರ ಪ್ರದರ್ಶನವಷ್ಟೇ ಚಿಂತೆಯ ಸಂಗತಿಯಾಗಿದೆ. ಮುಂಬೈ ವಿರುದ್ಧ ಸಿಡಿದು ನಿಂತು 66 ರನ್ ಬಾರಿಸಿದ ಬಳಿಕ ರಾವತ್ ಬ್ಯಾಟ್ ಏಕೋ ಮುಷ್ಕರ ಹೂಡಲಾರಂಭಿಸಿದೆ.
ಆರ್ಸಿಬಿ ಬೌಲಿಂಗ್ ವಿಭಾಗಕ್ಕೆ ಕಾಂಗರೂ ವೇಗಿ ಜೋಶ್ ಹ್ಯಾಝಲ್ವುಡ್ ಹೊಸ ಜೋಶ್ ತುಂಬಿದ್ದಾರೆ. ಎದುರಾಳಿ ಬ್ಯಾಟರ್ಗಳಿಗೆ ಘಾತಕವಾಗಿ ಪರಿಣಮಿಸಿದ್ದಾರೆ. ಜತೆಗೆ ಹರ್ಷಲ್ ಪಟೇಲ್, ವನಿಂದು ಹಸರಂಗ, ಶಬಾಜ್ ಪಾತ್ರವೂ ನಿರ್ಣಾಯಕವಾಗಲಿದೆ.
ಹೈದರಾಬಾದ್ ಬ್ಯಾಟಿಂಗ್ ಲೈನ್ಅಪ್ ಉತ್ತಮ ಮಟ್ಟದಲ್ಲಿದೆ. ಅಭಿಷೇಕ್ ಶರ್ಮ, ನಾಯಕ ವಿಲಿಯಮ್ಸನ್, ರಾಹುಲ್ ತ್ರಿಪಾಠಿ, ಐಡನ್ ಮಾರ್ಕ್ರಮ್, ನಿಕೋಲಸ್ ಪೂರಣ್… ಎಲ್ಲರೂ ಮ್ಯಾಚ್ ವಿನ್ನರ್ಗಳೇ ಆಗಿದ್ದಾರೆ.
ಹಿಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 151ಕ್ಕೆ ಹಿಡಿದು ನಿಲ್ಲಿಸಿದ್ದ ಹೈದರಾಬಾದ್ 7 ವಿಕೆಟ್ಗಳ ಜಯ ಸಾಧಿಸಿತ್ತು. ಹಾಗೆಯೇ ಆರ್ಸಿಬಿ 18 ರನ್ನುಗಳಿಂದ ಲಕ್ನೋಗೆ ಸೋಲುಣಿಸಿತ್ತು. ರವಿವಾರ ರಾತ್ರಿಯ ಮುಖಾಮುಖೀಯಲ್ಲಿ ಬೌಲಿಂಗ್ನಲ್ಲಿ ಮೇಲುಗೈ ಸಾಧಿಸುವವರಿಗೆ ಗೆಲುವಿನ ಸಾಧ್ಯತೆ ಹೆಚ್ಚು ಎನ್ನಲಡ್ಡಿಯಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.