ಸರ್ಕಾರದಿಂದ ಜಯಂತಿ ಆಚರಣೆ ಸೂಕ್ತವೇ?
Team Udayavani, Dec 15, 2019, 3:09 AM IST
ಬೆಂಗಳೂರು: ರಾಜ್ಯದಲ್ಲಿ ಮಹಾಪುರುಷರ ಜಯಂತಿ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಆಚರಿಸುವ ಬಗ್ಗೆ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ತಜ್ಞರು ಹಾಗೂ ಸಾಹಿತಿಗಳಿಂದ ಅಭಿಪ್ರಾಯ ಪಡೆದು, ಪ್ರತಿಪಕ್ಷ ನಾಯಕರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
“ಉದಯವಾಣಿ’ ಕಚೇರಿಯಲ್ಲಿ ಶನಿವಾರ ನಡೆದ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಹಾಪುರುಷರ ಜಯಂತಿಗಳನ್ನು ಸರ್ಕಾರದಿಂದ ಆಚರಿಸುವಂತೆ ಬೇಡಿಕೆ ಹೆಚ್ಚಿದೆ. ಆದರೆ, ಕೆಲವು ಮಹಾಪುರುಷರ ಜಯಂತಿಗಳ ಆಚರ ಣೆಗೆ ಸೀಮಿತ ಪ್ರದೇಶ ಗಳಲ್ಲಿ ಮಾತ್ರ ಆಸಕ್ತಿ ತೋರುವುದರಿಂದ ಸರ್ಕಾ ರದ ವತಿಯಿಂದ ಆಚರಣೆ ಮಾಡುವುದು ಹಾಗೂ ರಜೆ ಘೋಷಣೆ ಮಾಡುವುದು ಎಷ್ಟು ಸೂಕ್ತ ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಜಿಲ್ಲಾಮಟ್ಟದಲ್ಲಿ ಸಾಹಿತಿಗಳು, ಕಲಾವಿದರು, ತಜ್ಞರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ ವರದಿ ಬಂದ ನಂತರ ರಾಜ್ಯಮಟ್ಟದಲ್ಲಿ ಹಿರಿಯ ಸಾಹಿತಿಗಳು, ಕಲಾವಿದರು ಹಾಗೂ ಪ್ರತಿಪಕ್ಷಗಳ ನಾಯಕರ ಅಭಿಪ್ರಾಯ ಪಡೆದು ಮಹಾಪುರುಷರ ಜಯಂತಿಗಳನ್ನು ಸರ್ಕಾರದ ವತಿಯಿಂದ ಆಚರಿಸಬೇಕೆ?, ಬೇಡವೇ? ಎಂದು ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸರ್ಕಾರದ ವತಿಯಿಂದ ಆಚರಿಸುವ ಬಹುತೇಕ ಮಹಾಪುರುಷರ ಜಯಂತಿಗಳು ಜಾತಿ ಕೇಂದ್ರಿತವಾಗುತ್ತಿವೆ. ಇದು ಅಪಾಯಕಾರಿ ಬೆಳವಣಿಗೆ. ಇದು ಜಾತಿಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಆದರೆ, ಸಮಾಜ ವಿಭಜಿಸುವ ಕೆಲಸ ಆಗುತ್ತಿದೆ. ಮಹಾಪುರುಷರ ಜಯಂತಿ ಆಚರಣೆಯ ವಿಚಾರವನ್ನು ರಾಜಕೀಕರಣ ಮಾಡದೇ ನಿರ್ಣಯ ಕೈಗೊಳ್ಳಬೇಕಿದೆ. ಹೀಗಾಗಿ, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಎಲ್ಲರ ಅಭಿಪ್ರಾಯ ಪಡೆದು ಯಾವುದೇ ಪೂರ್ವಾಗ್ರಹ ಪೀಡಿತವಿಲ್ಲದೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾಷೆ ಹಾಗೂ ಗಡಿ ಮೀರಿದೆ. ಈ ಇಲಾಖೆಯನ್ನು ತಲೆನೋವು ಎಂದು ಪರಿಗಣಿಸಿದರೆ ತಲೆನೋವು ಎನಿಸುತ್ತದೆ. ಇರುವ ವ್ಯವಸ್ಥೆಯನ್ನು ಅನುಭವಿಸಿ ಖುಷಿ ಪಟ್ಟರೆ ಈ ಇಲಾಖೆ ಖುಷಿ ನೀಡುತ್ತದೆ. ಸಂಸ್ಕೃತಿ ಇಲಾಖೆ ಜನರ ಮೇಲೆ ಪ್ರಭಾವ ಬೀರುವ ಇಲಾಖೆ. ಸಮಾಜವನ್ನು ಬದಲಾಯಿಸುವ ಶಕ್ತಿ ಇರುವ ಜನರ ಸಂಪರ್ಕ ಈ ಇಲಾಖೆಗಿದೆ ಎಂದು ಹೇಳಿದರು.
ನಾನೀಗ ತಾಳ್ಮೆ ಕಲಿತಿದ್ದೇನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವನಾಗಿ ನೂರು ದಿನದಲ್ಲಿ ತಾಳ್ಮೆ ಕಲಿತುಕೊಂಡಿದ್ದೇನೆ. ಸಾಹಿತಿಗಳು ಹಾಗೂ ಕಲಾವಿದರ ಮಾತುಗಳನ್ನು ಕೇಳಲು ಸಾಕಷ್ಟು ತಾಳ್ಮೆ ಬೇಕು. ಈಗ ಅವರ ಮಾತುಗಳನ್ನು ತಾಳ್ಮೆಯಿಂದ ಕೇಳುತ್ತೇನೆ. ಕಲಾವಿದರು ಹಾಗೂ ಸಾಹಿತಿಗಳು ದೊಡ್ಡವರು. ಅವರ ಮಾತುಗಳನ್ನು ಆಲಿಸದಿದ್ದರೆ ಬೇಗ ಸಿಟ್ಟು ಮಾಡಿಕೊಳ್ಳುತ್ತಾರೆ.
ಹೀಗಾಗಿ, ತಾಳ್ಮೆಯಿಂದ ಆಲಿಸುವುದನ್ನು ಕಲಿತಿದ್ದೇನೆ ಎಂದು ಸಿ.ಟಿ.ರವಿ ಹೇಳಿದರು. ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆನ್‌ಲೈನ್‌ನಲ್ಲಿಯೇ ಕಲಾವಿದರ ಮಾಹಿತಿಯನ್ನು ಅಳವಡಿಸಲಾಗುತ್ತಿದೆ. ಯಾವುದೇ ಕಾರ್ಯಕ್ರಮಕ್ಕೆ ಕಲಾವಿದರು ಬೇಕೆಂದರೆ, ಅವರು ಆನ್‌ಲೈನ್‌ನಲ್ಲಿಯೇ ತಮಗೆ ಬೇಕಾದ ಕಲಾವಿದರನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
ಪುಸ್ತಕ ಓದು ಹೆಚ್ಚಾಗಿದೆ: ಕನ್ನಡ ಮತ್ತು ಸಂಸ್ಕೃತಿ ಸಚಿವನಾದ ಮೇಲೆ ಪ್ರತಿ ದಿನ ಮೂರು, ನಾಲ್ಕು ಪುಸ್ತಕಗಳು ಬರುತ್ತಿವೆ. ನನ್ನ ಮನೆಯಲ್ಲಿ ನನ್ನ ರೂಮಿನ ಪಕ್ಕ ಪುಸ್ತಕಗಳ ರ್ಯಾಕ್ ತುಂಬಿ, ಪುಸ್ತಕಗಳನ್ನು ಇಡಲು ಹೊಸ ರ್ಯಾಕ್ ತಂದಿದ್ದೇನೆ. ನನ್ನ ಬಳಿ ಯಾರಾದರೂ ದುಡ್ಡಿನ ಸಹಾಯ ಕೇಳಲು ಬಂದರೆ, ಪುಸ್ತಕ ಕೊಡುತ್ತೇನೆ. ನಾನು ಏಕಾಂತದಲ್ಲಿ ವಾಕಿಂಗ್ ಮಾಡುವುದು ಹಾಗೂ ಪುಸ್ತಕ ಓದುವುದನ್ನು ಇಷ್ಟಪಡುತ್ತೇನೆ. ಈಗ ಪುಸ್ತಕದ ಓದು ಹೆಚ್ಚಾಗಿದೆ ಎಂದು ಸಚಿ ವರು ಹೇಳಿದರು.
ಯಕ್ಷಗಾನ ಮಾದರಿ: ಕರಾವಳಿ ಭಾಗದ ಜಾನಪದ ಕಲೆ, ಯಕ್ಷಗಾನವನ್ನು ಅಲ್ಲಿನ ವಿದ್ಯಾವಂತರು ಹಾಗೂ ಶ್ರೀಮಂತರು ಅದನ್ನು ತಮ್ಮ ಪ್ರಾದೇಶದ ಅಸ್ಮಿತೆ ಎಂದು ಅಪ್ಪಿಕೊಂಡು ಬೆಳೆಸಿಕೊಂಡು ಹೊರಟಿದ್ದಾರೆ. ಆದರೆ, ಉತ್ತರ ಕರ್ನಾಟಕದ ಸಣ್ಣಾಟ, ದೊಡ್ಡಾಟದಂತಹ ಕಲಾಪ್ರಕಾರಗಳು ಹಾಗೂ ಹಳೇ ಮೈಸೂರು, ಕೋಲಾರ ಭಾಗದ ಮೂಡಲಪಾಯಗಳಿಗೆ ಸ್ಥಳೀಯವಾಗಿ ಉತ್ತೇಜನ ದೊರೆಯದ ಕಾರಣ ಕಲಾವಿದರು ಬಡವರಾಗಿಯೇ ಉಳಿದುಕೊಂಡರು. ಹೀಗಾಗಿ, ಆ ಕಲಾ ಪ್ರಕಾರಗಳು ಅವನತಿಯ ಅಂಚಿಗೆ ತಲುಪಿವೆ. ಅಂತಹ ಕಲೆಗಳನ್ನು ಸ್ಥಳೀಯ ವಿದ್ಯಾವಂತರು ಹಾಗೂ ಶ್ರೀಮಂತರು ಉತ್ತೇಜಿಸುವಂತೆ ಪ್ರಯತ್ನ ನಡೆಸಲಾಗುವುದು ಎಂದು ರವಿ ಹೇಳಿದರು .
ಮತ್ತೆ ಜಾನಪದ ಜಾತ್ರೆ ಆರಂಭ: ರಾಜ್ಯದಲ್ಲಿ ಮತ್ತೆ ಜಾನಪದ ಜಾತ್ರೆ ಆರಂಭಿಸಲು ನಿರ್ಧರಿಸಲಾಗಿದ್ದು, ಈಗಾಗಲೇ ಜಾತ್ರೆ ಆರಂಭಕ್ಕೆ ಜಿಲ್ಲಾಕೇಂದ್ರಗಳಲ್ಲಿ ಸಿದ್ಧತೆ ಮಾಡಿಕೊಳ್ಳಲು ನಿರ್ದೇಶಿಸಲಾಗಿದೆ. ಜಿಲ್ಲಾ ಕೇಂದ್ರ ಹಾಗೂ ಬೆಂಗಳೂರಿನಲ್ಲಿಯೂ ಜಾನಪದ ಜಾತ್ರೆ ಆರಂಭಿಸಲು ನಿರ್ಧರಿಸಲಾಗಿದೆ. ಜಾನಪದ ಜಾತ್ರೆಗೆ ವಿಭಿನ್ನ ರೂಪು ನೀಡಿ, ಆ ಮೂಲಕ ಪ್ರವಾಸೋದ್ಯಮವನ್ನೂ ಅಭಿವೃದ್ಧಿಪಡಿಸುವ ಆಲೋಚನೆ ಇದೆ. ಕೆಲವು ಕಲಾ ಪ್ರಕಾರಗಳು ನಶಿಸಿ ಹೋಗುತ್ತಿರುವುದರಿಂದ ಅಂತಹ ಕಲಾ ಪ್ರಕಾರಗಳ ಬಗ್ಗೆ ಯುವ ಕಲಾವಿದರಿಗೆ ತರಬೇತಿ ನೀಡಿ ಉತ್ತೇಜಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ರವಿ ಹೇಳಿದರು.
ಸಂಸ್ಕೃತಿ ಇಲಾಖೆ ಡಿಕೆಶಿಗೆ ಅಲ್ಲ: ಹಿಂದಿನ ಮೈತ್ರಿ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿರುವುದು ಸರಿಯಲ್ಲ. ಸಾಂಸ್ಕೃತಿಕ ಸಂಘಗಳಿಗೆ ಅನುದಾನ ನೀಡುವ ವ್ಯವಸ್ಥೆ ಸ್ಥಗಿತಗೊಳಿಸಿರುವ ಬಗ್ಗೆ ಅನೇಕ ಕಲಾವಿದರು, ಸಂಘಟನೆಗಳು ನೊಂದಿವೆ. ಕಲಾವಿದರನ್ನು ಅನುಮಾನದಿಂದ ನೋಡುವುದು ಸರಿಯಲ್ಲ. ಡಿ.ಕೆ.ಶಿವಕುಮಾರ್ ಅವರು ಕಲಾವಿದರ ಬಗ್ಗೆ ಅನುಮಾನ ಪಟ್ಟು ಅನುದಾನ ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಡಿಸಿಎಂ ಹುದ್ದೆ ಹೆಚ್ಚಾದಷ್ಟು ಮಹತ್ವ ಕಡಿಮೆ
* ಡಿಸಿಎಂ ಹುದ್ದೆಗಳನ್ನು ಹೆಚ್ಚುವರಿಯಾಗಿ ಸೃಷ್ಟಿಸುತ್ತಾ ಹೋದರೆ ಸಚಿವರಿಗೂ, ಉಪಮುಖ್ಯ ಮಂತ್ರಿಗಳಿಗೂ ಏನೂ ವ್ಯತ್ಯಾಸವಿರದು. ಹೆಚ್ಚೆಂದರೆ ಜೀರೋ ಟ್ರಾಫಿಕ್, ಒಂದು ಪೈಲಟ್, ಹೆಚ್ಚುವರಿ ಬೆಂಗಾವಲು ಪಡೆ ಸಿಗಬಹುದಷ್ಟೇ.
* ಡಿಸಿಎಂ ಎಷ್ಟಾದರೂ ಪರವಾಗಿಲ್ಲ. ಸಿಎಂ ಒಬ್ಬರೇ ಇರಬೇಕು. ಡಿಸಿಎಂ ಸ್ಥಾನ ಸಾಂವಿಧಾನಿಕ ಹುದ್ದೆಯಲ್ಲ. ಆದರೂ ಕೆಲವರು ಆ ಸ್ಥಾನ ಕೇಳುತ್ತಿರಬಹುದು.
* ವಿಧಾನಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿಲ್ಲದ ಕಾರಣ ರಾಜೀನಾಮೆ ಕೊಡುವವರ ಆಧಾರದ ಮೇಲೆ ಸರ್ಕಾರ ಬಂತು. ಆ ಸರ್ಕಾರ ಬಂದಿದ್ದರಿಂದ ಒಂದಿಷ್ಟು ಅಸಮತೋಲನ ಸ್ವಾಭಾವಿಕ. ಮುಖ್ಯಮಂತ್ರಿಗಳ ಆದಿಯಾಗಿ ಎಲ್ಲರೂ ರಾಜ್ಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದರಷ್ಟೇ ಇದು ತಾತ್ಕಾಲಿಕ ಅಧಿಕಾರವಾಗದು. ಇಲ್ಲದಿದ್ದರೆ ಕೇವಲ ತಾತ್ಕಾಲಿಕ ಅಧಿಕಾರವಷ್ಟೇ ಆಗಲಿದ್ದು, ಆ ಬಗ್ಗೆ ಎಚ್ಚರ ಇರಬೇಕು.
* ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡಿದರೆ ಜನ ನಮ್ಮೊಂದಿಗಿರುತ್ತಾರೆ. ವ್ಯಕ್ತಿಗತವಾಗಿ ತೃಪ್ತಿಪಡಿಸುತ್ತಾ ಹೋದರೆ ಕೊನೆಗೆ ಅವರೂ ಇರುವುದಿಲ್ಲ. ಜನರೂ ಇರುವುದಿಲ್ಲ.
* ಇಂದಿನ ಲೆಕ್ಕಾಚಾರದಲ್ಲಿ ಹೊಸಬರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದೇವೆ. ವ್ಯಾವಹಾರಿಕ ಕಾರಣಕ್ಕೆ ಅವರನ್ನು ಸೇರಿಸಿಕೊಂಡಿದ್ದು, ಮುಂದೆ ಅವರನ್ನು ವೈಚಾರಿಕ ಕಾರಣಕ್ಕೆ ಬದಲಾಯಿಸಬೇಕಿದೆ. ಅವರು ಪಕ್ಷಕ್ಕೆ ಬರದಿದ್ದರೆ ಬಿಜೆಪಿ ಸರ್ಕಾರ ಬರುತ್ತಿರಲಿಲ್ಲ. ಹಾಗಾಗಿ, ಅದು ವ್ಯಾವಹಾರಿಕ ಕಾರಣ. ಅವರು ಹಲವು ರೀತಿಯ ಲಾಭದ ಕಾರಣಕ್ಕೆ ರಿಸ್ಕ್ ತೆಗೆದುಕೊಂಡು, ಆ ರಿಸ್ಕ್ನಲ್ಲಿ ಉತ್ತೀರ್ಣರಾಗಿದ್ದಾರೆ.
* ನಿಷ್ಠೆ ಎಂಬುದು ಸನ್ನಿವೇಶದ ಅವಶ್ಯಕತೆಯಲ್ಲ. ಬಹಳ ಜನರಿಗೆ ನಿಷ್ಠೆ ಎಂಬುದು ಸನ್ನಿವೇಶದ ಅವಶ್ಯಕತೆ ಎನಿಸಿದೆ. ಸನ್ನಿವೇಶದ ಅವಶ್ಯಕತೆ ಮೇಲೆ ನಿಷ್ಠೆಯನ್ನು ಅಳೆಯಲು ಸಾಧ್ಯವಿಲ್ಲ. ನಿಷ್ಠೆ ಎಂಬುದು ಜೀವನದ ಜೀವಾಳವಾದಾಗ ಅದಕ್ಕೊಂದು ಅರ್ಥ ಬರುತ್ತದೆ. ತುಂಬ ದೊಡ್ಡವರು ಕೂಡ ಅವಕಾಶ ಸಿಗದಿದ್ದಾಗ ಹೊಸ್ತಿಲು ದಾಟಿದ್ದಾರೆ.
ವ್ಯಕ್ತಿಗತವಾಗಿ ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವೇ ಇಲ್ಲ. ನಾವು ವ್ಯವಸ್ಥೆಗೆ ನ್ಯಾಯ ಕೊಟ್ಟರೆ ಜನ ನಮ್ಮೊಂದಿಗಿರುತ್ತಾರೆ. ವ್ಯಕ್ತಿಗತವಾಗಿ ಒಬ್ಬೊಬ್ಬರನ್ನೇ ತೃಪ್ತಿಪಡಿಸಲು ಹೋದರೆ ಎಲ್ಲರನ್ನು ತೃಪ್ತಿಪಡಿಸುವುದು ಅಸಾಧ್ಯ. ಆಗ ಭಿನ್ನಮತೀಯ ಚಟುವಟಿಕೆಯೂ ಹೆಚ್ಚುತ್ತಾ ಹೋಗುತ್ತದೆ. ನಾವು ವ್ಯವಸ್ಥೆಗೆ, ಜನರಿಗೆ ನ್ಯಾಯ ಕೊಟ್ಟರೆ ಜನ ನಮ್ಮೊಂದಿಗಿರುತ್ತಾರೆ. ಆಗ ಭಿನ್ನಮತೀಯ ಚಟುವಟಿಕೆಗೂ ಬೆಲೆ ಇರುವುದಿಲ್ಲ. ನಾವು ಜನರಿಗೆ ನ್ಯಾಯ ಕೊಡದಿದ್ದರೆ ಭಿನ್ನಮತೀಯ ಭೂತ ಎಲ್ಲವನ್ನೂ ನುಂಗಿ ಹಾಕುತ್ತದೆ.
-ಸಿ.ಟಿ.ರವಿ, ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.