ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ಹೈಕಮಾಂಡ್ ಖಡಕ್ ಸಂದೇಶ?
Team Udayavani, Jan 14, 2020, 3:08 AM IST
ಬೆಂಗಳೂರು: ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಬಿಜೆಪಿ ಸರ್ಕಾರ ಸುಭದ್ರ ಗೊಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೆಚ್ಚು ಪ್ರಭಾವಿಯಾಗುತ್ತಿದ್ದರೂ ಸಂಪುಟ ವಿಸ್ತರಣೆ ವಿಷಯದಲ್ಲಿ “ವ್ಯಕ್ತಿಗಿಂತ ಪಕ್ಷದ ನಿಲುವೇ ನಿರ್ಣಾಯಕ’ ಎಂಬ ಸಂದೇಶವನ್ನು ಪಕ್ಷದ ಹೈಕಮಾಂಡ್ ರವಾನಿಸಿದೆ.
ಮೈತ್ರಿ ಸರ್ಕಾರ ಬೀಳಿಸುವಲ್ಲಿ ಮತ್ತು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ “ಸಹಕರಿಸಿದ’ವರಿಗೆ ನೀಡಿದ್ದ ಭರವಸೆ ಈಡೇರಿಸುವ ಮೂಲಕ ತಮ್ಮ ಮಾತನ್ನು ಉಳಿಸಿಕೊಳ್ಳಬೇಕೆಂಬುದು ಯಡಿಯೂರಪ್ಪ ಅವರ ಚಿಂತನೆ. ಆದರೆ, ವ್ಯಕ್ತಿಗಿಂತ ಪಕ್ಷದ ನಿರ್ಧಾರವೇ ಅಂತಿಮ ಎಂಬುದು ಹೊಸದಾಗಿ ಗೆದ್ದು ಬಂದ ಶಾಸಕರಿಗೂ ಮನದಟ್ಟಾಗಬೇಕು ಎಂಬ ಇರಾದೆ ಪಕ್ಷದ ವರಿಷ್ಠರಿಗೆ ಇದೆ. ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿಗಳಷ್ಟೇ ಮಾತನಾಡುತ್ತಿದ್ದು, ವರಿಷ್ಠರಿಂದ ಈವರೆಗೆ ಯಾವುದೇ ಸ್ಪಂದನೆ, ಪ್ರತಿಕ್ರಿಯೆ ವ್ಯಕ್ತವಾಗದಿರುವುದು ಅದೇ ಕಾರಣಕ್ಕಾಗಿ ಎನ್ನಲಾಗಿದೆ.
ವಿದೇಶಿ ಪ್ರವಾಸದ ಬಗ್ಗೆ ಅಪಸ್ವರ: ಜಾಗತಿಕ ಮಟ್ಟದಲ್ಲಿ ಬೆಂಗಳೂರು ಖ್ಯಾತಿ ಗಳಿಸಿದ್ದು, ಸ್ವಿಡ್ಜರ್ಲೆಂಡ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ 50ನೇ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂಬುದು ಕೇಂದ್ರ ಬಿಜೆಪಿ ನಾಯಕರ ಸೂಚನೆಯಾಗಿತ್ತು. ಆದರೆ, ಆರಂಭದಿಂದಲೂ ಇದಕ್ಕೆ ಆಸಕ್ತಿ ತೋರದ ಯಡಿಯೂರಪ್ಪ ಒಂದು ಹಂತದಲ್ಲಿ ಮನಸ್ಸಿಲ್ಲದಿದ್ದರೂ ಒತ್ತಡವಿರುವುದರಿಂದ ಸ್ವಿಸ್ ಪ್ರವಾಸ ಕೈಗೊಳ್ಳುವುದಾಗಿ ಹೇಳಿದ್ದರು. ಕೆಲವೇ ದಿನಗಳಲ್ಲಿ ರಾಗ ಬದಲಿಸಿ ಬಹುತೇಕ ಸ್ವಿಸ್ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ತಿಳಿಸಿದ್ದರು. ಇದೀಗ ಮತ್ತೆ ಸ್ವಿಸ್ ಪ್ರವಾಸ ಕೈಗೊಳ್ಳಲಾಗುವುದು ಎಂದು ಪುನರುಚ್ಚರಿಸಿದ್ದಾರೆ. ಅಂದರೆ ವರಿಷ್ಠರ ಸೂಚನೆ ಪಾಲಿಸಲು ಯಡಿಯೂರಪ್ಪ ಮೀನ-ಮೇಷ ಎಣಿಸುತ್ತಾರೆಂಬ ಭಾವನೆ ಮೂಡಿದಂತಾಗಿದೆ.
ಅಲ್ಲದೆ, ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ನೆರೆ ಪರಿಹಾರ ಬಿಡುಗಡೆಯಾಗಿಲ್ಲ ಎಂದು ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಎದುರೇ ಹೇಳಿದ್ದರು. ಈ ಎಲ್ಲ ಬೆಳವಣಿಗೆಯಲ್ಲೂ ಯಡಿಯೂರಪ್ಪ ಅವರ ನಿರ್ಧಾರವೇ ಅಂತಿಮ ಎಂಬಂತಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಹಾಗಾಗಿ, ಸಚಿವಗಿರಿ ಸೇರಿ ಇತರ ಸ್ಥಾನಮಾನದ ಆಕಾಂಕ್ಷಿಗಳು ಕೂಡ ಯಡಿಯೂರಪ್ಪ ಅವರ ಬೆನ್ನು ಬಿದ್ದು ಒತ್ತಡ ಹೇರುತ್ತಿದ್ದಾರೆ.
ಅಲ್ಲದೆ, ತಿಂಗಳಾದರೂ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಾರದ ಕಾರಣ ಸಚಿವಾಕಾಂಕ್ಷಿಗಳು ಸದ್ಯ ಆತಂಕದಲ್ಲಿದ್ದಂತಿದೆ.
ವ್ಯಕ್ತಿಗಿಂತ ಪಕ್ಷ ಮುಖ್ಯ: ಎಲ್ಲ ನಿರ್ಧಾರ, ನಿಲುವುಗಳನ್ನು ಯಡಿಯೂರಪ್ಪ ಕೇಂದ್ರಿತವಾಗಿ ಕೈಗೊಳ್ಳುವಂತಾದರೆ ಪಕ್ಷದ ಪಾತ್ರವೇನು ಎಂಬ ಪ್ರಶ್ನೆಯೂ ಮೂಡಿದೆ. ಈ ಎಲ್ಲ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಬಿಜೆಪಿ ವರಿಷ್ಠರು, ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಇನ್ನೊಂದೆಡೆ, ಯಡಿಯೂರಪ್ಪ ಹೇಳುವಂತೆ ಚರ್ಚಿಸಲು ಭೇಟಿಗೆ ಸಮಯಾವಕಾಶವನ್ನೂ ನಿಗದಿಪಡಿಸಿಲ್ಲ. ವರಿಷ್ಠರು ಮೌನದ ಮೂಲಕವೇ ರಾಜ್ಯ ಬಿಜೆಪಿ ನಾಯಕರು ಸೇರಿ ಸಚಿವಗಿರಿ, ಇತರ ಸ್ಥಾನಮಾನದ ಆಕಾಂಕ್ಷಿಗಳಿಗೆ ವ್ಯಕ್ತಿಗಿಂತ ಪಕ್ಷದ ನಿರ್ಧಾರವೇ ಅಂತಿಮ ಎಂಬ ಸಂದೇಶವನ್ನು ಸಾರಿದಂತಿದೆ ಎಂಬ ಮಾತು ಪಕ್ಷದಲ್ಲೇ ಕೇಳಿ ಬಂದಿದೆ.
ಹೊಸ ಶಾಸಕರಿಗೆ ಮನವರಿಕೆ: ತಮಗೆ ಸ್ಥಾನಮಾನ ನೀಡುವ ವಿಚಾರದಲ್ಲಿ ಯಡಿಯೂರಪ್ಪ ನಿರ್ಧಾರ ಮಾತ್ರವಲ್ಲದೇ, ವರಿಷ್ಠರ ಒಪ್ಪಿಗೆಯೂ ಅಗತ್ಯ ಎಂಬುದು ಉಪಚುನಾವಣೆಯಲ್ಲಿ ಗೆದ್ದ ಬಿಜೆಪಿ ಶಾಸಕರಿಗೆ ಮನವರಿಕೆಯಾದಂತಾಗಿದೆ. ಇದು ಸಹಜವಾಗಿಯೇ ಮುಂದೆ ಅವರ ನಡೆ, ನುಡಿ, ಕಾರ್ಯ ನಿರ್ವಹಣೆಯಲ್ಲೂ ಪಕ್ಷದ ಶಿಸ್ತು ಪಾಲನೆ ಬಗ್ಗೆ ಸ್ಪಷ್ಟತೆ ಮೂಡಿಸಿದಂತಾಗಲಿದೆ. ಆ ಕಾರಣಕ್ಕೆ ವರಿಷ್ಠರು ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ನಿಲುವು ಪ್ರಕಟಿಸಿದಂತಿಲ್ಲ ಎನ್ನಲಾಗಿದೆ.
ಗೊಂದಲದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ?: ಸಂಪುಟ ವಿಸ್ತರಣೆ ಸಾಕೆ, ಪುನಾರಚಿಸಬೇಕೆ ಎಂಬ ಬಗ್ಗೆ ಯಡಿಯೂರಪ್ಪ ಅವರು ಗೊಂದಲದಲ್ಲಿದ್ದಾರೆ ಎನ್ನಲಾಗಿದೆ. ಗೆದ್ದ ಎಲ್ಲ 11 (ಅನರ್ಹ) ಶಾಸಕರನ್ನೂ ಸಚಿವರನ್ನಾಗಿ ಮಾಡಲು ಹೈಕಮಾಂಡ್ ಒಪ್ಪಿಗೆ ಇದೆ. ಆದರೆ, ಪರಾಜಿತ ಹಾಗೂ ಉಪಚುನಾವಣೆಗೆ ಸ್ಪರ್ಧಿಸದವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಸಮ್ಮತಿ ಇಲ್ಲ ಎನ್ನಲಾಗಿದೆ. ಅವರಿಗೂ ಸ್ಥಾನಮಾನ ಕಲ್ಪಿಸಬೇಕಾದರೆ ಹಾಲಿ ಕೆಲ ಸಚಿವರನ್ನು ಕೈಬಿಟ್ಟು ಅವಕಾಶ ಕಲ್ಪಿಸಲಿ ಎಂಬ ಧೋರಣೆಯೂ ಇದೆ.
ಹೊಸದಾಗಿ ಡಿಸಿಎಂ ಹುದ್ದೆ ಸೃಷ್ಟಿ, ಇಲ್ಲವೇ ಹಾಲಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ಕೈಬಿಡಬೇಕೆ ಎಂಬ ಬಗ್ಗೆಯೂ ಚರ್ಚೆ ನಡೆದಿದೆ. ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಇಕ್ಕಟ್ಟಿನಲ್ಲಿ ಸಿಲುಕಿದಂತಾಗಿದ್ದು, ನಿರ್ದಿಷ್ಟ ಸಂಭಾವ್ಯರ ಪಟ್ಟಿಯೊಂದಿಗೆ ವರಿಷ್ಠರ ಭೇಟಿಗೆ ಸಾಧ್ಯವಾಗಿಲ್ಲ. ಅಲ್ಲದೇ ಪಕ್ಷದ ಮಟ್ಟದಲ್ಲಿ ಈವರೆಗೆ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಬಗ್ಗೆ ಗಂಭೀರ ಚರ್ಚೆ ನಡೆದಿಲ್ಲ ಎಂದು ಮೂಲಗಳು ಹೇಳಿವೆ.
* ಎಂ. ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.