Israel-Hamas ಕದನ ವಿರಾಮ; ಬಿರುಸು ಪಡೆದ ಸಂಧಾನ ಪ್ರಕ್ರಿಯೆ
Team Udayavani, Jan 31, 2024, 6:23 AM IST
ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಸಂಧಾನ ಮಾತುಕತೆಗಳು ಮತ್ತೆ ಬಿರುಸುಗೊಂಡಿದ್ದು, ಹೊಸದಾಗಿ ಕದನವಿರಾಮ ಒಪ್ಪಂದದ ಪ್ರಸ್ತಾವವನ್ನು ಇತ್ತಂಡಗಳ ಮುಂದಿಡಲಾಗಿದೆ. ಇಸ್ರೇಲ್ ಮತ್ತು ಹಮಾಸ್ ಮಾತುಕತೆಗೆ ಆಸಕ್ತಿ ತೋರುತ್ತಿವೆಯಾದರೂ ಇಬ್ಬರೂ ತಮ್ಮ ತಮ್ಮ ನಿಲುವಿಗೆ ಅಂಟಿಕೊಂ ಡಿರುವುದರಿಂದ ಕದನವಿರಾಮ ಒಪ್ಪಂದ ಅಂತಿಮ ರೂಪ ಪಡೆಯಲು ಸಾಧ್ಯವಾಗಿಲ್ಲ. ಈ ಸಂಧಾನ ಮಾತುಕತೆಗಳ ನಡುವೆಯೇ ಇಸ್ರೇಲ್ ಗಾಜಾಪಟ್ಟಿಯ ಮೇಲಣ ತನ್ನ ದಾಳಿಗಳನ್ನು ಮತ್ತಷ್ಟು ತೀವ್ರ ಗೊಳಿಸಿದೆ.
ಹಮಾಸ್ ಉಗ್ರರು ಕಳೆದ ವರ್ಷದ ಅಕ್ಟೋಬರ್ 7ರಂದು ಏಕಾಏಕಿ ಇಸ್ರೇಲ್ ಮೇಲೆ ಸರಣಿ ಕ್ಷಿಪಣಿ ದಾಳಿಗಳನ್ನು ನಡೆಸಿದ ಬಳಿಕ ಇತ್ತಂಡಗಳ ನಡುವೆ ಕಳೆದ 115 ದಿನಗಳಿಂದ ಯುದ್ಧ ನಡೆಯುತ್ತಿದೆ. ಯುದ್ಧವನ್ನು ಸ್ಥಗಿತಗೊಳಿಸುವ ದಿಸೆಯಲ್ಲಿ ಕತಾರ್ ಮತ್ತು ಈಜಿಪ್ಟ್ ಮಧ್ಯಸ್ಥಿಕೆ ವಹಿಸಿದ್ದು, ಈ ಎರಡು ದೇಶಗಳ ಸಂಧಾನ ಪ್ರಯತ್ನಗಳಿಗೆ ಅಮೆರಿಕ ಬೆಂಬಲ ನೀಡುತ್ತಲೇ ಬಂದಿದೆ. ಕದನವಿರಾಮ ಘೋಷಣೆ ಸಂಬಂಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ತೆರನಾದ ಆಗ್ರಹ, ಒತ್ತಡಗಳ ಹಿನ್ನೆಲೆಯಲ್ಲಿ ಇಸ್ರೇಲ್ ಈಗ ಕದನವಿರಾಮದ ಪ್ರಸ್ತಾವವೊಂದನ್ನು ಮಧ್ಯಸ್ಥಿಕೆ ವಹಿಸಿರುವ ರಾಷ್ಟ್ರಗಳಾದ ಈಜಿಪ್ಟ್ ಮತ್ತು ಕತಾರ್‌ನ ಮುಂದಿಟ್ಟಿದ್ದು ಈ ಪ್ರಸ್ತಾವದ ಬಗೆಗೆ ಅಮೆರಿಕಕ್ಕೂ ಮಾಹಿತಿ ನೀಡಲಾಗಿದೆ. ಈ ಸಂಬಂಧ ಮಾತು ಕತೆಗಾಗಿ ಅಮೆರಿಕ ತನ್ನ ರಾಜತಾಂತ್ರಿಕ ಪ್ರತಿನಿಧಿಯನ್ನು ಈಜಿಪ್ಟ್ ಮತ್ತು ಕತಾರ್‌ಗೆ ಕಳುಹಿಸಿಕೊಟ್ಟಿದೆ.
ಯುದ್ಧವನ್ನು ನಿಲ್ಲಿಸಿ, ಹಮಾಸ್ ಉಗ್ರರು ತನ್ನ ಒತ್ತೆ ಸೆರೆಯಲ್ಲಿರುವ ಇಸ್ರೇಲ್ ನಾಗರಿಕರನ್ನು ಬಿಡುಗಡೆ ಗೊಳಿಸುವುದು ಮತ್ತು ಇಸ್ರೇಲ್‌ನ ಕಾರಾಗೃಹ ದಲ್ಲಿರುವ ಪಾಲೆಸ್ತೀನಿಯನ್ ಕೈದಿಗಳನ್ನು ಬಿಡುಗಡೆ ಮಾಡುವುದು ಹಾಗೂ ಯುದ್ಧ ಸಂತ್ರಸ್ತ ಗಾಜಾಪಟ್ಟಿಗೆ ಬೃಹತ್ ಪ್ರಮಾಣದಲ್ಲಿ ಮಾನವೀಯ ನೆರವನ್ನು ಪೂರೈಸುವ ಅಂಶಗಳನ್ನು ಕದನವಿರಾಮದ ಕುರಿತಾ ಗಿನ ಒಪ್ಪಂದ ಒಳಗೊಂಡಿರಬೇಕು ಎನ್ನುವುದು ಜಾಗತಿಕ ಸಮುದಾಯದ ಆಶಯ. ಆದರೆ ಇಸ್ರೇಲ್ ಮತ್ತು ಹಮಾಸ್ ನಡುವೆ ಭಾರೀ ಕಂದಕ ಸೃಷ್ಟಿ ಯಾಗಿರುವುದರಿಂದ ಇತ್ತಂಡಗಳಿಗೂ ಸ್ವೀಕಾ ರಾರ್ಹವಾದ ಒಪ್ಪಂದಕ್ಕೆ ಬರುವುದು ಮತ್ತು ಒಪ್ಪಂದದಲ್ಲಿ ಯಾವುದೇ ಬದಲಾವಣೆ ಕೂಡ ತೀರಾ ಕಷ್ಟಸಾಧ್ಯ ಎನ್ನುವ ಪರಿಸ್ಥಿತಿ ಇದೆ. ಇದರ ಹೊರ ತಾಗಿಯೂ ಕತಾರ್ ಮತ್ತು ಈಜಿಪ್ಟ್ ಸಂಧಾನ ಪ್ರಯತ್ನಗಳನ್ನು ಮುಂದುವರಿಸಿವೆ.
ಕಳೆದ ವರ್ಷದ ಅ. 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ಅನಿರೀಕ್ಷಿತ ಸರಣಿ ಕ್ಷಿಪಣಿ ದಾಳಿ ಗಳನ್ನು ನಡೆಸಿ 1,200 ಮಂದಿಯ ಸಾವಿಗೆ ಕಾರಣ ರಾಗಿದ್ದರಲ್ಲದೆ 250 ಇಸ್ರೇಲ್ ನಾಗರಿಕರನ್ನು ಒತ್ತೆ ಯಾಳುಗಳನ್ನಾಗಿಸಿಕೊಂಡಿದ್ದರು. ಇದಾದ ಬೆನ್ನಲ್ಲೇ ಇಸ್ರೇಲ್ ಸೇನೆ, ಹಮಾಸ್ ಉಗ್ರರ ನೆಲೆಯಾದ ಗಾಜಾಪಟ್ಟಿಯ ಮೇಲೆ ನಿರಂತರವಾಗಿ ನಡೆಸುತ್ತಿರುವ ವಾಯು ಮತ್ತು ಭೂದಾಳಿಗಳಲ್ಲಿ 25,000ಕ್ಕೂ ಅಧಿಕ ಪ್ಯಾಲೆಸ್ತೀನಿಯರು ಈಗಾಗಲೇ ಸಾವನ್ನಪ್ಪಿದ್ದಾರೆ. ಗಾಜಾಪಟ್ಟಿಯಲ್ಲಿನ ಶೇ.85ರಷ್ಟು ಜನರು ಆಶ್ರಯ ಬಯಸಿ ಇತರ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಸದ್ಯ ಗಾಜಾಪಟ್ಟಿ ಸಂಪೂರ್ಣ ಜರ್ಝರಿತವಾಗಿದ್ದು ಮಾನವೀಯ ನೆರವಿಗಾಗಿ ಅಂಗಲಾಚುತ್ತಿದೆ. ಇದರ ಹೊರತಾಗಿಯೂ ಇಸ್ರೇಲ್ ತನ್ನ ಬಿಗಿ ಪಟ್ಟನ್ನು ಸಡಿಲಗೊಳಿಸಲು ನಿರಾಕರಿಸುತ್ತಲೇ ಬಂದಿದ್ದು, ಹಮಾಸ್ ಉಗ್ರರ ಒತ್ತೆಸೆರೆಯಲ್ಲಿರುವ ತನ್ನೆಲ್ಲ ನಾಗರಿಕರನ್ನು ಮುಕ್ತಗೊಳಿಸುವ ಜತೆಯಲ್ಲಿ ಹಮಾಸ್ ಉಗ್ರರ ಸೇನಾ ಮತ್ತು ಆಡಳಿತ ಸಾಮರ್ಥ್ಯವನ್ನು ಸಂಪೂರ್ಣ ನಿರ್ನಾಮ ಮಾಡಿಯೇ ಯುದ್ಧವನ್ನು ಕೊನೆಗೊಳಿಸುವುದಾಗಿ ಘೋಷಿಸಿದೆ.
ಕತಾರ್ ಮತ್ತು ಈಜಿಪ್ಟ್ನ ಸತತ ಪ್ರಯತ್ನದ ಫಲವಾಗಿ ನವೆಂಬರ್ ತಿಂಗಳ ಅಂತ್ಯದಲ್ಲಿ ಇತ್ತಂಡಗಳ ನಡುವೆ ಒಂದು ವಾರ ಕಾಲ ಕದನವಿರಾಮ ಏರ್ಪಟ್ಟಿತ್ತು. ಈ ಅವಧಿಯಲ್ಲಿ ಹಮಾಸ್ ಉಗ್ರರು ತಮ್ಮ ಒತ್ತೆಸೆರೆಯಲ್ಲಿದ್ದ 250 ಇಸ್ರೇಲ್ ಒತ್ತೆಯಾಳುಗಳ ಪೈಕಿ 100ಕ್ಕೂ ಅಧಿಕ ಮಂದಿಯನ್ನು ಬಿಡುಗಡೆ ಮಾಡಿದರೆ ಇದಕ್ಕೆ ಪ್ರತಿಯಾಗಿ ಇಸ್ರೇಲ್ 240 ಮಂದಿ ಪ್ಯಾಲೆಸ್ತೀನಿ ಕೈದಿಗಳನ್ನು ಬಿಡುಗಡೆ ಮಾಡಿತ್ತು. ಇದಾದ ಬಳಿಕ ಇತ್ತಂಡಗಳು ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿಕೊಂಡಿದ್ದರಿಂದ ಕದನವಿರಾಮ ಒಪ್ಪಂದ ಮುರಿದು ದಾಳಿಗಳು ಮತ್ತಷ್ಟು ತೀಕ್ಷ್ಣಗೊಂಡು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು.
ಇತ್ತಂಡಗಳ ಬೇಡಿಕೆ ಏನು?
ಹಮಾಸ್ ಉಗ್ರರು ಇನ್ನೂ 110 ಮಂದಿ ತನ್ನ ನಾಗರಿಕರನ್ನು ಒತ್ತೆಸೆರೆಯಲ್ಲಿರಿಸಿಕೊಂಡಿದ್ದಾರಲ್ಲದೆ, ಅ.7ರಂದು ನಡೆಸಿದ ಕ್ಷಿಪಣಿ ದಾಳಿ ವೇಳೆ ಸಾವನ್ನಪ್ಪಿದ್ದ ಸುಮಾರು 25ರಷ್ಟು ಮಂದಿಯ ಶವಗಳನ್ನು ತನ್ನ ಬಳಿ ಇರಿಸಿಕೊಂಡಿದ್ದಾರೆ ಎಂದು ಇಸ್ರೇಲ್ ಆರೋಪಿಸಿದೆ. ಎಲ್ಲ ಒತ್ತೆಯಾಳುಗಳ ಬಿಡುಗಡೆ ಮತ್ತು ತನ್ನ ನಾಗರಿಕರ ಶವಗಳನ್ನು ತನಗೆ ಮರಳಿಸುವ ಅಂಶ ಕದನವಿರಾಮ ಒಪ್ಪಂದದಲ್ಲಿ ಸೇರ್ಪಡೆಯಾಗಿರಬೇಕು. ಅಷ್ಟು ಮಾತ್ರವಲ್ಲದೆ ತಾತ್ಕಾಲಿಕ ಕದನವಿರಾಮ ಘೋಷಣೆಗೆ ತಾನು ಸಿದ್ಧನಿರುವೆನಾದರೂ ಹಮಾಸ್ ಉಗ್ರರ ನಿರ್ನಾಮದ ತನ್ನ ಗುರಿ ಈಡೇರುವವರೆಗೆ ಯುದ್ಧ ಮುಂದುವರಿಸುವುದಾಗಿ ಇಸ್ರೇಲ್ ಬಿಗಿ ಪಟ್ಟು ಹಿಡಿದಿದೆ.
ಇದೇ ವೇಳೆ ಹಮಾಸ್ ಉಗ್ರರು, ಇಸ್ರೇಲ್‌ನ ಕಾರಾಗೃಹಗಳಲ್ಲಿರುವ ಅ. 7ರ ದಾಳಿ ಸಂಬಂಧ ಶಿಕ್ಷೆಗೊಳಗಾಗಿರುವ ಅಪರಾಧಿಗಳು ಮತ್ತು ನೂರಾರು ಹಮಾಸ್ ಉಗ್ರರ ಸಹಿತ ಸಹಸ್ರಾರು ಮಂದಿ ಪ್ಯಾಲೆಸ್ತೀನಿ ಕೈದಿಗಳನ್ನು ಇಸ್ರೇಲ್ ಬಿಡುಗಡೆ ಮಾಡಬೇಕು. ಅಲ್ಲದೆ, ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲ್ ನಡೆಸುತ್ತಲೇ ಬಂದಿರುವ ಆಕ್ರಮಣವನ್ನು ಸ್ಥಗಿತಗೊಳಿಸಬೇಕು ಮತ್ತು ಗಾಜಾದಿಂದ ಎಲ್ಲ ಇಸ್ರೇಲಿ ಪಡೆಗಳನ್ನು ಶಾಶ್ವತವಾಗಿ ವಾಪಸು ಕರೆಸಿಕೊಳ್ಳಬೇಕೆಂಬ ಬೇಡಿಕೆಗಳನ್ನು ಇರಿಸಿದ್ದಾರೆ. ಪ್ರಸ್ತಾವಿತ ಕದನವಿರಾಮದಲ್ಲಿರುವ ಅಂಶಗಳು ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಕದನವಿರಾಮ ಘೋಷಣೆ ಸಂಬಂಧ ಹಲವಾರು ಪ್ರಸ್ತಾವಗಳು ಚಾಲ್ತಿಯಲ್ಲಿವೆಯಾದರೂ ಕದನವಿರಾಮದ ಅವಧಿ, ತ್ವರಿತಗತಿಯಲ್ಲಿ ಒತ್ತೆಯಾಳುಗಳು ಮತ್ತು ಕೈದಿಗಳ ಬಿಡುಗಡೆ ವಿಚಾರದಲ್ಲಿ ಇತ್ತಂಡಗಳು ತಮ್ಮತಮ್ಮ ನಿಲುವಿಗೆ ಅಂಟಿಕೊಂಡಿರುವುದರಿಂದ ಯಾವ ತೆರನಾದ ಕದನವಿರಾಮ ಒಪ್ಪಂದ ಏರ್ಪಡಲಿದೆ ಎಂಬುದು ಮಾತ್ರ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.
ಇಸ್ರೇಲ್ ಮುಂದಿಟ್ಟಿರುವ ಕದನವಿರಾಮ ಪ್ರಸ್ತಾವದ ಪ್ರಕಾರ ಎರಡು ತಿಂಗಳ ಕದನವಿರಾಮದ ಅವಧಿಯಲ್ಲಿ ಇತ್ತಂಡಗಳು ಒತ್ತೆಯಾಳುಗಳು ಮತ್ತು ಕೈದಿಗಳನ್ನು ಬಿಡುಗಡೆ ಮಾಡುವುದು ಹಾಗೂ ಗಾಜಾದಲ್ಲಿ ನೆಲೆಸಿರುವ ಹಮಾಸ್ ಉಗ್ರ ಸಂಘಟನೆಯ ನಾಯಕರು ಬೇರೆ ದೇಶಗಳಲ್ಲಿ ನೆಲೆಯಾಗಬೇಕು ಎಂಬ ಅಂಶಗಳು ಸೇರಿವೆ. ಆದರೆ ಇಸ್ರೇಲ್‌ನ ಈ ಪ್ರಸ್ತಾವನೆಯನ್ನು ಹಮಾಸ್ ಉಗ್ರರು ತಿರಸ್ಕರಿಸಿದ್ದು, ಗಾಜಾ ಮೇಲಣ ಆಕ್ರಮಣವನ್ನು ಇಸ್ರೇಲ್ ನಿಲ್ಲಿಸುವವರೆಗೆ ಮತ್ತು ತನ್ನ ಪಡೆಗಳನ್ನು ಗಾಜಾದಿಂದ ಹಿಂದಕ್ಕೆ ಕರೆಸಿಕೊಳ್ಳುವವರೆಗೆ ಯಾವುದೇ ಒತ್ತೆಯಾಳುಗಳ ಬಿಡುಗಡೆ ಸಾಧ್ಯವಿಲ್ಲ. ಅಲ್ಲದೆ ತನ್ನ ನಾಯಕರು ಗಾಜಾವನ್ನು ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಸಾರಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಮಧ್ಯಸ್ಥಿಕೆ ವಹಿಸಿರುವ ಈಜಿಪ್ಟ್ ಮತ್ತು ಕತಾರ್, ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಣ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಬಹುಹಂತದ ಪ್ರಸ್ತಾವನೆಯನ್ನು ಇತ್ತಂಡಗಳ ಮುಂದಿರಿಸಿ, ಮಾತುಕತೆಗಳನ್ನು ಮುಂದುವರಿಸಿವೆ.
ದ್ವಂದ್ವದಲ್ಲಿ ಸಿಲುಕಿದ ಇಸ್ರೇಲ್
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಾರಿದ್ದು, ಈ ವರ್ಷದುದ್ದಕ್ಕೂ ಯುದ್ಧ ಮುಂದುವರಿಯುವ ಸುಳಿವು ನೀಡಿದ್ದಾರೆ. ಇನ್ನು ದೀರ್ಘಕಾಲಿಕ ಯುದ್ಧವಿರಾಮ ಘೋಷಿಸಿದ್ದೇ ಆದಲ್ಲಿ ಯುದ್ಧವನ್ನು ಪುನರಾರಂಭಿಸಲು ಕಷ್ಟಸಾಧ್ಯವಾಗುತ್ತದೆ. ಅಲ್ಲದೆ ಗಾಜಾದಲ್ಲಾಗಿರುವ ಯುದ್ಧಹಾನಿಯ ಬಗೆಗೆ ಸ್ಪಷ್ಟ ಮಾಹಿತಿ ಜಗತ್ತಿಗೆ ಲಭ್ಯವಾಗುತ್ತದೆ. ಇದು ಶತ್ರು ಪಾಳಯದ ಬಗೆಗೆ ಅನುಕಂಪ ಮೂಡಲು ಕಾರಣವಾಗಿ ಇಸ್ರೇಲ್ ವಿರುದ್ಧ ಜಾಗತಿಕ ಸಮುದಾಯ ಒಗ್ಗೂಡುವ ಸಾಧ್ಯತೆ ಇದೆ ಎಂಬ ಆತಂಕ ಇಸ್ರೇಲ್‌ನದ್ದಾಗಿದೆ. ಹೀಗಾಗಿ ಇಸ್ರೇಲ್ ಕೇವಲ ತಾತ್ಕಾಲಿಕ ಕದನವಿರಾಮಕ್ಕೆ ಒಲವು ವ್ಯಕ್ತಪಡಿಸುತ್ತ ಬಂದಿದೆ.
ಇದೇ ವೇಳೆ ಇಸ್ರೇಲ್ ನಾಗರಿಕರು ಆರಂಭದಿಂದಲೂ ಹಮಾಸ್ ಉಗ್ರರ ವಿರುದ್ಧ ಯುದ್ಧವನ್ನು ಬೆಂಬಲಿಸುತ್ತಲೇ ಬಂದಿರುವರಾದರೂ ಯುದ್ಧ ನಿಧಾನಗತಿಯಲ್ಲಿ ಸಾಗಿರುವುದು ಮತ್ತು ಸುದೀರ್ಘ ಸಮಯ ಮುಂದುವರಿದಿರುವುದರ ಬಗೆಗೆ ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದ್ದಾರೆ. ಇಸ್ರೇಲ್‌ನ ಈ ಧೋರಣೆಯಿಂದ ಯುದ್ಧದಲ್ಲಿ ಸಾವನ್ನಪ್ಪುತ್ತಿರುವ ದೇಶದ ಯೋಧರ ಸಂಖ್ಯೆ ಹೆಚ್ಚುತ್ತಿರುವುದು ಇಸ್ರೇಲಿಯನ್ನರ ಆತಂಕಕ್ಕೆ ಕಾರಣವಾಗಿದೆ.
ಒಟ್ಟಾರೆ ಇಸ್ರೇಲ್-ಹಮಾಸ್ ಉಗ್ರರ ನಡುವಣ ಯುದ್ಧ ಸದ್ಯಕ್ಕಂತೂ ಕೊನೆಗೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ. ಮಧ್ಯಸ್ಥಿಕೆದಾರ ರಾಷ್ಟ್ರಗಳ ಪ್ರಯತ್ನದ ಫಲವಾಗಿ ಒಂದು ವೇಳೆ ಕದನವಿರಾಮ ಏರ್ಪಟ್ಟರೂ ಅದು ತಾತ್ಕಾಲಿಕವಾಗಿರಲಿದೆಯೇ ವಿನಾ ಯುದ್ಧ ಸಂಪೂರ್ಣ ಸ್ಥಗಿತಗೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಮರೀಚಿಕೆಯೇ ಸರಿ. ಯುದ್ಧ ಮುಂದುವರಿದಿರುವಂತೆಯೇ ಜಾಗತಿಕವಾಗಿಯೂ ಪ್ರತಿಕೂಲ ಪರಿಣಾಮಗಳು ಹೆಚ್ಚತೊಡಗಿದ್ದು ಅಂತಾರಾಷ್ಟ್ರೀಯ ಸಮುದಾಯವನ್ನು ಕಂಗೆಡುವಂತೆ ಮಾಡಿವೆ.
ಹರೀಶ್ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.