Isreal – Hamas: ಸಮರಕ್ಕೆ ಸಂಧಾನದ ಮೇಜು ಪರ್ಯಾಯವಾಗಲಿ


Team Udayavani, Oct 13, 2023, 12:05 AM IST

isreal – palestine flags

ಪ್ರಚಲಿತ ಇಸ್ರೇಲ್‌-ಪ್ಯಾಲೆಸ್ತೀನ್‌ ಯುದ್ಧ ಜಾಗತಿಕ ಇತಿಹಾಸದ ರಕ್ತರಂಜಿತ ಪುಟಗಳಲ್ಲಿ ಸೇರಿಕೊಳ್ಳಲಿದೆ. 1967, 73ರ ಸಮರಗಳಲ್ಲದೇ ಎಷ್ಟೋ ಬಾರಿ ಮಧ್ಯ- ಏಷ್ಯಾದ ಈ ಎರಡು ರಾಷ್ಟ್ರಗಳ ನಡುವೆ ನೂರಾರು ಸಂಘರ್ಷಗಳು ಘಟಿಸಿವೆ. “ಇದು ಕೇವಲ ಘರ್ಷಣೆಯಲ್ಲ; ಪೂರ್ಣ ಪ್ರಮಾಣದ ಯುದ್ಧ’ ಎಂಬುದನ್ನು ಇಸ್ರೇಲ್‌ ಪ್ರಧಾನಿ ಜಗತ್ತಿಗೇ ಸಾರಿದ್ದಾರೆ. ಏಕಾಏಕಿ ಕೆಣಕಿ ಯುದ್ಧಕ್ಕೆ ಆಹ್ವಾನಿಸಿದುದು ಇನ್ನೊಂದು ಸಾರ್ವಭೌಮ ರಾಷ್ಟ್ರವಲ್ಲ; ಬದಲಾಗಿ “ಜಗತ್ತಿನ ಮಾರಕ’ ಎಂದೇ ಪರಿಗಣಿತವಾದ ಉಗ್ರಗಾಮಿ ಪಡೆಗಳು. ಭೀತಿವಾದ ಯಾವುದೇ ಭೂ ಭಾಗದಲ್ಲಿರಲಿ, ಯಾವುದೇ ರೂಪದಲ್ಲಿರಲಿ ಅದನ್ನು ಭಾರತ ಅತ್ಯಂತ ಪ್ರಬಲವಾಗಿ ವಿರೋಧಿಸುತ್ತದೆ. ಇದು ಭಾರತದ ಅಚಲ ನಿಲುವು. ಏಕಾಏಕಿ ಒಂದು ರಾತ್ರಿಯಲ್ಲಿ ಸುಮಾರು 5,000 ರಾಕೆಟ್‌ಗಳನ್ನು ಉಡಾಯಿಸಿ ನೂರಾರು ಅಮಾಯಕರ ಪ್ರಾಣಹರಣ, ಒತ್ತೆಯಾಳಾಗಿಸಿ ಚಿತ್ರಹಿಂಸೆ ನೀಡಿದುದು ಮಾನವ ಇತಿಹಾಸದ ಕರಾಳ ಅಧ್ಯಾಯವಾಗಿ ಹೊರಹೊಮ್ಮುತ್ತಿದೆ. ಪ್ರತಿಯಾಗಿ ಬಾಂಬ್‌ಗಳು ಗಗನಕ್ಕೆ ಚಿಮ್ಮುತ್ತಲೇ, ಗಗನಚುಂಬಿ ಕಟ್ಟಡಗಳನ್ನು ಗಾಜಾ ಪಟ್ಟಿಯುದ್ದಕ್ಕೂ ಧರಾಶಾಯಿಗೊಳಿಸುವ ಇಸ್ರೇಲಿನ ಯುದ್ಧ, ಭೀಕರತೆಯನ್ನು ಪಡೆದುಕೊಳ್ಳುತ್ತಿದೆ.

“ನಾವು ಯುದ್ಧವನ್ನು ಪ್ರಾರಂಭಿಸಿಲ್ಲ, ಆದರೆ ಅದನ್ನು ನಾವೇ ಮುಕ್ತಾ ಯಗೊಳಿಸುತ್ತೇವೆ’ ಇದು ಇಸ್ರೇಲ್‌ ಪ್ರಧಾನಿ ಕ್ರೋಧತಪ್ತ ಉದ್ಗಾರ. ಇನ್ನೊಂದೆಡೆ ಅಮೆರಿಕ, ಬ್ರಿಟನ್‌, ಫ್ರಾನ್ಸ್‌, ಜರ್ಮನಿ ಮುಂತಾದ ಜಾಗತಿಕ ಶಕ್ತಿಗಳು ಏಕಕಂಠದಿದ ಇಸ್ರೇಲ್‌ಗೆ ನೈತಿಕ ಬಲ ತುಂಬುವ ಹಾಗೂ ಆವಶ್ಯಕತೆಗನುಗುಣವಾಗಿ ಸಹಕರಿಸುವ ಭರವಸೆ ನೀಡಿವೆ. “ಭಾರತ ಸರಕಾರ ಹಾಗೂ ಜನತೆ ಈ ಏಕಾಏಕಿ ಹಮಾಸ್‌ ಉಗ್ರರ ಅಟ್ಟಹಾಸದ ದಿನಗಳಲ್ಲಿ ಇಸ್ರೇಲ್‌ನೊಂದಿಗಿದೆ’ ಎಂಬುದನ್ನು ದೂರ ವಾಣಿಯಲ್ಲೂ ಪ್ರಧಾನಿಯವರು ಸ್ಪಷ್ಟವಾಗಿ ಸಾರಿದ್ದಾರೆ. ಈಗಾಗಲೇ ರಷ್ಯಾ-ಉಕ್ರೇನ್‌ ಸಮರದಿಂದ ಒಂದಿಷ್ಟು ಆರ್ಥಿಕ, ವಾಣಿಜ್ಯ ವ್ಯವ ಹಾರ, ರಾಜತಾಂತ್ರಿಕತೆಯ ಬಿರುಕು ಕಂಡ ಭುವಿ ಈಗ ಮತ್ತೂಂದು ವಿಶ್ವ ತಲ್ಲಣಕ್ಕೆ ತೆರೆದುಕೊಂಡಿದೆ. ಈ ತನಕ ಒಂದೇ ಒಂದು ಯುದ್ಧದಲ್ಲಿಯೂ ಸೋಲು ಕಾಣದೆ ಶೌರ್ಯ ಮೆರೆದ ಇಸ್ರೇಲ್‌ ಆರಂಭಿಕ ಹೆಜ್ಜೆಯಲ್ಲಿ ಎಡವಿತ್ತು; ಅಂತೆಯೇ ಜಗತ್ತಿನ ಪ್ರಬಲ ಗುಪ್ತದಳ ಎಂಬ ಹೆಗ್ಗಳಿಕೆಯ ಮೊಜಾದ್‌ ಕೂಡ ತಲ್ಲಣಿಸಿದೆ.

ಉಗ್ರಗಾಮಿತ್ವ ಒಂದು ದೃಷ್ಟಿಯಲ್ಲಿ ಪೌರಾಣಿಕ ಕಾಲದ ಭಸ್ಮಾಸುರನಂತೆ. ಹಮಾಸ್‌ ವಿಧ್ವಂಸಕತೆಗೆ ಇರಾನ್‌, ಲೆಬನಾನ್‌ ಬಲವಾದ ಕುಮ್ಮಕ್ಕು ನೀಡಿದುದು ಮಾತ್ರವಲ್ಲ, ಶಸ್ತ್ರಾಸ್ತ್ರಗಳ ಸರಬರಾಜು ಮಾಡಿದ ವರದಿಯೂ ಬರುತ್ತಿದೆ. ಆದರೆ ಜಗತ್ತಿನ ಬಹುತೇಕ ರಾಷ್ಟ್ರಗಳು ಇಸ್ರೇಲ್‌ ಪರವಾಗಿ, ಹಾಗೂ ಹಮಾಸ್‌ನ ಪೈಶಾಚಿಕ ಕೃತ್ಯವನ್ನು ಖಂಡಿಸಿ ಪ್ರತಿಭಟನೆಗೆ ಇಳಿದಿವೆ. ಇರಾನ್‌, ಲೆಬನಾನ್‌ನಂತಹ ಬೆರಳೆಣಿಕೆಯ ಮುಸ್ಲಿಂ ರಾಷ್ಟ್ರಗಳಲ್ಲಿ ಮಾತ್ರ ಬಹಿರಂಗವಾಗಿ ಉಗ್ರರ ಪರವಾಗಿ ಜಾಥಾಗಳು ಸಾಗುತ್ತಿವೆ. ಪ್ಯಾಲೆಸ್ತೀನ್‌ನಲ್ಲಿ ಪಿ.ಎಲ್‌.ಒ. ನ ಬೆನ್ನು ಮೂಳೆ ಮುರಿದಾಗ ಹಾಗೂ ತನ್ನದೇ ಒಂದಿಷ್ಟು ನೆಲ ಗಾಜಾ ಪಟ್ಟಿಯಲ್ಲಿ ಇಸ್ರೇಲ್‌ ವಶವಾದಾಗ ಹುಟ್ಟಿಕೊಂಡ ಕಡು ಉಗ್ರಗಾಮಿತ್ವದ ಸಂಸ್ಥೆಯೇ ಹಮಾಸ್‌. ಇದನ್ನು ಮನಗಂಡೇ ಪ್ರಗತಿಯ ಪಥದಲ್ಲಿ ಸಾಗುತ್ತಾ, ದೇಶದ ಆರ್ಥಿಕ ಸಂಪನ್ನತೆಯನ್ನು ಉಳಿಸಲು, ಬೆಳೆಸಲು ಹೊರಟ ಜೋರ್ಡಾನ್‌, ಈಜಿಪ್ಟ್ ಹಮಾಸ್‌ಗೆ ಗೇಟ್‌ಪಾಸ್‌ ನೀಡಿತ್ತು. ಇನ್ನು ಅತ್ಯಂತ ಸಮೃದ್ಧ ಹಾಗೂ ವಿಶಾಲ ಮುಸ್ಲಿಂ ರಾಷ್ಟ್ರ ಸೌದಿ ಅರೇಬಿಯಾ ಅಂತೆಯೇ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಉಗ್ರಗಾಮಿತ್ವಕ್ಕೆ ಇಂಬು ಕೊಡಬಾರದೆಂಬ ನಿಲುವಿನಿಂದ ತಟಸ್ಥ ಧೋರಣೆಗೆ ಶರಣು ಹೋಗಿವೆ!

ಇತ್ತಂಡಗಳ ಯುದ್ಧ ಆದಾಗ ಯಾವುದೇ ಅನ್ಯರಾಷ್ಟ್ರ ನೇರವಾಗಿ ತಂತಮ್ಮ ಶಕ್ತಿಯನ್ನು ಧಾರೆ ಎರೆದು, ತನ್ಮೂಲಕ ತಮ್ಮ ರಕ್ಷಣ ಶಕ್ತಿಗೆ ಹಾನಿಗೊಳಿಸಲು ಮುಂದಾಗುವುದಿಲ್ಲ. ಪ್ರಥಮ ಹಾಗೂ ದ್ವಿತೀಯ ಮಹಾಸಮರದ ಬಳಿಕ 1945ರಿಂದ ಈ ವರೆಗಿನ ಭಾರತ-ಪಾಕಿಸ್ಥಾನ ಸಹಿತ ಕಾಂಗೋ, ವಿಯೆಟ್ನಾಂ ಹೀಗೆ ಎಲ್ಲ ಯುದ್ಧಗಳಲ್ಲಿ ವಿಶ್ವ ಕುಟುಂಬದ ಎಲ್ಲ ಸದಸ್ಯ ರಾಷ್ಟ್ರಗಳು ಬಹುತೇಕ ಪರೋಕ್ಷವಾಗಿಯೇ ಪಕ್ಷ ವಹಿಸುವ ತಮ್ಮ ಜಾಣ್ಮೆ ಪ್ರದರ್ಶಿಸಿವೆ. ತಂತಮ್ಮ ರಾಷ್ಟ್ರೀಯ ಹಿತಾ ಸಕ್ತಿಗಳಿಗೇ ನೇರವಾಗಿ ಸವಾಲು ಆದಾಗ ಮಾತ್ರ ಇವುಗಳು ಸಮರಕ್ಕೆ ಧುಮುಕಿದ್ದನ್ನು ನಾವು ಕಾಣಬಲ್ಲೆವು. ಆದರೆ ನೈತಿಕ ಬೆಂಬಲದೊಂದಿಗೆ ಶಸ್ತ್ರಾಸ್ತ್ರಗಳ ಸರಬರಾಜು, ಆಹಾರಧಾನ್ಯ, ಯುದ್ಧ ವಿಮಾನಗಳು ಹಾಗೂ ಅವಶ್ಯ ಇದ್ದಾಗ ಮಾತ್ರ ಸೈನಿಕರ ರವಾನೆ ಇವೆಲ್ಲ ಅಮೆರಿಕ-ಸೋವಿಯತ್‌ ರಷ್ಯಾದ ಧ್ರುವೀಕರಣದಿಂದ ಇಂದಿನವರೆಗೂ ನಡೆಯುತ್ತಲೇ ಬಂದಿದೆ.

ಯುದ್ಧ ಪ್ರಾರಂಭವಾಯಿತು ಎಂದ ತತ್‌ಕ್ಷಣ 2 ಸೂತ್ರಗಳು ವಿಶ್ವ ರಾಜಕೀಯದಲ್ಲಿ ಏಕಕಾಲದಲ್ಲಿ ಪುಟಿಯುತ್ತವೆ. (1) ಶತ್ರುವಿನ ಶತ್ರು ಮಿತ್ರ; (2.) ಶತ್ರುವಿನ ಮಿತ್ರ ಶತ್ರು. ಯುದ್ಧದ ಬಗೆಗೆ ಅತ್ಯಂತ ಆಳವಾದ ಅಧ್ಯಯನ ವಿಶ್ವಕುಟುಂಬದತ್ತ ಸಾಗಿದೆ. ಹಾಗೂ ಇದೊಂದು “ಮಾನವ ಕುಲದ ಶಾಪ’ ಎಂಬುದಾಗಿಯೇ ವ್ಯಾಖ್ಯಾನಿಸಲಾಗಿದೆ. “ಯುದ್ಧವನ್ನು ನಾವು ಕೊನೆಗಾಣಿಸಬೇಕು; ಇಲ್ಲವಾದರೆ ಯುದ್ಧವೇ ನಮ್ಮನ್ನು ಕೊನೆಗಾಣಿಸುತ್ತದೆ’ ಎಂಬ ಜಾನ್‌. ಎಫ್. ಕೆನಡಿ ಅವರ ಉದ್ಗಾರ, ಅಣುಬಾಂಬಿನ ಈ ಯುಗದಲ್ಲಿ ಅತ್ಯಂತ ಪ್ರಸ್ತುತ. ಭಾರತ ಹಾಗೂ ಪಾಕಿಸ್ಥಾನವೂ ಸೇರಿ ಈಗಾಗಲೇ ಪ್ರತ್ಛನ್ನವಾಗಿ 6 ರಾಷ್ಟ್ರಗಳು ನ್ಯೂಕ್ಲಿಯರ್‌ ಅಸ್ತ್ರಧಾರಿಗಳು ಇನ್ನು ತೆರೆಮರೆಯಲ್ಲಿ ಉತ್ತರ ವಿಯೆಟ್ನಾಂ, ಇರಾನ್‌, ಇಸ್ರೇಲ್‌ಗ‌ಳು ಈ ಅಣುಶಕ್ತ ಪಥದಲ್ಲಿ ಸಾಗಿವೆ. ಪೆಂಟಗಾನ್‌ನ ವರದಿಯಂತೆ ಇಡೀ ವಿಶ್ವವನ್ನು ಒಂದಲ್ಲ, ಎರಡಲ್ಲ 30 ಬಾರಿಗಿಂತಲೂ ಹೆಚ್ಚು ಸಲ ಸಮಗ್ರವಾಗಿ ನಾಶಗೊಳಿಸಬಲ್ಲ ಅಣುಬಾಂಬು ದಾಸ್ತಾನು ಅಮೆರಿಕ ಒಂದರಲ್ಲೇ ಇದೆಯಂತೆ!

1945ರಲ್ಲೇ ಸೂರ್ಯೋದಯ ರಾಷ್ಟ್ರವಾದ ಜಪಾನಿನ ನಾಗಸಾಕಿ, ಹಿರೋಶಿಮಾದ ಜನರಿಗೆ ಸೂರ್ಯೋದಯವೇ ಕಾಣದಂತೆ ಮಾಡಿದ ಅಮೆರಿಕದ ಈ ಶಕ್ತಿ ಕೇವಲ ಕಾಗೆ ಗುಬ್ಬಚ್ಚಿಯ ಕಥೆಯಲ್ಲ; ವಾಸ್ತವಿಕತೆ.

ಎರಡು ಮಹಾಸಮರಗಳ ಇತಿಹಾಸದ ಪದರ ಬಿಚ್ಚಿ ನೋಡಿದಾಗ ಇವೆರಡೂ ಪ್ರಾರಂಭಿಕ ಹೆಜ್ಜೆಯಲ್ಲಿ ಮಹಾಯುದ್ಧ ಆಗಿರಲೇ ಇಲ್ಲ . ಮುಂದೆ ಅಕ್ಷಾಂಶ ರಾಷ್ಟ್ರಗಳ ವಿರುದ್ಧ “ಮೈತ್ರಿಕೂಟ’ ಘರ್ಷಣೆಗೆ ಇಳಿದಾಗಲೇ ವಿಶ್ವ ಸಮರದ ಕರಿ ಛಾಯೆ ಜಗದಗಲ ಹಬ್ಬಿದುದು ಈಗ ಇತಿಹಾಸ. ಈಗಾಗಲೇ ಅಮೆರಿಕ ತನ್ನ ರಕ್ಷಣ ಪಡೆಗಳನ್ನು ಇಸ್ರೇಲ್‌ಗೆ ರವಾನಿಸಿದೆ. ಪ್ರತಿಯಾಗಿ ಇರಾನ್‌ ಹಮಾಸ್‌ಗೆ ನೇರ ಭುಜಬಲ ನೀಡುವಿಕೆ ತಳ್ಳಿ ಹಾಕುವಂತಿಲ್ಲ. ಈ ಮಧ್ಯೆ ಜಿ-20 ಮುಂದಿರಿಸಿದ “ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ದ ಹಾಗೂ “ವಿಶ್ವಮಿತ್ರತ್ವ’ದ ಪಾರಿವಾಳ ಒಲಿವ್‌ ರೆಂಬೆಯನ್ನು ಅದೆಷ್ಟು ದೂರ ಕೊಂಡೊಯ್ಯಬಲ್ಲದೆಂಬುದೇ ಸಹಸ್ರ ಹೊನ್ನಿನ ಪ್ರಶ್ನೆ.

ಅಂತಾರಾಷ್ಟ್ರೀಯ ಕಾನೂನು ಸಮುತ್ಛಯದಲ್ಲಿನ, ಶಾಂತಿ, ಸಹಬಾಳ್ವೆ, ಭಾತ್ರತ್ವದ ನೆಲೆ ಹೊಂದಿದ ಎಲ್ಲ ಪುಟಗಳು ಯುದ್ಧದ ಗರ್ಜ ನೆಯೊಂದಿಗೆ ಮುದುಡಿಕೊಳ್ಳುತ್ತವೆ. ಮಾತ್ರವಲ್ಲ, ಯುದ್ಧದ ಬಗೆಗೆ ಸಿದ್ಧಗೊಂಡ ಯುದ್ಧ ನಿಯಮಗಳು ಕೂಡ ರಣರಂಗದಲ್ಲಿ ಕಂಪಿಸಿ ಕುಸಿದು ಬಿಡುತ್ತದೆ. ಜಾಗತಿಕ ಇತಿಹಾಸದ ರಕ್ತಸಿಕ್ತ ಪ್ರಚಲಿತ ಪುಟಗಳಲ್ಲಿ ಶೀಘ್ರವಾಗಿ ತಾರ್ಕಿಕ ಕೊನೆಯ ಪಂಕ್ತಿ ಬರೆಯುವಂತಾಗಲಿ; ಶಾಂತ ಸಾಗರದ ಮಧ್ಯೆ ವಿಶ್ವ ಕುಟುಂಬ ಬಾಳಲಿ ಎಂದು ಆಶಿಸೋಣ.

ಡಾ| ಪಿ.ಅನಂತಕೃಷ್ಣ ಭಟ್‌, ಮಂಗಳೂರು

 

ಟಾಪ್ ನ್ಯೂಸ್

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ABV-Modi

A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್‌ ಬಿಹಾರಿ ವಾಜಪೇಯಿ ಭದ್ರ ಬುನಾದಿ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ABV3

A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ

Basa-Horatti

ಮೇಲ್ಮನೆಗೆ ನಾನೇ ಫೈನಲ್‌, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kasaragod: ಟ್ಯಾಂಕರ್‌ ಲಾರಿಯಿಂದ ರಸ್ತೆಗೆ ಹರಿದ ಎಣ್ಣೆ

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

crime

Siddapura: ಬೈಕಿಗೆ ಕಾರು ಡಿಕ್ಕಿ; ಸವಾರರು ಗಂಭೀರ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Untitled-1

Kasaragod Crime News: ಬೈಕ್‌ ಕಳವು; ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.