Martyrs: ಜಮ್ಮು-ಕಾಶ್ಮೀರ ಎನ್‌ಕೌಂಟರ್: ಹುತಾತ್ಮರಿಗೆ ದೇಶದ ನಮನ
ಗುರುವಾರ ಉಗ್ರರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕರ್ನಲ್, ಮೇಜರ್ ಮತ್ತು ಡಿವೈಎಸ್‌ಪಿ ಹುತಾತ್ಮ
Team Udayavani, Sep 14, 2023, 11:52 PM IST
ಜಮ್ಮು-ಕಾಶ್ಮೀರದಲ್ಲಿ ಗುರುವಾರ ಉಗ್ರರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕರ್ನಲ್, ಮೇಜರ್ ಮತ್ತು ಡಿವೈಎಸ್‌ಪಿಯೊಬ್ಬರು ಹುತಾತ್ಮರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಡೆದ ಅತೀದೊಡ್ಡ ಸಾವು ನೋವು ಇದು. ನೋವಿನ ಸಂಗತಿ ಎಂದರೆ, ಹುತಾತ್ಮರಾಗಿರುವ ಮೂವರು ಅತ್ಯಂತ ಧೈರ್ಯವಂತ ಅಧಿಕಾರಿಗಳಾಗಿದ್ದರು.
ಕರ್ನಲ್ ಮನ್‌ಪ್ರೀತ್ ಸಿಂಗ್: ಕರೆ ಮಾಡುವೆ ಎಂದವರು, ಮತ್ತೆ ಮಾಡಲೇ ಇಲ್ಲ
ಬುಧವಾರ ಮುಂಜಾನೆ ಕರ್ನಲ್ ಮನ್‌ಪ್ರೀತ್ ಸಿಂಗ್ ಅವರಿಗೆ ಮನೆಯಿಂದ ಒಂದು ಕರೆ ಹೋಗಿತ್ತು. ನಾನು ಈಗ ಕಾರ್ಯಾಚರಣೆಯೊಂದರಲ್ಲಿ ಇದ್ದೇನೆ. ಈಗ ಬ್ಯುಸಿಯಾಗಿದ್ದೇನೆ. ಸಂಜೆ ಕರೆ ಮಾಡುತ್ತೇನೆ ಎಂದು ಮನ್‌ಪ್ರೀತ್ ಸ್ಥಗಿತಗೊಳಿಸಿದ್ದರು. ಆದರೆ ಸಂಜೆ ವೇಳೆಗೆ ಸೇನೆ ಕಡೆಯಿಂದ ಕರೆ ಹೋಗಿದ್ದು, ನಿಮ್ಮ ಪುತ್ರ ಉಗ್ರರ ಗುಂಡಿಗೆ ಹುತಾತ್ಮರಾಗಿದ್ದಾರೆ ಎಂಬ ಮಾಹಿತಿ ನೀಡಲಾಗಿತ್ತು.
ಇದು ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ನೋವಿನ ಕಥೆ. 19 ರಾಷ್ಟ್ರೀಯ ರೈಫಲ್ಸ್‌ನ ಕಮಾಂಡಿಂಗ್ ಅಧಿಕಾರಿಯಾಗಿದ್ದ ಕರ್ನಲ್ ಮನ್‌ಪ್ರೀತ್ ಸಿಂಗ್, ಇನ್ನು ನಾಲ್ಕು ತಿಂಗಳು ಕಳೆದಿದ್ದರೆ ಈ ಹುದ್ದೆಯಿಂದ ವಿಮುಕ್ತಿ ಪಡೆಯುತ್ತಿದ್ದರು. ಹೌದು, ಬುಧವಾರವಷ್ಟೇ ಉಗ್ರರ ಗುಂಡೇಟಿನಿಂದ ಹುತಾತ್ಮರಾಗಿರುವ ಕರ್ನಲ್ ಮನ್‌ಪ್ರೀತ್ ಸಿಂಗ್ ಅವರನ್ನು ಬೇರೊಂದು ಕಡೆಗೆ ನಿಯೋಜನೆ ಮಾಡಲು ಸಿದ್ಧತೆಯೂ ನಡೆದಿತ್ತು. ಕರ್ನಲ್ ಮನ್‌ಪ್ರೀತ್ ಸಿಂಗ್ ಅವರು ಮೂಲತಃ ಪಂಜಾಬ್‌ನ ಚಂಡೀಗಡದ ಕುಗ್ರಾಮದವರು. ಸದ್ಯ ಇವರ ಕುಟುಂಬ ನವ ಚಂಡೀಗಡದ ಡಿಎಲ್‌ಎಫ್ನಲ್ಲಿ ವಾಸಿಸುತ್ತಿದೆ. ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ಪತ್ನಿ ಜಗ್‌ಮೀತ್ ಗ್ರೆವಲ್ ಹರ್ಯಾಣದ ಶಿಕ್ಷಣ ಇಲಾಖೆಯಲ್ಲಿದ್ದು, ಅರ್ಥಶಾಸ್ತ್ರ ವಿಚಾರದಲ್ಲಿ ಉಪನ್ಯಾಸಕಿಯಾಗಿದ್ದಾರೆ. ಇವರಿಗೆ 6 ಮತ್ತು 2 ವರ್ಷದ ಮಗ ಹಾಗೂ ಮಗಳು ಇದ್ದಾರೆ. 17 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಮನ್‌ಪ್ರೀತ್ ಸಿಂಗ್, ಇತ್ತೀಚೆಗಷ್ಟೇ ಶೌರ್ಯ ಪದಕ ಪಡೆದಿದ್ದಾರೆ. ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸಿದ ಕಾರಣಕ್ಕಾಗಿ ಇವರಿಗೆ ಈ ಪದಕ ನೀಡಲಾಗಿತ್ತು.
ಮೇಜರ್ ಆಶೀಶ್ ಢೋನ್‌ಚಕ್- ಹುಟ್ಟುಹಬ್ಬಕ್ಕೆ ಬರುವೆ ಎಂದಿದ್ದ ಆಶೀಶ್
ಎನ್‌ಕೌಂಟರ್‌ನಲ್ಲಿ ಹುತಾತ್ಮರಾಗಿರುವ ಮತ್ತೂಬ್ಬ ವೀರ ಯೋಧ, ಮೇಜರ್ ಆಶೀಶ್ ಢೋನ್‌ಚಕ್ ಅವರದ್ದು ಇನ್ನು ನಾಲ್ಕು ತಿಂಗಳಲ್ಲಿ ಹುಟ್ಟುಹಬ್ಬವಿತ್ತು. ಇತ್ತೀಚೆಗಷ್ಟೇ ತಂದೆಗೆ ಕರೆ ಮಾಡಿದ್ದ ಆಶೀಶ್, ಹುಟ್ಟುಹಬ್ಬಕ್ಕೆ ರಜೆ ಪಡೆದು ಬರುತ್ತೇನೆ ಎಂದಿದ್ದರು.
ಆಶೀಶ್ ಅವರಿಗೆ ವಿವಾಹವಾಗಿ ಈಗಾಗಲೇ ಒಂಭತ್ತು ವರ್ಷಗಳಾಗಿವೆ. ಹರ್ಯಾಣದ ಜಿಂದ್‌ನ ಜ್ಯೋತಿ ಎಂಬುವರನ್ನು ಮದುವೆಯಾಗಿದ್ದು, 5 ವರ್ಷದ ಪುತ್ರಿ ವಮಿಕಾ ಅವರನ್ನು ಅಗಲಿದ್ದಾರೆ. ಆಶೀಶ್ ಅವರ ಕುಟುಂಬ ಪಾಣಿಪಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ. ಇವರ ತಂದೆ ಮನೆಯೊಂದನ್ನು ಕಟ್ಟಿಸಿದ್ದು, ಅ.23ರಂದು ಇದರ ಗೃಹ ಪ್ರವೇಶವಾಗಬೇಕಾಗಿತ್ತು. ಇನ್ನೂ ಬೇಸರದ ಸಂಗತಿ ಎಂದರೆ, ಆಶೀಶ್ ಮೂವರು ಸಹೋದರಿಯರನ್ನೂ ಬಿಟ್ಟು ಹೋಗಿದ್ದಾರೆ. ಇತ್ತೀಚೆಗಷ್ಟೇ ನಡೆದ ರಾಖೀ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಣೆ ಮಾಡಿತ್ತು ಈ ಕುಟುಂಬ.
ಕಾಶ್ಮೀರಕ್ಕೆ ತೆರಳುವ ಮುನ್ನ ಆಶೀಶ್, ಪಂಜಾಬ್‌ನ ಬಟಿಂಡಾದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇದೇ ವರ್ಷದ ಆ.11ರಂದು ಆಶೀಶ್ ಅವರಿಗೆ ಸೇನಾ ಪದಕ ನೀಡಿ ಗೌರವಿಸಲಾಗಿತ್ತು.
ಹುಮಾಯೂನ್ ಭಟ್ -ಒಂದು ತಿಂಗಳ ಮಗು ಅನಾಥ
ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್‌ಪಿಯಾಗಿರುವ ಹುಮಾಯೂನ್ ಭಟ್, ಒಂದು ತಿಂಗಳ ಮಗುವನ್ನು ಅಗಲಿದ್ದಾರೆ. ಇವರ ತಂದೆಯೂ ನಿವೃತ್ತ ಪೊಲೀಸ್ ಅಧಿಕಾರಿ. ಘುಲಾಮ್ ಹಸನ್ ಭಟ್ ಎಂಬ ಇವರು, 2018ರಲ್ಲಿ ಐಜಿಪಿಯಾಗಿ ನಿವೃತ್ತರಾಗಿದ್ದರು. 34ವರ್ಷದ ಭಟ್ ಅವರು, 2018ರಲ್ಲಿ ಕಾಶ್ಮೀರ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಡಿವೈಎಸ್‌ಪಿಯಾಗಿದ್ದರು. ಒಂದೂ ವರೆ ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಭಟ್ ಅವರಿಗೆ ಒಂದು ತಿಂಗಳ ಮಗುವಿದೆ. ನೋವಿನ ವಿಚಾರವೆಂದರೆ, ಮಗು ಹುಟ್ಟಿದ ಸಂಭ್ರಮದಲ್ಲಿದ್ದ ಇಡೀ ಕುಟುಂಬಕ್ಕೆ ಹುಮಾಯೂನ್ ಭಟ್ ಅವರ ಸಾವು ಧೃತಿಗೆಡಿಸಿದೆ. ಬುಧವಾರವೇ, ತಮ್ಮ ಪುತ್ರ ಹುಮಾಯೂನ್ ಭಟ್ ಅವರ ಪಾರ್ಥಿವ ಶರೀರಕ್ಕೆ ತಂದೆ ಘುಲಾಮ್ ಹಸನ್ ಭಟ್ ಅವರು ನಮಿಸಿದ ಫೋಟೋ ಎಲ್ಲ ಕಡೆ ವೈರಲ್ ಆಗಿದೆ.
ಯೋಧರ ಪ್ರಾಣ ಉಳಿಸಿ ಜೀವ ತೆತ್ತ “ಕೆಂಟ್”
ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿಯೂ ಬುಧವಾರ ಪ್ರತ್ಯೇಕ ಎನ್‌ಕೌಂಟರ್ ನಡೆದಿದ್ದು, ಇಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಯಿತು. ಈ ಕಾರ್ಯಾಚರಣೆಯಲ್ಲಿ ಉಗ್ರರ ಗುಂಡೇಟಿನಿಂದ ಯೋಧರೊಬ್ಬರನ್ನು ಬದುಕಿಸಿದ ಕೆಂಟ್ ಎಂಬ ಸೇನಾ ನಾಯಿ, ತಾನು ಪ್ರಾಣ ಬಿಟ್ಟಿತು. 6 ವರ್ಷದ ಈ ಕೆಂಟ್, 21 ಸೇನಾ ನಾಯಿ ಘಟಕದಲ್ಲಿತ್ತು. ರಜೌರಿ ಜಿಲ್ಲೆಯಲ್ಲಿ ಉಗ್ರರು ಮತ್ತು ಸೇನೆ ನಡುವೆ ತೀವ್ರ ಗುಂಡಿನ ದಾಳಿ ನಡೆಯಿತು. ಈ ವೇಳೆ, ಉಗ್ರರ ಗುಂಡೇಟಿನಿಂದ ಯೋಧರೊಬ್ಬರನ್ನು ಕಾಪಾಡಿದ ಅದು, ತನ್ನ ಪ್ರಾಣ ಬಿಟ್ಟಿತು. ಕೆಂಟ್‌ಗೂ ಸೇನೆ ಗೌರವ ಸಲ್ಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.