ಜನತಾ ಜಲಧಾರೆಗೆ ಇಂದು ಚಾಲನೆ: 15 ಕಡೆ ಜಲ ಸಂಗ್ರಹ
Team Udayavani, Apr 16, 2022, 7:30 AM IST
ಬೆಂಗಳೂರು: ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಜಾರಿಗೆ ಸಂಕಲ್ಪ ಮಾಡಿ ಜಾತ್ಯತೀತ ಜನತಾ ದಳ ಹಮ್ಮಿಕೊಂಡಿರುವ ಜನತಾ ಜಲಧಾರೆ-ಗಂಗಾ ರಥಯಾತ್ರೆಗೆ ಏಪ್ರಿಲ್ 16ರಿಂದ (ಶನಿವಾರ) ಚಾಲನೆ ಸಿಗಲಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೃಷ್ಣರಾಜ ಸಾಗರದಲ್ಲಿ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮರಸ್ವಾಮಿ ಅವರು ಆಲಮಟ್ಟಿಯಲ್ಲಿ ಜಲ ಸಂಗ್ರಹ ಮಾಡಲಿದ್ದಾರೆ.
ಶನಿವಾರ ಬೆಳಗ್ಗೆ 11 ಗಂಟೆಗೆ ಮೇಕೆದಾಟು ಸೇರಿದಂತೆ ರಾಜ್ಯದ 15 ಜೀವ ನದಿಗಳ ಪುಣ್ಯಜಲವನ್ನು ಕಲಶಕ್ಕೆ ತುಂಬಿಕೊಳ್ಳುವ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಹದಿನೈದು ಗಂಗಾರಥಗಳು ನಿಗಧಿತ ಸ್ಥಳಗಳನ್ನು ತಲುಪಿದ್ದು, ಆಯಾ ಜಿಲ್ಲೆಗಳ ಪಕ್ಷದ ಅಧ್ಯಕ್ಷರು, ಶಾಸಕರು, ಕಾರ್ಯಕರ್ತರು ಅವುಗಳನ್ನು ಬರ ಮಾಡಿಕೊಂಡಿದ್ದಾರೆ.
ಬೆಳಗ್ಗೆ ವೇದ ಮಂತ್ರ ಘೋಷಣೆ, ಪೂಜೆ, ಮಂಗಳ ವಾದ್ಯಗಳ ಸದ್ದು, ಕಲಾ ತಂಡಗಳ ಮೆರವಣಿಗೆ, ಕಲಶ ಪೂಜೆ, ಪಕ್ಷದ ಕಾರ್ಯಕರ್ತೆಯರಿಂದ ಕಲಶ ಮೆರವಣಿಗೆ ಇತ್ಯಾದಿಗಳ ನಡುವೆ ಪುಣ್ಯಜಲವನ್ನು ಸಂಗ್ರಹ ಮಾಡಿಕೊಳ್ಳಲಾಗುತ್ತದೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರದಲ್ಲಿ ಕಾವೇರಿ ಜಲ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಆದೇ ರೀತಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸಿŒ ಜಲಾಶಯದಲ್ಲಿ ಜಲಸಂಗ್ರಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಉಳಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿಯವರು ಎತ್ತಿನಹೊಳೆಯಲ್ಲಿ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಹಾಸನ ಜಿಲ್ಲೆಯ ಹೇಮಾವತಿಯಲ್ಲಿ, ಶಾಸಕಿ ಅನಿತಾ ಕುಮಾರಸ್ವಾಮಿಯವರು ಮೇಕೆದಾಟು ನಲ್ಲಿ ಕಾವೇರಿ ನದಿ ಸಂಗ್ರಹ ಮಾಡಲಿದ್ದಾರೆ. ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ವಿಧುರಾಶ್ವತ್ತದ ಉತ್ತರ ಪಿನಾಕಿನಿ ನದಿಯಲ್ಲಿ ಜಲ ಸಂಗ್ರಹ ಮಾಡಲಿದ್ದಾರೆ .
ಡಿಜಿಟಲ್ ಪರದೆ ಅಳವಡಿಕೆ:
ರಾಜ್ಯದ 15 ಕಡೆಗಳಲ್ಲಿ ನಾಯಕರೆಲ್ಲರೂ ಜಲ ಸಂಗ್ರಹ ಮಾಡುವ ನೇರ ದೃಶ್ಯಾವಳಿ ನೋಡಲು ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಬೃಹತ್ ಡಿಜಿಟಲ್ ಪರದೆ ಅಳವಡಿಸಲಾಗಿದೆ. ಎಲ್ಲ ಪುಣ್ಯ ನದಿಗಳ ನೀರು ಸಂಗ್ರಹ ಮಾಡುವ ಪವಿತ್ರ ಕಾರ್ಯವು ಏಕಕಾಲದಲ್ಲಿ ನಡೆಯಲಿದ್ದು, ಇದನ್ನು ವೀಕ್ಷಿಸಲು ಡಿಜಿಟಲ್ ಪರದೆಯ ವ್ಯವಸ್ಥೆ ಮಾಡಲಾಗಿದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಗೆ ಬಿಜೆಪಿಯನ್ನು ನೇರವಾಗಿ ಎದುರಿಸಲಾಗುತ್ತಿಲ್ಲ: ಸಚಿವ ಸುನಿಲ್ ಕುಮಾರ್
ಎಲ್ಲೆಲ್ಲಿ ಜಲಸಂಗ್ರಹ
ಮಾಂಜ್ರಾ ನದಿಯಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಷೆಂಪೂರ್, ಭೀಮಾ ನದಿಯಲ್ಲಿ ನಾಗನಗೌಡ ಕಂದಕೂರ, ತುಂಗಭದ್ರಾ ಜಲಾಶಯದಲ್ಲಿ ವೆಂಕಟರಾವ್ ನಾಡಗೌಡ, ರಾಜಾ ವೆಂಕಟಪ್ಪ ನಾಯಕ, ಎನ್.ಎಂ.ನಬಿ, ಕೊಟ್ಟಿಗೆಹಾರ ಬಳಿಯ ಹೇಮಾವತಿ ನದಿಯಲ್ಲಿ ವಿಧಾನ ಪರಿಷತ್ ಸದಸ್ಯ ಭೋಜೆಗೌಡ, ಮಾಜಿ ಶಾಸಕ ವೈ ಎಸ್ ವಿ ದತ್ತಾ, ಕಾಳಿ ನದಿಯಲ್ಲಿ ಗಣಪಯ್ಯ ಹೆಗಡೆ, ಶಶಿ ಭೂಷಣ ಹೆಗಡೆ, ಯೋಗೇಶ್ ಶೆಟ್ಟಿ, ಸುಧಾಕರ್ ಶೆಟ್ಟಿ, ಸೌಪರ್ಣಿಕಾ ನದಿಯಲ್ಲಿ ಯೋಗೇಶ್ ಶೆಟ್ಟಿ, ತಲಕಾವೇರಿಯಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್, ಕಬಿನಿ ನದಿಯಲ್ಲಿ ಶಾಸಕರಾದ ಅಶ್ವಿನ್ ಕುಮಾರ್, ಮಂಜೇಗೌಡ ಹಾಗೂ ಚಿಕ್ಕಣ್ಣ, ಎತ್ತಿನಹೊಳೆಯಲ್ಲಿ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಶಾಸಕರಾದ ಶಿವಲಿಂಗೇಗೌಡ, ಲಿಂಗೇಶ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ವಿಧುರಾಶ್ವತ್ಥದಲ್ಲಿ ಯುವ ಜನತಾ ದಳ ಅಧ್ಯಕ್ಷ ನಿಖೀಲ್ ಕುಮಾರಸ್ವಾಮಿ ಹಾಗೂ ಅವರ ಜತೆಯಲ್ಲಿ ಶಾಸಕರಾದ ಕೆ.ಎಂ.ಕೃಷ್ಣಾರೆಡ್ಡಿ, ಗೋವಿಂದ ರಾಜು ಅವರು ಜಲ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಒಟ್ಟು 94 ಕಡೆ ಜಲ ಸಂಗ್ರಹ:
ಮೆ 8ರವರೆಗೂ ನಡೆಯಲಿರುವ ಜಲಧಾರೆ ಕಾರ್ಯಕ್ರಮದಲ್ಲಿ ಒಟ್ಟು 94 ಕಡೆ ಜಲ ಸಂಗ್ರಹ ಮಾಡಲಾಗುವುದು.ರಾಜ್ಯದ ನೀರಾವರಿ ಯೋಜನೆಗಳನ್ನು ಜೆಡಿಎಸ್ ಪಕ್ಷಕ್ಕೆ ಪೂರ್ಣ ಬಹುಮತದ ಸರ್ಕಾರ ಸಿಕ್ಕಿದರೆ ಐದೇ ವರ್ಷಗಳಲ್ಲಿ ಅನುಷ್ಟಾನಕ್ಕೆ ತರಲಾಗುವುದು. ರಾಜ್ಯದ 180ಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳಲ್ಲಿ ಜಲಧಾರೆಯ ಗಂಗಾ ರಥಗಳು ಹಾದು ಹೋಗಲಿವೆ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
“ಜನತಾ ಜಲಧಾರೆ ನನ್ನ ರಾಜಕೀಯ ಜೀವನದ ಅತ್ಯಂತ ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ನೀರಾವರಿ ವಿಷಯದಲ್ಲಿ ರಾಜ್ಯಕ್ಕೆ ಕಳೆದ 75 ವರ್ಷಗಳಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವ ಏಕೈಕ ಗುರಿಯೊಂದಿಗೆ ಜಲಧಾರೆ ಹಮ್ಮಿಕೊಂಡಿದ್ದೇವೆ.
– ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.