ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ “ಕುರುಬ’ ಅಸ್ತ್ರ
Team Udayavani, May 14, 2019, 3:09 AM IST
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಾಗ್ಧಾಳಿ ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಉದ್ಭವಿಸಬಹುದಾದ ಸನ್ನಿವೇಶ ಎದುರುಗೊಳ್ಳಲು “ರಿಹರ್ಸಲ್’ ಆಗಿದೆ. ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು “ಕುರುಬ’ ಅಸ್ತ್ರ ಬಳಸಿರುವ ಜೆಡಿಎಸ್ ಆ ಮೂಲಕ ಕಾಂಗ್ರೆಸ್‌ನಲ್ಲಿರುವ ಮೂಲ ಹಾಗೂ ಸಿದ್ದರಾಮಯ್ಯ ವಿರೋಧಿ ತಂಡದ ಬೆಂಬಲ ಪಡೆಯುವ ಕಾರ್ಯತಂತ್ರ ರೂಪಿಸಿದಂತಿದೆ.
ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಹೇಳಿಕೆ ಕಾಂಗ್ರೆಸ್‌ನಲ್ಲಿರುವ ಕೆಲವು ಮುಖ್ಯಮಂತ್ರಿ ಆಕಾಂಕ್ಷಿಗಳಿಗೂ ನುಂಗಲಾರದ ತುತ್ತಾಗಿದೆ. ಹೀಗಾಗಿ, ಅವರೂ ಎಚ್.ವಿಶ್ವನಾಥ್ ಜತೆ ಸೇರಿಕೊಂಡಿದ್ದಾರೆ. ಇದು ಒಂದು ರೀತಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಪೂರ್ವಾಶ್ರಮ ಗೆಳೆಯರ ಸಮರ ಎಂಬಂತಾಗಿದೆ. ಕಾಂಗ್ರೆಸ್ ಅಥವಾ ಜೆಡಿಎಸ್‌ನ ಯಾರೇ ಬೇರೆ ನಾಯಕರು ಸಿದ್ದರಾಮಯ್ಯ ವಿರುದ್ಧ ಮಾತನಾಡಿದರೆ ಕುರುಬ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ.
ಆದರೆ, ಕುರುಬ ಸಮುದಾಯದವರೇ ಆದ ಹಾಗೂ ಪೂರ್ವಾಶ್ರಮದ ಕಾಂಗ್ರೆಸ್ ನಾಯಕರೂ ಆಗಿರುವ ಎಚ್.ವಿಶ್ವನಾಥ್ ವಾಗ್ಧಾಳಿ ನಡೆಸಿದರೆ ಅದು ಮೇಲ್ನೋಟಕ್ಕೆ ಇಬ್ಬರ ನಡುವಿನ ಮುಸುಕಿನ ಗುದ್ದಾಟ ಎಂಬಂತೆ ಬಿಂಬಿತವಾಗುತ್ತದೆ. ಆದರೆ, ಸಮ್ಮಿಶ್ರ ಸರ್ಕಾರಕ್ಕೆ ಅಡ್ಡಿಯಾಗಬಲ್ಲವರಿಗೆ ಯಾವ ಸಂದೇಶ ಮುಟ್ಟಿಸಬೇಕೋ ಅದನ್ನು ಪರೋಕ್ಷವಾಗಿ ಮುಟ್ಟಿಸುವ ತಂತ್ರಗಾರಿಕೆ ಇದರ ಹಿಂದಿದೆ ಎಂಬ ವಾಖ್ಯಾನಗಳು ಕೇಳಿಬರುತ್ತಿವೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು “ನಾನು ಜೆಡಿಎಸ್ ಬಿಡಲಿಲ್ಲ,
ದೇವೇಗೌಡರೇ ನನ್ನನ್ನು ಪಕ್ಷದಿಂದ ಹೊರಹಾಕಿದರು’ ಎಂಬ ಹೇಳಿಕೆ ಹಾಗೂ ಬಿಜೆಪಿ ನಾಯಕ ವಿ.ಶ್ರೀನಿವಾಸ ಪ್ರಸಾದ್ ಜತೆಗಿನ ರಹಸ್ಯ ಮಾತುಕತೆ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಒಂದೊಂದೇ “ಬಾಣ’ ಬಿಡಲು ಪ್ರಾರಂಭಿಸಿದ್ದಾರೆ. ಇದೆಲ್ಲದರ ಹಿಂದಿನ ಮರ್ಮ ಬೇರೆಯದೇ ಇದೆ. ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ನಾಯಕರು ಜೆಡಿಎಸ್ ವಿರುದ್ಧ ಮುಗಿಬಿದ್ದರೆ ಪ್ರತಿಯಾಗಿ ಜೆಡಿಎಸ್ ನಾಯಕರು ವಾಗ್ಧಾಳಿ ನಡೆಸುವುದು.
ಕಳೆದ ಒಂದು ವರ್ಷದ ವಿದ್ಯಮಾನ, ಕಾಂಗ್ರೆಸ್ ಶಾಸಕರು ನಡೆಸಿದ ಹೈಡ್ರಾಮಾ ಮತ್ತಿತರ ವಿಚಾರ ಕೆದಕಿ ಕಾಂಗ್ರೆಸ್‌ನ ತಪ್ಪು ಎತ್ತಿ ತೋರಿಸುವುದು. ಇದರಿಂದ ಜೆಡಿಎಸ್‌ಅನ್ನು “ತಪ್ಪಿತಸ್ಥ’ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನಕ್ಕೆ ಬ್ರೇಕ್ ಹಾಕುವುದು ಮೂಲ ಉದ್ದೇಶ ಎಂದು ಹೇಳಲಾಗಿದೆ. ಜತೆಗೆ, ಲೋಕಸಭೆ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತರೆ ಸಿದ್ದರಾಮಯ್ಯ ಇಟ್ಟಿರುವ ಗುರಿಯ ಮಾಹಿತಿ ಪಡೆದಿರುವ ಎಚ್.ವಿಶ್ವನಾಥ ಈಗಲೇ ಗುಟುರು ಹಾಕುತ್ತಿದ್ದಾರೆ. ಮೈಸೂರಿನಲ್ಲಿ ಜಿ.ಟಿ.ದೇವೇಗೌಡರ ನಂತರ ವಿಶ್ವನಾಥ್ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿ ತೊಡೆ ತಟ್ಟಿದಂತಾಗಿದೆ.
ಜೆಡಿಎಸ್ ವರಿಷ್ಠರ ಮೌನ: ಇಷ್ಟೆಲ್ಲಾ ವಿದ್ಯಮಾನಗಳು ನಡೆಯುತ್ತಿದ್ದರೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಮೌನ ವಹಿಸುವ ಮೂಲಕ ತಮಗೇನೂ ಗೊತ್ತಿಲ್ಲ, ತಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಇದ್ದಾರೆ. ಇದು ಕೂಡ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯ-ವಿಶ್ವನಾಥ್ ನಡುವಿನ ಸಮರಕ್ಕೆ ಕಾಂಗ್ರೆಸ್-ಬಿಜೆಪಿ ನಾಯಕರಿಂದ ಯಾವೆಲ್ಲಾ ಪ್ರತಿಕ್ರಿಯೆಗಳು ಬರುತ್ತೋ ನೋಡಿಕೊಂಡು ಆ ನಂತರ “ರಂಗಪ್ರವೇಶ’ ಮಾಡಲು ದೇವೇಗೌಡರು ಹಾಗೂ ಕುಮಾರಸ್ವಾಮಿ ಕಾದು ನೋಡುತ್ತಿದ್ದಾರೆಂದು ಹೇಳಲಾಗಿದೆ.
ಹೊರದಬ್ಬಿಸಿಕೊಂಡ “ಕೋಪ’: ಸಿದ್ದರಾಮಯ್ಯ ಅವರನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಿದಾಗ ಕಾಂಗ್ರೆಸ್‌ಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಎಚ್.ವಿಶ್ವನಾಥ್ ಒಬ್ಬರು. ಅವರಿಗೆ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಸೇರಿದ ಹಾಗೂ ಆ ಸಂದರ್ಭದಲ್ಲಿ ನಡೆದ ಎಲ್ಲ ರೀತಿಯ ಗುಪ್ತ ಸಭೆ, ನಾಯಕರ ನಡುವಿನ ಚರ್ಚೆಗಳ ಮಾಹಿತಿಯಿದೆ.
ಸಿದ್ದರಾಮಯ್ಯ ಅವರು ಕಾಂಗ್ರೆಸ್‌ಗೆ ಬಂದ ನಂತರ ಎಸ್.ಎಂ.ಕೃಷ್ಣ, ಶ್ರೀನಿವಾಸ ಪ್ರಸಾದ್, ಎಚ್.ವಿಶ್ವನಾಥ್ ಸೇರಿ ಹಲವು ಪ್ರಮುಖ ನಾಯಕರು ಪಕ್ಷ ತೊರೆದರು. ಅದರಲ್ಲೂ ಎಚ್.ವಿಶ್ವನಾಥ್ ಹಾಗೂ ವಿ.ಶ್ರೀನಿವಾಸ ಪ್ರಸಾದ್ ಅವರು ನಾವು ಪಕ್ಷ ಬಿಡಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷನಾಗಿ ಸಮನ್ವಯ ಸಮಿತಿಗೆ ಸೇರ್ಪಡೆಯಾಗಲು ಸಿದ್ದರಾಮಯ್ಯ ಅಡ್ಡಿಯಾಗಿದ್ದಾರೆಂಬ ಕೋಪವೂ ವಿಶ್ವನಾಥ್ ಅವರಿಗಿದೆ.
* ಎಸ್. ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.