ಉಣಕಲ್ಲ ನಾಲಾ ತೀರದ ಒತ್ತುವರಿ ; ಧೂಳು ತಿನ್ನುತ್ತಿರುವ ಜಂಟಿ ಸರ್ವೇ ವರದಿ
ಮತ್ತೆ ಮಳೆ ಅವಾಂತರದ ಭೀತಿಯಲ್ಲಿ ಜನಜೀವನ
Team Udayavani, Jun 4, 2020, 6:37 AM IST
ಹುಬ್ಬಳ್ಳಿ: ಉಣಕಲ್ಲ ನಾಲಾ ಒತ್ತುವರಿ ಹಾಗೂ ಮಾರ್ಗ ಬದಲಾವಣೆಯಿಂದ ಕಳೆದ ವರ್ಷದ ಮಹಾಮಳೆ ದೊಡ್ಡ ಅನಾಹುತವನ್ನೇ ಸೃಷ್ಟಿಸಿತ್ತು. ಹೀಗಾಗಿ ನಾಲಾ ಒತ್ತುವರಿ ಸಮೀಕ್ಷೆ ನಡೆಸಿ ಆರು ತಿಂಗಳಲ್ಲಿ ತೆರವುಗೊಳಿಸುವ ಗಡುವು ಹಾಕಿಕೊಂಡಿದ್ದರು. ವಿಪರ್ಯಾಸವೆಂದರೆ ಪಾಲಿಕೆ ಹಾಗೂ ಭೂ ಮಾಪನ ಇಲಾಖೆ ಜಂಟಿ ಸರ್ವೇ ವರದಿ ಧೂಳು ತಿನ್ನುವಂತಾಗಿದ್ದು, ಈ ವರ್ಷವೂ ಉತ್ತಮ ಮಳೆಯಾಗುವ ಸಾಧ್ಯತೆ ಹೆಚ್ಚಿರುವ ಕಾರಣ ನಾಲಾ ಅಕ್ಕಪಕ್ಕದ ಜನರಲ್ಲಿ ಆತಂಕ ಶುರುವಾಗಿದೆ.
ಉಣಕಲ್ಲ ಕೆರೆ ಕೋಡಿ ಹರಿದು ನಾಲಾಗೆ ನೀರು ಹರಿದಿದ್ದರೂ ಹಿಂದೆಂದೂ ಇಂತಹ ಅನಾಹುತ ಸಂಭವಿಸಿರಲಿಲ್ಲ. ಆದರೆ 2019ರ ಆಗಸ್ಟ್ ತಿಂಗಳಲ್ಲಿ ಸುರಿದ ಮಹಾಮಳೆ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಸಾವಿರಾರು ಮನೆಗಳಲ್ಲಿ ನೀರು ತುಂಬಿತ್ತು. ಪ್ರಮುಖ ನಾಲ್ಕು ಸಂಪರ್ಕ ಸೇತುವೆಗಳು ಕೊಚ್ಚಿ ಹೋಗಿದ್ದವು. ನಾಲಾ ಒತ್ತುವರಿ ಮಾಡಿ ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಿಸಿ ನಾಲಾ ಮಾರ್ಗವನ್ನೇ ಬದಲಿಸಿದ ಪರಿಣಾಮ ಅಕ್ಕಪಕ್ಕದ ಬಹುತೇಕ ಬಡಾವಣೆಯ ಜನರು ಶಿಕ್ಷೆ ಅನುಭವಿಸುವಂತಾಗಿತ್ತು. ಜನಪ್ರತಿನಿಧಿಗಳು ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಒತ್ತುವರಿ ತೆರವಿಗಾಗಿ ಸರ್ವೇಗೆ ಆದೇಶಿಸಿದ್ದರು. ವರದಿ ತಯಾರಿಸಿ ಆರು ತಿಂಗಳಲ್ಲಿ ಒತ್ತುವರಿ ತೆರವುಗೊಳಿಸುವ ಭರವಸೆಯನ್ನು ಜನಪ್ರತಿನಿಧಿಗಳು ನೀಡಿದ್ದರು.
ಜನಪ್ರತಿನಿಧಿಗಳ ಸೂಚನೆ ಮೇರೆಗೆ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಅವರು ಭೂಮಾಪನ ಇಲಾಖೆಯಿಂದ ಉಣಕಲ್ಲ ನಾಲಾದ 8.5 ಕಿಮೀ ಸರ್ವೇ ಮಾಡಿಸಿದ್ದರು. ಹೂಗಾರ ಪ್ಲಾಟ್, ಶಕ್ತಿ ಕಾಲೋನಿ, ಲಿಂಗರಾಜ ನಗರ, ಪಾಂಡುರಂಗ ಕಾಲೋನಿ, ಚನ್ನಪೇಟೆ, ದೋಬಿಘಾಟ್ ಭಾಗ ಸೇರಿದಂತೆ ಇನ್ನಿತರೆಡೆ 153 ಕಡೆಗಳಲ್ಲಿ ಒತ್ತುವರಿಯಾಗಿರುವುದನ್ನು ಪತ್ತೆ ಹಚ್ಚಿದ್ದರು. ನಾಲಾ ಒತ್ತವರಿ ಮಾಡಿ ವಾಸದ ಮನೆ, ವಾಣಿಜ್ಯ ಕಟ್ಟಡ, ಮಳಿಗೆ ನಿರ್ಮಿಸಿ ಬಾಡಿಗೆ ನೀಡಲಾಗಿದೆ. ಕೆಲ ಬಿಲ್ಡ್‌ರ್ಸ್‌ಗಳು ಕಟ್ಟಡ ನಿರ್ಮಾಣ ಮಾಡಿ ನಾಲಾ ಮಾರ್ಗವನ್ನು ಬದಲಿಸಿರುವ ಕುರಿತು ವರದಿಯಲ್ಲಿ ಉಲ್ಲೇಖೀಸಲಾಗಿತ್ತು.
ಪುನರ್ವಸತಿ ನೆಪ!
ಆರು ತಿಂಗಳಲ್ಲಿ ಒತ್ತುವರಿ ತೆರವುಗೊಳಿಸುವುದಾಗಿ ಜಿಲ್ಲಾ ಉಸ್ತುವಾರಿ ಜಗದೀಶ ಶೆಟ್ಟರ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಲ್ಲಿನ ಜನರಿಗೆ ಭರವಸೆ ನೀಡಿದ್ದರು. ಅಧಿಕಾರಿಗಳೂ ಖಡಕ್ ಸೂಚನೆ ಕೊಟ್ಟಿದ್ದರು. ಆದರೆ ಸರ್ವೇ ಕಾರ್ಯ ಮುಗಿದು ವರದಿ ಸಿದ್ಧವಾಗುತ್ತಿದ್ದಂತೆ ಕೆಲ ಜನಪ್ರತಿನಿಧಿಗಳು ತೆರವಿಗೆ ಪರೋಕ್ಷ ಆಕ್ಷೇಪ ವ್ಯಕ್ತಪಡಿಸಿದರು. ಬಹುತೇಕರು ಬಡವರಾಗಿದ್ದು, ಅವರಿಗೆ ಪುನರ್ವಸತಿ ಕಲ್ಪಿಸಿದ ನಂತರ ಒತ್ತುವರಿ ತೆರವುಗಳಿಸುವ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಬೇಡ ಎಂದು ಸ್ಥಳೀಯ ಜನಪ್ರತಿನಿಧಿಗಳು ಒಕ್ಕೊರಲಿನಿಂದ ಸೂಚನೆ ನೀಡಿದ್ದಕ್ಕೆ ಪಾಲಿಕೆ ಕೈಚೆಲ್ಲಿತು. 2019 ಅ. 26ರಂದು ಆರಂಭವಾಗಿದ್ದ ಸರ್ವೇ ಕಾರ್ಯವನ್ನು ಎರಡೇ ದಿನಕ್ಕೆ ಏಕಾಏಕಿ ಸ್ಥಗಿತಗೊಳಿಸಲಾಗಿತ್ತು. ಕಾಣದ ಕೈಗಳು ಕೆಲಸ ಮಾಡಿದ್ದು, ಜನಪ್ರತಿನಿಧಿಗಳ ಮೂಲಕ ಅಧಿಕಾರಿಗಳ ಮೇಲೆ ಒತ್ತಡ ಹಾಕಿಸಿ ಸರ್ವೇ ಕಾರ್ಯ ನಿಲ್ಲಿಸಿದ್ದಾರೆ ಎನ್ನುವ ಮಾತುಗಳು ದಟ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಉಳಿದ ಕಾಲುವೆ ಸರ್ವೇ ಕಾರ್ಯವನ್ನು ಒಂದೂವರೆ ತಿಂಗಳಲ್ಲಿ ಪೂರ್ಣಗೊಳಿಸಿದ್ದರು. ಬಡವರ ಹೆಸರಲ್ಲಿ ಕೆಲ ಸ್ಥಿತಿವಂತರು ತಮ್ಮ ಕಟ್ಟಡಗಳನ್ನು ಉಳಿಸಿಕೊಳ್ಳಲು ಈ ತಂತ್ರ ಅನುಸರಿಸಿದ್ದಾರೆ ಎನ್ನುವ ಮಾತುಗಳು ಅಲ್ಲಿನ ಜನರಿಂದ ಕೇಳಿ ಬರುತ್ತಿವೆ.
ನಾಲಾ ಅಳತೆ ಎಷ್ಟಿದೆ ಗೊತ್ತಿಲ್ಲ!
ಬೆಂಗಳೂರಿನ ರಾಜಕಾಲುವೆ ಇಂತಿಷ್ಟು ಅಗಲ ಇರಬೇಕು ಎಂದು ರಾಷ್ಟ್ರೀಯ ಹಸಿರು ಪೀಠ ಸ್ಪಷ್ಟಪಡಿಸಿದೆ. ಆದರೆ ಇಲ್ಲಿನ ಯಾವುದೇ ನಾಲಾದ ಅಳತೆ ಬಗ್ಗೆ ಸ್ಪಷ್ಟತೆಯಿಲ್ಲ. ಇದ್ದರೂ ಹಿಂದಿನ
ಅಧಿಕಾರಿಗಳ ಕರಾಮತ್ತಿನಿಂದ ಆ ಕಡತಗಳು ಕಳೆದು ಹೋಗಿದ್ದರೂ ಅಚ್ಚರಿ ಪಡಬೇಕಾಗಿಲ್ಲ. 1975ರಿಂದ 1990ರವರೆಗೆ ನಾಲಾ ಅಕ್ಕಪಕ್ಕದಲ್ಲಿ ಒಂದು ವರ್ಷದ ಅವಧಿಗೆ ಪಾಲಿಕೆಯಿಂದಲೇ ಲೀಸ್ ನೀಡಲಾಗಿದೆ. 2012ರ ವರೆಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಪ್ರತಿವರ್ಷ ನವೀಕರಣ ಮಾಡಿಕೊಂಡೇ ಬಂದಿದ್ದಾರೆ. ಇನ್ನೂ ನಾಲಾ ಅಕ್ಕಪಕ್ಕದ ಸ್ಲಂಗಳಲ್ಲಿ ನಿರ್ಮಾಣವಾಗಿರುವ ಮನೆಗಳಿಗೆ ಸ್ಲಂಬೋರ್ಡ್‌ನಿಂದ ಹಕ್ಕುಪತ್ರ ನೀಡಲಾಗಿದೆ. ಪಾಲಿಕೆಯಿಂದ ಕಟ್ಟಡ ನಿರ್ಮಿಸಲು ನಿರಾಪೇಕ್ಷಣ ಪತ್ರ ನೀಡಲಾಗಿದೆ. ಈ ಎಲ್ಲಾ ಬೆಳವಣಿಗೆ ನೋಡಿದರೆ ಪಾಲಿಕೆ ಹಿಂದಿನ ಅಧಿಕಾರಿಗಳು, ಸಿಬ್ಬಂದಿ ಬಹುತೇಕ ನಾಲಾ ನುಂಗಿರುವುದು ಸ್ಪಷ್ಟ.
ನಿವಾಸಿಗಳಲ್ಲಿ ಹೆಚ್ಚಾದ ಆತಂಕ
ಈ ವರ್ಷವೂ ಉತ್ತಮ ಮಳೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಇನ್ನೂ ಮಳೆಗಾಲ ಆರಂಭದಲ್ಲೇ ಚಂಡಮಾರುತ, ಅಡ್ಡ ಮಳೆಗಳು ಜನರಲ್ಲಿ ಆತಂಕ ಮೂಡಿಸಿವೆ. ಕಳೆದ ವರ್ಷ ಸುರಿದ ಮಳೆಯಿಂದ ಉಣಕಲ್ಲ ಕೆರೆಯಲ್ಲಿ ನೀರಿನ ಪ್ರಮಾಣ ಕೂಡ ಹೆಚ್ಚಿದೆ. ಹೀಗಾಗಿ ಶೆಟ್ಟರ ಕಾಲೋನಿ, ದೇವಿ ನಗರ, ಅರ್ಜುನ ನಗರ, ಶಿವಪುರ ಕಾಲೋನಿ, ಸಿದ್ಧಲಿಂಗೇಶ್ವರ ನಗರ, ಹನುಮಂತ ನಗರ, ಚನ್ನಪೇಟ, ಎಸ್.ಎಂ. ಕೃಷ್ಣ ಸೇರಿದಂತೆ ನಾಲಾ ಅಕ್ಕಪಕ್ಕದಲ್ಲಿರುವ ಬಡಾವಣೆ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.
ನಾಲಾ ಒತ್ತುವರಿ ತೆರವುಗೊಳಿಸುವುದಾಗಿ 10-12 ವರ್ಷಗಳಿಂದ ಹೇಳುತ್ತಲೇ ಬರುತ್ತಿದ್ದಾರೆ. ಕಳೆದ ಬಾರಿಯ ಅವಘಡದಿಂದ ನಾಲಾ ಒತ್ತುವರಿ ಸರ್ವೇ ಮಾಡಿಸಿದ್ದಾರೆ. ಯಾರೋ ಮಾಡಿರುವ ತಪ್ಪಿಗೆ ಸುತ್ತಲಿನ ಜನರು ಶಿಕ್ಷೆ ಅನುಭವಿಸುವಂತಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ಮಳೆ ಸುರಿದರೆ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು.
ವಿನಾಯಕ ಕುಬಸದ, ದೇವಿ ನಗರ
ನಾಲಾ ಅಕ್ಕಪಕ್ಕದಲ್ಲಿರುವ ಬಹುತೇಕರು ಬಡವರು. ಅವರಿಗೆ ಪುನರ್ವಸತಿ ಕಲ್ಪಿಸಿದ ನಂತರ ತೆರವುಗೊಳಿಸಲು ಸ್ಥಳೀಯ ಜನಪ್ರತಿನಿಧಿಗಳು ನಿರ್ಧರಿಸಿದ್ದಾರೆ. ಕಳೆದ ವರ್ಷದ ಅವಘಡ ಮರುಕಳಿಸದಂತೆ ನಾಲಾ ಹೂಳೆತ್ತಲು ಮೊದಲ ಆದ್ಯತೆ ನೀಡಲಾಗಿದೆ.
ಡಾ| ಸುರೇಶ ಇಟ್ನಾಳ, ಆಯುಕ್ತ, ಮಹಾನಗರ ಪಾಲಿಕೆ
ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.