ಕಾಗಣೇಕರಗೆ ಪ್ರಶಸ್ತಿ ಬಂದಿದ್ದು ಗೊತ್ತೇ ಇರಲಿಲ್ಲ!
Team Udayavani, Oct 29, 2019, 3:07 AM IST
ಬೆಳಗಾವಿ: ಅರ್ಧ ತೋಳಿನ ಅಂಗಿ, ಚಡ್ಡಿ, ತಲೆ ಮೇಲೊಂದು ಗಾಂಧಿ ಟೊಪ್ಪಿಗೆ, ಬಿಳ್ಳಿ ಗಡ್ಡ, ಬಗಲಲ್ಲಿ ಖಾದಿ ಕೈ ಚೀಲ ಇಟ್ಟುಕೊಂಡು ಸಮಾಜ ಹಾಗೂ ಪರಿಸರ ಸೇವೆ ಎಂದು ತಿರುಗುವ ಗಾಂಧಿವಾದಿ ಶಿವಾಜಿ ಕಾಗಣೀಕರ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದೇ ಗೊತ್ತಿರಲಿಲ್ಲ!
ಹೌದು, ರಾಜ್ಯೋತ್ಸವ ಪ್ರಶಸ್ತಿಗಾಗಿ ದುಂಬಾಲು ಬೀಳುವ ಕಾಲದಲ್ಲಿ ಕಾಯಕವೇ ಕೈಲಾಸ ಎಂದು ಬದುಕುತ್ತಿರುವ ಶಿವಾಜಿ ಕಾಗಣೀಕರ ಬಳಿ ಸಂಪರ್ಕಕ್ಕೆ ಫೋನ್ ಇಲ್ಲ. ಜಿಲ್ಲಾಧಿಕಾರಿ ಇಲ್ಲವೇ ಜಿಪಂ ಕಚೇರಿಯಲ್ಲಿ ವಾರಕ್ಕೊಮ್ಮೆ ಬಡ ಜನರ ಕೆಲಸಕ್ಕಾಗಿ ಮನವಿ ಪತ್ರ ಹಿಡಿದುಕೊಂಡು ಬರುತ್ತಾರೆ. ಆಗ ಮಾತ್ರ ಇವರ ಭೇಟಿ ಸಾಧ್ಯ. ಇಂಥ ಪ್ರಶಸ್ತಿ ಇದೆ ಅಂತಲೂ ಇವರಿಗೆ ತಿಳಿದಿಲ್ಲ. ಅವರೊಂದಿಗಿರುವ ವ್ಯಕ್ತಿಯ ಗಮನಕ್ಕೆ ತಂದು ವಿಷಯ ಮುಟ್ಟಿಸುವ ಕಾರ್ಯ “ಉದಯವಾಣಿ’ ಮಾಡಿದೆ.
ಸರ್ಕಾರದ ಪ್ರಶಸ್ತಿ ನನಗೆ ಬೇಡವೇ ಬೇಡ ಎಂದು ಹೇಳುವ ಶಿವಾಜಿ, ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಳ್ಳುತ್ತಾರೆ. ಈ ಮೊದಲು ಒಲಿದು ಬಂದ ದೇವರಾಜ ಅರಸು ಪ್ರಶಸ್ತಿಯನ್ನೂ ನಿರಾಕರಿಸಲು ಮುಂದಾಗಿದ್ದರು. ಆದರೆ ಕೆಲವರು ಮನವೊಲಿಸಿ ಪ್ರಶಸ್ತಿ ಮೌಲ್ಯ ಹೆಚ್ಚಾಗುತ್ತದೆ ಎಂಬ ಮನವರಿಕೆ ಮಾಡಿಕೊಟ್ಟಾಗಲೇ ಒಪ್ಪಿಕೊಂಡರು.
ಬೆಳಗಾವಿ ತಾಲೂಕಿನ ಕಡೋಲಿ ಶಿವಾಜಿಯ ಜನ್ಮಸ್ಥಳ. ಸಮಾಜ ಸೇವೆಗಾಗಿ ಕಟ್ಟಣಬಾವಿ ಎಂಬ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ. 1949, ಮಾ1ರಂದು ಜನಿಸಿದ್ದಾರೆ. ತಾಯಿ ಗಂಗವ್ವ, ತಂದೆ ಛತ್ರೆಪ್ಪ. ಮನೆಮಾತು ಕನ್ನಡವಾದರೂ ಅಲ್ಲಿ ಕನ್ನಡ ಶಾಲೆಗಳಿಲ್ಲದ್ದರಿಂದ ಸಮೀಪದ ಕಡೋಲಿ ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮರಾಠಿ ಮಾಧ್ಯಮದಲ್ಲಿ ಕಲಿತಿದ್ದಾರೆ.
ಸಮಾಜ, ಪರಿಸರದ ಏಳ್ಗೆಯ ಕನಸು: ಅನೇಕ ಸಾಮಾಜಿಕ ಹೋರಾಟಗಾರರ ಪ್ರಭಾವದಿಂದ ಸಮಾಜ ಸೇವೆಗೆ ಧುಮುಕಿ ಶಿವಾಜಿ ಅವಿವಾಹಿತರು. ಸರ್ಕಾರಿ ಬಸ್‌ನಲ್ಲಿಯೇ ಊರೂರಿಗೆ ಪ್ರಯಾಣ ಬೆಳೆಸುತ್ತಾರೆ. ಗಾಂ ಧಿವಾದಿ, ಮಾಜಿ ಶಾಸಕ ಸದಾಶಿವರಾವ ಭೋಸಲೆ ನೇತೃತ್ವದಲ್ಲಿ 1972ರಲ್ಲಿ ಅಖೀಲ ಭಾರತ ತರುಣ ಕ್ರಾಂತಿ ಶಿಬಿರ ನಡೆದಿತ್ತು. ಇದರಲ್ಲಿ ಭಾಗವಹಿಸಿದ ಬಳಿಕ ಇವರ ದಿಕ್ಕು ಬದಲಾಯಿತು.
ಶಿಬಿರ ಮುಗಿದ ಮೇಲೆ ಕಾಲೇಜಿಗೂ ಹೋಗದೇ ಮನೆಯತ್ತಲೂ ತಿರುಗಿ ನೋಡದೇ ನಿಂಗ್ಯಾನಟ್ಟಿ ಎಂಬ ಊರಿಗೆ ಬಂದು ಪಾಳು ದೇವಸ್ಥಾನದಲ್ಲಿ ಉಳಿದುಕೊಂಡರು. 1968-69ರಲ್ಲಿ ಸರ್ವೋದಯ ಗೆಳೆಯರೊಂದಿಗೆ ಸೇರಿ ಜನ ಜಾಗರಣ ಸಂಸ್ಥೆ ಹುಟ್ಟು ಹಾಕಿ ರಾತ್ರಿ ಶಾಲೆಗಳನ್ನು ನಡೆಸತೊಡಗಿದರು. ಸೈಕಲ್ ಮೇಲೆ ಸುತ್ತಾಡಿ, ಕಾಲ್ನಡಿಗೆ ಮೂಲಕ ಶೈಕ್ಷಣಿಕ ಜಾಗೃತಿ ಮೂಡಿಸಿದರು.
1978ರಲ್ಲಿ ಬೆಳಗಾವಿ ಮತ್ತು ಹುಕ್ಕೇರಿಯಲ್ಲಿ ಮಹಿಳಾ ಬಚತ್ ಘಟ್ (ಮಹಿಳಾ ಉಳಿತಾಯ ಸಂಘ ) ಆರಂಭಿಸಿ ಮಹಿಳೆಯರಲ್ಲಿ ಸಣ್ಣ ಉಳಿತಾಯಕ್ಕೆ ಉತ್ತೇಜನ ನೀಡಿದರು. 2009ರಲ್ಲಿ ಜೀವನ ಶಿಕ್ಷಣ ಪ್ರತಿಷ್ಠಾನ ಆರಂಭಿಸಿ 14 ಶಿಕ್ಷಣ ಪಾಲನಾ ಕೇಂದ್ರ ಆರಂಭಿಸಿದ್ದಾರೆ. ದೇವರಾಜ ಅರಸು ಪ್ರಶಸ್ತಿಯ 5 ಲಕ್ಷ ಹಣವನ್ನು ತಾಲೂಕಿನ ಬಂಬರಗಾ, ಕಡೋಲಿ,, ದೇವಗಿರಿ ಬೆಕ್ಕಿನಕೆರೆ, ನಿಂಗ್ಯಾನಟ್ಟಿ, ಗೋರಾನಟ್ಟಿ ಗ್ರಾಮಗಳಲ್ಲಿ ನಡೆಸುತ್ತಿರುವ ನಾಲ್ಕು ತೊಟ್ಟಿಲ ಮನೆ ಹಾಗೂ ನಾಲ್ಕು ಕಲಿಕಾ ಕೇಂದ್ರಕ್ಕೆ ವಿನಿಯೋಗಿಸಿದ್ದಾರೆ.
ಗೋಬರ್ ಗ್ಯಾಸ್ ಕ್ರಾಂತಿ: ಗ್ರಾಮ ಸ್ವರಾಜ್‌ದ ಕನಸು ಇಟ್ಟುಕೊಂಡಿರುವ ಶಿವಾಜಿ ಕಾಗಣೀಕರ ಗೋಬರ್ ಗ್ಯಾಸ್ ಅಳವಡಿಕೆಯಲ್ಲಿ ಕ್ರಾಂತಿ ಮಾಡಿದ್ದಾರೆ. ಬೆಳಗಾವಿ, ಹುಕ್ಕೇರಿ ಹಾಗೂ ಖಾನಾಪುರ ತಾಲೂಕುಗಳನ್ನು ಆಯ್ಕೆ ಮಾಡಿಕೊಂಡು ದೀನ ಬಂಧು ಎಂಬ ಎನ್‌ಜಿಒ ಜತೆ ಒಪ್ಪಂದ ಮಾಡಿ 30 ಸಾವಿರಕ್ಕೂ ಹೆಚ್ಚು ಗೋಬರ್ ಗ್ಯಾಸ್ ಘಟಕಗಳನ್ನು ಪ್ರತಿ ಮನೆಗೂ ಅಳವಡಿಸಿದ್ದಾರೆ. ಮೇದಾ ಪಾಟ್ಕರ್ ಅವರೊಂದಿಗೆ ಕಾರ್ಯ ಮಾಡಿದ ಪುಣೆಯ ಅಕ್ಷರನಂದನ್ ಸಂಸ್ಥೆಯ ಶುಭದಾ ಜೋಶಿ ಸಲಹೆ ಮೇರೆಗೆ ಶಿವಾಜಿ ಕಾಗಣಿಕರ ನೀರು ನಿಲ್ಲಿಸಿ ನೀರು ಇಂಗಿಸುವ ಮಾಹಿತಿ ಪಡೆದುಕೊಂಡಿದ್ದಾರೆ. ಈ ನಾಲ್ಕು ಹಳ್ಳಿಗಳಲ್ಲಿ ಐದಾರು ಕೆರೆ, ಅನೇಕ ಒಡ್ಡುಗಳನ್ನು ನಿರ್ಮಿಸಿ ಜಲಸಂಗ್ರಹಿಸಿ ಕ್ರಾಂತಿ ಮಾಡಿದ್ದಾರೆ.
ಈ ಪ್ರಶಸ್ತಿಯಿಂದ ನನಗೆ ಆನಂದ ಆಗಿಲ್ಲ. ಇಂದು ಅತಿವೃಷ್ಟಿಯಿಂದಾಗಿ ರಾಜ್ಯದ ಜನರ ಜೀವನ ಅಸ್ತವ್ಯಸ್ತವಾಗಿದೆ. ಇನ್ನೊಂದೆಡೆ ರೈತರು ಸತ್ತರೆ ಸಾಕು ಎನ್ನುವಂಥ ಸ್ಥಿತಿಯಲ್ಲಿದ್ದಾರೆ. ರೈತರ ಆತ್ಮಹತ್ಯೆಗಳೂ ಆಗುತ್ತಿವೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಹಾರ ಹುಡುಕುತ್ತಿಲ್ಲ. ಜಾಗತಿಕ ತಾಪಮಾನದಿಂದಲೂ ಜಗತ್ತು ನಲುಗಿದೆ. ಇದನ್ನು ತಡೆಯುವವರು ಯಾರು? ಪ್ರವಾಹದಿಂದ ನಲುಗಿದ ಜನತೆ ಇನ್ನು ಮುಂದೆ ಮೇಲೇಳುವುದೇ ಕಷ್ಟಕರ. ಹೀಗಾಗಿ ಸರ್ಕಾರಗಳು ಎಚ್ಚರ ವಹಿಸಬೇಕಾಗಿದೆ. ಪ್ರಶಸ್ತಿ ಸಿಕ್ಕಿದ್ದು ಖುಷಿ ಇಲ್ಲ. ಆದರೆ, ಪ್ರಶಸ್ತಿ ಸ್ವೀಕರಿಸುವ ವೇಳೆ ಅಲ್ಲಿಗೆ ಹೋಗಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತೇನೆ.
-ಶಿವಾಜಿ ಕಾಗಣೀಕರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.