Kaikamba: ಹದಗೆಟ್ಟ ಅರಮನೆ ಬಂಡಿ ರಸ್ತೆ
ಹೊಂಡಕ್ಕೆ ಬಿದ್ದು ಗಾಯ ಗೊಂಡ ಹಲವು ದ್ವಿಚಕ್ರ ವಾಹನ ಸವಾರರು
Team Udayavani, Aug 19, 2024, 3:50 PM IST
ಕೈಕಂಬ: ಎಡಪದವು ಗ್ರಾಮ ಪಂಚಾಯತ್ ನ ಪೂಪಾಡಿಕಲ್ಲು ಮತ್ತು ಬಾರ್ದಿಲ ದೇವಸ್ಥಾನ ಹಾಗೂ ಮಸೀದಿಗೆ ಕುಪ್ಪೆಪದವಿನಿಂದ ಕಾಪಿಕಾಡು ಮೂಲಕ ಸಂಪರ್ಕ ಕಲ್ಪಿಸುವ ಅರಮನೆ ಬಂಡಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ರಸ್ತೆಯಲ್ಲಿ ದೊಡ್ಡದೊಡ್ಡ ಹೊಂಡಗಳು ಬಿದ್ದು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಹಲವು ಬಾರಿ ದ್ವಿಚಕ್ರ ವಾಹನ ಸವಾರರು ಇಲ್ಲಿ ಬಿದ್ದು ಗಾಯಗೊಂಡಿದ್ದಾರೆ.
ಕೆಲವು ವರ್ಷಗಳ ಹಿಂದೆ ಈ ರಸ್ತೆಯಲ್ಲಿ ಬಿದ್ದ ದೊಡ್ಡಹೊಂಡಗಳನ್ನು ತೇಪೆ ಹಾಕಿ ಸರಿಪಡಿಸಲಾಗಿತ್ತು. ಆದರೆ ಮುಚ್ಚಿದ ಗುಂಡಿಗಳಿಂದ ಡಾಮರು ಕಿತ್ತು ಹೋಗಿ ಯಥಾಸ್ಥಿತಿಗೆ ಮರಳಿ ವಾಹನ ಸಂಚಾರ ದುಸ್ತರವಾಗಿದೆ. ಈ ಬಾರಿಯ ಮಳೆಗೆ ರಸ್ತೆಯಲ್ಲಿ ದೊಡ್ಡದೊಡ್ಡ ಹೊಂಡಗಳು ಬಿದ್ದು ಸಂಚಾರ ಮತ್ತಷ್ಟು ಕಷ್ಟಕರವಾಗಿದೆ.
ಇದು ಜಿಲ್ಲಾ ಪಂಚಾಯತ್ ರಸ್ತೆಯಾದರೂ ದಿನ ನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತಿದ್ದು ಈ ಗುಂಡಿಗೆ ಬಿದ್ದು ಅಪಘಾತವಾಗುತ್ತಿದ್ದು, ಸದಾ ಅಪಾಯ ಪರಿಸ್ಥಿತಿ ಎದುರಾಗಿದೆ. ರಸ್ತೆ ಬದಿಯಲ್ಲಿ ಜೆಜೆಎಂ ಪೈಪ್ ಲೈನ್ ಅಳವಡಿಕೆ ನಡೆದಿದ್ದು, ಮಳೆಗೆ ರಸ್ತೆ ಬದಿಯ ಮಣ್ಣು ಕೊಚ್ಚಿ ಹೋಗಿ ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ.
ಕಾಂಕ್ರೀಟ್ ರಸ್ತೆಯಾಗಲಿ
ಗ್ರಾಮೀಣ ರಸ್ತೆಯಾದ ಕಾರಣ ಮಳೆಗಾಲದಲ್ಲಿ ಮಳೆಯ ನೀರು ಸಮರ್ಪಕವಾಗಿ ಹರಿಯದೇ ರಸ್ತೆಯಲ್ಲಿ ನಿಂತು ರಸ್ತೆಯಲ್ಲಿ ದೊಡ್ಡ ಹೊಂಡ ಬೀಳಲು ಕಾರಣವಾಗಿದೆ. ಡಾಮರು ಹಾಕಿದರೂ ಮಳೆಗೆ ಅದು ನಿಲ್ಲದ ಕಾರಣ ರಸ್ತೆ ಕಾಂಕ್ರೀಟ್ ಮಾಡಬೇಕು. ಕನಿಷ್ಟ ಎಲ್ಲಿ ಹೆಚ್ಚು ಹೊಂಡಗಳು ಬಿದ್ದಿವೆ. ಈ ಭಾಗದ ರಸ್ತೆಯನ್ನು ಕಾಂಕ್ರೀಟ್ ಮಾಡಬೇಕು ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಈ ರಸ್ತೆಯ ದುರಸ್ತಿಗೆ ಅನುದಾನ ಮಂಜೂರು ಮಾಡುವಂತೆ ಶಾಸಕ ಡಾ| ಭರತ್ ಶೆಟ್ಟಿ ವೈ. ಅವರಿಗೆ ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಮನವಿ ಸಲ್ಲಿಸಲಾಗಿತ್ತು. ಆದರೆ ಚುನಾವಣೆ ಬಳಿಕ ಸರಕಾರ ಬದಲಾದ ಕಾರಣ ಅನುದಾನ ಬಂದಿಲ್ಲ. ಇದೀಗ ಮತ್ತೆ ಶಾಸಕರಲ್ಲಿ ಮನವಿ ಮಾಡಲಾಗಿದ್ದು, ಮಳೆಹಾನಿ ಯೋಜನೆಯಲ್ಲಿ ಶೀಘ್ರ ಅನುದಾನ ಒದಗಿಸಿಕೊಡುವ ಭರವಸೆಯನ್ನು ಶಾಸಕರು ನೀಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ಎಸ್. ಸಿ. ಮೋರ್ಚಾದ ಕಾರ್ಯದರ್ಶಿ ಗಣೇಶ್ ಪಾಕಜೆ ತಿಳಿಸಿದ್ದಾರೆ.
ಕಿರಿದಾದ ರಸ್ತೆ
ತಿರುವುಗಳಿಂದ ಕೂಡಿದ ಕಿರಿದಾದ ರಸ್ತೆಯಾಗಿದ್ದು, ಈ ರಸ್ತೆಯಲ್ಲಿ ಸಂಚಾರವೇ ಅಪಾಯಕಾರಿಯಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಇಲ್ಲಿನ ಕಾಪಿಕಾಡು ಅಯ್ಯಪ್ಪ ಭಕ್ತ ವೃಂದದ ಸದಸ್ಯರು ದೊಡ್ಡ ಗುಂಡಿಗಳಿಗೆ ಕೆಂಪು ಕಲ್ಲು ತುಂಬಿಸಿ ಗುಂಡಿ ಮುಚ್ಚುವ ಕಾರ್ಯ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.