Karnataka: ಕೇಂದ್ರ ಬರ ಅಧ್ಯಯನ ತಂಡ- ಬರ ಪರಿಸ್ಥಿತಿಯ ಪ್ರತ್ಯಕ್ಷ ದರ್ಶನ
Team Udayavani, Oct 6, 2023, 11:14 PM IST
ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು ಶುಕ್ರವಾರ ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಬೆಳೆ ಹಾನಿ, ಮಳೆ ಕೊರತೆಯ ವಾಸ್ತವ ಸ್ಥಿತಿಯ ನಡುವೆಯೇ ರೈತರ ಸಂಕಷ್ಟಗಳ ಪ್ರತ್ಯಕ್ಷ ದರ್ಶನವೂ ಎದುರಾಯಿತು. ಕೇಂದ್ರದ ಅಧಿಕಾರಿಗಳ ತಂಡ ಪಟಾಪಟ್ ಬರ ಅಧ್ಯಯನ ನಡೆಸಿದೆ. ಬೆಳೆ ಹಾನಿಯಾಗಿದ್ದರೂ ತಮ್ಮ ಕಷ್ಟವನ್ನು ಅಧಿಕಾರಿಗಳು ಕೇಳಲಿಲ್ಲ ಎಂಬ ಆಕ್ರೋಶವೂ ರೈತರಿಂದ ವ್ಯಕ್ತವಾಯಿತು.
6 ಗ್ರಾಮಗಳಿಗೆ ಭೇಟಿ, 6 ತಾಸು ಅವಲೋಕನ
ಚಿಕ್ಕಬಳ್ಳಾಪುರ: ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು ಜಿಲ್ಲೆಯ 6 ಗ್ರಾಮಗಳಿಗೆ ಮಾತ್ರ ತಮ್ಮ ಪರಿಶೀಲನೆಯನ್ನು ಸೀಮಿತಗೊಳಿಸಿದರು. 6 ಗ್ರಾಮಗಳ ಬರ ಅಧ್ಯಯನವನ್ನು ಕೇವಲ 6 ತಾಸಿನಲ್ಲಿ ಪೂರೈಸಿದ ಅಧಿಕಾರಿಗಳು ಅಲ್ಲಲ್ಲಿ ರೈತರೊಂದಿಗೆ ಸಂವಾದ ನಡೆಸುವ ಮೂಲಕ ರಾಗಿ, ತೊಗರಿ, ಮುಸುಕಿನ ಜೋಳ ಮತ್ತಿತರ ಬೆಳೆಗಳು ಮಳೆ ಕೊರತೆಯಿಂದ ಹಾನಿಯಾಗಿರುವುದನ್ನು ವೀಕ್ಷಿಸಿ ರೈತರಿಗೆ ಸಾಂತ್ವನ ಹೇಳಿದರು.
ಕೇಂದ್ರ ಜಲ ಆಯೋಗದ ನಿರ್ದೇಶಕ ವಿ.ಅಶೋಕ್ ಕುಮಾರ್ ನೇತೃತ್ವದ ತಂಡ ಶುಕ್ರವಾರ ಜಿಲ್ಲೆಗೆ ಆಗಮಿಸಿತು. ಮೊದಲಿಗೆ ಚಿಕ್ಕಬಳ್ಳಾಪುರ ತಾಲೂಕಿನ ಚೊಕ್ಕಹಳ್ಳಿ ಗ್ರಾಮದ ರೈತ ಮಂಜುನಾಥ್ ಅವರ ರಾಗಿ, ಶೇಂಗಾ ಬೆಳೆಗಳ ತಾಕಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಮಳೆ ಕೊರತೆಯಿಂದಾಗಿ 2 ಎಕ್ರೆ ಪ್ರದೇಶದ ಬೆಳೆಗಳು ಸಂಪೂರ್ಣ ಹಾನಿಯಾಗಿದೆ ಎಂದು ತಂಡದ ಗಮನಕ್ಕೆ ತಂದರು. ಬಳಿಕ ತಂಡವು ತಾಲೂಕಿನ ಬಂಡಮ್ಮನಹಳ್ಳಿ ಗ್ರಾಮದ ನಾಗಮ್ಮ ಮತ್ತು ದೊಡ್ಡೇಗಾನಹಳ್ಳಿ ನರಸಿಂಹಯ್ಯ ಅವರ ರಾಗಿ ತಾಕುಗಳಿಗೆ ಭೇಟಿ ನೀಡಿ ಅವರೊಂದಿಗೆ ಸಮಾಲೋಚಿಸಿದರು. ಚೀಗಟೇನಹಳ್ಳಿ ಗ್ರಾಮಕ್ಕೆ ಹೋಗಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಖಾಸಗಿ ಕೊಳವೆ ಬಾವಿ ಮಾಲಕನೊಂದಿಗೆ ಕೇಂದ್ರ ತಂಡ ಸಂವಾದ ನಡೆಸಿತು. ಬಳಿಕ ಗೌರಿಬಿದನೂರು ತಾಲೂಕಿನ ಗಂಗಸಂದ್ರ, ಜಕ್ಕೇನಹಳ್ಳಿ, ಕಡಬೂರು, ಕೆಂಗೇನಹಳ್ಳಿ ಗ್ರಾಮಗಳಲ್ಲಿ ರಾಗಿ, ಮುಸುಕಿನ ಜೋಳದ ತಾಕುಗಳಿಗೆ ಭೇಟಿ ನೀಡಿತು. ಜಿಲ್ಲೆಯಲ್ಲಿ ಸತತ 6 ತಾಸು ಬರ ಅಧ್ಯಯನ ನಡೆಸಿದ ತಂಡ ಬಳಿಕ ತುಮಕೂರು ಜಿಲ್ಲೆಯತ್ತ ಪ್ರಯಾಣ ಬೆಳೆಸಿತು.
ಸಕಾಲಕ್ಕೆ ವಾಸ್ತವ ವರದಿಸಲ್ಲಿಕೆ: ಮೋತಿರಾಂ ಸಾಹು
ಕೊಪ್ಪಳ: ರೈತರ ಜಮೀನುಗಳಿಗೆ ಭೇಟಿ ನೀಡಿ ಅವರ ಸಮಸ್ಯೆ ಆಲಿಸುವ ಜತೆಗೆ ಬರದ ಪರಿಸ್ಥಿತಿ ಅವಲೋಕಿಸಿದ್ದೇವೆ. ಬೆಳೆ ಹಾನಿ ಕುರಿತು ರೈತರಿಂದಲೇ ಮಾಹಿತಿ ಪಡೆಯುತ್ತಿದ್ದೇವೆ. ವಾಸ್ತವ ಸ್ಥಿತಿ ಅವಲೋಕಿಸಿ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಕಾಲದಲ್ಲಿಯೇ ಸಲ್ಲಿಸಲಾಗುವುದು ಎಂದು ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಸಹಾಯಕ ಆಯುಕ್ತ ಮೋತಿರಾಂ ಸಾಹು ಹೇಳಿದರು.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಬರ ಅಧ್ಯಯನ ನಡೆಸಿದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯಾದ್ಯಂತ ಕೇಂದ್ರದ ವಿವಿಧ ತಂಡಗಳು ಬರ ಅಧ್ಯಯನ ಕಾರ್ಯದಲ್ಲಿ ತೊಡಗಿವೆ. ಸಮಗ್ರ ಮಾಹಿತಿ ಸಂಗ್ರಹಿಸಿ ರಾಜ್ಯದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವರದಿ ಸಲ್ಲಿಸಲಾಗುವುದು ಎಂದರು. ಯಲಬುರ್ಗಾ ತಾಲೂಕಿನ ವಿವಿಧ ಹೋಬಳಿ ವ್ಯಾಪ್ತಿ ಹಾಗೂ ಕುಷ್ಟಗಿ ತಾಲೂಕಿನ ಹನುಮನಾಳ, ಹನುಮಸಾಗರ ಹೋಬಳಿ ವ್ಯಾಪ್ತಿಯ ಕೆಲವು ರೈತರ ಜಮೀನುಗಳಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಿತು. ಬರ ಅಧ್ಯಯನ ತಂಡಕ್ಕೆ ಕೆಲವು ಪ್ರದೇಶದಲ್ಲಿ ಹಸಿರಿನ ದರ್ಶನವಾದರೆ, ಇನ್ನು ಕೆಲ ಪ್ರದೇಶದಲ್ಲಿ ಬರದ ದರ್ಶನವಾಯಿತು!
ಅಧಿಕಾರಿಗಳ ಎದುರೇ ಆತ್ಮಹತ್ಯೆಗೆ ಯತ್ನಿಸಿದ ರೈತ
ಬೆಳಗಾವಿ: ಬರ ಅಧ್ಯಯನ ತಂಡದ ಅಧಿಕಾರಿಗಳ ಮುಂದೆಯೇ ಶುಕ್ರವಾರ ಜಿಲ್ಲೆಯ ರೈತನೊಬ್ಬ ಆತ್ಮಹತ್ಯೆಗೆ ಮುಂದಾದ ಘಟನೆ ನಡೆದಿದೆ. ಬೆಳೆ ಹಾನಿಯಾಗಿದ್ದರೂ ತಮ್ಮ ಕಷ್ಟವನ್ನು ಅಧಿಕಾರಿಗಳು ಕೇಳಲಿಲ್ಲ ಎಂದು ಕೋಪಗೊಂಡ ಸವದತ್ತಿ ತಾಲೂಕಿನ ಇಂಚಲ ಗ್ರಾಮದ ಅಪ್ಪಾಸಾಹೇಬ ಲಕ್ಕುಂಡಿ ಎಂಬ ರೈತ ಕ್ರಿಮಿನಾಶಕ ಬಾಟಲಿಗಳನ್ನು ತೋರಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬರ ಪರಿಸ್ಥಿತಿ ಅವಲೋಕನದ ಚಿತ್ರಣವನ್ನೇ ಬದಲಿಸಿತು. ಬೈಲಹೊಂಗಲ ತಾಲೂಕಿನ ಕಲಕುಪ್ಪಿ³ ಗ್ರಾಮದ ಬಳಿ ಶುಕ್ರವಾರ ಬರ ಪರಿಸ್ಥಿತಿಯ ಅಧ್ಯಯನಕ್ಕೆ ಅಗಮಿಸಿದ್ದ ಕೇಂದ್ರದ ಅಧಿಕಾರಿಗಳ ತಂಡದ ಸದಸ್ಯರು ಹೊಲಗಳಿಗೆ ತೆರಳಿ ಮಳೆ ಕೊರತೆಯಿಂದ ಹಾನಿಯಾದ ಸೋಯಾಬಿನ್, ಸೂರ್ಯಕಾಂತಿ, ಅಲಸಂದಿ, ಶೇಂಗಾ ಬೆಳೆಗಳನ್ನು ವೀಕ್ಷಿಸಿದರು. ಅಲ್ಲಿಯೇ ಇದ್ದ ರೈತರಿಂದ ಸಮಸ್ಯೆಗಳನ್ನು ಆಲಿಸಿದರು. ಮಹಿಳಾ ರೈತರಾದ ಕಮಲವ್ವ ನಡಟ್ಟಿ ಅವರಿಂದ ಬೆಳೆ ಹಾನಿಯಿಂದಾದ ತೊಂದರೆ ಆಲಿಸಿ ಅಲ್ಲಿಂದ ತೆರಳಿದರು.
ಈ ಸಂದರ್ಭದಲ್ಲಿ ಒಂದೆರಡು ಬಾರಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದ ರೈತ ಅಪ್ಪಾಸಾಹೇಬ ಲಕ್ಕುಂಡಿ ಒಮ್ಮೆಲೇ ಸಿಟ್ಟಿನಿಂದ ಅಧಿಕಾರಿಗಳು ನಮ್ಮ ಸಮಸ್ಯೆ ಕೇಳುತ್ತಿಲ್ಲ. ಹೀಗಾದರೆ ನಾವು ಇದ್ದು ಏನು ಪ್ರಯೋಜನ. ಮೈಮೇಲೆ ಸಾಲ ಹೆಚ್ಚಾಗಿದೆ. ಈಗ ಆತ್ಮಹತ್ಯೆಯೊಂದೇ ಪರಿಹಾರ ಎಂದು ಕೂಗಾಡಿ ತಮ್ಮ ಬಳಿ ಇಟ್ಟುಕೊಂಡಿದ್ದ ಎರಡು ಕ್ರಿಮಿನಾಶಕ ಬಾಟಲಿ ತೆಗೆದುಕೊಂಡು ಕುಡಿಯಲು ಮುಂದಾದರು. ತತ್‌ಕ್ಷಣವೇ ಪೊಲೀಸರು ಬಾಟಲಿ ಕಸಿದುಕೊಂಡರು. ಅಷ್ಟೊತ್ತಿಗೆ ಬರ ಅಧ್ಯಯನ ತಂಡದ ಅಧಿಕಾರಿಗಳು ಸಮೀಕ್ಷೆ ನಡೆಸಿ ಅಲ್ಲಿಂದ ತೆರಳಿದ್ದರು.
42 ಲಕ್ಷ ಹೆಕ್ಟೇರ್ ಬೆಳೆ ಹಾನಿ, 30 ಸಾವಿರ ಕೋ.ರೂ. ನಷ್ಟ: ಸಿಎಂ
ಚಿತ್ರದುರ್ಗ: ಈ ವರ್ಷ ರಾಜ್ಯದಲ್ಲಿ 80 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಪೈಕಿ 42 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಅಂದರೆ ಶೇ.52ರಷ್ಟು ನಷ್ಟವಾಗಿದೆ. ಹೀಗಾಗಿ ರಾಜ್ಯದ ರೈತರು ಹಾಗೂ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. 4,860 ಕೋಟಿ ರೂ. ಪರಿಹಾರ ಕೋರಿ ಕೇಂದ್ರಕ್ಕೆ ಮನವಿ ಮಾಡಿದ್ದರೂ ನಮಗೆ ಆಗಿರುವ ನಷ್ಟದ ಪ್ರಮಾಣ 30 ಸಾವಿರ ಕೋಟಿಗೂ ಅಧಿ ಕ. ಇದನ್ನೆಲ್ಲ ಕೇಂದ್ರ ಬರ ಅಧ್ಯಯನ ತಂಡ ಪರಿಶೀಲನೆ ನಡೆಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬರ ಅಧ್ಯಯನ ತಂಡಕ್ಕೆ ಭರ್ಜರಿ ಭೋಜನ
ಮಧುಗಿರಿ/ಕೊರಟಗೆರೆ: ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಗಡಿರೇಖೆ ಭೈರೇನಹಳ್ಳಿ ಮೂಲಕ ಉಪವಿಭಾಗಕ್ಕೆ ಬೆಳಗ್ಗೆ 10 ಗಂಟೆಗೆ ಬರಬೇಕಿದ್ದ ಬರ ಅಧ್ಯಯನ ತಂಡದ ಅಧಿಕಾರಿಗಳು ಮಧ್ಯಾಹ್ನವಾದರೂ ಬಾರದಿದ್ದಾಗ ಅಧಿಕಾರಿಗಳು ಕಾದು ಸುಸ್ತಾಗಿದ್ದರು. ಮಧ್ಯಾಹ್ನ 2 ಗಂಟೆಗೆ ಮಾಡಗಾನಹಟ್ಟಿ ಸಮೀಪದ ಜಮೀನಿಗೆ ತಂಡ ಭೇಟಿ ನೀಡಿತು. ತಂಡಕ್ಕೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಾಂಸಪ್ರಿಯರಿಗೆ ರೋಟಿ, ದಾಲ್, ಚಿಕನ್, ಕಬಾಬ್, ಕುಲ್ಚಾ, ಸಬ್ಜಿ, ಪಲ್ಯ, ಪಲಾವ್, ಬಿರಿಯಾನಿ ಹಾಗೂ ಒಬ್ಬಟ್ಟಿನ ಊಟ ಮಾಡಿಸಲಾಗಿತ್ತು. ಇದನ್ನು ಸವಿದ ಅಧ್ಯಯನ ತಂಡ ಹಾಗೂ ಜಿಲ್ಲಾಡಳಿತ ಸಂಜೆ 4 ಗಂಟೆಗೆ ದೊಡ್ಡೇರಿ ಹೋಬಳಿಯ ಡಿವಿ ಹಳ್ಳಿ, ಡಿ.ಕೈಮರ ಗ್ರಾಮಗಳಲ್ಲಿ ಬರ ವೀಕ್ಷಣೆ ನಡೆಸಿದ ಬಳಿಕ ಶಿರಾ ಕಡೆ ಪ್ರಯಾಣ ಬೆಳೆಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.