Karnataka: ರಾಜ್ಯದಲ್ಲಿ ತಾರಕಕ್ಕೇರಿದ ಜಾತಿ ಗಣತಿ ಜಗಳ
Team Udayavani, Nov 22, 2023, 11:10 PM IST
ಜಾತಿ ಜನಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ವರದಿ ಸರಕಾರಕ್ಕೆ ಸಲ್ಲಿಕೆಯಾಗುವ ಮುನ್ನವೇ ಪರ-ವಿರೋಧ ಅಭಿಪ್ರಾಯಗಳು ಭಾರೀ ಸದ್ದು ಮಾಡುತ್ತಿದೆ. ವರದಿಗೆ ಒಕ್ಕಲಿಗರ ಸಂಘ ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ, ಜಾತಿ ಜನಗಣತಿ ಅವೈಜ್ಞಾನಿಕವಾಗಿದ್ದು, ಮರು ಗಣತಿ ನಡೆಸಬೇಕೆಂಬ ಆಗ್ರಹ ವಿಪಕ್ಷಗಳಿಂದ ಕೇಳಿಬಂದಿದೆ. ವರದಿ ಇನ್ನೂ ನಮ್ಮ ಕೈಸೇರಿಲ್ಲ. ಆದರೆ, ವರದಿ ಕೈಸೇರುವ ಮೊದಲೇ ಯಾಕೆ ವಿರೋಧ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈಗಲೇ ವಿರೋಧ ಯಾಕೆ?: ಸಿದ್ದರಾಮಯ್ಯ
ಜಾತಿ ಜನಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ವರದಿ ಕೊಡುವ ಮೊದಲೇ ಅದನ್ನು ಯಾಕೆ ವಿರೋಧಿಸುತ್ತೀರಿ ಎಂದು ಒಕ್ಕಲಿಗರ ಸಂಘವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 162 ಕೋಟಿ ರೂ. ಖರ್ಚು ಮಾಡಿ ವರದಿ ತಯಾರಿಸಲಾಗಿದೆ. ವರದಿ ಬಂದ ಬಳಿಕ ಅವರ ಸಂಶಯಗಳ ನಿವಾರಣೆಯಾಗಲಿದೆಯೋ ಇಲ್ಲವೋ ನೋಡೋಣ. ವರದಿಯಲ್ಲಿ ಏನಿದೆ ಎಂದು ತಿಳಿದಿಲ್ಲ. ವರದಿ ಇನ್ನೂ ನಮ್ಮ ಕೈಸೇರಿಲ್ಲ. ಕೊಟ್ಟ ಮೇಲೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹಿತ ಒಕ್ಕಲಿಗ ಸಮುದಾಯದ ಮುಖಂಡರು ಜಾತಿ ಜನಗಣತಿ ವರದಿ ತಿರಸ್ಕರಿಸಬೇಕು ಎಂದು ಮನವಿ ಸಲ್ಲಿಸಿರುವ ಬಗ್ಗೆ ಕೇಳಿದಾಗ, ವರದಿ ಸಲ್ಲಿಕೆಯಾಗುವ ಮೊದಲೇ ವಿರೋಧ ಸರಿ ಅಲ್ಲ. ಈ ಬಗ್ಗೆ ಉಪಮುಖ್ಯಮಂತ್ರಿ ನನ್ನೊಂದಿಗೆ ಮಾತನಾಡಿಲ್ಲ ಎಂದು ಹೇಳಿದರು.
ರಾಜಕೀಯ ಪಕ್ಕಕ್ಕಿಟ್ಟು ಸಹಿ ಮಾಡಿದ್ದೇನೆ: ಡಿ.ಕೆ.ಶಿವಕುಮಾರ್
ಜಾತಿ ಗಣತಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕೆಂಬ ನಮ್ಮ ಪಕ್ಷದ ನಿಲುವಿಗೆ ನಾವು ಬದ್ಧರಾಗಿದ್ದೇವೆ. ಆದರೆ ಜಾತಿ ಗಣತಿ ಸಮೀಕ್ಷೆ ವೈಜ್ಞಾನಿಕವಾಗಿ ಆಗಬೇಕು ಎಂದು ವಿವಿಧ ಸಮುದಾಯಗಳು ಆಗ್ರಹಿಸಿವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ಸಿಎಂ ಸಿದ್ದರಾಮಯ್ಯ ಅವರ ನಿವಾಸದ ಬಳಿ ಮಾಧ್ಯಮ ಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಾನು ಸಹಿ ಮಾಡಬಾರದೇ? ಎಷ್ಟು ಜನ ಮಂತ್ರಿಗಳು ಈ ವಿಚಾರವಾಗಿ ಸಭೆ ಮಾಡಿಲ್ಲ? ಅದೇ ರೀತಿ ನಾನು ರಾಜಕೀಯ ಪಕ್ಕಕ್ಕಿಟ್ಟು ನಮ್ಮ ಸಮಾಜ, ಅದರ ಗೌರವ, ಅಭಿಮಾನವನ್ನು ಉಳಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದೇನೆ. ಜನಸಂಖ್ಯೆ ಆಧಾರದಲ್ಲಿ ಮೀಸ ಲಾತಿ ಸಿಗಬೇಕೆಂದು ಅನೇಕ ಸಮುದಾಯಗಳು ಆಗ್ರಹಿಸಿವೆ. ಕೆಲವು ಸಮುದಾಯ ಹಾಗೂ ಅದರ ನಾಯಕರು ಜಾತಿಗಣತಿ ಸಮೀಕ್ಷೆ ವೇಳೆ ನಮ್ಮನ್ನು ಸಂಪರ್ಕಿಸಿಲ್ಲ. ಹೀಗಾಗಿ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಬೇಕೆಂದು ಆಗ್ರಹಿಸುತ್ತಿವೆ ಎಂದರು.
ವರದಿ ಕದ್ದವರು ಯಾರೆಂದು ಸ್ಪಷ್ಟಪಡಿಸಲಿ: ವಿ.ಸುನಿಲ್ ಕುಮಾರ್
ರಾಹುಲ್ ಗಾಂಧಿಯ ಹೇಳಿಕೆಯನ್ನು ಗುರಾಣಿಯಾಗಿಸಿಕೊಂಡು ಸ್ವಪಕ್ಷೀಯರ ವಿರೋಧ ತಪ್ಪಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಯತ್ನಿಸುತ್ತಿದ್ದು, ಕಾಂತರಾಜ್ ವರದಿಯ ಮೂಲ ಪ್ರತಿಯನ್ನು ಕದ್ದವರು ಯಾರು ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕೆಂದು ಮಾಜಿ ಸಚಿವ ವಿ.ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಈ ಕುರಿತು ತಜ್ಞರಿಂದ ಸಾಧಕ, ಬಾಧಕಗಳ ಪರಿಶೀಲನೆಯಾಗಬೇಕು. ವರದಿಯ ಮೂಲಪ್ರತಿಯೇ ಕಳವಾಗಿದೆ ಎಂದು ಆಯೋಗದ ಅಧ್ಯಕ್ಷರು ಪತ್ರ ಬರೆದರೆ, ವರದಿ ಸರಿ ಇಲ್ಲ, ಅದನ್ನು ಸ್ವೀಕರಿಸಬಾರದೆಂಬ ಮನವಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಹಿತ ಅನೇಕ ಸಚಿವರು ಸಹಿ ಹಾಕಿದ್ದಾರೆ. ಇದೆಲ್ಲದರ ಮಧ್ಯೆ ಜಾತಿ ಗಣತಿ ವರದಿ ಸ್ವೀಕರಿಸುತ್ತೇವೆಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಈ ಮೂರರ ಪೈಕಿ ಯಾವುದನ್ನು ನಂಬಬೇಕು ಎಂದು ಪ್ರಶ್ನಿಸಿದರು.
ಮೂಲಪ್ರತಿ ಇಲ್ಲದೆ ವರದಿ ಜಾರಿ ಹೇಗೆ?: ಕುಮಾರಸ್ವಾಮಿ
ಕಾಂತರಾಜು ವರದಿ ಮೂಲಪ್ರತಿ ಕಳೆದು ಹೋಗಿದ್ದು, ಈಗ ವರದಿ ತರಿಸಿಕೊಳ್ಳುತ್ತಿದ್ದಾರೆ. ಮೂಲಪ್ರತಿ ಕಳೆದು ಹೋದ ಮೇಲೆ ವರದಿಯನ್ನು ಹೇಗೆ ಜಾರಿ ಮಾಡುತ್ತಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರ ಟ್ವೀಟ್ ಗಮನಿಸಿದ್ದೇನೆ. ಅವರ ಹೆಮ್ಮೆಯ ರಾಹುಲ್ ಗಾಂಧಿ ಭಾವನೆಗೆ ಸ್ಪಂದಿಸಿ ಜಾತಿಗಣತಿ ಪಡೆಯುವುದಾಗಿ ಹೇಳಿದ್ದಾರೆ. ಪದೇಪದೆ ಕಾಂತರಾಜು ವರದಿಯನ್ನು ಕುಮಾರಸ್ವಾಮಿ ತಿರಸ್ಕರಿಸಿದರು ಎಂದು ನನ್ನ ಮೇಲೆ ಆರೋಪ ಮಾಡುತ್ತಾರೆ. ನನ್ನ ಕಾಲದಲ್ಲಿ ಕಾಂತರಾಜು ವರದಿ ಪಡೆಯಲಿಲ್ಲ ಸರಿ. ಆದರೆ ಈ 6 ತಿಂಗಳ ಅವಧಿ ಯಲ್ಲಿ ಇವರು ಒಪ್ಪಿಗೆ ಕೊಡಲು ಏನಾಗಿತ್ತು? ಕಾಂತರಾಜು ವರದಿಗೆ ಅಂದಿನ ಸದಸ್ಯ ಕಾರ್ಯದರ್ಶಿ ಸಹಿ ಹಾಕಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಒಂದೂವರೆ ಕೋಟಿ ಜನರ ವಿವರವಿಲ್ಲ:ಸಿ.ಟಿ.ರವಿ
ಜಾತಿ ಗಣತಿ ವರದಿ ರಿಸರ್ವ್ ಬ್ಯಾಂಕ್ ಗವರ್ನರ್ ಸಹಿ ಇಲ್ಲದ ನೋಟಿನಂತಾಗಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ವರದಿಗೆ ಸಂಬಂಧಪಟ್ಟಂತೆ ಸಿಎಂ ಮತ್ತು ಡಿಸಿಎಂ ಜೋಡಿ ಮಗುವನ್ನು ಜಿವುಟಿ ತೊಟ್ಟಿಲು ತೂಗುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ನನಗಿರುವ ಮಾಹಿತಿ ಪ್ರಕಾರ ಕಾಂತರಾಜು ವರದಿಯಲ್ಲಿ ಒಂದೂವರೆ ಕೋಟಿಗೂ ಹೆಚ್ಚು ಜನರ ವಿವರ ದಾಖಲಾಗಿಲ್ಲ. ಇದರಿಂದ ಈ ವರದಿ ಎಷ್ಟು ವೈಜ್ಞಾನಿಕವಾಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ಸಿದ್ದರಾಮಯ್ಯನವರಿಗೆ ಬದ್ಧತೆ ಇದ್ದರೆ ಹಿಂದಿನ ಅವಧಿಯಲ್ಲೇ ವರದಿ ಬಿಡುಗಡೆ ಮಾಡಬೇಕಿತ್ತು. ಮುಖ್ಯಮಂತ್ರಿ ವರದಿ ಪರ ಇದ್ದರೆ, ಡಿಸಿಎಂಗೆ ಸಹಮತ ಇಲ್ಲ. ಸಿಎಂ ತೀರ್ಮಾನ ಇಷ್ಟವಿಲ್ಲ ಎಂದಾದರೆ ಡಿ.ಕೆ.ಶಿವಕುಮಾರ್ ರಾಜೀನಾಮೆ ಕೊಟ್ಟು ಹೊರಗೆ ಬರಲಿ ಎಂದು ಆಗ್ರಹಿಸಿದರು.
ವರದಿ ನಾಪತ್ತೆ: ಅಧ್ಯಕ್ಷರಿಗೆ ಯತ್ನಾಳ್ ಪತ್ರ
ಹಿಂದುಳಿದ ವರ್ಗಗಳ ಆಯೋಗದಿಂದ 2015ರಲ್ಲಿ ನಡೆಸಿದ್ದ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ವರದಿ ನಾಪತ್ತೆ ಪ್ರಕರಣದ ಕುರಿತು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ಆಕ್ಷೇಪ ವ್ಯಕಪಡಿಸಿದ್ದಾರೆ.
ಈ ಕುರಿತು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರಿಗೆ ಪತ್ರ ಬರೆದಿರುವ ಯತ್ನಾಳ್, ರಾಜ್ಯ ಸರಕಾರ 180 ಕೋಟಿ ರೂ. ವೆಚ್ಚ ಮಾಡಿ 2015ರಲ್ಲಿ ರಾಜ್ಯದಲ್ಲಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿತ್ತು. ಸದರಿ ವರದಿಯ ಮೂಲಪ್ರತಿ ಕಳೆದಿರುವುದಾಗಿ ತಾವು ಅ.5ರಂದು ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೀರಿ. ಲಭ್ಯ ಇರುವ ಪತ್ರದಲ್ಲಿ ಆಯೋಗದ ಸದಸ್ಯ ಕಾರ್ಯದರ್ಶಿಯ ಸಹಿಯೇ ಇಲ್ಲದಿರುವುದು ನಿರ್ಲಕ್ಷéಕ್ಕೆ ಸಾಕ್ಷಿ. ನಿರ್ಲಕ್ಷéಕ್ಕೆ ಕಾರಣವಾದ ಅಧಿ ಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಆಗ್ರಹಿಸಿದ್ದಾರೆ.
ಜಾತಿ ಗಣತಿ ವರದಿ ಜಾರಿ ಬಗ್ಗೆ ಪ್ರಣಾಳಿಕೆಯಲ್ಲೂ ಹೇಳಲಾಗಿದೆ. ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿಲ್ಲ, ಜನಸಂಖ್ಯೆ ಕಡಿಮೆ ತೋರಿಸಲಾಗಿದೆ ಎಂಬುದಾಗಿ ಲಿಂಗಾಯತ, ಒಕ್ಕಲಿಗ ಸಮಾಜದಿಂದ ಆಕ್ಷೇಪಣೆ, ವಿರೋಧ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ವಿಚಾರಗಳ ಬಗ್ಗೆ ಚರ್ಚಿಸಿ, ಜಾತಿ ಗಣತಿ ವರದಿ ಕುರಿತಂತೆ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ.
-ಎನ್.ಚಲುವರಾಯ ಸ್ವಾಮಿ, ಕೃಷಿ ಸಚಿವ
ಜಾತಿ ಜನ ಗಣತಿ ಅವೈಜ್ಞಾನಿಕವಾಗಿದ್ದು, ಮರು ಗಣತಿ ನಡೆಸಬೇಕು. ವರದಿ ಸೋರಿಕೆಯಾಗಿದ್ದು, ಅದರಲ್ಲಿನ ಅಂಶಗಳು ಸರಿಯಾಗಿಲ್ಲ. ಈ ಕಾರಣಕ್ಕಾಗಿಯೇ ಡಿಸಿಎಂ ಶಿವಕುಮಾರ್, ಸಚಿವ ಸುಧಾಕರ ಕೂಡ ವರದಿ ಜಾರಿ ವಿರೋ ಧಿಸಿ ಒಕ್ಕಲಿಗರ ಸಂಘ ನಡೆಸಿದ ಅಭಿಯಾನಕ್ಕೆ ಬೆಂಬಲಿಸಿ ಸಹಿ ಹಾಕಿದ್ದಾರೆ. ಆದರೆ ಮುಖ್ಯಮಂತ್ರಿಗಳು ವರದಿ ಜಾರಿ ಮಾಡಿಯೇ ಸಿದ್ಧ ಎನ್ನುತ್ತಿದ್ದಾರೆ. ಇದು ಸರಕಾರದ ದ್ವಿಮುಖ ನೀತಿಗೆ ಸಾಕ್ಷಿ.
-ಆರ್.ಅಶೋಕ್, ವಿಪಕ್ಷ ನಾಯಕ
ಬಿಜೆಪಿಯಿಂದ ಜಾತಿ ಗಣತಿಗೆ ವಿರೋಧವಿಲ್ಲ, ಆದರೆ ಅದನ್ನು ದುರ್ಬಳಕೆ ಮಾಡುವುದಕ್ಕೆ ವಿರೋಧವಿದೆ. ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದಾಗ ಜಾತಿ ಗಣತಿ ಮುಗಿದಿತ್ತು. ಆಗ ಯಾವುದೇ ಸ್ಪಷ್ಟ ನಿಲುವು ತೆಗೆದುಕೊಳ್ಳದೆ ಈಗ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಮತ್ತೆ ಜಾತಿ ಗಣತಿ ವಿಷಯ ಪ್ರಸ್ತಾವಿಸುತ್ತಿದ್ದಾರೆ. ರಾಜಕೀಯ ದುರುದ್ದೇಶಕ್ಕೆ ಜಾತಿ ಗಣತಿ ಬಳಸಲು ಹೊರಟರೆ ಅದಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ. -ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.