![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Sep 11, 2024, 8:56 PM IST
ಕಾಸರಗೋಡು: ಆಲಪ್ಪುಳ ಸಮೀಪ ವೃದ್ಧೆಯೊಬ್ಬರನ್ನು ಹತ್ಯೆಗೈದು ಮೃತದೇಹವನ್ನು ಮಣ್ಣಿನಡಿ ಹೂತು ಹಾಕಿದ ಪ್ರಕರಣದಲ್ಲಿ ಆರೋಪಿಗಳೆಂದು ಶಂಕಿಸಿರುವ ಕರ್ನಾಟಕ ಉಡುಪಿಯ ಮಹಿಳೆ ಹಾಗು ಆಕೆಯ ಪತಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಎರ್ನಾಕುಳಂ ಸೌತ್ ರೈಲ್ವೇ ನಿಲ್ದಾಣ ಬಳಿ ಕರಿತ್ತಲ ರೋಡ್ ಶಿವಕೃಪಾದ ಸುಭದ್ರ(73) ಅವರನ್ನು ಕೊಲೆಗೈದು ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೆಂದು ಶಂಕಿಸಿರುವ ಉಡುಪಿಯ ಶರ್ಮಿಳಾ ಹಾಗು ಆಕೆಯ ಪತಿ ಮ್ಯಾಥ್ಯೂಸ್ ಯಾನೆ ನಿತಿನ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಇಬ್ಬರು ಕರ್ನಾಟಕದಲ್ಲಿ ತಲೆಮರೆಸಿಕೊಂಡಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ. ಇದೇ ವೇಳೆ ಇವರು ಕಾಸರಗೋಡಿಗೆ ತಲುಪುವ ಸಾಧ್ಯತೆಯಿದೆ ಎಂಬ ಹಿನ್ನೆಲೆಯಲ್ಲಿ ಪೊಲೀಸರು ಕಾಸರಗೋಡಿನಲ್ಲೂ ಶೋಧ ನಡೆಸುತ್ತಿದ್ದಾರೆ.
ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಸುಭದ್ರ ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಪುತ್ರ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾಗ ಕವಲೂರುನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕರ್ನಾಟಕ ಉಡುಪಿ ನಿವಾಸಿ ಶರ್ಮಿಳ ಹಾಗು ಆಕೆಯ ಪತಿ ಕಾಟೂರುಪಳ್ಳಿ ಪರಂಬಿಲ್‌ನ ಮ್ಯಾಥ್ಯೂಸ್ ಯಾನೆ ನಿತಿನ್ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿತ್ತು. ಸುಭದ್ರ ಅವರ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಲು ಅವರನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ದೋಚಲಾದ ಚಿನ್ನಾಭರಣವನ್ನು ಮಂಗಳೂರಿನಲ್ಲಿ ಅಡವಿರಿಸಿದ್ದಾಗಿ ಮಾಹಿತಿ ಲಭಿಸಿದೆ. ಚಿನ್ನಾಭರಣ ಅಡವಿರಿಸಿದ ಬಳಿಕ ಅವರು ಕಾಸರಗೋಡಿಗೆ ತಲುಪಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ನಾಪತ್ತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಸುಭದ್ರ ಕವಲೂರಿಗೆ ಬಂದಿದ್ದು ತಿಳಿದು ಬಂದಿದೆ. ಆ.4 ರಂದು ಎರ್ನಾಕುಳಂ ಸೌತ್‌ನಿಂದ ಮಹಿಳೆಯೊಂದಿಗೆ ಸುಭದ್ರ ತೆರಳುವ ಸಿಸಿಟಿವಿ ದೃಶ್ಯ ಲಭಿಸಿದೆ. ಜೊತೆಗಿದ್ದುದು ಶರ್ಮಿಳ ಎಂಬುದಾಗಿ ದೃಢೀಕರಿಸಿ ಆಕೆಯ ಮನೆಗೆ ಪೊಲೀಸರು ತೆರಳಿದಾಗ ಮನೆ ಮುಚ್ಚಲಾಗಿತ್ತು. ಇದರಿಂದ ಸುಭದ್ರ ಅವರಿಗಾಗಿ ಶೋಧ ಮುಂದುವರಿಸಿ ಪೊಲೀಸರು ಶ್ವಾನ ದಳವನ್ನು ಸ್ಥಳಕ್ಕೆ ತಲುಪಿಸಿ ಪರಿಶೀಲಿಸಿದಾಗ ಮೃತದೇಹ ಕವಲೂರು ಕೋರ್ತುಶೇರಿಯ ಮನೆ ಹಿತ್ತಿಲಿನಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪುತ್ರ ರಾಧಾಕೃಷ್ಣನ್ ಮೃತದೇಹದ ಗುರುತು ಹಚ್ಚಿದ್ದು, ಮೈಮೇಲಿದ್ದ ಚಿನ್ನಾಭರಣ ನಾಪತ್ತೆಯಾಗಿತ್ತು. ಸುಭದ್ರ ಹಾಗು ಶರ್ಮಿಳ ಮಧ್ಯೆ ಹಣ ವ್ಯವಹಾರವಿತ್ತೆಂದು ತನಿಖೆಯಿಂದ ತಿಳಿದು ಬಂದಿದೆ. ಅಲ್ಲದೆ ಸುಭದ್ರ ಶರ್ಮಿಳ ಅವರ ಮನೆಗೆ ಪದೇ ಪದೇ ಭೇಟಿ ನೀಡುತ್ತಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಶರ್ಮಿಳಾಳತ್ತ ಕೇಂದ್ರೀಕರಿಸಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.