ಕಾಸರಗೋಡು: ಒಬ್ಬರಲ್ಲಿ ಸೋಂಕು ದೃಢ
Team Udayavani, Apr 20, 2020, 6:03 AM IST
ಕಾಸರಗೋಡು: ಕೇರಳ ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿದ್ದು, ರವಿವಾರ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣಗಳು ವರದಿಯಾಗುವ ಮೂಲಕ ರಾಜ್ಯ ಸೋಂಕು ಮುಕ್ತವಾಗುವತ್ತ ಹೆಜ್ಜೆಯಿಡುತ್ತಿದೆ.
ಇದೇ ವೇಳೆ ರಾಜ್ಯದಲ್ಲಿ ರವಿವಾರ 13 ಮಂದಿ ಕೋವಿಡ್ 19 ಸೋಂಕಿನಿಂದ ಗುಣಮುಖರಾಗಿದ್ದಾರೆ. ಅವರಲ್ಲಿ 8 ಮಂದಿ ಕಾಸರಗೋಡು ಜಿಲ್ಲೆಯವರು. ಕೇರಳದಲ್ಲಿ ಈ ವರೆಗೆ 270 ಮಂದಿ ಗುಣಮುಖ ಹೊಂದಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 129 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ದೃಢವಾದ ಕಣ್ಣೂರು ಜಿಲ್ಲೆಯ ವ್ಯಕ್ತಿ ಅಬುಧಾಬಿಯಿಂದಲೂ ಕಾಸರಗೋಡಿನ ಚೆಮ್ನಾಡ್ ಗ್ರಾ.ಪಂ.ನ ತೆಕ್ಕಿಲ್ ನಿವಾಸಿ 48 ವರ್ಷದ ವ್ಯಕ್ತಿ ಮಾ. 16ರಂದು ದುಬಾೖಯಿಂದಲೂ ಬಂದವರು.
ಜಿಲ್ಲೆಯಲ್ಲಿ ಈ ತನಕ ಒಟ್ಟು 169 ಮಂದಿಗೆ ಸೋಂಕು ದೃಢವಾಗಿದ್ದು, 123 ಮಂದಿ ಗುಣಮುಖರಾಗಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ 46 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯಿಂದ ಮೂವರು, ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜಿನಿಂದ ಮೂವರು, ಕಾಂಞಂಗಾಡ್‌ನ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಇಬ್ಬರು ರವಿವಾರ ಬಿಡುಗಡೆಗೊಂಡಿದ್ದಾರೆ.
45 ಪ್ರಕರಣ ದಾಖಲು
ಲಾಕ್‌ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಪೊಲೀಸರು 45 ಪ್ರಕರಣಗಳನ್ನು ದಾಖಲಿಸಿದ್ದಾರೆ. 67 ಮಂದಿಯನ್ನು ಬಂಧಿಸಲಾಗಿದ್ದು, 11 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವರೆಗೆ ಜಿಲ್ಲೆಯಲ್ಲಿ 1,183 ಕೇಸುಗಳನ್ನು ದಾಖಲಿಸಿ 1,619 ಮಂದಿಯನ್ನು ಬಂಧಿಸಲಾಗಿದೆ. 543 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲೆಗೆ ಕೇಂದ್ರ ಅಭಿನಂದನೆ
ಕಾಸರಗೋಡು: ಕೋವಿಡ್ ಪ್ರತಿರೋಧ ಪ್ರಕ್ರಿಯೆಯಲ್ಲಿ ಕಾಸರಗೋಡು ಜಿಲ್ಲೆ ದೇಶಕ್ಕೇ ಮಾದರಿಯಾಗಿದೆ ಎಂದು ಕೇಂದ್ರ ಸರಕಾರ ಶ್ಲಾಘಿಸಿದೆ.
ಕಾಸರಗೋಡು ಜಿಲ್ಲೆ ಕೋವಿಡ್ ಹಾಟ್‌ಸಾ#ಟ್ ಯಾದಿಯಲ್ಲಿ ಸೇರ್ಪಡೆಗೊಂಡಿತ್ತು. ಕೋವಿಡ್ ನಿಯಂತ್ರಣಕ್ಕೆ ಕಾಸರಗೋಡು ಜಿಲ್ಲೆಯಲ್ಲಿ ತೆಗೆದು ಕೊಂಡಿರುವ ಕ್ರಮಗಳು ಅಭಿನಂದನಾರ್ಹ ಎಂದು ಕೇಂದ್ರ ಸರಕಾರ ತಿಳಿಸಿದೆ.
ಸೋಂಕು ಪೀಡಿತರಲ್ಲಿ ಶೇ. 15.3 ಮಂದಿ ಅನಿವಾಸಿ ಭಾರತೀಯರಾಗಿದ್ದು, ವಿದೇಶದಿಂದ ಬಂದವರೆಲ್ಲರನ್ನೂ ಪತ್ತೆಹಚ್ಚಿ ಕ್ವಾರೆಂಟೈನ್‌ಗೊಳಿಸಿದ ಕ್ರಮವೂ ಸಹಿತ ಕಾಸರಗೋಡಿನಲ್ಲಿ ಆರೋಗ್ಯ ಇಲಾಖೆ, ಜಿಲ್ಲಾಡಳಿತ, ಪೊಲೀಸರ ಸೇವೆ ಸ್ತುತ್ಯರ್ಹವಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ.
ಈಗಾಗಲೇ ಜಿಲ್ಲೆಯಲ್ಲಿ ಶೇ. 54ರಷ್ಟು ಮಂದಿ ರೋಗದಿಂದ ಗುಣ ಮುಖರಾಗಿದ್ದಾರೆ. ಈ ತನಕ ಜಿಲ್ಲೆಯಲ್ಲಿ ಕೋವಿಡ್ 19 ದಿಂದ ಸಾವು ಸಂಭವಿಸಿಲ್ಲ. ಕೇರಳದ ರಾಜಧಾನಿಯಿಂದ ಬಹಳಷ್ಟು ದೂರದಲ್ಲಿದ್ದು, ದೊಡ್ಡ ಸಂಖ್ಯೆಯಲ್ಲಿ ಅನಿವಾಸಿ ಭಾರತೀಯರಿದ್ದರೂ ಸರಿಯಾದ ದಿಸೆಯಲ್ಲಿ ಕ್ರಮ ತೆಗೆದುಕೊಂಡಿದ್ದರಿಂದ ಕೋವಿಡ್ 19 ನಿಯಂತ್ರಿಸಲು ಸಾಧ್ಯವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
8 ಮಂದಿ ಮಕ್ಕಳು ಗುಣಮುಖ
ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಪೈಕಿ ಗುಣಮುಖರಾದವರಲ್ಲಿ 8 ಮಂದಿ ಮಕ್ಕಳು ಇದ್ದಾರೆ. ಜಿಲ್ಲೆಯಲ್ಲಿ ಒಟ್ಟು 15 ಮಂದಿ ಮಕ್ಕಳಿಗೆ ಸೋಂಕು ಬಾಧಿಸಿತ್ತು. ಗುಣಮುಖರಾದ 115 ಮಂದಿಯಲ್ಲಿ 84 ಮಂದಿ ಪುರುಷರು, 23 ಮಂದಿ ಮಹಿಳೆಯರು. ಒಟ್ಟು 114 ಪುರುಷರಿಗೆ ಮತ್ತು 39 ಮಂದಿ ಮಹಿಳೆಯರಿಗೆ ಸೋಂಕು ಬಾಧಿಸಿತ್ತು. ಮಹಿಳೆಯರಲ್ಲಿ 38 ಮಂದಿಗೆ ಸೋಂಕು ಬಾಧಿತರ ಸಂಪರ್ಕದಿಂದ ರೋಗ ತಗಲಿದೆ.
ಕೈಗೊಂಡ ಕ್ರಮಗಳು
ಕಾಸರಗೋಡಿಗೆ ವಿಶೇಷ ಅಧಿಕಾರಿಯ ನೇಮಕ
ಕಾಂಟೆಕ್ಟ್ ಟ್ರೇಸಿಂಗಾಗಿ ಜೀಯೋ ಸ್ಪೆಷಲ್ ಟ್ರಾಕಿಂಗ್
ಸೋಂಕು ತಡೆಯಲು ಬ್ರೇಕ್ ದಿ ಚೈನ್ ಅಭಿಯಾನ
ಮನೆ ಮನೆಗೆ ನಿತ್ಯೋಪಯೋಗಿ ಸಾಮಗ್ರಿಗಳ ಪೂರೈಕೆ
ಜಿಲ್ಲೆಗೆ ತಜ್ಞ ವೈದ್ಯರು, ದಾದಿಯರು, ಸಿಬಂದಿಯ ನಿಯೋಜನೆ
ಪ್ರತ್ಯೇಕ ಕೋವಿಡ್ ಆಸ್ಪತ್ರೆ ಸಜ್ಜು
17,3723 ಮಂದಿ ಮನೆಗಳಲ್ಲಿ ನಿಗಾ
ಶೆಲ್ಟರ್ ಹೋಂ, ಕಮ್ಯೂನಿಟಿ ಕಿಚನ್ ಸಜ್ಜು
ಎಲ್ಲ ರೀತಿಯಲ್ಲೂ ಕಠಿನ ತಪಾಸಣೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.