Kapuಜಲೀಲರ ಸ್ವರದ ನಾದ ಅನಾಹತ:ಮಣ್ಣಿನೊಂದಿಗೆ ಲೀನವಾದ ಕಾಪು ಸಾವಿರ ಸೀಮೆಯ ಸಾಮರಸ್ಯದ ಕೊಂಡಿ
Team Udayavani, Nov 14, 2023, 6:15 AM IST
ಕಾಪು: ಕಾಪು ಸಾವಿರ ಸೀಮೆಯಲ್ಲಿ ನಾದಸ್ವರ ವಾದನದ ಮೂಲಕ ಎಲ್ಲರ ಪ್ರಶಂಸೆಗೆ ಕಾರಣರಾಗಿ ಸಾಮ ರಸ್ಯದ ಪ್ರತೀಕರಾಗಿದ್ದ ಶೇಖ್ ಜಲೀಲ್ ಸಾಹೇಬ್ ಅವರ ನಿಧನದಿಂದ ನಾದಸ್ವರವಷ್ಟೇ ಅಲ್ಲ; ಭಕ್ತಿಲೋಕವೇ ಅನಾಥ.
ಶ್ರೀ ಜನಾರ್ದನ ದೇವರ ಒರೆಸರೆ ಬಲಿ, ಉತ್ಸವ, ಮಾರಿಯಮ್ಮ ದೇವರ ದರ್ಶನ, ನೇಮದ ಸಂದರ್ಭದ ಗಗ್ಗರದೆಚ್ಚಿ, ಸಿರಿನಲಿಕೆ, ನಾಗಾರಾಧನೆಯಲ್ಲಿ ಬರುವ ಕಟ್ಟು ವಾದ್ಯ-ಎಲ್ಲದಕ್ಕೂ ಜಲೀಲ್ ಸಾಹೇಬ್ ಅವರು ತಮ್ಮ ನಾದಸ್ವರ ವಾದನದಿಂದ ಜೀವ ತುಂಬುತ್ತಿದ್ದರು.
ಅಜ್ಜ ಇಮಾಮ್ ಸಾಹೇಬ್, ತಂದೆ ಬಾಬನ್ ಸಾಹೇಬ್ ಜತೆಗೆ ಎಳವೆಯಲ್ಲೇ ನಾದಸ್ವರ ವಾದನವನ್ನು ಅಭ್ಯಸಿಸಿದ್ದ ಜಲೀಲ್ 18ನೇ ವಯಸ್ಸಿನಲ್ಲಿ ಅಜ್ಜ ತೀರಿ ಹೋದ ಬಳಿಕ ತಂದೆಯೊಂದಿಗೆ ನಾದಸ್ವರವನ್ನು ಅಪ್ಪಿಕೊಂಡಿದ್ದರು.
ಮಹತೋಭಾರ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ, ವೆಂಕಟರಮಣ ದೇವಸ್ಥಾನ, ಶ್ರೀ ಹಳೇ ಮಾರಿಗುಡಿ, ಹೊಸಮಾರಿಗುಡಿ, ಮೂರನೇ ಮಾರಿಗುಡಿ ದೇವಸ್ಥಾನ, ಕೊಪ್ಪಲಂಗಡಿ ವಾಸುದೇವ ದೇವಸ್ಥಾನ, ಕಲ್ಯ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಕಲ್ಕುಡ ದೈವಸ್ಥಾನ, ಕಲ್ಯ ಬೀಡು ಅಣ್ಣಪ್ಪ ಪಂಜುರ್ಲಿ ದೈವಸ್ಥಾನ, ಪಡು ಧೂಮಾವತಿ ದೈವಸ್ಥಾನ,ಪೊಯ್ಯ ಪೊಡಿಕಲ್ಲ ಬ್ರಹ್ಮಬೈದರ್ಕಳ ಗರಡಿ, ಬಬ್ಬರ್ಯ ದೈವಸ್ಥಾನ, ಮಲ್ಲಾರು ಧೂಮಾವತಿ ದೈವಸ್ಥಾನ ಮತ್ತು ಬ್ರಹ್ಮಬೈದರ್ಕಳ ಗರಡಿ, ಮೂಳೂರು ಕೊಡಮಣಿತ್ತಾಯ ಬಬ್ಬರ್ಯ ದೈವಸ್ಥಾನ, ಪಾಂಗಾಳ ಗುಡ್ಡೆ ಬ್ರಹ್ಮಬೈದರ್ಕಳ ಗರಡಿ ಮತ್ತು ಮರ್ಲು ಜುಮಾದಿ ದೈವಸ್ಥಾನಗಳೂ ಸೇರಿದಂತೆ ಹಲವು ಉತ್ಸವ, ಕೋಲ, ನೇಮ, ನಾಗ ದರ್ಶನ, ಆಶ್ಲೇಷಾ ಬಲಿ, ನಾಗಮಂಡಲ ಸೇವೆಯಲ್ಲಿ ಜಲೀಲರದ್ದು ಖಾಯಂ ಸೇವೆ.
ದಣಿವರಿಯದ ಸೇವೆ
ಶನಿವಾರ ರಾತ್ರಿ ಕೊಪ್ಪಲಂಗಡಿ ವಾಸುದೇವ ದೇವಸ್ಥಾನದಲ್ಲಿ ಜರಗಿದ ಮುಳ್ಳಮುಟ್ಟೆ ಮತ್ತು ಬಂಟ ಕೋಲದಲ್ಲಿ ರಾತ್ರಿ ಯಿಡೀ ಓಲಗ ಸೇವೆ ನಡೆಸಿದ್ದರು. ರವಿವಾರ ಶ್ರೀ ಲಕ್ಷ್ಮೀ ಜನಾರ್ದನ ದೇವರ ಸನ್ನಿಧಾನದಲ್ಲಿ ದೀಪಾವಳಿ ಸಂಭ್ರಮ ಮತ್ತು ವಾರ್ಷಿಕ ಬಲಿ ಹೊರಡುವ ಸಂದರ್ಭಕ್ಕೂ ನಾದಸ್ವರ ನುಡಿಸಿದ್ದರು. ಆತ್ಮೀಯರೊಂದಿಗೆ ಹಾಸ್ಯ ಚಟಾಕಿ ಸಿಡಿಸಿ ಮನೆಗೆ ತರಳಿದ್ದರು. ಆದರೆ ಇದುವೇ ಕೊನೆಯ ಸೇವೆಯಾಯಿತು. ಮರುದಿನ ಇಹಲೋಕವನ್ನೇ ತ್ಯಜಿಸುತ್ತಾರೆಂಬ ಯಾವುದೇ ಮುನ್ಸೂಚನೆ ಕಂಡಿರಲಿಲ್ಲ ಎನ್ನುತ್ತಾರೆ ಅವರಲ್ಲಿ ಮಾತನಾಡಿದ್ದ ದೇವಸ್ಥಾನದ ಸಿಬಂದಿ ಮತ್ತು ಪರಿಚಾರಿಕ ವರ್ಗದವರು.
ಸರಸ್ವತಿಯ ಜತೆಗೇ ಪಯಣ
ಪೇಟೆಗೆ ಬಂದಾಗಲೆಲ್ಲ ಜನಾರ್ದನ ಭವನ ಹೊಟೇಲ್‌ನಲ್ಲಿ ಚಹಾ – ತಿಂಡಿ ಸೇವಿಸುತ್ತಿದ್ದರು. ಸೋಮವಾರ ಮುಂಜಾನೆಯೂ ಅಲ್ಲಿ ಚಹಾ ಕುಡಿದು, ಹತ್ತಿರದ ಮತ್ತೂಂದು ಹೊಟೇಲ್‌ಗೆ ತೆರಳಿ ಹುಡುಗರ ಜತೆಗೆ ಹರಟೆ ಹೊಡೆಯುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿತ್ತು. ಆಸ್ಪತ್ರೆಗೆ ಕೊಂಡೊಯ್ದರೂ ಪ್ರಯೋ ಜನವಾಗಲಿಲ್ಲ. ಸೋಮವಾರ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಲ್ಲ. ಆದರೂ ನಾದಸ್ವರವನ್ನು ಹೆಗಲಿಗೇ ರಿಸಿಕೊಂಡು ಪೇಟೆಗೆ ಬಂದಿದ್ದ ಅವರು ತನ್ನ ಉಸಿರಾಗಿದ್ದ ಸರಸ್ವತಿಯನ್ನು ಬದುಕಿನ ಪಯಣ ಮುಗಿಸುವಾಗಲೂ ಬಿಟ್ಟುಕೊಡದಿರುವುದು ವಿಶೇಷ.
ಐದು ತಲೆಮಾರುಗಳಿಂದ ಶ್ರೀ ಲಕ್ಷ್ಮೀ ಜನಾರ್ದನ ದೇವರ ಸೇವೆಯಲ್ಲಿ ನಿರತರಾಗಿದ್ದ ಶೇಖ್ ಜಲೀಲ್ ಸಾಹೇಬ್ ಅವರ ವಂಶಸ್ಥರಿಗೆ ದೇವಸ್ಥಾನದ ವತಿಯಿಂದ 1 ಎಕ್ರೆ ಜಾಗವನ್ನು ಉಂಬಳಿ ಬಿಡಲಾಗಿದೆ. ವಂಶ ಪಾರಂಪರ್ಯವಾಗಿಸಿಕ್ಕ ಜಮೀನಿಗೆ ಹೊಂದಿಕೊಂಡ ಪುರಾತನ ನಾಗಬನ ಮತ್ತು ಪಂಜುರ್ಲಿ ದೈವಗಳ ಸಾನ್ನಿಧ್ಯದಲ್ಲಿ ನಿತ್ಯ ಆರಾಧನೆ ನಡೆಸುತ್ತಿ ದ್ದರು. ನಾಗ ದೇವರಿಗೆ ಪ್ರತೀ ಪಂಚಮಿಯಂದು ತನು- ತಂಬಿಲ ಸೇವೆ ನಡೆಸುತ್ತಿದ್ದ ಅವರು ಮತ್ತು ಪಂಜುರ್ಲಿ ದೈವಕ್ಕೂ ಗುಡಿ ಕಟ್ಟಿಸಿದ್ದರು. ಜಲೀಲ್ ಅವರು ಮನೆಯಲ್ಲಿ ತಮ್ಮ ಮತದ ರೀತಿ, ನೀತಿ ಅನುಸರಿಸುತ್ತಿದ್ದರು. ಮಸೀದಿಗೆ ಹೋಗುವಾಗ ಮಸೀದಿಗೆ, ದೇವರ ಸೇವೆ ಮಾಡುವಾಗ ದೇಗುಲಕ್ಕೆ ತೆರಳುತ್ತಿದ್ದರು. ಪವಿತ್ರ ರಮ್ಜಾನ್ ಮಾಸಾಚರಣೆಯ ವೇಳೆಯೂ ಓಲಗ ಸೇವೆಯನ್ನು ನಿಲ್ಲಿಸುತ್ತಿರಲಿಲ್ಲ.
ಸ್ವರ ನಿಲ್ಲಿಸಿದ ಮಾಂತ್ರಿಕ
ಜಲೀಲ್ ಅವರಿಗೆ ಒಡೆಯನ ಸೇವೆಯೆಂದರೆ ಅಚ್ಚು ಮೆಚ್ಚು. ಬೇಷ (ವೃಷಭ) ಹುಣ್ಣಿಮೆಯಂದು ಜನಾರ್ದನ ದೇವರ ಉತ್ಸವ ಮೂರ್ತಿ ಗರ್ಭಗುಡಿಯೊಳಗೆ ತೆರಳುವುದು ವಾಡಿಕೆ. ಬಳಿಕ ಬಲಿಮೂರ್ತಿಯನ್ನು ದೀಪಾವಳಿ ಅಮವಾಸ್ಯೆಯಂದು ಉತ್ಸವಕ್ಕಾಗಿ ಹೊರಗೆ ತರಲಾಗುತ್ತದೆ. ದೇವರನ್ನು ಹೊರಗೆ ತಂದು ಸೀಮೆಯ ಕೈಗೆ ಕೊಟ್ಟು ತಾನು ಮಾತ್ರ ಭಗವಂತನೊಳಗೆ ಐಕ್ಯವಾಗಿದ್ದಾರೆ. ಒಡೆಯನ ಸನ್ನಿಧಾನದಲ್ಲಿ ಸೇವೆ ಮುಗಿಸಿ ಹೊರಡುವಾಗ ಸಾಷ್ಟಾಂಗ ನಮಸ್ಕರಿಸುವುದು ವಾಡಿಕೆ. ರವಿವಾರ ರಾತ್ರಿಯೂ ತನ್ನ ಸಾಷ್ಟಾಂಗ ಪ್ರಣಾಮ ಸಲ್ಲಿಸಿ ಮನೆಗೆ ತೆರಳಿದ್ದರು. ಸೋಮವಾರ ಇಲ್ಲವಾಗಿದ್ದಾರೆ. ಇದು ಈ ಸೀಮೆಗೆ ದೊಡ್ಡ ನಷ್ಟ ಎನ್ನುತ್ತಾರೆ ಜನಾರ್ದನ ದೇಗುಲದ ಅರ್ಚಕ ವೇ| ಮೂ| ಜನಾರ್ದನ ತಂತ್ರಿ.
– ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.