![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Oct 8, 2023, 6:50 AM IST
ಉಡುಪಿ: ಪಿಯುಸಿ/ಪದವಿಯ ಅನಂತರ ಕೌಶಲದ ಜತೆಗೆ ಉದ್ಯೋಗಾವಕಾಶಕ್ಕೆ ಪೂರಕವಾಗುವ ಅಲ್ಪಾವಧಿ ಕೋರ್ಸ್ ಒದಗಿಸಲು ರೂಪಿಸಿದ್ದ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ (ಸಿಎಂಕೆಕೆವೈ)ಯು ಬಹುಪಾಲು ಹಳ್ಳಹಿಡಿದಿದೆ.
ವಾರ್ಷಿಕ 5 ಲಕ್ಷ ಯುವ ಜನತೆಗೆ ಉದ್ಯೋಗ ಒದಗಿಸುವುದು ಯೋಜನೆಯ ಉದ್ದೇಶವಾಗಿತ್ತು. ಆದರೆ 2023-24ನೇ ಸಾಲಿಗೆ ಯಾವುದೇ ಕೌಶಲ ತರಬೇತಿಗೆ ಕಾರ್ಯಾದೇಶವೇ ಆಗಿಲ್ಲ. ಜಿಲ್ಲೆಗಳಿಂದ ಕೌಶಲಾಭಿವೃದ್ಧಿ ಅಧಿಕಾರಿಗಳು ಕೌಶಲ್ಯ ತರಬೇತಿ ನೀಡುವ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಿದ್ದರೂ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಅನುಮೋದನೆ ಮಾತ್ರ ನೀಡಿಲ್ಲ.
2022-23ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿಯಲ್ಲಿ ತಲಾ 2, ಕಾರ್ಕಳ, ಕಾಪು, ಪೆರ್ಡೂರು ಹಾಗೂ ಹಿರಿಯಡಕದಲ್ಲಿ ತಲಾ 1 ತರಬೇತಿ ಕೇಂದ್ರದಿಂದ 680 ಅಭ್ಯರ್ಥಿಗಳಿಗೆ ಕೌಶಲ ತರಬೇತಿ ನೀಡಲಾಗಿದೆ. ದ.ಕ. ಜಿಲ್ಲೆಯ ಮಂಗಳೂರಿನ 2 ಹಾಗೂ ಮೂಡುಬಿದಿರೆಯ 1 ಸಹಿತ ಐಟಿಐ, ಜಿಟಿಟಿಸಿ, ಕೆಜಿಟಿಟಿಐಗಳಿಂದ 510 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ.
ಯಾವೆಲ್ಲ ಕೋರ್ಸ್: ಡೇಟಾ ಎಂಟ್ರಿ ಆಪರೇಟರ್, ಟೈಲರಿಂಗ್, ಹ್ಯಾಂಡ್ ಆ್ಯಂಬ್ರಾಯಿಡಿಂಗ್, ಸೋಲಾರ್ ಪ್ಯಾನಲ್ ಇನ್‌ಸ್ಟಾಲೇಶನ್, ಫೀಲ್ಡ್ ಟೆಕ್ನಿಷಿಯನ್ ಸಹಿತ ವಿವಿಧ ಅಲ್ಪಾವಧಿಯ ಕೋರ್ಸ್‌ಗಳನ್ನು ಇಲಾಖೆಯ ಮೂಲಕ ಆಯ್ದ ಸಂಸ್ಥೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿತ್ತು. ಈ ಎಲ್ಲ ಕೋರ್ಸ್‌ಗಳ ಅವಧಿಯೂ 3 ತಿಂಗಳು ಮಾತ್ರ. ಕೋರ್ಸ್ ಮುಗಿಸಿದವರಿಗೆ ಕರ್ನಾಟಕ ಕೌಶಲಾಭಿವೃದ್ಧಿ ಮಂಡಳಿಯಿಂದ ಪ್ರಮಾಣಪತ್ರ ಒದಗಿಸಲಾಗುತ್ತದೆ. ಯುವಜನರಿಗೆ ತಮ್ಮ ಪದವಿಯ ಜತೆಗೆ ಈ ಕೌಶಲ ಕೋರ್ಸ್ ತತ್‌ಕ್ಷಣ ಉದ್ಯೋಗ ಪಡೆಯಲು ಮತ್ತು ವೃತ್ತಿಯಲ್ಲಿ ನೈಪುಣ್ಯ ಗಳಿಸಲು ಅನುಕೂಲವಾಗಿತ್ತು.
ಮೊಬೈಲ್ ಘಟಕ
ಅಲ್ಪಾವಧಿ ಕೋರ್ಸ್ ನೀಡುವ ಸಂಚಾರಿ ತರಬೇತಿ ಘಟಕ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ ಒಂದೊಂದಿದೆ.ಫೀಲ್ಡ್ ಎಲೆಕ್ಟ್ರೀಶಿಯನ್ ತರಬೇತಿಯನ್ನು ಮೊಬೈಲ್ ಘಟಕದ ಮೂಲಕ ನೀಡಲಾಗುತ್ತದೆ. ಇದರ ಕಾರ್ಯವೈಖರಿಯನ್ನು ಖಾಸಗಿ ಏಜೆನ್ಸಿಯೇ ನೋಡಿಕೊಳ್ಳುತ್ತದೆ. ಒಮ್ಮೆಗೆ 15 ಜನರಿಗೆ ತರಬೇತಿ ನೀಡಲಾಗುತ್ತದೆ. ಇದರಲ್ಲಿ ಒಂದು ತಿಂಗಳ ತರಬೇತಿ ಒದಗಿಸಲಾಗುತ್ತದೆ.
ಸರಕಾರಿ ಸ್ವಾಮ್ಯದ ಅಲ್ಪಾವಧಿ ಕೋರ್ಸ್
ಸರಕಾರಿ ಸ್ವಾಮ್ಯದ ಕೈಗಾರಿಕೆ ತರಬೇತಿ ಸಂಸ್ಥೆ (ಐಟಿಐ), ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ), ಸರಕಾರಿ ಸಹಭಾಗಿತ್ವದ ಕರ್ನಾಟಕ ಜರ್ಮನ್ ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ (ಕೆಜಿಟಿಟಿಐ)ಗಳಲ್ಲೂ ಇನ್ನೋವೇಶನ್ ಆ್ಯಂಡ್ ಡಿಸೈನ್, ಫಂಡಮೆಂಟಲ್ಸ್ ಆ್ಯಂಡ್ ಪ್ರೋಡಕ್ಟವಿಟಿ ಟೂಲ್ಸ್, ಕಂಪ್ಯೂಟರ್ ಏಡೆಸ್ ಮ್ಯಾನುಫ್ಯಾಕ್ಚರಿಂಗ್, ಎಲೆಕ್ಟ್ರಿಕಲ್ ವೆಹಿಕಲ್, ವೆಲ್ಡಿಂಗ್ ಸೇರಿದಂತೆ 23 ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ. ತರಬೇತಿ ಸಂಸ್ಥೆಗಳಲ್ಲಿ ಲ್ಯಾಬ್ ಸಹಿತ ಅಗತ್ಯ ಉಪಕರಣಗಳಿದ್ದರೂ ನುರಿತ ತರಬೇತುದಾರರ ಕೊರತೆಯಿದೆ. ಹೀಗಾಗಿ ದಾಖಲಾಗುವ ಅಭ್ಯರ್ಥಿಗಳ ಸಂಖ್ಯೆ ಕಡಿಮೆ.
ಪಿಎಂಕೆವಿವೈ ವಿಳಂಬ
ಕೇಂದ್ರ ಸರಕಾರದ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಮಂತ್ರಾಲಯದ ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆ (ಪಿಎಂಕೆವಿವೈ)ಯಡಿ ಯುವಜನತೆಗೆ ಉದ್ಯಮಾಧಾರಿತ ಕೌಶಲ ತರಬೇತಿ ನೀಡಲಾಗುತ್ತದೆ. ಶಾಲಾ / ಕಾಲೇಜುಗಳನ್ನು ಮಧ್ಯದಲ್ಲಿ ಬಿಟ್ಟ ಅಥವಾ ನಿರುದ್ಯೋಗಿ ಯುವಕ/ಯುವತಿಯರಿಗೆ ಉದ್ಯೋಗ ಪಡೆಯಲು ಅನುಕೂಲವಾಗುವಂತೆ ಆಯ್ದ ತರಬೇತಿ ಕೇಂದ್ರಗಳು ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟಿನ (ಎನ್‌ಎಸ್‌ಕ್ಯೂಎಫ್) ಪ್ರಕಾರ ತರಬೇತಿ ನೀಡುವ ಜತೆಗೆ ಮೃದು ಕೌಶಲ್ಯ, ಉದ್ಯಮಶೀಲತೆ, ಹಣಕಾಸು ಮತ್ತು ಡಿಜಿಟಲ್ ಸಾಕ್ಷರತೆ ವಿಷಯದಲ್ಲಿ ತರಬೇತಿ ನೀಡಲಾಗುತ್ತದೆ. ಯೋಜನೆಯಡಿ ತರಬೇತಿ ಮತ್ತು ಮೌಲ್ಯಮಾಪನ ಶುಲ್ಕವನ್ನು ಸರಕಾರವೇ ಭರಿಸಲಿದೆ. 2022-23ನೇ ಸಾಲಿನ ಪ್ರಸ್ತಾವನೆ ಈಗ ಅಂಗೀಕಾರಗೊಂಡಿದ್ದು, ತರಬೇತಿ ಆರಂಭವಾಗಿದೆ. 2023-24ರ ಯಾವುದೇ ಕಾರ್ಯಕ್ರಮ ಅಂಗೀಕಾರವಾಗಿಲ್ಲ. ಪಿಎಂಕೆವಿವೈ ಕೂಡ ವಿಳಂಬವಾಗುತ್ತಿದೆ.
2023-24ನೇ ಸಾಲಿಗೆ ಸಿಎಂಕೆಕೆವೈ ಅಡಿಯಲ್ಲಿ ಖಾಸಗಿ ಏಜೆನ್ಸಿಗಳನ್ನು ಪರಿಶೀಲಿಸಿ ಜಿಲ್ಲೆಗಳಿಂದ ಪ್ರಸ್ತಾವನೆ ಸಲ್ಲಿಸಿದ್ದೇವೆ. ಯಾವುದೇ ಕಾರ್ಯಾದೇಶ ಬಂದಿಲ್ಲ. ಹೀಗಾಗಿ ಖಾಸಗಿ ಏಜೆನ್ಸಿ ಮೂಲಕ ಉಚಿತವಾಗಿ ನಡೆಯುತ್ತಿದ್ದ ಯಾವುದೇ ಅಲ್ಪಾವಧಿ ಕೋರ್ಸ್ ಈಗ ನಡೆಯುತ್ತಿಲ್ಲ.
– ಅರುಣ್ ಎಚ್., ಸತ್ಯಲತಾ,
ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿಗಳು, ಉಡುಪಿ ಮತ್ತು ದ.ಕ.
You seem to have an Ad Blocker on.
To continue reading, please turn it off or whitelist Udayavani.