ಸುಸಜ್ಜಿತ ಸರ್ಕಲ್ ನಿರ್ಮಾಣಕ್ಕೆ ಬೇಡಿಕೆ; ಅಪಘಾತ ವಲಯವಾಗುತ್ತಿರುವ ಮಾವಿನಕಟ್ಟೆ ಜಂಕ್ಷನ್
Team Udayavani, Feb 1, 2022, 5:46 PM IST
ಗುಲ್ವಾಡಿ: ಕುಂದಾಪುರದಿಂದ ಕೊಲ್ಲೂರನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ತಲ್ಲೂರು- ನೇರಳಕಟ್ಟೆ ಮಾರ್ಗವೂ ಒಂದಾಗಿದೆ. ಈ ಮಾರ್ಗ ಹಾದುಹೋಗುವ ಮಾವಿನಕಟ್ಟೆಯಲ್ಲಿ ಸುಸಜ್ಜಿತ ಸರ್ಕಲ್ ಮಾತ್ರವಲ್ಲದೆ, ಮುಖ್ಯವಾಗಿ ಸುರಕ್ಷತಾ ಕ್ರಮಗಳೂ ಇಲ್ಲದೆ, ಅಪಘಾತ ವಲಯವಾಗಿ ಮಾರ್ಪಾಡಾಗುವ ಭೀತಿ ಎದುರಾಗಿದೆ. ಇದು ರಾಜ್ಯ ಹೆದ್ದಾರಿ ಹಾಗೂ ಜಿ.ಪಂ. ಎರಡೂ ರಸ್ತೆಗಳು ಸಂಧಿಸುವ ಜಂಕ್ಷನ್ ಸಹ ಹೌದು.
ಕುಂದಾಪುರದಿಂದ ಪ್ರಮುಖ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಕೊಲ್ಲೂರನ್ನು ಸಂಪರ್ಕಿಸಲು ಮುಖ್ಯವಾಗಿ ಎರಡು ಮಾರ್ಗಗಳಿವೆ. ಹೆಮ್ಮಾಡಿ – ಕೊಲ್ಲೂರು ಹಾಗೂ ತಲ್ಲೂರು – ನೇರಳಕಟ್ಟೆ – ಕೊಲ್ಲೂರು ಮಾರ್ಗಗಳು. ಈ ಪೈಕಿ ತಲ್ಲೂರು – ನೇರಳಕಟ್ಟೆ ಮಾರ್ಗ ಹಾದುಹೋಗುವ ಮಾರ್ಗದಲ್ಲಿ ಮಾವಿನಕಟ್ಟೆ ಜಂಕ್ಷನ್ ಸಹ ಪ್ರಮುಖವಾಗಿದ್ದು, ಇಲ್ಲಿನ ಜಂಕ್ಷನ್ ಅಭಿವೃದ್ಧಿಗೆ ಇಲ್ಲಿನ ಜನ ಬಹುಕಾಲದಿಂದಲೂ ಬೇಡಿಕೆ ಇಡುತ್ತಿದ್ದರೂ, ಇನ್ನೂ ಈಡೇರುವ ಕಾಲ ಮಾತ್ರ ಸನ್ನಿಹಿತವಾದಂತಿಲ್ಲ.
ಪ್ರಮುಖ ಜಂಕ್ಷನ್
ಮಾವಿನಕಟ್ಟೆ ಜಂಕ್ಷನ್ ದಿನೇ ದಿನೇ ಬೆಳೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಈ ತಲ್ಲೂರು- ಮಾವಿನಕಟ್ಟೆ – ನೇರಳಕಟ್ಟೆ ಮಾರ್ಗವಾಗಿ ಸಂಚರಿಸುವ ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ಕುಂದಾಪುರ – ತಲ್ಲೂರು, ಬಸ್ರೂರು – ಗುಲ್ವಾಡಿ, ಸೌಕೂರು ದೇವಸ್ಥಾನ ಹಾಗೂ ನೇರಳಕಟ್ಟೆ ಈ 4 ಕಡೆಗಳ ರಸ್ತೆಗಳು ಸಂಧಿಸುವ ಪ್ರಮುಖ ಜಂಕ್ಷನ್ ಇದಾಗಿದೆ.
ಸಂಪರ್ಕ ಕೊಂಡಿ
ಮಾವಿನಕಟ್ಟೆ ಜಂಕ್ಷನ್ ಗುಲ್ವಾಡಿ, ಬಸ್ರೂರು, ಸೌಕೂರು, ನೇರಳಕಟ್ಟೆ, ಆಜ್ರಿ, ಸಿದ್ದಾಪುರ, ವಂಡ್ಸೆ, ನೆಂಪು, ಹಟ್ಟಿಯಂಗಡಿ, ತಲ್ಲೂರು ಹೀಗೆ ಹತ್ತಾರು ಊರುಗಳನ್ನು ಸಂಪರ್ಕಿಸುವ ಕೊಂಡಿಯಾಗಿದೆ. ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕುಂದಾಪುರದಿಂದ ಕೊಲ್ಲೂರು, ಆಜ್ರಿ, ಸಿದ್ದಾಪುರ, ಮತ್ತಿತರ ಊರುಗಳಿಗೆ ನಿತ್ಯ ಬಸ್‌ಗಳು ಇದೇ ಸರ್ಕಲ್ ಮೂಲಕವಾಗಿ ಸಂಚರಿಸುತ್ತವೆ.
ಸಮಸ್ಯೆಯೇನು?
ಕುಂದಾಪುರ, ಸೌಕೂರು, ನೇರಳಕಟ್ಟೆ ಹಾಗೂ ಗುಲ್ವಾಡಿ ಈ 4 ಕಡೆಗಳ ಮಾರ್ಗಗಳು ಸಂಧಿಸುವ ಮಾವಿನಕಟ್ಟೆ ಜಂಕ್ಷನ್‌ನಲ್ಲಿ ಸುಸಜ್ಜಿತ ಜಂಕ್ಷನ್ ಇಲ್ಲ. ಈಗಿರುವ ಕಿರಿದಾದ ವೃತ್ತವು ಒಂದೆಡೆ ಏರು, ಮತ್ತೂಂದೆಡೆ ತಗ್ಗು ಇರುವುದರಿಂದ ಅಪಾಯಕಾರಿಯಾಗಿದೆ. ತಲ್ಲೂರು ಕಡೆಯಿಂದ ಬಂದು, ಗುಲ್ವಾಡಿ ಕಡೆಗೆ ಸಂಚರಿಸಲು ಪ್ರಯಾಸಪಡಬೇಕಿದೆ. ಅದಕ್ಕಾಗಿ ಈಗಿರುವ ಕಿರು ಸರ್ಕಲ್‌ನ ಜಾಗವನ್ನು ಸಮತಟ್ಟು ಮಾಡಿ, ಸುಸಜ್ಜಿತ ಸರ್ಕಲ್ ನಿರ್ಮಿಸಿದರೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಈಗ ಇದೇ ಮಾರ್ಗವಾಗಿ ಸೌಕೂರು ಏತ ನೀರಾವರಿ ಕಾಮಗಾರಿ ಸಹ ನಡೆಯುತ್ತಿರುವುದರಿಂದ, ತಲ್ಲೂರಿನಿಂದ ಮಾವಿನಕಟ್ಟೆ, ನೇರಳಕಟ್ಟೆಯವರೆಗೆ ರಸ್ತೆ ಅಭಿವೃದ್ಧಿಯಾಗಲಿದ್ದು, ಅದರೊಂದಿಗೆ ಈ ಜಂಕ್ಷನ್ ಸಹ ಅಭಿವೃದ್ಧಿಯಾಗಲಿ ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.
ಸರ್ಕಲ್ ಅಗತ್ಯ
ಗುಲ್ವಾಡಿ ಗ್ರಾ.ಪಂ. ವ್ಯಾಪ್ತಿಯ ಮಾವಿನಕಟ್ಟೆ ಯಲ್ಲಿ ಸುಸಜ್ಜಿತ ಸರ್ಕಲ್ ನಿರ್ಮಾಣ ವಾಗಬೇಕು ಎನ್ನುವುದಾಗಿ ನಾವು ಈಗಾಗಲೇ ಸಂಸದರು, ಶಾಸಕರು, ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಯಾವುದೇ ಪ್ರಯೋಜನ ಮಾತ್ರ ಆಗಿಲ್ಲ. ಇಲ್ಲಿ ಸರ್ಕಲ್ ತುಂಬಾ ಅಗತ್ಯವಿದೆ. ಬೆಳೆಯುತ್ತಿರುವ ಪೇಟೆಯಾಗಿರು ವುದರಿಂದ ಈಗಲಾದರೂ ಸುಸಜ್ಜಿತ ಸರ್ಕಲ್ ಆಗಲಿ.
-ಸುದೇಶ್ ಶೆಟ್ಟಿ,
ಅಧ್ಯಕ್ಷರು, ಗುಲ್ವಾಡಿ ಗ್ರಾ.ಪಂ.
ಮನವಿ ಸಲ್ಲಿಕೆ
ಮಾವಿನಕಟ್ಟೆಯಲ್ಲಿ ಸರ್ಕಲ್ ನಿರ್ಮಾಣ ಬೇಡಿಕೆ ಬಗ್ಗೆ ಗಮನದಲ್ಲಿದ್ದು, ಈ ಬಗ್ಗೆ ಈಗಾಗಲೇ ಸಂಸದರಿಗೂ ಮನವಿ ಸಲ್ಲಿಸಲಾಗಿದೆ. ಸದ್ಯಕ್ಕೆ ಯಾವುದೇ ಅನುದಾನ ಇಲ್ಲದಿರುವುದರಿಂದ, ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನಹರಿಸಲಾಗುವುದು.
– ಬಿ.ಎಂ. ಸುಕುಮಾರ್ ಶೆಟ್ಟಿ, ಬೈಂದೂರು ಶಾಸಕರು
-ಪ್ರಶಾಂತ್ ಪಾದೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.