ಸಣ್ಣ, ಮಧ್ಯಮ ಉದ್ದಿಮೆಗಳ ಮನವಿಗೆ ಸಿಗದ ಸ್ಪಂದನೆ
Team Udayavani, Feb 18, 2023, 6:10 AM IST
ಸಿಎಂ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್‌ನಲ್ಲಿ ಕೈಗಾರಿಕಾ ವಲಯಕ್ಕೆ ಸಣ್ಣಪುಟ್ಟ ಹಲವು ಅನುಕೂಲಗಳನ್ನು ಘೋಷಿಸಿದ್ದರೂ, ಒಟ್ಟಾರೆ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಪೇಕ್ಷೆಯ ಮಟ್ಟವನ್ನು ತಲುಪಲು ಸಾಧ್ಯವಾಗಿಲ್ಲ.
ಇತ್ತೀಚೆಗೆ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯಕ್ಕೆ ಹತ್ತು ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಹರಿದು ಬರುವ ಪ್ರಸ್ತಾಪಗಳು ಬಂದಿದ್ದವು. ಈ ಪೈಕಿ ಈಗಾಗಲೇ 5 ಲಕ್ಷ ಕೋಟಿ ರೂಪಾಯಿ ಮೌಲ್ಯದ ಉದ್ದಿಮೆಗಳು ಹರಿದು ಬರುವ ಬಗ್ಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿಯೂ ಬಿದ್ದಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಉದ್ದಿಮೆಗಳಿಗೆ ಪೂರಕವಾಗಿರುವ ಸೇವೆಯನ್ನು ಒದಗಿಸುವ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ಹೆಚ್ಚಿನ ನೆರವು ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.
ಪಂಚಾಯತ್ ರಾಜ್‌ನ ನಿಯಮದಡಿ ಗ್ರಾಮೀಣ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೆಚ್ಚಿನ ತೆರಿಗೆ ಹೊರೆ ಇದೆ. ಗ್ರಾಮೀಣ ಭಾಗದ ಕೈಗಾರಿಕೆಗಳ ತೆರಿಗೆಯನ್ನು ಕಡಿಮೆ ಮಾಡಬೇಕು ಎಂಬ ಮನವಿಗೆ ಸ್ಪಂದನೆ ಸಿಕ್ಕಿಲ್ಲ.
ಇ-ಖಾತಾ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವ ಪ್ರಯತ್ನ ನಡೆಯುತ್ತಿದ್ದರೂ ಇನ್ನೂ ಪರಿಣಾಮಕಾರಿಯಾಗುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆ ಬಜೆಟ್‌ನಲ್ಲಿಲ್ಲ.
ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬ್ಯಾಂಕ್ ಸಾಲದ ಶೇ.0.2 ಸ್ಟಾಂಪ್ ಡ್ನೂಟಿ, 0.1 ಶುಲ್ಕವೆಂದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪಾವತಿಸಬೇಕು ಎಂಬ ನಿಯಮವಿದೆ. ಇದರಿಂದಾಗಿ ಸಾಲದ ದೊಡ್ಡ ಪ್ರಮಾಣ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಆದರೆ ತಮಿಳುನಾಡಿನಲ್ಲಿ ಕಡಿಮೆ ನಾಮಮಾತ್ರದ ಹಣ ಪಾವತಿಸುವ ನಿಯಮವಿದೆ. ಇದೇ ಮಾದರಿ ರಾಜ್ಯದಲ್ಲೂ ಜಾರಿಯಾಗಬೇಕು. ಆದರೆ ಬಜೆಟ್‌ನಲ್ಲಿ ಈ ಬಗ್ಗೆ ವ್ಯಾಖ್ಯಾನವಿಲ್ಲ.
ಬಂದರುಗಳಿಗೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ಕೈಗಾರಿಕಾ ಪ್ರದೇಶಗಳನ್ನು ಜೋಡಿಸುವ ಪ್ರಕ್ರಿಯೆಗೆ ಹೆಚ್ಚಿನ ವೇಗ ನೀಡಬೇಕು. ಉಳಿದಂತೆ ನವೋದ್ಯಮ, ಏರೋಸ್ಪೇಸ್ ನೀತಿಗಳು ಉತ್ತಮವಾಗಿದೆ. ಉದ್ಯಮಿಯಾಗಿ, ಉದ್ದಿಮೆ ನೀಡು ಪರಿಕಲ್ಪನೆ ಚೆನ್ನಾಗಿದೆ. ಮುಂದೆ ಚುನಾವಣೆ ಇರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಈ ಬಜೆಟ್ ಮೂಲಕ ಎಲ್ಲ ವರ್ಗವನ್ನು ತಲುಪುವ ಪ್ರಯತ್ನ ನಡೆಸಿದಂತೆ ಕಾಣುತ್ತದೆ.
-ಡಾ. ಜೆ. ಆರ್. ಬಂಗೇರ, ಎಫ್ ಕೆಸಿಸಿಐ ಮಾಜಿ ಅಧ್ಯಕ್ಷ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.