![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 7, 2022, 2:42 PM IST
ಬೀದರ: ಗಾನ ಸರಸ್ವತಿ ಲತಾ ಮಂಗೇಶ್ಕರ್ ಅವರು ಗಡಿ ನಾಡು ಬೀದರ ಜಿಲ್ಲೆಗೂ ಬಂದು ಹೋಗಿದ್ದರು. ಸಂಗೀತ ಕಲಾವಿದರ ಪಾಲಿಗೆ ಪವಿತ್ರ ಕ್ಷೇತ್ರ ಎನಿಸಿರುವ ಮಾಣಿಕನಗರದ ಮಾಣಿಕಪ್ರಭು ಸಂಸ್ಥಾನಕ್ಕೆ ಭೇಟಿ ನೀಡಿ, ತಮ್ಮ ಸಂಗೀತ ಸುಧೆ ಹರಿಸಿದ್ದರು. ಕಲೆ-ಕಲಾವಿದರನ್ನು ಪೋಷಿಸುತ್ತ ಬಂದಿರುವ ಕಲ್ಯಾಣ ಕರ್ನಾಟಕದ ಇತಿಹಾಸ ಪ್ರಸಿದ್ಧ ಮಾಣಿಕಪ್ರಭು ಸಂಸ್ಥಾನ ಧರ್ಮ ಸಮನ್ವಯತೆಗೆ ಹೆಸರಾಗಿದ್ದು, ಕಲಾಕ್ಷೇತ್ರದ ಮಾತೃತಾಣ ಎನಿಸಿದೆ.
ಸಂಸ್ಥಾನದಲ್ಲಿ ಸಂಗೀತ-ನೃತ್ಯ ಕಲೆ ಪ್ರದರ್ಶಿಸಿದರೆ ಕಲಾ ಬದುಕು ಸಾರ್ಥಕತೆ ಅನುಭವಿಸಿದಂತೆಯೇ ಎಂಬುದು ಕಲಾವಿದರ ನಂಬಿಕೆ. ಹಾಗಾಗಿ ದೊಡ್ಡ ದೊಡ್ಡ ದಿಗ್ಗಜರು ಮಾಣಿಕನಗರಕ್ಕೆ ಬಂದು ಕಲಾ ಸೇವೆ ನೀಡಿ ಹೋಗಿದ್ದಾರೆ. ಅದರಲ್ಲೂ ಗಾನ ಸ್ವರ ಶ್ರೀಮಂತಗೊಳಿಸಿದ ಲತಾ ಮಂಗೇಶ್ಕರ್ ಕೂಡ ಒಬ್ಬರೆಂಬುದು ವಿಶೇಷ.
1981ರಲ್ಲಿ ಭೇಟಿ
ಎರಡು ಶತಮಾನಗಳ ಇತಿಹಾಸವುಳ್ಳ ಮಾಣಿಕನಗರವು ದತ್ತ ಪೀಠವಾಗಿದ್ದು, ಗುರು ಪರಂಪರೆ ಅಸ್ತಿತ್ವದಲ್ಲಿದೆ. 1945ರಿಂದ ಪೀಠಾಧಿಪತಿಗಳಾಗಿದ್ದ ಶ್ರೀಸಿದ್ಧರಾಜ್ ಮಾಣಿಕ ಪ್ರಭುಗಳು ಸಂಸ್ಥಾನವನ್ನು ಆಧ್ಯಾತ್ಮಿಕ-ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಗಿ ಪರಿವರ್ತಿಸಿದ್ದಾರೆ. ಭಜನೆ, ಅಭಂಗಗಳನ್ನು ರಚಿಸಿರುವ ಅವರು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಪ್ರಭುಗಳ ಜಯಂತಿಯನ್ನು ಡಿಸೆಂಬರ್‌ನಲ್ಲಿ ಮಹೋತ್ಸವವಾಗಿ ಆಚರಿಸಲಾಗುತ್ತಿದ್ದು, ಪ್ರತಿ ವರ್ಷ ಸಂಗೀತ ದರ್ಬಾರ್ ನಡೆಸಿಕೊಂಡು ಬರಲಾಗುತ್ತಿದೆ.
ಈ ದರ್ಬಾರ್‌ದಲ್ಲಿ ಸಂಗೀತ ದಿಗ್ಗಜರಾದ ಭಾರತರತ್ನ ಭೀಮಸೇನ್ ಜೋಶಿ, ಉಸ್ತಾದ್ ಜಾಕೀರ್ ಹುಸೇನ್, ಪಂ|ಮಲ್ಲಿಕಾರ್ಜುನ್ ಮನ್ಸೂರ್, ಅನುರಾಧಾ ಪೌಡ್ವಲ್ ಅವರಿಂದ ಹಿಡಿದು ಸಂಗೀತಾ ಕಟ್ಟಿವರೆಗೂ ಖ್ಯಾತನಾಮ ಕಲಾವಿದರು ಪ್ರಭುಗಳ ಸನ್ನಿಧಿಯಲ್ಲಿ ಸಂಗೀತ ಸೇವೆಗೈದಿದ್ದಾರೆ. ಅದರಂತೆ 1981ರಲ್ಲಿ ಲತಾ ಮಂಗೇಶ್ಕರ್ ಅವರು ಸಂಸ್ಥಾನಕ್ಕೆ ಬಂದು ಪ್ರಭುಗಳ ದರ್ಶನ ಪಡೆದು ಶ್ರೀ ಸಿದ್ಧರಾಜ್ ಪ್ರಭುಗಳ ಸಮ್ಮುಖದಲ್ಲಿ ಗಾನ ಸುಧೆ ಹರಿಸಿದ್ದರು. ಮಹಾರಾಷ್ಟ್ರದ ಶಹಾಜನಿ ಔರಾದನಲ್ಲಿ ದಿ|ಲತಾ ಅವರು ತಮ್ಮ ತಂದೆ ದಿನಾನಾಥ ಮಂಗೇಶ್ಕರ್ ಅವರ ಹೆಸರಿನಲ್ಲಿ ಸ್ಥಾಪಿಸಿರುವ ವೈದ್ಯ ಕಾಲೇಜು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಣಿಕ ನಗರಕ್ಕೆ ಭೇಟಿ ನೀಡಿದ್ದು ಸ್ಮರಣೀಯ.
ಭಜನೆ ಪದ ಹಾಡಿದ್ದ ಲತಾ
ಲತಾ ಅವರು ಸಿದ್ಧರಾಜ್ ಪ್ರಭುಗಳ ಆಶಯದಂತೆ “ಪಾಯೋಜಿ ಮೈನೆ ರಾಮ ರತನ ಧನ ಪಾಯೋ’, ಶಿವಶಂಕರ ಗಂಗಾಧರ ಗೀತೆ ಮತ್ತು ಮರಾಠಿ ನಾಟ್ಯಗೀತೆ ಸೇರಿ ಐದು ಭಜನೆ ಪದಗಳನ್ನು ಹಾಡಿ ತಮ್ಮ ಭಕ್ತಿ ಸಮರ್ಪಿಸಿದ್ದರು. ಸಂಸ್ಥಾನದಲ್ಲಿನ ಸಂಗೀತ ಪರಂಪರೆ ಮತ್ತು ಕಲೆಯನ್ನು ಪೋಷಿಸುವ ಚಟುವಟಿಕೆಗಳನ್ನು ಕೇಳಿ ಹರ್ಷ ವ್ಯಕ್ತಪಡಿಸಿದ್ದರು.
ಅಂದು ಲತಾ ಅವರ ಸಹೋದರಿ ಮೀನಾ ಮತ್ತು ಸಹೋದರ ಹೃದಯನಾಥ ಮಂಗೇಶ್ಕರ್ ಸಹ ಜತೆಗಿದ್ದರು. ಅಷ್ಟೇ ಅಲ್ಲ ಇದಕ್ಕೂ ಮುನ್ನ 1965ರಲ್ಲಿ ಶ್ರೀ ಸಿದ್ಧರಾಜ್ ಪ್ರಭುಗಳನ್ನು ಲತಾ ಅವರು ತಮ್ಮ ಮುಂಬಯಿನ “ಪ್ರಭು ಕುಂಜ’ ನಿವಾಸಕ್ಕೆ ಆಹ್ವಾನಿಸಿದ್ದರು ಎನ್ನುತ್ತಾರೆ ಸಂಸ್ಥಾನದ ಕಾರ್ಯದರ್ಶಿಗಳಾದ ಶ್ರೀ ಆನಂದರಾಜ್ ಮಾಣಿಕ ಪ್ರಭುಗಳು.
ಭಾರತದ ಗಾನ ಕೋಗಿಲೆ ಎಂದೇ ಪ್ರಸಿದ್ಧಿ ಪಡೆದಿದ್ದ ಲತಾ ಮಂಗೇಶ್ಕರ್ ಅವರ ನಿಧನ ಸಂಗೀತ ಜಗತ್ತಿಗೆ ದೊಡ್ಡ ಆಘಾತ. ಲತಾ ಅವರು ಹಾಡಿದರೆ ಸ್ವರಗಳು ದೇವತೆಯ ರೂಪ ಪಡೆಯುತ್ತಿದ್ದವು ಎಂದು ಶ್ರೀ ಸಿದ್ಧರಾಜ್ ಪ್ರಭುಗಳು ಹೊಗಳಿದ್ದರು. ನಮ್ಮೆಲ್ಲರ ಪಾಲಿಗೆ ಗಾನ ಸರಸ್ವತಿಯಾಗಿ ಹೃದಯದಲ್ಲಿ ನೆಲೆಸಿದ್ದಾರೆ. ಎಲ್ಲಿವರೆಗೂ ಭೂಮಿಯ ಮೇಲೆ ಸಂಗೀತ, ಹಾಡುಗಾರಿಕೆ ಇರುತದೆಯೋ, ಅಲ್ಲಿಯವರೆಗೂ ಅವರ ಹೆಸರು ಚಿರಸ್ಥಾಯಿಯಾಗಿರುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. -ಶ್ರೀ ಆನಂದರಾಜ್ ಮಾಣಿಕಪ್ರಭು, ಕಾರ್ಯದರ್ಶಿ, ಮಾಣಿಕಪ್ರಭು ಸಂಸ್ಥಾನ, ಮಾಣಿಕನಗರ
-ಶಶಿಕಾಂತ ಬಂಬುಳಗ
Bidar: ಕೊನೆಗೂ ಎಟಿಎಂ ಹಣ ದರೋಡೆ – ಶೂಟೌಟ್ ಪ್ರಕರಣದ ಆರೋಪಿಗಳ ಗುರುತು ಪತ್ತೆ
Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ
Bidar: ಸಾಲ ಬಾಧೆ ತಾಳಲಾರದೆ ಯುವ ರೈತ ನೇಣಿಗೆ ಶರಣು
Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ
Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.