ಮಂಗಳೂರಿನಲ್ಲಿ ಮತ್ತೆ ಪ್ರತ್ಯಕ್ಷಗೊಂಡ ಚಿರತೆ !
Team Udayavani, Oct 7, 2021, 4:08 AM IST
ಮಂಗಳೂರು: ಮಂಗಳೂರಿನ ಮರೋಳಿಯ ಜಯನಗರ ಬಳಿ ರವಿವಾರ ಕಾಣಿಸಿಕೊಂಡಿದ್ದ ಚಿರತೆ ಮತ್ತೆ ಪ್ರತ್ಯಕ್ಷಗೊಂಡಿದೆ. ಮರೋಳಿ ಸಮೀಪದ ರೆಡ್ ಬಿಲ್ಡಿಂಗ್ ಎಂಬಲ್ಲಿ ಬುಧವಾರ ಅಪರಾಹ್ನ ಸುಮಾರು 2.30ಕ್ಕೆ ಚಿರತೆ ಕಾಣಿಸಿಕೊಂಡಿದೆ.
ಸ್ಥಳೀಯರಾದ ಸುನೀತಾ ಅವರ ಮನೆ ಬಳಿ ಚಿರತೆ ಕಂಡುಬಂದಿದ್ದು, ಅವರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಕೆಲವು ಸಮಯ ಕಾರ್ಯಾಚರಣೆ ನಡೆಸಿದರೂ ಚಿರತೆ ಮತ್ತೆ ಪತ್ತೆಯಾಗಿಲ್ಲ. ಚಿರತೆ ಕಾಣಿಸಿಕೊಂಡ ಪ್ರದೇಶದ ಬಳಿ ಸದ್ಯ ಬೋನು ಇಡಲಾಗಿದೆ.
ಚಿರತೆ ಕಾಣಿಸಿಕೊಂಡ ವೇಳೆ ಸ್ಥಳೀಯರು ಮೊಬೈಲ್‌ನಲ್ಲಿ ವೀಡಿಯೋ ಸೆರೆ ಹಿಡಿದಿದ್ದರು. ಅರಣ್ಯ ಇಲಾಖೆಯ ಸುಮಾರು 15 ಮಂದಿ ಅಧಿಕಾರಿಗಳು ಜಯನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆಗಾಗಿ ಹುಡುಕಾಟ ನಡೆಸಿದ್ದರು. ಕನಪದವು, ಮಾರ್ತ ಕಂಪೌಂಡ್, ಬಲ್ಲಾಳ್‌ಗುಡ್ಡೆ ವ್ಯಾಪ್ತಿಯಲ್ಲಿ ಚಿರತೆಯ ಹೆಜ್ಜೆ ಗುರುತು ಕೂಡ ಪತ್ತೆಯಾಗಿದ್ದು, ಅದೇ ಸ್ಥಳದಲ್ಲಿ ಬೋನು ಇಟ್ಟಿದ್ದರು. ಎರಡು ದಿನವಾದರೂ ಚಿರತೆ ಬೋನಿಗೆ ಬೀಳಲಿಲ್ಲ.
ಮಂಗಳೂರು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ ಅವರು ಪ್ರತಿಕ್ರಿಯಿಸಿ, “ಈಗಾಗಲೇ ಮರೋಳಿಯ ಜಯನಗರ ಬಳಿ ಚಿರತೆ ಪತ್ತೆಯಾದ ಸ್ಥಳದ ಬಳಿ ಬುಧವಾರ ಮಧ್ಯಾಹ್ನ ಮತ್ತೆ ಚಿರತೆ ಪ್ರತ್ಯಕ್ಷಗೊಂಡಿದೆ. ಚಿರತೆ ಹೆಜ್ಜೆಗುರುತು ಪತ್ತೆಯಾಗಿದೆ. ಸದ್ಯ ಆ ಪ್ರದೇಶದಲ್ಲಿ ಬೋನು ಇಡಲಾಗಿದ್ದು, ಕಾರ್ಯಾಚರಣೆ ಮುಂದುವರಿಯುತ್ತದೆ’ ಎಂದಿದ್ದಾರೆ.
ಇದನ್ನೂ ಓದಿ:ಕೋವಿಡ್ ಲಸಿಕೆ ಭೀತಿ ಇರುವವರ ಸಂಖ್ಯೆ ಶೇ.7ಕ್ಕೆ ಇಳಿಕೆ
ಚಿರತೆ ನೋಡಿ ಭಯ ಆಯ್ತು !
ಸ್ಥಳೀಯರಾದ ಸುನೀತಾ “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಬುಧವಾರ ಅಪರಾಹ್ನ ಮಕ್ಕಳು ಮನೆ ಕೊಠಡಿಯಲ್ಲಿ ಆಟವಾಡುತ್ತಿದ್ದರು. ಆ ವೇಳೆ ದೊಡ್ಡ ಶಬ್ದ ಕೇಳಿಸಿತು. ಕೂಡಲೇ ಮಕ್ಕಳು ನನ್ನನ್ನು ಕರೆದರು. ಮನೆಯ ಹೊರಗಡೆ ನೋಡುವಾಗ ರಬ್ಬರ್ ತೋಟದ ಕಡೆಗೆ ಚಿರತೆ ಹೋಗುತ್ತಿತ್ತು. ಚಿರತೆಯ ಹಿಂಬದಿ ನನಗೆ ಕಾಣಿಸಿದ್ದು, ಕೂಡಲೇ 112 ನಂಬರ್‌ಗೆ ಕರೆ ಮಾಡಿದೆ. ತತ್‌ಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ರಬ್ಬರ್ ತೋಟದ ಬಳಿ ಪೊದೆ-ಗಿಡ ಗಂಟಿಗಳು ಬೆಳೆದಿದ್ದು, ಆ ಕಡೆ ಹೋಗಿರಬಹುದು ಎಂಬ ಸಂಶಯ ಇದೆ’ ಎನ್ನುತ್ತಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.