Politics: ಕೇಂದ್ರ ಸರಕಾರ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿ
Team Udayavani, Sep 6, 2023, 11:10 PM IST
ಕೇಂದ್ರ ಸರಕಾರ ಸೆ. 18ರಿಂದ 22ರ ವರೆಗೆ ಸಂಸತ್‌ನ ವಿಶೇಷ ಅಧಿ ವೇಶನವನ್ನು ನಡೆಸಲು ನಿರ್ಧರಿಸಿದೆ. ಆದರೆ ಈ ವಿಶೇಷ ಅಧಿವೇಶನದ ಕಾರ್ಯಸೂಚಿ ಏನು ಎಂಬುದನ್ನು ಬಹಿರಂಗಪಡಿಸಿಲ್ಲ. ಅಷ್ಟು ಮಾತ್ರ ವಲ್ಲದೆ ಸರಕಾರ ಸಂಸತ್‌ನ ವಿಶೇಷ ಅಧಿವೇಶನ ಕರೆಯುವುದಕ್ಕೂ ಮುನ್ನ ವಿಪಕ್ಷ ನಾಯಕರೊಂದಿಗೆ ಸಮಾಲೋಚನೆ ನಡೆಸದಿರುವುದು, ಮಾಹಿತಿ ನೀಡದಿರುವುದು ಒಂದಿಷ್ಟು ವಿವಾದಕ್ಕೆ ಕಾರಣವಾಗಿದೆ.
ಸಂಸತ್‌ನ ವಿಶೇಷ ಅಧಿವೇಶನ ಕರೆದಿರುವುದಾಗಿ ಸರಕಾರ ಪ್ರಕಟಿಸಿ ದಾಗಿನಿಂದ ಪ್ರತೀದಿನ ಎಂಬಂತೆ ವಿವಿಧ ಊಹಾಪೋಹಗಳು ಕೇಳಿಬರ ತೊಡಗಿವೆ. “ಒಂದು ದೇಶ-ಒಂದು ಚುನಾವಣೆ’, ದೇಶದ ಹೆಸರನ್ನು ಆಂಗ್ಲ ಭಾಷೆಯಲ್ಲಿ “ಇಂಡಿಯಾ’ದ ಬದಲು “ಭಾರತ’ ಎಂದು ಸಂಬೋಧಿಸುವುದು ಮತ್ತಿತರ ವಿಷಯಗಳು ಮುನ್ನೆಲೆಗೆ ಬಂದಿವೆ. ಇದಕ್ಕೆ ಪೂರಕವೋ ಎಂಬಂತೆ ಸರಕಾರದ ಕೆಲವೊಂದು ನಡೆಗಳು ಕೂಡ ಇದನ್ನು ಪುಷ್ಟೀಕರಿಸುವಂತೆ ಮಾಡಿವೆ. ಏತನ್ಮಧ್ಯೆ ಕಾಂಗ್ರೆಸ್ ನೇತೃತ್ವದ ವಿಪಕ್ಷ ಒಕ್ಕೂಟ ಐ.ಎನ್.ಡಿ.ಐ.ಎ. ಕೇಂದ್ರ ಸರಕಾರದ ಈ ನಡೆಯ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದೆ. ದೇಶದ ಜನರ ನೈಜ ಸಮಸ್ಯೆಗಳಿಗೆ ಸ್ಪಂದಿಸುವ ಬದಲಾಗಿ ಕೇಂದ್ರ ಸರಕಾರ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತಂದು ಜನರ ಚಿತ್ತವನ್ನು ಬೇರೆಡೆಗೆ ಸೆಳೆಯುವ ತಂತ್ರವನ್ನು ಅನುಸರಿಸುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆೆ. ಆದರೆ ಕೇಂದ್ರ ಸರಕಾರದ ಪ್ರತಿನಿಧಿಗಳು ಈ ಬಗ್ಗೆ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಸರಕಾರದ ನಡೆಯ ಬಗೆಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದೇ ವೇಳೆ ವಿಶೇಷ ಅಧಿವೇಶನದಲ್ಲಿ ಬೆಲೆ ಏರಿಕೆ, ದೇಶದಲ್ಲಿನ ನೆರೆ-ಬರ ಪರಿಸ್ಥಿತಿ, ಮಣಿಪುರದಲ್ಲಿನ ಜನಾಂಗೀಯ ಸಂಘರ್ಷ, ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಅಸಮಾನತೆ, ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಹಳಸಿರುವ ಸಂಬಂಧ, ಅದಾನಿ ಸಮೂಹದ ಕಂಪೆನಿಗಳ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಹಗರಣಗಳ ತನಿಖೆಗಾಗಿ ಜೆಪಿಸಿ ರಚನೆ, ಗಡಿಯಲ್ಲಿ ಹೆಚ್ಚುತ್ತಿರುವ ಚೀನ ಅತಿಕ್ರಮಣ ಮತ್ತಿತರ ಸಾರ್ವಜನಿಕ ಹಿತಾಸಕ್ತಿಯ ಮತ್ತು ಮಹತ್ವದ ವಿಷಯಗಳ ಕುರಿತಂತೆ ಚರ್ಚೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ವಿಪಕ್ಷಗಳ ಬೇಡಿಕೆಗಳನ್ನು ಸರಕಾರ ಸಾರಾಸಗಟಾಗಿ ತಿರಸ್ಕರಿಸದೆ ಈ ವಿಷಯಗಳ ಚರ್ಚೆಗೆ ಅವಕಾಶ ಮಾಡಿಕೊಡಬೇಕು. ಕೆಲವೊಂದು ಗಂಭೀರ ವಿಷಯಗಳಲ್ಲಿ ಸರ್ಕಾರ ಬಹುಮತವನ್ನು ಮುಂದಿಟ್ಟು ದಿಢೀರ್ ತೀರ್ಮಾನ ಕೈಗೊಳ್ಳುವುದು ಪ್ರಜಾಪ್ರಭುತ್ವ ಸರಕಾರಕ್ಕೆ ಶೋಭೆಯಲ್ಲ. ಈ ಬಗ್ಗೆ ಆಳವಾದ ಅಧ್ಯಯನ, ಚರ್ಚೆ-ವಿಮರ್ಶೆ ನಡೆಸಿ, ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಂತಿಮ ನಿರ್ಧಾರಕ್ಕೆ ಬರುವುದು ಸೂಕ್ತ. ಇಂಥ ವಿಷಯಗಳಲ್ಲಿ ರಾಜಕೀಯ ಹಿತಾಸಕ್ತಿಗಿಂತ ದೇಶದ ಹಿತದೃಷ್ಟಿಯೇ ಮುಖ್ಯವಾಗುತ್ತದೆ ಎನ್ನುವುದನ್ನು ಮರೆಯಬಾರದು. ಸಹಮತದ ನಿರ್ಧಾರಗಳಿಗೆ ಪ್ರಜಾಪ್ರಭುತ್ವದಲ್ಲಿ ಹೆಚ್ಚಿನ ಬೆಲೆ ಮತ್ತು ಮಹತ್ವ. ಅಷ್ಟು ಮಾತ್ರವಲ್ಲದೆ ಹೀಗೆ ಕೈಗೊಳ್ಳಲಾದ ನಿರ್ಧಾರಗಳ ಜಾರಿಯಲ್ಲಿ ಇತ್ತಂಡಗಳೂ ಉತ್ತರದಾಯಿತ್ವವನ್ನು ಹೊಂದಿರುತ್ತವೆ ಎನ್ನುವುದನ್ನು ಕೂಡ ಸರಕಾರ ಮರೆಯಬಾರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.