Exam: ಪರೀಕ್ಷಾ ಅಕ್ರಮ ತಡೆ ಕಾನೂನು ಸಮರ್ಪಕವಾಗಿ ಜಾರಿ ಆಗಲಿ
Team Udayavani, Feb 6, 2024, 11:33 PM IST
ದೇಶಾದ್ಯಂತ ವಿವಿಧ ಸರಕಾರಿ ಹುದ್ದೆಗಳಿಗೆ ಸರಕಾರಿ ನೇಮಕಾತಿ ಪ್ರಾಧಿಕಾರಗಳು ನಡೆಸುವ ಪರೀಕ್ಷೆಗಳಲ್ಲಿ ಭಾರೀ ಅಕ್ರಮಗಳು ನಡೆದು, ಅರ್ಹ ಮತ್ತು ಬಡ ಪ್ರತಿಭಾವಂತ ಅಭ್ಯರ್ಥಿಗಳು ಸರಕಾರಿ ಉದ್ಯೋಗದಿಂದ ವಂಚಿತರಾಗುತ್ತಿರುವ ಪ್ರಕರಣಗಳು ಪ್ರತಿನಿತ್ಯ ಎಂಬಂತೆ ವರದಿಯಾಗುತ್ತಲೇ ಇರುತ್ತವೆ. ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕುವ ದಿಸೆಯಲ್ಲಿ ಪ್ರತಿಯೊಂದು ಪರೀಕ್ಷೆಯ ಸಂದರ್ಭದಲ್ಲಿ ಸಂಬಂಧಪಟ್ಟ ಪರೀಕ್ಷಾ ಪ್ರಾಧಿಕಾರಗಳು ಅಥವಾ ಸಂಸ್ಥೆಗಳು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ತರಹೇವಾರಿ ಹೊಸ ಹೊಸ ನಿರ್ಬಂಧ, ನಿಯಮಗಳನ್ನು ಹೇರುತ್ತಲೇ ಬಂದಿವೆಯಾದರೂ ಪರೀಕ್ಷಾ ಅಕ್ರಮಗಳಿಗಿನ್ನೂ ಸಂಪೂರ್ಣ ಕಡಿವಾಣ ಬಿದ್ದಿಲ್ಲ. ಅಂಕಿಅಂಶವೊಂದರ ಪ್ರಕಾರ ಕಳೆದ 5 ವರ್ಷಗಳ ಅವಧಿಯಲ್ಲಿ ದೇಶದ 15 ರಾಜ್ಯಗಳಲ್ಲಿ ವಿವಿಧ ನೇಮಕಾತಿ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ 1.4 ಕೋಟಿ ಉದ್ಯೋಗಾಕಾಂಕ್ಷಿಗಳು ತೊಂದರೆ ಅನುಭವಿಸಿ ದ್ದಾರೆ. ಈ ಕಾರಣದಿಂದಾಗಿಯೇ ಕೇಂದ್ರ ಸರಕಾರ ಈಗ ಸಂಸತ್‌ನಲ್ಲಿ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ವಿಧಾನಗಳ ತಡೆಗಟ್ಟುವಿಕೆ) ಮಸೂದೆ-2024 ಅನ್ನು ಮಂಡಿಸಿದೆ. ಈ ಮಸೂದೆಯು ಪರೀಕ್ಷಾ ಅಕ್ರಮಗಳಲ್ಲಿ ತೊಡಗಿಕೊಳ್ಳುವ ಮತ್ತು ಶಾಮೀಲಾಗುವವರ ವಿರುದ್ಧ ಕಠಿನ ಕಾನೂನು ಕ್ರಮ ಕೈಗೊಳ್ಳುವ ನಿಯಮವನ್ನು ಒಳಗೊಂಡಿದೆ.
ಪರೀಕ್ಷಾ ಅಕ್ರಮಗಳಿಂದ ರೋಸಿ ಹೋಗಿರುವ ಜನತೆ, ಕೇಂದ್ರ ಸರಕಾರದ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಈ ಪ್ರತಿಕ್ರಿಯೆ ಸಹಜವೇ ಆಗಿದ್ದು, ಪ್ರಸ್ತಾವಿತ ಮಸೂದೆಯು ಶೀಘ್ರವೇ ಕಾನೂನಾಗಿ ಜಾರಿಗೊಂಡು ಅನುಷ್ಠಾನಕ್ಕೆ ಬಂದದ್ದೇ ಆದಲ್ಲಿ ದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಲೇ ಬಂದಿರುವ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಬಿದ್ದು, ಅರ್ಹ ಪ್ರತಿಭಾನ್ವಿತರಿಗೆ ಸರಕಾರಿ ಉದ್ಯೋಗ ಲಭಿಸಲಿದೆ ಎಂಬ ಆಶಾವಾದ ಅವರದ್ದಾಗಿದೆ.
ಕೇಂದ್ರ ಸರಕಾರ ಈಗ ಸಂಸತ್‌ನಲ್ಲಿ ಮಂಡಿಸಿರುವ ಮಸೂದೆಯು ವಿವಿಧ ತೆರನಾದ ಪರೀಕ್ಷಾ ಅಕ್ರಮಗಳಿಗೆ ಗರಿಷ್ಠ 10 ವರ್ಷ ಜೈಲುಶಿಕ್ಷೆ ಮತ್ತು ಒಂದು ಕೋಟಿ ರೂ. ದಂಡ ವಿಧಿಸುವ ಪ್ರಸ್ತಾವವನ್ನು ಒಳಗೊಂಡಿದೆ. ಅಷ್ಟು ಮಾತ್ರವಲ್ಲದೆ ಯಾವೆಲ್ಲ ಅಕ್ರಮಗಳು, ಚಟುವಟಿಕೆಗಳನ್ನು ಪರೀಕ್ಷಾ ಅಕ್ರಮಗಳೆಂದು ಪರಿಗಣಿಸಲಾಗುತ್ತದೆ ಎಂಬುದನ್ನು ಈ ಮಸೂದೆಯಲ್ಲಿ ಪಟ್ಟಿ ಮಾಡಲಾಗಿದೆ. ಸದ್ಯ ಸರಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸುವ ದೇಶದಲ್ಲಿನ ಬಹುತೇಕ ಪರೀಕ್ಷಾ ಪ್ರಾಧಿಕಾರಗಳು, ಆಯೋಗಗಳು ಮತ್ತು ಸಂಸ್ಥೆಗಳನ್ನು ಈ ಮಸೂದೆಯ ವ್ಯಾಪ್ತಿಯಡಿಗೆ ತರಲಾಗಿದೆ.
ದೇಶದಲ್ಲಿ ಸದ್ಯ ಸರಕಾರಿ ಹುದ್ದೆಗಳ ನೇಮಕಕ್ಕಾಗಿ ನಡೆಸಲಾಗುವ ಪರೀಕ್ಷೆಗಳಲ್ಲಿ ಅಕ್ರಮಗಳು ಮತ್ತು ವಿವಿಧ ವ್ಯಕ್ತಿಗಳು ಯಾ ಸಂಸ್ಥೆಗಳು ಎಸಗುವ ಅಪರಾಧಗಳ ವಿರುದ್ಧ ಸೂಕ್ತ ಕ್ರಮ ಜರಗಿಸಲು ಯಾವುದೇ ಸಮಗ್ರವಾದ ನಿರ್ದಿಷ್ಟ ಕಾನೂನು ಜಾರಿಯಲ್ಲಿರಲಿಲ್ಲ. ಇದನ್ನು ಮನಗಂಡ ಸರಕಾರ, ಹೊಸ ಕಾನೂನನ್ನು ಜಾರಿ ಗೊಳಿಸಲು ತೀರ್ಮಾನಿಸಿದೆ. ಸಂಸತ್‌ನಲ್ಲಿ ಮಂಡಿಸಲಾಗಿರುವ ಮಸೂದೆಯ ಅಂಶಗಳು ಬಿಗಿ ನಿಯಮಾವಳಿ, ಕಠಿನ ಶಿಕ್ಷೆ ಸಹಿತ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಒಳಗೊಂಡಿದೆ. ವ್ಯಕ್ತಿಗತ ಮಾತ್ರವಲ್ಲದೆ ಸಂಘಟಿತವಾಗಿ ನಡೆಸಲಾಗುವ ಪರೀಕ್ಷಾ ಅಕ್ರಮಗಳನ್ನು ತಡೆಯಲು ಬಿಗಿ ಕಾನೂನು ಕ್ರಮಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಒಟ್ಟಾರೆಯಾಗಿ ಕೇಂದ್ರ ಸರಕಾರದ ಈ ಪ್ರಸ್ತಾವಿತ ಮಸೂದೆಯು ಕಾನೂನಾಗಿ ಯಥಾವತ್ತಾಗಿ ಅನುಷ್ಠಾನಗೊಂಡದ್ದೇ ಆದಲ್ಲಿ ದೇಶದಲ್ಲಿ ಸದ್ಯ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳಿಗೆ ಅಕ್ಷರಶಃ ಕಡಿವಾಣ ಬೀಳಲಿದೆ. ಪ್ರಸ್ತಾವಿತ ಕಾನೂನು ಕಡತಕ್ಕೆ ಸೀಮಿತವಾಗದೆ ಸಮರ್ಪಕವಾಗಿ ಜಾರಿಗೊಂಡಲ್ಲಿ ಮಾತ್ರವೇ ಸರಕಾರದ ಉದ್ದೇಶ ಈಡೇರಲು ಸಾಧ್ಯ. ಇದರಿಂದ ದೇಶದಲ್ಲಿನ ಪರೀಕ್ಷಾ ವ್ಯವಸ್ಥೆ ಮತ್ತಷ್ಟು ಪಾರದರ್ಶಕಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.