ಅಡಿಕೆ ಪ್ರಾಧಿಕಾರದ ನಿರ್ಧಾರಗಳು ಕಾರ್ಯಗತವಾಗಲಿ
Team Udayavani, Feb 11, 2021, 7:05 AM IST
ರಾಜ್ಯದ ಅದರಲ್ಲೂ ಮಲೆನಾಡು ಮತ್ತು ಕರಾವಳಿಗರ ಅಡಿಕೆ ಬೆಳೆಗಾರರ ಪಾಲಿಗೆ ಕಿಂಚಿತ್ ನಿಟ್ಟುಸಿರು ಬಿಡುವಂತೆ ಮಾಡುವ ನಿರ್ಧಾರವೊಂದನ್ನು ರಾಜ್ಯ ಅಡಿಕೆ ಕಾರ್ಯಪಡೆ ಮಂಗಳವಾರ ಕೈಗೊಂಡಿರುವುದು ಸ್ವಾಗತಾರ್ಹ.
ಅಡಿಕೆ ಮಾನವನ ಆರೋಗ್ಯಕ್ಕೆ ಹಾನಿಕಾರಕವಾದ ಯಾವುದೇ ಅಂಶವನ್ನು ಒಳಗೊಂಡಿಲ್ಲ ಎಂಬುದನ್ನು ಸಾಬೀತುಪಡಿಸಲು ತಜ್ಞರನ್ನು ಒಳಗೊಂಡ ತಾಂತ್ರಿಕ ಸಮಿತಿಯನ್ನು ರಚಿಸಿದೆ. ವೈಜ್ಞಾನಿಕ ಸಂಶೋಧನೆಗಳನ್ನು ಆಧರಿಸಿದ ವರದಿಗಳನ್ನು ಸಿದ್ಧಪಡಿಸಿ, ಅಡಿಕೆ ಆರೋಗ್ಯಕ್ಕೆ ಪೂರಕ ಎಂಬುದನ್ನು ಸುಪ್ರೀಂ ಕೋರ್ಟ್ ನಲ್ಲಿ ಋಜುವಾತು ಪಡಿಸುವುದು ಸಮಿತಿಯ ಹೊಣೆಗಾರಿಕೆ.
ಅಡಿಕೆ ಮತ್ತದರ ಉತ್ಪನ್ನಗಳು ಕ್ಯಾನ್ಸರ್‌ಕಾರಕ ಅಂಶಗಳನ್ನು ಒಳಗೊಂಡಿವೆ ಎಂಬ ಮಿಥ್ಯಾವಾದಗಳು ಕೆಲವು ದಶಕಗಳಿಂದ ಕೇಳಿ ಬರುತ್ತಲೇ ಇವೆ. ಇದಕ್ಕೆ ತಂಬಾಕು ಲಾಬಿ ದನಿಗೂಡಿಸುವ ಮೂಲಕ ಅಡಿಕೆ ಬೆಳೆಗಾರರನ್ನು ಪದೇ ಪದೆ ಆತಂಕಕ್ಕೀಡು ಮಾಡುತ್ತಿವೆ. ಆದರೆ ಇವೆಲ್ಲದರ ಹೊರತಾಗಿಯೂ ಅಡಿಕೆ ಬಗೆಗೆ ಸೂಕ್ಷ್ಮವಾಗಿ ಅಧ್ಯಯನ, ವೈಜ್ಞಾನಿಕ ಸಂಶೋಧನೆ ನಡೆಸಿದ ತಜ್ಞರು, ಅಡಿಕೆಯಲ್ಲಿ ಯಾವುದೇ ಕ್ಯಾನ್ಸರ್‌ಕಾರಕ ಅಂಶಗಳಿಲ್ಲ. ಅಡಿಕೆ ಸೇವನೆ ಮಾನವನ ಆರೋಗ್ಯಕ್ಕೆ ಪೂರಕ ಎಂದಿದ್ದರು. ಆದರೆ ಅಡಿಕೆ ಸೇವನೆ ಕುರಿತಂತೆ ಆಗೊಮ್ಮೆ-ಈಗೊಮ್ಮೆ ಎಂಬಂತೆ ಸಂಶಯದ ವರದಿಗಳನ್ನು ಹುಟ್ಟುಹಾಕುವ ಮೂಲಕ ಬೆಳೆಗಾರರನ್ನು ಆತಂಕದ ಮಡುವಿಗೆ ದೂಡುವ ಪ್ರಯತ್ನಗಳು ಇಂದಿಗೂ ನಿಂತಿಲ್ಲ.
ರಾಜ್ಯದ ಅಡಿಕೆ ಬೆಳೆಗಾರರು ಹಾಗೂ ಸಂಘಟನೆಗಳ ಸತತ ಒತ್ತಡದ ಫಲವಾಗಿ ರಾಜ್ಯ ಸರಕಾರ ಅಡಿಕೆ ಕಾರ್ಯಪಡೆಯನ್ನು ರಚಿಸಿ ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಮುಂದಾಗಿತ್ತು. ಅದರಂತೆ ಈಗ ಕಾರ್ಯಪಡೆ ಅಡಿಕೆಯ ಕುರಿತಾಗಿನ ಅಪವಾದವನ್ನು ಹೋಗಲಾಡಿಸಿ ಬೆಳೆಗಾರರಲ್ಲಿ ಹೊಸ ಹುಮ್ಮಸ್ಸು ಮೂಡಿಸುವ ಪಣತೊಟ್ಟಿದೆ.
ಇದರ ಜತೆಯಲ್ಲಿ ವಿದೇಶಗಳಿಂದ ಆಮದಾಗುವ ಕಳಪೆ ದರ್ಜೆಯ ಅಡಿಕೆಗೆ ಕಡಿವಾಣ ಹಾಕಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಕಾರ್ಯಪಡೆ ನಿರ್ಧರಿಸಿದೆ. ಅಡಿಕೆ ಬೆಳೆಗೆ ತಗಲುವ ವೆಚ್ಚವನ್ನು ಆಧರಿಸಿ ಬೆಲೆ ನಿಗದಿಪಡಿಸಲೂ ಮನವಿ ಮಾಡಿದೆ. ಒಂದು ವೇಳೆ ಕೇಂದ್ರ ಸರಕಾರ ಇದಕ್ಕೆ ಸ್ಪಂದಿಸಿದಲ್ಲಿ ಅಡಿಕೆ ಬೆಲೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿದೆ. ಇದರಿಂದ ಬೆಳೆಗಾರರು, ವ್ಯಾಪಾರಿಗಳು ಮತ್ತು ದಲ್ಲಾಳಿಗಳ ಕಪಿಮುಷ್ಟಿಯಿಂದ ಪಾರಾಗಿ ಬೆಲೆ ಏರಿಳಿತಗಳಿಂದ ಜರ್ಝರಿತರಾಗುವುದು ತಪ್ಪಬಹುದು.
ಇವೆಲ್ಲದಕ್ಕಿಂತ ಮುಖ್ಯವಾಗಿ ಕಾರ್ಯಪಡೆ ಅಡಿಕೆಯ ಪರ್ಯಾಯ ಉತ್ಪನ್ನಗಳ ತಯಾರಿ ಮತ್ತು ಮೌಲ್ಯವರ್ಧನೆಯ ಬಗೆಗೆ ಅಧ್ಯಯನ ನಡೆಸಲು ಗಂಭೀರ ಚಿಂತನೆ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ. ಅಡಿಕೆ ಸೇವನೆಯ ಸಂಪ್ರದಾಯ ಮುಂದುವರಿಕೆಗೆ ಉತ್ತೇಜನ ನೀಡುವ ಜತೆಯಲ್ಲಿ ಮೌತ್‌ಫ್ರೆಶ್‌ನರ್, ಟೀಯಂಥ ಉಪ ಉತ್ಪನ್ನಗಳ ಸಂಶೋಧನೆಗೆ ಯುವ ಸಂಶೋಧಕರನ್ನು ತೊಡಗಿಸುವಂತೆ ಮಾಡಬೇಕು. ಆ ಮೂಲಕ ಅಡಿಕೆಗೆ ಶಾಶ್ವತ ಮಾರುಕಟ್ಟೆಯನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಯೋಜನೆ ಕಾರ್ಯಗತಗೊಳಿಸಬೇಕು. ಆದರೆ ಇವೆಲ್ಲವನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಹೊಣೆಗಾರಿಕೆ ಅಡಿಕೆ ಪ್ರಾಧಿಕಾರ ಮತ್ತು ಸರಕಾರದ ಮೇಲಿದೆ. ಪ್ರಾಧಿಕಾರ ಮೂರ್‍ನಾಲ್ಕು ಸಭೆಗಳನ್ನು ನಡೆಸಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವುದಕ್ಕಷ್ಟೇ ಸೀಮಿತ ಆಗಬಾರದು. ಪ್ರಾಧಿಕಾರ ಸರಕಾರದ ಮೇಲೆ ಒತ್ತಡ ಹೇರಿ ತನ್ನ ಸಮಯೋಚಿತ ಹಾಗೂ ಬೆಳೆಗಾರರ ಹಿತ ಕಾಯುವಂಥ ನಿರ್ಧಾರಗಳನ್ನು ಮತ್ತು ಉದ್ದೇಶಿತ ಯೋಜನೆಗಳನ್ನು ಕಾರ್ಯಗತಗೊಳಿಸಲು ಶತಾಯ ಗತಾಯ ಪ್ರಯತ್ನಿಸಬೇಕು. ಆಗ ಮಾತ್ರ ಪ್ರಾಧಿಕಾರ ರಚಿಸಿದ ಉದ್ದೇಶ ಈಡೇರೀತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.