ಮಳೆ ಬರಲಿ, ಬರ ದೂರ ಇರಲಿ – ವಾರಾಹಿ ಸದ್ಯ ಬತ್ತಿಲ್ಲ, ಮುಂದೆ ಗೊತ್ತಿಲ್ಲ !
Team Udayavani, Sep 7, 2023, 2:26 AM IST
ಕುಂದಾಪುರ: ಉಡುಪಿ ಜಿಲ್ಲೆಯ ಮಟ್ಟಿಗೆ ದೊಡ್ಡ ನದಿಯಾದ ವಾರಾಹಿ ಸದ್ಯ ಬತ್ತಿಲ್ಲ, ಮುಂದೆ ಗೊತ್ತಿಲ್ಲ ಎಂಬ ಸ್ಥಿತಿಯಲ್ಲಿದೆ.ಎರಡು ದಶಕಗಳಲ್ಲಿ ಬಾರದ ನೀರಿನ ಕೊರತೆ ಈ ಬಾರಿ ಪುರಸಭೆ ಸಹಿತ ಅನೇಕ ಗ್ರಾಮ ಪಂಚಾಯತ್‌ಗಳಿಗೆ ತಟ್ಟಿದೆ.
ಇದಕ್ಕೆ ಪುರಸಭೆ ಆಡಳಿತ ಕೊಡುವ ಕಾರಣಗಳು ಬೇರೆ ಇರಬಹುದು. ಆದರೂ ವಾರಾಹಿ ಅಣೆಕಟ್ಟಿನಲ್ಲಿ ಕಳೆದ ವರ್ಷಕ್ಕೂ ಇಂದಿಗೂ ಹೋಲಿಸಿದರೆ ಅರ್ಧದಷ್ಟು ನೀರು ಕಡಿಮೆ ಇದೆ. ಹಾಗಾಗಿ ವಾರಾಹಿ ತಳಮುಟ್ಟಿದರೆ ಇಲ್ಲಿ ಪರ್ಯಾಯ ನೀರು ಇಲ್ಲ ಎನ್ನುವುದು ಸ್ಪಷ್ಟ.
ನೀರು ಕಡಿಮೆ
2021ರಲ್ಲಿ ವಾರಾಹಿಯಲ್ಲಿ 13.41 ಟಿಎಂಸಿ ನೀರಿನ ಪ್ರಮಾಣ ಇತ್ತು. ಆದರೆ ಈ ವರ್ಷ ಲೆಕ್ಕಾಚಾರವೇ ಬುಡಮೇಲಾಗಿದೆ. ವಿದ್ಯುತ್ ಉತ್ಪಾದನೆಗೆ ಮಾಣಿ ಎಂಬಲ್ಲಿ ಅಣೆಕಟ್ಟು ಕಟ್ಟಲಾಗಿದೆ. 31 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 10.5 ಟಿಎಂಸಿ ಪ್ರಮಾಣದಷ್ಟೇ ನೀರಿದೆ. ಕಳೆದ ವರ್ಷ ಇದೇ ವೇಳೆಗೆ 20 ಟಿಎಂಸಿ ಯಷ್ಟಿತ್ತು. 2014ರಲ್ಲಿ ಮಾತ್ರ ಅಣೆಕಟ್ಟು ತನ್ನ ಸಾಮರ್ಥ್ಯದಷ್ಟು ತುಂಬಿ ಕೊಂಡಿತ್ತು. ಇಲ್ಲಿಂದ ಬಿಡುವ ನೀರು ವಿದ್ಯುತ್ ಉತ್ಪಾದನೆ ಬಳಿಕ ಕುಡಿಯಲು ಹಾಗೂ ಕೃಷಿ ಬಳಕೆಗೆ ದೊರೆಯಬೇಕು.
ವಿದ್ಯುತ್ ಹಾಗೂ ಕೃಷಿ ಕಾಲುವೆ ಎರಡು ಪ್ರಮುಖ ಯೋಜನೆಗಳು ವಾರಾಹಿಯನ್ನು ಆಶ್ರಯಿಸಿವೆ. ಇದಲ್ಲದೇ ಮೂರನೆಯ ಯೋಜನೆ ಜಪ್ತಿ ಬಳಿ ಜಂಬೂ ನದಿ ಮೂಲಕ ಪುರಸಭೆ ವ್ಯಾಪ್ತಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಅಲ್ಲದೇ 7 ಪಂಚಾಯತ್‌ಗಳಿಗೂ ವಾರಾಹಿಯ ನೀರನ್ನೇ ಅವಲಂಬಿಸಲಾಗಿದೆ.
ಅಣೆಕಟ್ಟು ಆಧಾರಿತ
ಜಪ್ತಿ ಘಟಕದ ನೀರಿನ ಪ್ರಮಾಣವು ವಾರಾಹಿ ಅಣೆಕಟ್ಟಿನಿಂದ ಬಿಡುವ ನೀರಿನ ಪ್ರಮಾಣವನ್ನು ಅವಲಂಬಿಸಿದೆ. ಹಾಗಾಗಿ ಅಣೆಕಟ್ಟಿನ ಮೇಲ್ಭಾಗದಲ್ಲಿ ಇರುವ ನೀರು, ಬಿದ್ದ ಮಳೆಯೇ ಪ್ರಧಾನವಾಗಿರುತ್ತದೆ. ಇಲ್ಲಿ ಬಿದ್ದ ಮಳೆ ಸಮುದ್ರ ಸೇರಲು ಸಾಗುತ್ತದೆ. ಸದ್ಯದ ಮಟ್ಟಿಗೆ ವಾರಾಹಿಯಲ್ಲಿ ನೀರಿನ ಹರಿವಿನ ಕೊರತೆ ಕಾಣುತ್ತಿದೆ. ಇದು ವಿದ್ಯುತ್ ಉತ್ಪಾದನೆ, ಕೃಷಿ ನೀರಾವರಿ ಹಾಗೂ ಕುಡಿಯುವ ನೀರಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಕುಂದಾಪುರ ನಗರಕ್ಕೆ ಕುಡಿಯುವ ನೀರಿಗೆ ಕಳೆದ ಬಾರಿ ತಾಂತ್ರಿಕ ಸಮಸ್ಯೆಯಾದುದರ ಹೊರತಾಗಿ ನೀರಿನ ಕೊರತೆಯಾಗಿಲ್ಲ. ಈ ಬಾರಿ ಮಳೆ ಕಡಿಮೆಯಾದ ಕಾರಣ ಏನಾಗಲಿದೆ ಎಂಬುದನ್ನು ಈಗಲೇ ಹೇಳಲಾಗದು.
– ಮಂಜುನಾಥ ಆರ್. ಮುಖ್ಯಾಧಿಕಾರಿ, ಪುರಸಭೆ, ಕುಂದಾಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.