ಆಶ್ಲೇಷಾ ಮಳೆಗೆ ಜನಜೀವನ ಸ್ತಬ್ಧ
Team Udayavani, Aug 7, 2019, 3:10 AM IST
ರಾಜ್ಯದ ಹಲವು ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ನದಿ, ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಬೆಳಗಾವಿ ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ಪ್ರವಾಹದ ಭೀತಿ ಮತ್ತಷ್ಟು ಹೆಚ್ಚಿದೆ. ಮಲೆನಾಡು, ಕರಾವಳಿ ಪ್ರದೇಶದಲ್ಲೂ ಮಳೆಯ ಭೀಕರತೆ ಜೋರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬುಧವಾರ ಹಲವು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಆಶ್ಲೇಷಾ ಮಳೆಯ ಅಬ್ಬರ ಮುಂದುವರಿದಿದ್ದು, ಮಲೆನಾಡು, ಹಳೇ ಮೈಸೂರು, ಕೊಡಗು, ಕರಾವಳಿ, ಉತ್ತರ ಕರ್ನಾಟಕ ಸೇರಿ ರಾಜ್ಯದ ಹಲವು ಪ್ರದೇಶಗಳು ಭಾರೀ ಗಾಳಿ ಮಳೆಯಲ್ಲಿ ಅಕ್ಷರಶ: ತೊಯ್ದು ತೊಪ್ಪೆಯಾಗಿವೆ. ನದಿ, ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಇದೇ ವೇಳೆ, ಬೆಳಗಾವಿ ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ಪ್ರವಾಹದ ಭೀಕರತೆ ಮತ್ತಷ್ಟು ಹೆಚ್ಚಿದೆ.
ಇದರಿಂದಾಗಿ ಉತ್ತರ ಕರ್ನಾಟಕ ಭಾಗದ ಬೆಳಗಾವಿ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲಾ ವ್ಯಾಪ್ತಿಯ ನದಿ ಪಾತ್ರದ ಹಳ್ಳಿಗಳಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಈ ಮಧ್ಯೆ, ಭಾರತೀಯ ಹವಾಮಾನ ಇಲಾಖೆ ಆ.8ರ ವರೆಗೆ ಕರಾವಳಿ, ಕೊಡಗು, ಮಲೆನಾಡು ಭಾಗದಲ್ಲಿ “ರೆಡ್ ಅಲರ್ಟ್’ ಘೋಷಿಸಿದ್ದು, ಮುಂದಿನೆರಡು ದಿನಗಳಲ್ಲಿ ಮಳೆ ಇನ್ನಷ್ಟು ತೀವ್ರವಾಗುವ ಸಾಧ್ಯತೆಯಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬುಧವಾರ ಹಲವು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕರಾವಳಿ, ಘಟ್ಟಪ್ರದೇಶದಲ್ಲಿ ರೆಡ್ ಅಲರ್ಟ್: ಮುಂದಿನ ಎರಡು ದಿನಗಳ ಕಾಲ ಕರಾವಳಿ ಮತ್ತು ಘಟ್ಟಪ್ರದೇಶಗಳಲ್ಲಿ ಭಾರೀಯಿಂದ ಅತಿ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಹಾಗೂ ಘಟ್ಟಪ್ರದೇಶದ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಸುತ್ತಲಿನ ಭಾಗಗಳಲ್ಲಿ “ರೆಡ್ ಅಲರ್ಟ್’ ಘೋಷಿಸಲಾಗಿದೆ. (ಸಾಮಾನ್ಯವಾಗಿ 204.4 ಮಿ.ಮೀ.ಗಿಂತ ಹೆಚ್ಚು ಮಳೆಯಾಗುವ ಪ್ರದೇಶವನ್ನು “ರೆಡ್ ಅಲರ್ಟ್’ ಎಂದು ಘೋಷಿಸಲಾಗುತ್ತದೆ). ಈ ಹಿನ್ನೆಲೆಯಲ್ಲಿ ಮುಂದಿನ ಎರಡೂ ದಿನಗಳು ಈ ಭಾಗಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ನೆರೆ ಹಾವಳಿ ಇರುವ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಕೂಡ ಮುಂದಿನ ಎರಡು ದಿನಗಳು ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಪ್ರದೇಶದಲ್ಲಿ ದಿನಕ್ಕೆ 115.6ರಿಂದ 204.4 ಮಿ.ಮೀ. ಮಳೆ ಸುರಿಯುವ ಲಕ್ಷಣ ಇರುವುದರಿಂದ “ಯಲ್ಲೋ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ. ಬಂಗಾಳ ಕೊಲ್ಲಿಯ ಉತ್ತರದಲ್ಲಿ ಕಡಿಮೆ ಒತ್ತಡದ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಂಡು ಬಂದಿದೆ. ಇದಲ್ಲದೆ, ದಕ್ಷಿಣ ಗುಜರಾತ್ ಕರಾವಳಿಯಿಂದ ಉತ್ತರ ಕೇರಳ ಕರಾವಳಿ ಮಧ್ಯೆ ಕಡಿಮೆ ಒತ್ತಡದ ತಗ್ಗು (ಆಫ್ಶೋರ್ ಟ್ರಫ್) ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರಿಯಿಂದ ಅತಿ ಭಾರಿ ಮಳೆ ಹಾಗೂ ಉಳಿದೆಡೆ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ಅಪರ ನಿರ್ದೇಶಕ ಸಿ.ಎಸ್.ಪಾಟೀಲ ತಿಳಿಸಿದ್ದಾರೆ.
ಭಾಗಮಂಡಲ ಜಲಾವೃತ: ಕೊಡಗಿನ ಮಡಿಕೇರಿ, ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲೂಕುಗಳಲ್ಲಿ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಕಾವೇರಿಯ ಉಗಮ ಕ್ಷೇತ್ರ ತಲಕಾವೇರಿಯಲ್ಲೂ ಭಾರೀ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಮಡಿಕೇರಿ, ಭಾಗಮಂಡಲ, ನಾಪೋಕ್ಲು ರಸ್ತೆಗಳಲ್ಲಿ ಪ್ರವಾಹದ ಪರಿಸ್ಥಿತಿ ಇದ್ದು, ಗ್ರಾಮಸ್ಥರ ಸಂಚಾರಕ್ಕೆ ಜಿಲ್ಲಾಡಳಿತ ದೋಣಿ ವ್ಯವಸ್ಥೆಯನ್ನು ಮಾಡಿದೆ. ನೀರು ಭಗಂಡೇಶ್ವರ ದೇವಾಲಯದ ಮೆಟ್ಟಿಲನ್ನು ಆವರಿಸಿದ್ದು, ಭಕ್ತರ ಪ್ರವೇಶಕ್ಕೆ ಅಡಚಣೆಯಾಗಿದೆ. ಮೂರ್ನಾಡು ಸಮೀಪ ಬಲಮುರಿಯ ಹಳೆಯ ಸೇತುವೆ ಮುಳುಗಡೆಗೊಂಡಿದೆ. ಸೋಮವಾರಪೇಟೆ, ಸಕಲೇಶಪುರ ಹೆದ್ದಾರಿಯಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿ, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಳೆ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ.
ಘಾಟಿಯಲ್ಲಿ ಭೂಕುಸಿತ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ನೇತ್ರಾವತಿ, ಫಲ್ಗುಣಿ, ಕುಮಾರಧಾರಾ ನದಿಗಳು ಉಕ್ಕಿ ಹರಿಯುತ್ತಿವೆ. ನದಿಗಳ ತೀರ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಚಾರ್ಮಾಡಿ ಮತ್ತು ಶಿರಾಡಿ ಘಾಟಿಯಲ್ಲಿ ಭೂಕುಸಿತದ ಅಪಾಯವಿದ್ದು, ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಳೆ ಹಿನ್ನೆಲೆಯಲ್ಲಿ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಕಡಬ ತಾಲೂಕಿನ ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು. ಕಂಬಪದವು ಸಮೀಪದ ಸಾಂಬಾರುತೋಟ ಭಾಗದ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಮಂಗಳೂರು ನಗರ ಜೈಲ್‌ರೋಡ್ ಬಳಿ ಮನೆಯ ಕಂಪೌಂಡ್ ಕುಸಿದಿದೆ. ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಕೆಲಕಾಲ ಮುಳುಗಿತ್ತು.
58 ವರ್ಷದ ಬಳಿಕ ಗಂಗಾವಳಿ ರೌದ್ರಾವತಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ವರದಾ, ಅಘನಾಶಿನಿ, ಕಾಳಿ, ಬೇಡ್ತಿ, ಗಂಗಾವಳಿ, ಶರಾವತಿ ನದಿಗಳು ಉಕ್ಕಿ ಹರಿಯುತ್ತಿವೆ. ಮಲೆನಾಡು-ಕರಾವಳಿ ಬೆಸೆಯುವ ಮೂರು ಪ್ರಮುಖ ಮಾರ್ಗಗಳಲ್ಲಿ ಗುಡ್ಡ ಕುಸಿದು ಸಂಪರ್ಕ ಕಡಿತಗೊಂಡಿದೆ. 51 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಸಿದ್ದಾಪುರದ ಹೆಮ್ಮನಬೈಲ್‌ನಲ್ಲಿ ಪ್ರವಾಹಕ್ಕೆ ಸಿಲುಕಿದ್ದ 6 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಮಾಜಿ ಸಿಎಂ ಬಂಗಾರಪ್ಪ ಅವರ ಕುಲದೈವ ಇಲ್ಲಿನ ಗುಡ್ನಾಪುರ ಕೆರೆದಂಡೆ ಮೇಲಿರುವ ಬಂಗಾರೇಶ್ವರ ದೇವಸ್ಥಾನ ಜಲಾವೃತವಾಗಿದೆ. ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟ ಪ್ರದೇಶದಲ್ಲಿ ಗುಡ್ಡ ಕುಸಿತ ಉಂಟಾಗಿ ಸಂಪರ್ಕ ಕಡಿತವಾಗಿದೆ.ಅಂಕೋಲಾ ತಾಲೂಕಿನ ಮಳೆ ಆರ್ಭಟಕ್ಕೆ 58 ವರ್ಷದ ಬಳಿಕ ಗಂಗಾವಳಿ ನದಿ ರೌದ್ರಾವತಾರ ತಾಳಿದೆ. ಹಿಚRಡ ಕುರ್ವೆ ಮತ್ತು ದಂಡೆಬಾಗ ಸಂಪೂರ್ಣ ಮುಳುಗಡೆಯಾಗಿದ್ದು, 100ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಸುಂಕಸಾಳ ಗ್ರಾ.ಪಂ ವ್ಯಾಪ್ತಿಯ ಹೈಲೆಂಡ್ ಹೋಟೆಲ್ ಬಳಿ ರಾಷ್ಟ್ರೀಯ ಹೆದ್ದಾರಿ 63 ಬಂದ್ ಆಗಿದೆ.
ವಾಡಿಕೆಗಿಂತ ಕಡಿಮೆ ಮಳೆ: ರಾಜ್ಯಾದ್ಯಂತ ಈ ಬಾರಿಯ ಮುಂಗಾರು ಮಳೆಯ ಪ್ರಮಾಣ ಜೂನ್ 1ರಿಂದ ಜುಲೈ 31ರವರೆಗೆ ವಾಡಿಕೆಗಿಂತ ಶೇ.13ರಷ್ಟು ಕಡಿಮೆ ಇದೆ. ವಾಡಿಕೆ ಮಳೆ 463.5 ಮಿ.ಮೀ. ಆದರೆ, ಬಿದ್ದ ಮಳೆ 403.1 ಮಿ.ಮೀ. ದಕ್ಷಿಣ ಒಳನಾಡಿನಲ್ಲಿ ಶೇ. 25ರಷ್ಟು ಮಳೆ ಕೊರತೆ ಇದೆ. ಒಟ್ಟಾರೆ 30 ಜಿಲ್ಲೆಗಳ ಪೈಕಿ ನಾಲ್ಕು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಾಗಿದ್ದು, ಹತ್ತು ಜಿಲ್ಲೆಗಳಲ್ಲಿ ವಾಡಿಕೆ ಮತ್ತು ಉಳಿದ 16 ಕಡೆ ಸಾಮಾನ್ಯಕ್ಕಿಂತ ಕಡಿಮೆ ಮಳೆ ಆಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಳೆಯ ಪ್ರಮಾಣ ನೋಡಿದಾಗ ಉತ್ತರದಲ್ಲಿ ವಾಡಿಕೆಯಷ್ಟೇ ಇದೆ.
ರೈಲು-ಬಸ್ ಸೇವೆ ವ್ಯತ್ಯಯ: ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಮುಂಬೈ-ಪುಣೆ-ಕೊಲ್ಲಾಪುರ ಭಾಗಕ್ಕೆ ಹೋಗುವ ಕೆಎಸ್‌ಆರ್‌ಟಿಸಿ ಮತ್ತು ಕೆಲವು ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಸಿರಿಬಾಗಿಲು ವ್ಯಾಪ್ತಿಯಲ್ಲಿ ರೈಲ್ವೆ ಹಳಿಗೆ ಮಣ್ಣು ಕುಸಿ ದ ಪರಿಣಾಮ ಮಂಗಳೂರು-ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ.
ಬಸ್ ಸಂಪರ್ಕ ಕಡಿತ-ಪರದಾಟ: ಮಹಾರಾಷ್ಟ್ರದಲ್ಲಿನ ವರುಣನ ರುದ್ರನರ್ತನದ ಎಫೆಕ್ಟ್ ಕೆಎಸ್‌ಆರ್‌ಟಿಸಿ ಮೇಲೂ ಆಗಿದ್ದು, ನಿಗಮದ ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಕೆಎಸ್‌ಆರ್‌ಟಿಸಿಯಿಂದ ಮಹಾರಾಷ್ಟ್ರದ ವಿವಿಧ ಭಾಗಗಳಿಗೆ ನಿತ್ಯ ಸುಮಾರು ಹತ್ತಕ್ಕೂ ಹೆಚ್ಚು ಬಸ್‌ಗಳು ಕಾರ್ಯಾಚರಣೆ ಮಾಡುತ್ತವೆ. ಅವುಗಳ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದು, ಇನ್ನೂ ಒಂದೆರಡು ದಿನಗಳು ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಬೆಂಗಳೂರು, ಮೈಸೂರು, ಮಂಗಳೂರು ಮತ್ತಿತರ ಕಡೆಗಳಿಂದ ಮಹಾರಾಷ್ಟ್ರದ ಮುಂಬೈ, ಪುಣೆ, ಶಿರಡಿಗೆ ಹತ್ತಕ್ಕೂ ಹೆಚ್ಚು ಬಸ್‌ಗಳು ನಿತ್ಯ ಕಾರ್ಯಾಚರಣೆ ನಡೆಸುತ್ತವೆ. ಅದೇ ರೀತಿ, ಮಹಾರಾಷ್ಟ್ರದಿಂದಲೂ ರಾಜ್ಯಕ್ಕೆ ಬರುತ್ತವೆ. ಭಾರಿ ಮಳೆಯಿಂದ ಬಹುತೇಕ ಕಡೆಗಳಲ್ಲಿ ನೆರೆ ಹಾವಳಿ ಉಂಟಾಗಿರುವುದರಿಂದ ಬಸ್‌ಗಳ ಸಂಚಾರ ಅಸಾಧ್ಯ. ಹಾಗಾಗಿ, ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಮಧ್ಯೆ, ಉತ್ತರ ಕರ್ನಾಟಕದಲ್ಲಿ ಇನ್ನೂ ಎರಡು ದಿನಗಳು ಭಾರಿ ಮಳೆಯ ಮುನ್ಸೂಚನೆ ಇದ್ದು, ಮುಂದಿನ ಒಂದೆರಡು ದಿನಗಳು ಉದ್ದೇಶಿತ ಮಾರ್ಗದಲ್ಲಿ ಸೇವೆ ಅಲಭ್ಯವಾಗಲಿದೆ.
ಭೂಕುಸಿತ-ರೈಲು ಸಂಚಾರ ವಿಳಂಬ: ಲೋಂಡಾ-ತಿನೈಘಾಟ್ ಮಧ್ಯೆ ಭೂ ಕುಸಿತದಿಂದ ಕೆಲ ರೈಲುಗಳು ವಿಳಂಬವಾಗಿ ಸಂಚರಿಸಲಿವೆ. ಆ.6ರಂದು ಸಂಜೆ 4:15ಕ್ಕೆ ಹೊರಡಬೇಕಿದ್ದ ಹುಬ್ಬಳ್ಳಿ-ಹಜರತ್ ನಿಜಾಮುದ್ದಿನ್ ಲಿಂಕ್ ಎಕ್ಸ್‌ಪ್ರೆಸ್ (17305) ರೈಲು ಆ.7ರಂದು ಮಧ್ಯರಾತ್ರಿ 12:30ಕ್ಕೆ ಪ್ರಯಾಣ ಬೆಳೆಸಲಿದೆ. ಆ.6ರಂದು ಸಂಜೆ 7 ಗಂಟೆಗೆ ಲೋಂಡಾದಿಂದ ಹೊರಡಲಿದ್ದ ವಾಸ್ಕೊ-ಡ-ಗಾಮಾ-ಹಜರತ್ ನಿಜಾಮುದ್ದಿನ್ ಎಕ್ಸ್‌ಪ್ರೆಸ್ ರೈಲು ಆ.7ರಂದು ರಾತ್ರಿ 2:30ಕ್ಕೆ ತೆರಳಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಹಳೇ ಮೈಸೂರು ಭಾಗದಲ್ಲೂ ಮಳೆ:
ಹಾಸನ, ಮೈಸೂರು, ಬೆಂಗಳೂರು ಸೇರಿ ಹಳೇ ಮೈಸೂರು ಭಾಗದಲ್ಲೂ ಮಳೆಯಾಗುತ್ತಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸುರಿದ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳೆಲ್ಲಾ ಜಲಾವೃತವಾಗಿದ್ದವು. ಕೊಡಗಿನಲ್ಲಿ ಭಾರೀ ವರ್ಷಧಾರೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ಗೆ 18 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಅಣೆಕಟ್ಟೆಯ ನೀರಿನ ಮಟ್ಟದಲ್ಲಿ ಎರಡು ಅಡಿ ಹೆಚ್ಚಳವಾಗಿದ್ದು, ಜಲಾಶಯದಲ್ಲಿ 13.3 ಟಿಎಂಸಿ ಅಡಿ ನೀರಿನ ಸಂಗ್ರಹವಾಗಿದೆ. ಗುಂಡ್ಲುಪೇಟೆ ಸೇರಿದಂತೆ ಚಾಮರಾಜನಗರ ಜಿಲ್ಲೆಯ ಹಲವೆಡೆ ಜಿಟಿಜಿಟಿ ಮಳೆಯೊಂದಿಗೆ ಶೀತಗಾಳಿ ಬೀಸುತ್ತಿದೆ. ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯದಿಂದ ನದಿಗೆ ಹೆಚ್ಚಿನ ನೀರು ಬಿಡುತ್ತಿರುವುದರಿಂದ ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಜಲಪಾತ ಭರಚುಕ್ಕಿ ಧುಮ್ಮಿಕ್ಕುತ್ತಿದೆ. ಹಾಸನ ಜಿಲ್ಲೆಯಲ್ಲಿಯೂ ಮಳೆಯಾಗುತ್ತಿದ್ದು, ಸಕಲೇಶಪುರ ತಾಲೂಕಿನಲ್ಲಿ ಕೆಲವು ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ ನೀಡಲಾಗಿತ್ತು. ಹೇಮಾವತಿ ನದಿಯಲ್ಲಿ ನೀರಿನ ಮಟ್ಟ ಏರುತ್ತಿದ್ದು, ಹೊಳೆ ಮಲ್ಲೇಶ್ವರ ದೇವಸ್ಥಾನದ ಮೆಟ್ಟಿಲಿನವರೆಗೆ ನೀರು ಬಂದು ನಿಂತಿದೆ.
ಮಲೆನಾಡೀಗ ಮಳೆನಾಡು: ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತುಂಗಾ, ಭದ್ರಾ, ಹೇಮಾವತಿ, ಶರಾವತಿ, ಶರ್ಮನಾವತಿ, ವಾರಾಹಿ, ಕುಮದ್ವತಿ, ಚಕ್ರಾ ಸಾವೆಹಕ್ಕಲು ಹಾಗೂ ಉಪ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಮೂಡಿಗೆರೆ ತಾಲೂಕಿನ ಹೆಬ್ಟಾಳೆ ಸೇತುವೆ ಮುಳುಗಡೆಯಾಗಿದೆ. ಜಯಪುರ ಸಮೀಪ ಬಾಳೆಹೊನ್ನೂರು-ಜಯಪುರ ರಾಜ್ಯ ಹೆದ್ದಾರಿಯ ರಸ್ತೆ ಕುಸಿದು, ಸಂಚಾರ ಬಂದ್ ಆಗಿದೆ. ಕಪ್ಪೆ ಶಂಕರ ದೇವಾಲಯ ಹಾಗೂ ಸಂಧ್ಯಾವಂದನಾ ಮಂಟಪಗಳು ಮುಳುಗಡೆಯಾಗಿವೆ. ಹರಿಹರಪುರ ಗ್ರಾಮದ ಬಳಿ ರಸ್ತೆ ಕುಸಿದಿದ್ದು, ಕೊಪ್ಪ-ಶೃಂಗೇರಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇವಾಲಯದ ಸಮೀಪ ಸೇರಿದಂತೆ ವಿವಿಧೆಡೆಗಳಲ್ಲಿ ಗುಡ್ಡ ಕುಸಿತ ಮುಂದುವರೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಸಮನೆ-ಚಿಕ್ಕಮಣತಿ ರಸ್ತೆಯ ಸೇತುವೆಯು ಸುಮಾರು 30 ವರ್ಷಗಳ ಬಳಿಕ ಮುಳುಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿ ಕ ಪ್ರಮಾಣದ ನೀರು ಹರಿದು ಬರುತ್ತಿದೆ.
ಎಲ್ಲೆಲ್ಲಿ ರಸ್ತೆ ಸಂಪರ್ಕ ಕಡಿತ?
ಬೆಳಗಾವಿ-ಕೊಲ್ಲಾಪುರ
ವಿಜಯಪುರ-ಧಾರವಾಡ
ಜಮಖಂಡಿ-ಜತ್ತ
ಜಮಖಂಡಿ- ಸಾವಳಗಿ
ಖಾನಾಪುರ-ಗೋವಾ
ಖಾನಾಪುರ-ಬೆಳಗಾವಿ
ಖಾನಾಪುರ-ಪಾರಿಶ್ವಾಡ
ಖಾನಾಪುರ -ಪಣಜಿ
ಹೈಲೆಂಡ್ ಹೊಟೇಲ್ ಬಳಿ ರಾಷ್ಟ್ರೀಯ ಹೆದ್ದಾರಿ 63
ಬಾಳೆಹೊನ್ನೂರು-ಜಯಪುರ
ಶೃಂಗೇರಿ-ಕೊಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.