ಚಿಹ್ನೆ ಮೇಲೆ ಚುನಾವಣೆ ಸ್ಪರ್ಧೆಗೆ ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿ ಮೂಡದ ಒಮ್ಮತ
ಕಾಂಗ್ರೆಸ್‌ಗೆ ಚಿಹ್ನೆ ಸಂಕಟ
Team Udayavani, Aug 18, 2021, 3:18 PM IST
ಸಾಂದರ್ಭಿಕ ಚಿತ್ರ.
ಬೆಳಗಾವಿ: ಇದುವರೆಗೆ ಗುಂಪುಗಾರಿಕೆ, ಅಭಿವೃದ್ಧಿ ರಹಿತ ಭಾಷಾ ರಾಜಕಾರಣ, ಭಾವನಾತ್ಮಕ ವಿಷಯ ಆಧಾರಿತ ಆಡಳಿತ ಕಂಡಿದ್ದ ಬೆಳಗಾವಿ
ಮಹಾನಗರಪಾಲಿಕೆ ಈಗ ಹೊಸ ಪರಿವರ್ತನೆಗೆ ತೆರೆದುಕೊಂಡಿದೆ. ಮುಂದಿನ ತಿಂಗಳು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ರಾಜಕೀಯ ಪಕ್ಷಗಳ ಗಾಳಿ ಬೀಸುತ್ತಿದೆ. ಬದಲಾವಣೆಯ ಸೂಚನೆ ಕಾಣುತ್ತಿದೆ. ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೆರಡೂ ಹಿರಿಯ ನಾಯಕರ ಸಭೆ ನಡೆಸಿರುವುದೇ ಇದಕ್ಕೆ ಸಾಕ್ಷಿ.
ಕಳೆದ ಹಲವಾರು ದಶಕಗಳಿಂದ ಗುಂಪುಗಾರಿಕೆ, ಗೊಂದಲಮಯ ಆಡಳಿತ ನೋಡಿ ನೋಡಿ ಬೇಸತ್ತಿದ್ದ ನಗರದ ಮತದಾರರು ಹಾಗೂ ರಾಜಕೀಯ ಪಕ್ಷಗಳು ಮೊದಲ ಬಾರಿಗೆ ಪಕ್ಷದ ಚಿಹ್ನೆಯ ಮೇಲೆ ಅಭ್ಯರ್ಥಿಗಳನ್ನು ನೋಡಲು ಬಯಸಿದ್ದಾರೆ. ಪಾಲಿಕೆಯಲ್ಲಿ ಪಕ್ಷೇತರ ಸದಸ್ಯರ ಹೆಸರಿನಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆಯ ದರ್ಬಾರಿಗೆ ಶಾಶ್ವತ ಅಂತ್ಯಹಾಡಲು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಚಿಹ್ನೆಯ ಮೇಲೆ ಸ್ಪರ್ಧೆ ಮಾಡಲು ಮನಸ್ಸು ಮಾಡಿರುವದು ಒಳ್ಳೆಯ ಬೆಳವಣಿಗೆ.
ಪಾಲಿಕೆಯಲ್ಲಿ ಈ ಕಾರ್ಯ ಎಂದೋ ಆಗಬೇಕಿತ್ತು. ತಡವಾಗಿಯಾದರೂ ಎಚ್ಚೆತ್ತುಕೊಂಡಿವೆ. ಲೋಕಸಭೆ ಉಪಚುನಾವಣೆಯ ಜೊತೆಗೆ ಪಾಲಿಕೆ ಚುನಾವಣೆಗೂ ತೆರೆಮರೆಯಲ್ಲಿ ಸಿದ್ಧತೆ ನಡೆಸಿದ್ದ ಬಿಜೆಪಿ ಈ ಬಾರಿ ಪಕ್ಷದ ಚಿಹ್ನೆಯ ಮೇಲೆಯೇ ಸ್ಪರ್ಧೆ ಮಾಡುವುದು ನಿಶ್ಚಿತ ಎಂಬ ಸಂದೇಶ ನೀಡಿ, ಈ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಕಾರ್ಯಕರ್ತರ ಸಭೆ ಸಹ ಮಾಡಿದೆ.
ಇದನ್ನೂ ಓದಿ:ಅಗತ್ಯಬಿದ್ದರೆ ರಾಜ್ಯಸಭೆಯಲ್ಲಿ ನಡೆದ ಘಟನೆಗೆ ಸೂಕ್ತ ಕ್ರಮ : ಉಪ ರಾಷ್ಟಪತಿ ವೆಂಕಯ್ಯ ನಾಯ್ಡು
ಬಿಜೆಪಿಯ ಈ ಘೋಷಣೆ ಕಾಂಗ್ರೆಸ್‌ಗೆ ಒಂದು ರೀತಿಯಲ್ಲಿ ನುಂಗಲಾರದ ತುತ್ತು. ರಾಷ್ಟ್ರೀಯ ಪಕ್ಷವಾಗಿರುವುದರಿಂದ ಚಿಹ್ನೆಯ ಮೇಲೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲೇಬೇಕಾದ ಅನಿವಾರ್ಯತೆ ಕಾಂಗ್ರೆಸ್‌ಗೆ ಎದುರಾಗಿದೆ. ಇದರ ನಡುವೆ ಸ್ಥಳೀಯ ನಾಯಕರಲ್ಲಿನ ವಿಭಿನ್ನ ಅಭಿಪ್ರಾಯ ಪಕ್ಷದ ವರಿಷ್ಠರನ್ನು ಚಿಂತೆಗೆ ಹಚ್ಚಿದೆ.
ಆದರೆ ಈ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಪೈಪೋಟಿ ಆಗಬಾರದು. ಅದು ಎಂಇಎಸ್ ಮತ್ತು ಶಿವಸೇನೆಯ ಸೋಲಿಸುವ ಪೈಪೋಟಿ ಆಗಬೇಕು. ನಮ್ಮಿಬ್ಬರ ಸಾಮಾನ್ಯ ವೈರಿ ಎಂಇಎಸ್ ಮತ್ತು ಶಿವಸೇನೆ ಎಂಬ ಭಾವನೆ ಬಿಜೆಪಿ ಹಾಗೂ ಕಾಂಗ್ರೆಸ್‌ದಲ್ಲಿ ಬರಬೇಕು. ಆಗ ಮಾತ್ರ ರಾಜಕೀಯ ಪಕ್ಷಗಳ ಸ್ಪರ್ಧೆಯ ಉದ್ದೇಶ ಈಡೇರುತ್ತದೆ ಎಂಬುದು ಪಾಲಿಕೆಯ ಆಡಳಿತವನ್ನು ಬಹಳ ಹತ್ತಿರದಿಂದ ನೋಡಿರುವ ಅಭಿವೃದ್ಧಿ ಪರ ಚಿಂತಕರ ಅಭಿಪ್ರಾಯ.
ಕಾಂಗ್ರೆಸ್ ರಾಜ್ಯ ನಾಯಕರ ಅಂಗಳಕ್ಕೆ ಚೆಂಡು
ಬಿಜೆಪಿಯಲ್ಲಿರುವ ಪರಿವರ್ತನೆಯ ವಾತಾವರಣ ಇನ್ನೂ ಕಾಂಗ್ರೆಸ್ ವಲಯದಲ್ಲಿ ಕಂಡುಬಂದಿಲ್ಲ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಮೂಡಿರುವ ಗೊಂದಲವೇ ಇದಕ್ಕೆ ಕಾರಣ.
ಯಾವೊಬ್ಬ ನಾಯಕರೂ ಇದುವರೆಗೆ ನಾವು ಪಕ್ಷದ ಚಿಹ್ನೆಯ ಮೇಲೆ ಸ್ಪರ್ಧೆ ಮಾಡುತ್ತೇವೆ ಎಂದು ಬಹಿರಂಗವಾಗಿ ಗಟ್ಟಿಮನಸ್ಸಿನಿಂದ ಹೇಳಿಲ್ಲ. ಸ್ಪರ್ಧೆಯ ವಿಚಾರದಲ್ಲೂ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಒಂದು ವೇಳೆ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆಯ ಮೇಲೆ ಸ್ಪರ್ಧೆ ಮಾಡದೇ ಹೋದರೆ ರಾಷ್ಟ್ರೀಯ ಪಕ್ಷವಾಗಿ ಅದೊಂದು ದೊಡ್ಡ ಅವಮಾನ. ಬಿಜೆಪಿ ಮುಂದೆ ಒಂದು ರೀತಿಯ ಶರಣಾಗತಿ. ಪಕ್ಷದಿಂದ ಸ್ಪರ್ಧೆ ಮಾಡಲು ಹಿಂದೇಟು ಹಾಕಿದರೆ ಎಂಇಎಸ್ ಮತ್ತು ಶಿವಸೇನೆಯ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇವೆರಡರ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ ಎಂಬ ಸಂದೇಶ ಹೋಗುತ್ತದೆ ಎನ್ನುವ ಆತಂಕ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ. ಹೀಗಾಗಿ ಕೆಲವರು ಪಕ್ಷದ ಚಿಹ್ನೆಯ ಮೇಲೆಯೇ ಸ್ಪರ್ಧೆ ಮಾಡುವದು ಒಳ್ಳೆಯದು ಎಂಬ ಅಭಿಪ್ರಾಯ ಹೇಳಿದ್ದಾರೆ. ಇನ್ನೊಂದು ಕಡೆ ಇದುವರೆಗೆ ಪಕ್ಷದ ಆಧಾರದ ಮೇಲೆ ಚುನಾವಣೆ ನಡೆದಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯ ದೃಷ್ಟಿಯಿಂದ ಈಗ ಅದನ್ನು ಮೈಮೇಲೆ ಎಳೆದುಕೊಳ್ಳುವದು ಬೇಡ. ಪಕ್ಷದ ಚಿಹ್ನೆಯ ಮೇಲೆ ಸ್ಪರ್ಧೆ ಮಾಡಿದರೆ ಮತಗಳ ವಿಭಜನೆಯಾಗಿ ನಮಗೆ ಕಷ್ಟವಾಗಲಿದೆ ಎಂಬುದು ಕೆಲವರ ವಾದ. ಇದೇ ಕಾರಣದಿಂದ ಮಾಜಿ ಸಚಿವ ಎಂ ಬಿ ಪಾಟೀಲ ನೇತೃತ್ವದ ಉಸ್ತುವಾರಿ ಸಮಿತಿ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಾರದೆ ಚೆಂಡನ್ನು ರಾಜ್ಯ ನಾಯಕರ ಅಂಗಳಕ್ಕೆ ಹಾಕಿದೆ.
ಬಿಜೆಪಿಯಲ್ಲಿ ಹುಮ್ಮಸ್ಸು
ಇದೇ ವಾತಾವರಣ ಬಿಜೆಪಿಯಲ್ಲಿ ಇಲ್ಲ. ಈಗಾಗಲೇ ಪಕ್ಷದ ಚಿಹ್ನೆಯ ಮೇಲೆಯೇ ಸ್ಪರ್ಧೆ ಮಾಡಬೇಕು ಎಂದು ಮಾನಸಿಕವಾಗಿ ಸಿದ್ಧರಾಗಿರುವ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಈ ನಿಟ್ಟಿನಲ್ಲಿ ಭರ್ಜರಿ ತಯಾರಿಯನ್ನೇ ಮಾಡಿಕೊಂಡಿದ್ದಾರೆ. ಎಲ್ಲಿ ತಮಗೆ ಹೆಚ್ಚು ಅನುಕೂಲ,
ಯಾವ ಕಡೆ ಸ್ವಲ್ಪ ನಿಗಾ ವಹಿಸಬೇಕು ಎಂಬುದರ ಪಟ್ಟಿ ಸಹ ಪಕ್ಷದಲ್ಲಿ ಸಿದ್ಧವಾಗಿದೆ. ಇದರ ಜತೆ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ನೀಡಿದೆ. ಇದರಿಂದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಸಹ ಬೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಮರಾಠಿ ಭಾಷಿಕರು ರಾಷ್ಟ್ರೀಯ ಪಕ್ಷಗಳತ್ತ ವಾಲುತ್ತಿದ್ದಾರೆ. ಅನೇಕರು ಪ್ರಮುಖ ಹುದ್ದೆಗಳನ್ನು ಸಹ ಪಡೆದುಕೊಂಡಿದ್ದಾರೆ. ಈ ನಾಯಕರು ಮತ್ತು ಕಾರ್ಯಕರ್ತರನ್ನು ಮತ್ತೆ ತಮ್ಮ ಕಡೆ ಸೆಳೆಯುವದು ಎಂಇಎಸ್ ಗೆ ಸವಾಲಾಗಿ ಪರಿಣಮಿಸಿದೆ. ಪಕ್ಷದ ಚಿಹ್ನೆಯ ಮೇಲೆ ಸ್ಪರ್ಧೆ ಮಾಡಲಿರುವ ರಾಷ್ಟ್ರೀಯ ಪಕ್ಷಗಳು ಸಹ ಮರಾಠಿ ಭಾಷಿಕರಿಗೆ ಟಿಕೆಟ್ ನೀಡುವದರಿಂದ ಮರಾಠಿ ಭಾಷಿಕ ಮತಗಳು ವಿಭಜನೆಯಾಗಲಿವೆ ಎಂಬ ಆತಂಕ ಎಂಇಎಸ್ ದಲ್ಲಿದೆ. ಕಳೆದ ವಿಧಾನಸಭೆ ಚುನಾವಣೆಗಳಲ್ಲಿ ತೀವ್ರ ಮುಖಭಂಗ ಅನುಭವಿಸಿರುವ ಎಂಇಎಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮತ್ತೆ ಭಾಷೆ ಹಾಗೂ ಗಡಿ ವಿವಾದಂತಹ ಭಾವನಾತ್ಮಕ ವಿಷಯಗಳ ಮೂಲಕ ಮತದಾರರನ್ನು
ಸೆಳೆಯಲು ಮುಂದಾಗಲಿದೆ. ಇದಕ್ಕೆ ರಾಜಕೀಯ ಪಕ್ಷಗಳು ಯಾವ ರೀತಿ ಉತ್ತರ ಕೊಡಲಿವೆ ಎಂಬುದು ಕುತೂಹಲ ಮೂಡಿಸಿದೆ.
ಪಾಲಿಕೆಯಲ್ಲಿ ಈ ಬಾರಿ ಬಿಜೆಪಿ ಆಡಳಿತ ನಡೆಸುವದು ನಿಶ್ಚಿತ. ಜನರ ಬಯಕೆ ಸಹ ಇದೇ ಆಗಿದೆ. ನಮ್ಮಲ್ಲಿ ಯಾವುದೇ ಗೊಂದಲ ಅಥವಾ ಭಿನ್ನಾಭಿಪ್ರಾಯ ಇಲ್ಲ. ಯಾರಿಗೇ ಟಿಕೆಟ್ ಸಿಕ್ಕರೂ ಎಲ್ಲರೂ ಒಂದಾಗಿ ನಮ್ಮ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಿದ್ದಾರೆ. ಪಾಲಿಕೆ ಚುನಾವಣೆ ಇಡೀ ರಾಜ್ಯದ ಗಮನ ಸೆಳೆದಿರುವದರಿಂದ ಅದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ.
-ಅನಿಲ ಬೆನಕೆ,
ಬಿಜೆಪಿ ಶಾಸಕರು
ಪಾಲಿಕೆಯ ಚುನಾವಣೆಯಲ್ಲಿ ಪಕ್ಷದ ಚಿಹ್ನೆಯ ಮೇಲೆ ಸ್ಪರ್ಧೆ ಮಾಡಬೇಕು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಸ್ಥಳೀಯ ನಾಯಕರು ಸಹ ಕಾರ್ಯಕರ್ತರ ನಿರ್ಧಾರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಈ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
-ವಿನಯ ನಾವಲಗಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ
-ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.