Lokayukta: ಭ್ರಷ್ಟರ ಬಯಲಿಗೆಳೆಯುವ ಲೋಕಾಯುಕ್ತಕ್ಕಿಲ್ಲ ಸಿಬ್ಬಂದಿ ಬಲ!
-ಲೋಕಾ ದಾಳಿ ವೇಳೆ ಚಾಲಕರು, ಗುಮಾಸ್ತರನ್ನು ಬಳಸಿಕೊಳ್ಳುವ ಸ್ಥಿತಿ
Team Udayavani, Jul 3, 2023, 7:05 AM IST
ಬೆಂಗಳೂರು: ಭ್ರಷ್ಟರ ಬೇಟೆಗೆ ಇಳಿದಿರುವ ಲೋಕಾಯುಕ್ತಕ್ಕೆ ಸದ್ಯ ಸಿಬ್ಬಂದಿ ಬಲ ಇಲ್ಲದಂತಾಗಿದೆ. ಆಶ್ಚರ್ಯವೆಂದರೆ, ಭ್ರಷ್ಟ ಅಧಿಕಾರಿಗಳ ಮೇಲಿನ ದಾಳಿ ವೇಳೆ ವಾಹನ ಚಾಲಕರು, ಗುಮಾಸ್ತರು, ಸಂಸ್ಥೆಯ ಕೆಳಗಿನ ಹಂತದ ನೌಕರರನ್ನು ಬಳಸಿಕೊಳ್ಳುವ ದುಸ್ಥಿತಿ ಬಂದೊದಗಿದೆ.
ಲೋಕಾಯುಕ್ತಕ್ಕೆ ಬಲ ತುಂಬುತ್ತೇವೆ ಎಂದು ಪ್ರತಿ ಸರ್ಕಾರ ಹೇಳುತ್ತಲೇ ಇರುತ್ತದೆ. ಎಸಿಬಿ ರದ್ದಾಗಿ ಲೋಕಾಯುಕ್ತಕ್ಕೆ ಅಧಿಕಾರದ ಗತ ವೈಭವ ಮರುಕಳಿಸಿದ್ದರೂ, ಸಿಬ್ಬಂದಿ ಬಲ ಮಾತ್ರ ಇನ್ನೂ ಪಾತಾಳದಲ್ಲಿದೆ. ಆರಂಭದಿಂದಲೂ ಲೋಕಾಯುಕ್ತ ಸಂಸ್ಥೆ ಸಿಬ್ಬಂದಿಯ ಕೊರತೆಯಿಂದ ನರಳುತ್ತಿದೆ. ಈಗ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ದಾಳಿ ನಡೆಸಲು ಸಮರ್ಥ “ಸೇನಾನಿಗಳು” ಇಲ್ಲವಾಗಿದ್ದಾರೆ.
ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಅಧಿಕಾರ ಸಿಕ್ಕಿದ ಬೆನ್ನಲ್ಲೇ ಭ್ರಷ್ಟರಿಗೆ ಸಿಂಹಸ್ವಪ್ನವಾಗಿ ಕಾಡಿ ನೂರಾರು ಕೋಟಿ ಅಕ್ರಮಗಳನ್ನು ಈಗಾಗಲೇ ಬಯಲಿಗೆಳೆದಿದೆ. ಏಕಕಾಲದಲ್ಲಿ ಭ್ರಷ್ಟ ಕುಳಗಳ ಕೋಟೆಗೆ ಲಗ್ಗೆ ಇಟ್ಟು ಸರಣಿ ದಾಳಿ ನಡೆಸುವ ವೇಳೆ ನೂರಾರು ನುರಿತ ಸಿಬ್ಬಂದಿಯ ಅಗತ್ಯತೆ ಇರುತ್ತದೆ. ಲೋಕಾಯುಕ್ತರು 2 ತಿಂಗಳ ಹಿಂದೆಯೇ 700 ಸಿಬ್ಬಂದಿ ಒದಗಿಸುವಂತೆ ಸರ್ಕಾರಕ್ಕೆ ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಅಕ್ರಮ ಆಸ್ತಿ ಹೊಂದಿರುವ ಭ್ರಷ್ಟ ಅಧಿಕಾರಿಗಳ ನಿವಾಸ, ಕಚೇರಿ ಸೇರಿ ಹತ್ತಾರು ಕಡೆ ದಾಳಿ ನಡೆಸುವಾಗ ಲೋಕಾಯುಕ್ತದಲ್ಲಿರುವ ಚಾಲಕರು, ಗುಮಾಸ್ತರು, ಡಿ-ದರ್ಜೆ ನೌಕರರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಲೋಕಾಯುಕ್ತದ ಉನ್ನತ ಮೂಲಗಳು ಹೇಳಿವೆ.
ಸಿಬ್ಬಂದಿ ಇಲ್ಲದೇ ಚಾರ್ಜ್‌ಶೀಟ್ ವಿಳಂಬ:
ಈಗಾಗಲೇ ಲೋಕಾಯುಕ್ತ ಖೆಡ್ಡಾಗೆ ಬಿದ್ದಿರುವ ಸರ್ಕಾರಿ ಅಧಿಕಾರಿಗಳು ನೂರಾರು ಕೋಟಿ ರೂ. ಅಕ್ರಮ ಆಸ್ತಿ ಸಂಪಾದಿಸಿರುವುದು ಲೋಕಾ ಪೊಲೀಸರ ಗಮನಕ್ಕೆ ಬಂದಿದೆ. ಆದರೆ, ಸಿಬ್ಬಂದಿ ಕೊರತೆಯಿಂದಾಗಿ ಸೂಕ್ತ ಸಾಕ್ಷ್ಯ ಸಂಗ್ರಹಿಸಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಲು ಎರಡರಿಂದ ಮೂರು ವರ್ಷಗಳೇ ಉರುಳಬಹುದು. ಇನ್ನು ಸರಣಿ ದಾಳಿ ವೇಳೆ ದಾಖಲೆ ಕಲೆ ಹಾಕುವುದು, ದಾಖಲೆ ಪರಿಶೀಲನೆ, ಆರೋಪಿಗಳ ವಿಚಾರಣೆ ಪ್ರಕ್ರಿಯೆಯೂ ವಿಳಂಬವಾಗುತ್ತಿದೆ. ಎಸಿಬಿಯಲ್ಲಿದ್ದ 412ಕ್ಕೂ ಅಧಿಕ ಅಕ್ರಮ ಆಸ್ತಿ (ಡಿಎ ಕೇಸ್) ಪ್ರಕರಣ, ಲೋಕಾಯಕ್ತದಲ್ಲಿ ದಾಖಲಾಗಿರುವ 30ಕ್ಕೂ ಅಧಿಕ ಪ್ರಮುಖ ಕೇಸುಗ ಳ ತನಿಖೆಗೆ ಹಿನ್ನಡೆಯಾಗಿದೆ.
ದಶಕಗಳಿಂದ ಗೋಳು:
ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ ಲೋಕಾಯುಕ್ತರಾಗಿದ್ದ ಕಾಲದಿಂದಲೂ ಸಿಬ್ಬಂದಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಧಿಕಾರಾವಧಿಯಲ್ಲಿ ಲೋಕಾಯುಕ್ತಕ್ಕೆ ಬಲ ತುಂಬುವುದಾಗಿ ಪೊಳ್ಳು ಭರವಸೆ ನೀಡುತ್ತಾ ಬಂದಿವೆ. ಸಾರ್ವಜನಿಕರ ಕಲ್ಪನೆಯಂತೆ ಭ್ರಷ್ಟರ ವಿರುದ್ಧ ಸಮರ ಸಾರಲು ಸಜ್ಜಾಗಿದ್ದರೂ ಸೂಕ್ತ ಸಿಬ್ಬಂದಿ ಇಲ್ಲದೇ ಯಶಸ್ವಿಯಾಗಿ ದಾಳಿ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಲೋಕಾಯುಕ್ತ ಪೊಲೀಸರು.
590 ಹುದ್ದೆ ಖಾಲಿ
ಲೋಕಾಯುಕ್ತದಲ್ಲಿ ಒಟ್ಟು 1,732 ಹುದ್ದೆಗಳಿದ್ದು, ಈ ಪೈಕಿ 1,142 ಹುದ್ದೆ ಭರ್ತಿಯಾಗಿವೆ. ಉಳಿದ 590 ಹುದ್ದೆ ಭರ್ತಿಯಾಗಿಲ್ಲ. ಸರ್ಕಾರ ಸೃಜಿಸಿರುವ ಹುದ್ದೆಗಳು ಸಾಲದೇ ಒಟ್ಟು 700 ಸಿಬ್ಬಂದಿ ನೀಡುವಂತೆ ಲೋಕಾಯುಕ್ತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 8 ಎಸ್‌ಪಿ, 25 ಪೊಲೀಸ್ ಇನ್‌ಸ್ಪೆಕ್ಟರ್, 10 ಕಾನೂನು ಅಧಿಕಾರಿ, 9 ಡಿವೈಎಸ್‌ಪಿ, 198 ಕಾನ್‌ಸ್ಟೆಬಲ್, 41 ಹೆಡ್‌ಕಾನ್‌ಸ್ಟೆàಬಲ್, 47 ಕ್ಲರ್ಕ್, 92 ಡಿ ದರ್ಜೆ ನೌಕರರ ಹುದ್ದೆ ಖಾಲಿ ಇದೆ. ಸಿ ಗ್ರೂಪ್‌ನಲ್ಲಿ ಬರೋಬ್ಬರಿ 407 ಹುದ್ದೆ ಖಾಲಿ ಇವೆ.
ಸರ್ಕಾರವು ಲೋಕಾಯುಕ್ತಕ್ಕೆ ಹೆಚ್ಚುವರಿ ಸಿಬ್ಬಂದಿ ನೀಡುವ ಭರವಸೆ ಇದೆ. ಆದರೆ, ಈ ಪ್ರಕ್ರಿಯೆಗಳು ಶೀಘ್ರವಾಗಿ ನಡೆದರೆ ಉತ್ತಮ. ಪ್ರಸ್ತುತ ಲೋಕಾಯುಕ್ತದಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ.
– ನ್ಯಾ. ಬಿ.ಎಸ್.ಪಾಟೀಲ್, ಲೋಕಾಯುಕ್ತರು
ಅವಿನಾಶ್ ಮೂಡಂಬಿಕಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.