ಮೋದಿಯವರೇ, ಕರ್ನಾಟಕದ ಕಡೆಗೂ ನೋಡಿ
Team Udayavani, Oct 2, 2019, 3:09 AM IST
ರಾಜ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ, ಕರಾವಳಿ, ಕೊಡಗು, ಮಲೆನಾಡು ಪ್ರದೇಶಗಳಲ್ಲಿ ಅತಿವೃಷ್ಟಿಯಿಂದ ಜನ ಜಮೀನು, ಮನೆ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದು ತಿಂಗಳು ಕಳೆದರೂ, ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡುವ ಬಗ್ಗೆ ಕೇಂದ್ರ ಸರ್ಕಾರವಾಗಲಿ, ಪ್ರಧಾನಿ ನರೇಂದ್ರ ಮೋದಿಯಾಗಲಿ ಒಂದೇ ಒಂದು ಮಾತನ್ನೂ ಆಡಿಲ್ಲ. ಆದರೆ, ಬಿಹಾರದಲ್ಲಿನ ನೆರೆ ಸಂತ್ರಸ್ತರ ನೆರವಿಗೆ ತಕ್ಷಣ ಧಾವಿಸಿದ ಪ್ರಧಾನಿ ಮೋದಿ, ಟ್ವೀಟ್ ಮಾಡಿ ಬಿಹಾರಕ್ಕೆ ಅಗತ್ಯವಿರುವ ಎಲ್ಲ ನೆರವನ್ನು ಕಲ್ಪಿಸುವ ಭರವಸೆ ನೀಡಿದ್ದಾರೆ. ಇದು ಪ್ರತಿಪಕ್ಷಗಳ, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಧಾನಿಯ ಈ ನಡೆಗೆ ಆಡಳಿತಾರೂಢ ಬಿಜೆಪಿ ನಾಯಕರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಈ ಮಲತಾಯಿ ಧೋರಣೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ರಾಜ್ಯದ ನೆರೆ ಸಂತ್ರಸ್ತರ ಸಂಕಷ್ಟದ ಬಗ್ಗೆಯೂ ಗಮನ ಹರಿಸಿ, ಕರ್ನಾಟಕವನ್ನೂ ಸಮಾನವಾಗಿ ಕಾಣಿರಿ ಎಂಬ ಒಕ್ಕೊರಲ ಮನವಿ ಎಲ್ಲೆಡೆಯಿಂದ ಕೇಳಿ ಬರುತ್ತಿದೆ.
ಕೇಂದ್ರ ನಾಯಕರಿಂದ ಬಿಎಸ್‌ವೈ ಟಾರ್ಗೆಟ್
ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳದೆ ಪ್ರಧಾನಿ ಮೋದಿ ಯವರು ಬಿಹಾರ ರಾಜ್ಯಕ್ಕೆ ಪರಿಹಾರ ನೀಡುವ ಬಗ್ಗೆ ಟ್ವೀಟ್ ಮಾಡಿರುವ ಕುರಿತು ಬಿಜೆಪಿಯ ಶಾಸಕರೂ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಹಾರ ರಾಜ್ಯದ ಪ್ರವಾಹಕ್ಕೆ ಪರಿಹಾರ ನೀಡುವ ಬಗ್ಗೆ ಟ್ವೀಟ್ ಮಾಡುವ ಪ್ರಧಾನಿಯವರು, ಕರ್ನಾಟಕದ ಬಗ್ಗೆ ಮೌನ ವಹಿಸಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಯಡಿಯೂರಪ್ಪ ಅವರನ್ನು ಕೇಂದ್ರದ ನಾಯಕರು ಟಾರ್ಗೆಟ್ ಮಾಡುತ್ತಿದ್ದಾರೆ. ಹೀಗಾಗಿಯೇ ರಾಜ್ಯಕ್ಕೆ ಅನುದಾನ ನೀಡುತ್ತಿಲ್ಲ. ರಾಜ್ಯದಲ್ಲಿ ಈಗ ಯಾವುದೇ ಚುನಾವಣೆ ಇಲ್ಲ ಎಂದು ಈ ಭಾವನೆ ಸರಿಯಲ್ಲ ಎಂದು ಹೇಳಿದರು.
ರಾಜ್ಯದ ಜನತೆ 25 ಸಂಸದರನ್ನು ಆಯ್ಕೆ ಮಾಡಿದ್ದಾರೆ. ಇಡೀ ದಕ್ಷಿಣ ಭಾರತದಲ್ಲಿ ಇಷ್ಟು ಸಂಖ್ಯೆ ಎಲ್ಲಿದೆ? ಹೀಗೆ ಮುಂದುವರಿಸಿದರೆ ಜನ ತಕ್ಕ ಪಾಠ ಕಲಿಸುತ್ತಾರೆ. ಎಂತೆಂಥವರನ್ನೋ ಜನ ಮನೆಗೆ ಕಳಿಸಿದ್ದಾರೆ. ಅಂಥದ್ದರಲ್ಲಿ ಇವರ್ಯಾವ ಲೆಕ್ಕ ಎಂದು ನೇರವಾಗಿಯೇ ವಾಗ್ಧಾಳಿ ನಡೆಸಿದರು. ಹಳ್ಳಿ, ಹಳ್ಳಿಗಳಲ್ಲಿ ಸಂಚರಿಸಿ ಪಕ್ಷ ಸಂಘಟನೆ ಮಾಡಿದ್ದು ನಾವು. ಜನರಿಗೆ ನಾವು ಉತ್ತರ ನೀಡ ಬೇಕು. ಇಡೀ ಉತ್ತರ ಕರ್ನಾಟಕದ ಜನ ಪರದಾ ಡುತ್ತಿದ್ದಾರೆ.
ಬಿಹಾರದ ನೆರೆ ಸಂತ್ರಸ್ತರ ಬಗ್ಗೆ ಟ್ವೀಟ್ ಮಾಡ್ತಾರೆ ಅಂದರೆ ನಮ್ಮ ಜನ ಏನ್ ಮಾಡಿದ್ದಾರೆ? ಜನರಿಗೆ ನಾವೇನು ಉತ್ತರ ಕೊಡಬೇಕು ಎಂದು ಪ್ರಶ್ನಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಜನ ನಮ್ಮ ವಿರುದ್ಧ ಪ್ರಶ್ನೆ ಮಾಡುತ್ತಿ ದ್ದಾರೆ. ಮುಖ್ಯಮಂತ್ರಿಯವರು ನಮ್ಮನ್ನು ನಿಯೋಗವೊಂದರಲ್ಲಿ ಕರೆದೊಯ್ಯಲಿ, ನಾವು ಮಾತನಾಡು ತ್ತೇವೆ. ಹಿಂದೆ ನಾನೂ ಸಂಸದನಾಗಿ ಧ್ದೋನು, ನನಗೂ ಎಲ್ಲವೂ ಅನುಭವ ಇದೆ. ನಮ್ಮ ಸಂಸದರು ಕರ್ನಾಟಕಕ್ಕೆ ಆಗುತ್ತಿರುವ ಆನ್ಯಾಯದ ಬಗ್ಗೆ ಪ್ರಶ್ನೆ ಮಾಡಬೇಕು. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಿದರು.
ತೇಜಸ್ವಿ, ಈಶ್ವರಪ್ಪ ವಿರುದ್ಧ ಗರಂ: ಸಂಸದ ತೇಜಸ್ವಿ ಸೂರ್ಯ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಬಗ್ಗೆಯೂ ಇದೇ ಸಂದರ್ಭದಲ್ಲಿ ಪರೋಕ್ಷವಾಗಿ ವಾಗ್ಧಾಳಿ ನಡೆಸಿದ ಯತ್ನಾಳ್, ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಪಕ್ಷ ಕಟ್ಟೋದಲ್ಲ. ಆಂಗ್ಲ ಭಾಷೆ ಬಂದ ಮಾತ್ರಕ್ಕೆ ಅಂತಾರಾಷ್ಟ್ರೀಯ ನಾಯಕರಾಗಲ್ಲ. ಕೆಲವರು ಯಡಿಯೂರಪ್ಪ ಅವರ ಬಗ್ಗೆ ಮಾತನಾಡುತ್ತಾರೆ. ಗೂಟದ ಕಾರಿನಲ್ಲಿ ಓಡಾಡೋರು ಹೀಗೆ ಮಾತನಾಡಿದರೆ ಹೇಗೆ? ಹಾಗಾದರೆ, ಸಚಿವ ಸ್ಥಾನದಲ್ಲಿ ಯಾಕೆ ಇರುತ್ತೀರಿ, ರಾಜೀನಾಮೆ ಕೊಡಿ ಎಂದು ಕುಟುಕಿದರು.
ನಮ್ಮನ್ನೂ ಸಮಾನವಾಗಿ ಕಾಣಿ
ಬೆಂಗಳೂರು: ಬಿಹಾರದ ಪ್ರವಾಹಕ್ಕೆ ಸ್ಪಂದಿಸುವ ಭರವಸೆ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಕರ್ನಾಟಕವನ್ನು ಸಮಾನವಾಗಿ ಕಾಣಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಮೋದಿಯವರು ಬಿಹಾರಕ್ಕೆ ಪರಿಹಾರ ನೀಡುವುದರ ಬಗ್ಗೆ ನಮ್ಮ ತಕರಾರಿಲ್ಲ. ಬಿಹಾರದಿಂದ 40 ಸಂಸದರಿದ್ದಾರೆ, ಕರ್ನಾಟಕದಿಂದ 28 ಸಂಸದರಿದ್ದಾರೆ. ಆ ಕಾರಣಕ್ಕೆ ಕರ್ನಾಟಕದ ನಿರ್ಲಕ್ಷ್ಯ ಮಾಡಲಾಗುತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿಯವರು ಬಿಹಾರಕ್ಕೆ ಪ್ರವಾಹ ಬಂದ ತಕ್ಷಣ ಅಲ್ಲಿನ ಮುಖ್ಯಮಂತ್ರಿ ಜತೆ ಮಾತನಾಡಿ, ಪರಿಹಾರದ ಭರವಸೆ ನೀಡುತ್ತಾರೆ. ಆದರೆ, ನಮ್ಮ ಮುಖ್ಯಮಂತ್ರಿಯವರು ಪ್ರಧಾನಿ ಭೇಟಿಗೆ ನಿರಂತರ ಪ್ರಯತ್ನ ನಡೆಸುತ್ತಿದ್ದರೂ ಅವಕಾಶ ನೀಡುತ್ತಿಲ್ಲ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಎಲ್ಲ ರಾಜ್ಯಗಳನ್ನೂ ಸಮಾನವಾಗಿ ಕಾಣುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಎಷ್ಟು ಪರಿಹಾರ ಕೇಳಿದ್ದಾರೊ ಗೊತ್ತಿಲ್ಲ. ಯಡಿಯೂರಪ್ಪ ಅವರು ಕೇವಲ ಬಿಜೆಪಿ ನಾಯಕರಲ್ಲ. ಅವರು ಕರ್ನಾಟಕದ ಮುಖ್ಯಮಂತ್ರಿ. ಇದನ್ನಾದರೂ ಗಮನಿಸಿ ಪ್ರಧಾನಿ ನೆರವು ಘೋಷಣೆ ಮಾಡಬೇಕು. ಕೇಂದ್ರ ಸರ್ಕಾರ ಕೂಡಲೇ ರಾಜ್ಯಕ್ಕೆ ಪರಿಹಾರ ಘೋಷಣೆ ಮಾಡಬೇಕು. ಇಲ್ಲದಿದ್ದರೆ, ಮುಖ್ಯಮಂತ್ರಿಯವರು ಸರ್ವಪಕ್ಷದ ನಿಯೋಗ ಕರೆದುಕೊಂಡು ಹೋಗಬೇಕು ಎಂದು ಮನವಿ ಮಾಡಿದರು.
ಯಡಿಯೂರಪ್ಪನವರು ಅಧಿಕಾರಕ್ಕೆ ಬರುವ ಮೊದಲು ವೀರಾವೇಶದಿಂದ ಮಾತನಾಡಿದ್ದರು. ಅಧಿಕಾರ ಸ್ವೀಕರಿಸಿ ಎರಡು ತಿಂಗಳು ಕಳೆದಿಲ್ಲ. ಈಗಲೇ ಅಸಹಾಯಕರಾಗಿದ್ದಾರೆ. ತಂತಿಯ ಮೇಲಿನ ನಡಿಗೆ ಎಂದರೆ, ಬಿದ್ದು ಹೋಗುತ್ತೇನೆ ಎಂದು ಅರ್ಥ ಎಂದರು.
“ಪಕ್ಷದಲ್ಲಿ ನಾನು ಮೂಲೆಗುಂಪಾಗಿಲ್ಲ’
ಬೆಂಗಳೂರು: “ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಲು ದಿನೇಶ್ ಗುಂಡೂರಾವ್ ಸಮರ್ಥರಿ ದ್ದಾರೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ಕೆಲವರು ಬೇಸರಗೊಂಡಿದ್ದಾರೆ. ನಾನು ಅಧ್ಯಕ್ಷನಾದರೆ ಎಲ್ಲವೂ ಸರಿ ಹೋಗುತ್ತದೆ ಎಂದೇನಿಲ್ಲ. ಸಾಮೂಹಿಕ ನಾಯಕತ್ವದಡಿ ಹೋದರೆ ಎಲ್ಲವೂ ಸುಲಭವಾಗುತ್ತದೆ’ ಎಂದು ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, “ಪಕ್ಷದಲ್ಲಿ ನನ್ನನ್ನು ಮೂಲೆ ಗುಂಪು ಮಾಡಿದ್ದಾರೆ ಎಂದು ಅನಿಸಿಲ್ಲ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಸಭೆಗೆ ಹಾಜರಾಗಲು ದಿನೇಶ್ ಗುಂಡೂರಾವ್ ಕರೆ ಮಾಡಿದ್ದರು. ಆದರೂ, ಪೂರ್ವ ನಿಗದಿತ ಕಾರ್ಯಕ್ರಮ ಇದ್ದಿದ್ದರಿಂದ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ’ ಎಂದು ತಿಳಿಸಿದರು.
ಆಡಳಿತಾತ್ಮಕ ಅನುಕೂಲದ ದೃಷ್ಠಿಯಿಂದ ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆ ಮಾಡುವ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ಬಳ್ಳಾರಿ, ಬೆಳಗಾವಿ ಜಿಲ್ಲೆ ವಿಭಜನೆ ಚರ್ಚೆಯಾಗುತ್ತಿದೆ. ಈಗಾಗಲೇ ಮಧುಗಿರಿ ಶೈಕ್ಷಣಿಕ ಜಿಲ್ಲೆಯಾಗಿರುವುದರಿಂದ ಆಡಳಿತಾತ್ಮಕವಾಗಿ ಮಧುಗಿರಿಯನ್ನೂ ಜಿಲ್ಲೆಯಾಗಿ ಘೋಷಣೆ ಮಾಡಬೇಕು.
-ಡಾ.ಜಿ.ಪರಮೇಶ್ವರ್ ಮಾಜಿ ಡಿಸಿಎಂ
ಮೋದಿಯದು ದ್ವಿಮುಖ ನೀತಿ
ಬೆಂಗಳೂರು: ಬಿಹಾರ ಪ್ರವಾಹ ವಿಚಾರದಲ್ಲಿ ಮೋದಿ ಅವರ ಟ್ವೀಟ್ ಬಿಜೆಪಿಯ ದ್ವಿಮುಖ ನೀತಿಯನ್ನು ತೋರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ದಾಸರಹಳ್ಳಿಯಲ್ಲಿ ಆಯೋಜಿಸಿದ್ದ ಜೆಡಿಎಸ್ ಸಭೆಯಲ್ಲಿ ಮಾತನಾಡಿ, ಕರ್ನಾಟಕದ ಜನತೆಗೆ ಕೇಂದ್ರ ಸರ್ಕಾರದ ಧೋರಣೆ ಅರ್ಥ ಆಗಬೇಕಾಗಿದೆ. ಬಿಹಾರದ ಬಗ್ಗೆ ಟ್ವೀಟ್ ಮಾಡುವ ಮೋದಿಗೆ ಕರ್ನಾಟಕದಲ್ಲಿ ಆರು ಲಕ್ಷ ಕುಟುಂಬಗಳು ಬೀದಿಗೆ ಬಿದ್ದ ವಿಚಾರ ಗೊತ್ತಿಲ್ಲವೇ?. ನೆರೆ ಪರಿಹಾರಕ್ಕೆ ಅನುದಾನ ಬಿಡುಗಡೆ ಮಾಡದ ಬಗ್ಗೆ ಬಿಜೆಪಿ ನಾಯಕರು ಉತ್ತರ ನೀಡಬೇಕು. ಬಿಜೆಪಿ ನಾಯಕರನ್ನು ರಾಜ್ಯದ ಜನತೆ ಪ್ರಶ್ನಿಸಬೇಕಿದೆ ಎಂದು ಹೇಳಿದರು.
ಬಿಡಿಗಾಸು ನೀಡಲ್ಲ: ಮೋದಿಯವರು ಅಮೆರಿಕದಲ್ಲಿ ಕಾರ್ಯಕ್ರಮ ಮಾಡುತ್ತಾರೆ. ಆದರೆ, ನೆರೆ ಸಂತ್ರಸ್ತರಿಗೆ ಬಿಡಿಗಾಸು ನೀಡಲ್ಲ. ಇದು ಅವರ ಸಾಧನೆ. ಕೇಂದ್ರ ಸರ್ಕಾರ ನೆರೆ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.
ಪುಕ್ಸಟ್ಟೆ’ ಆಗಲು ಸಾಧ್ಯವೇ?: ಯಡಿಯೂ ರಪ್ಪ ಅವರು ಪುಕ್ಸಟ್ಟೆ ಮುಖ್ಯಮಂತ್ರಿ ಆಗಿಲ್ಲ ಎಂದು ಅವರ ಸುಪುತ್ರ ಬಿಜೆಪಿ “ವರಿಷ್ಠ’ (?) ವಿಜಯೇಂದ್ರ ಹೇಳಿದ್ದಾರೆ. ಹೌದು ವರಿಷ್ಠರೇ, ವರ್ಗಾವಣೆ ದುಡ್ಡು, ಬಿಲ್ಡರ್‌ಗಳಿಂದ ದುಡ್ಡು, ರಿಯಲ್ ಎಸ್ಟೇಟ್ ದಂಧೆಕೋರರಿಂದ ದುಡ್ಡು, ಕಂಟ್ರಾಕ್ಟರ್‌ಗಳಿಂದ ಪರ್ಸಂಟೇಜ್ ಹೊಡೆದ ಮೇಲೆ ನಿಮ್ಮ ತಂದೆ “ಪುಕ್ಸಟ್ಟೆ’ ಆಗಲು ಸಾಧ್ಯವೇ? ಎಂದು ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.
ಮಠಾಧೀಶರ ಫೋನ್ ಟ್ಯಾಪಿಂಗ್ ವಿಚಾರದಲ್ಲಿ ಸಿಬಿಐ ಅಷ್ಟೇ ಅಲ್ಲ, ಅವರಪ್ಪ ಬಂದರೂ ಏನೂ ಮಾಡಲಾಗದು. ಆದಿಚುಂಚನಗಿರಿ ಸ್ವಾಮೀಜಿಯ ಫೋನ್ ಟ್ಯಾಪಿಂಗ್ ಮಾಡಿದರು ಅಂತಾರೆ, ಕಾಲಭೈರವೇಶ್ವರ ದೇವಾಲಯದ ಗುದ್ದಲಿ ಪೂಜೆಗೆ ಅಮೆರಿಕಕ್ಕೆ ಹೋಗಿದ್ದೆ, ಸರ್ಕಾರ ಉಳಿಸಿಕೊಳ್ಳಬೇಕು ಎಂದಿದ್ದರೆ ಸ್ವಾಮೀಜಿ ಜತೆ ಅಮೆರಿಕಕ್ಕೆ ಹೋಗುತ್ತಿದ್ದೆನಾ?.
-ಎಚ್.ಡಿ.ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.