ಪ್ರೀತಿಸಿ ವಿವಾಹವಾಗುವ ಮುನ್ನ ಪೋಷಕರ ತ್ಯಾಗ ನೆನೆಯಿರಿ; ಹೈಕೋರ್ಟ್
ಮಕ್ಕಳು ಇಂದು ಹೆತ್ತವರಿಗೆ ಏನು ನೀಡುತ್ತಾರೆ, ಅದನ್ನೇ ಮುಂದೆ ಅವರ ಮಕ್ಕಳಿಂದ ಪಡೆದುಕೊಳ್ಳುತ್ತಾರೆ.
Team Udayavani, Jun 15, 2022, 5:56 PM IST
ಬೆಂಗಳೂರು: “ಪ್ರೌಢಾವಸ್ಥೆಗೆ ಬಂದ ಕೂಡಲೇ ತಾವು ಸ್ವತಂತ್ರರು ಅಂದುಕೊಂಡು ಬಯಸಿದ ಸಂಗಾತಿಯನ್ನು ಅರಸಿ ಪ್ರೇಮ ವಿವಾಹವಾಗುವ ಮುನ್ನ ಹೆತ್ತ ತಂದೆ-ತಾಯಿ ಮಾಡಿದ ತ್ಯಾಗವನ್ನು ಮಕ್ಕಳು ಒಮ್ಮೆ ನೆನಪಿಸಿಕೊಳ್ಳಬೇಕು’…..ಹೀಗೆಂದು ಹೈಕೋರ್ಟ್ ಬುದ್ಧಿವಾದದ ಮಾತುಗಳನ್ನು ಹೇಳಿದೆ.
ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನ ವ್ಯಾನ್ ಚಾಲಕನನ್ನು ಪ್ರೇಮ ವಿವಾಹವಾದ ಪ್ರಕರಣದಲ್ಲಿ ಮಗಳನ್ನು ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಕೋರಿ ವಿದ್ಯಾರ್ಥಿನಿಯ ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ಬುದ್ಧಿವಾದದ ಮಾತುಗಳನ್ನು ಹೇಳಿತು.
ಆದರೆ, ಈ ಪ್ರಕರಣದಲ್ಲಿ ವಿದ್ಯಾರ್ಥಿನಿಗೆ 19 ವರ್ಷವಾಗಿದ್ದು, ವಯಸ್ಕರು ತಾವು ಬಯಸಿದ ವ್ಯಕ್ತಿಯೊಂದಿಗೆ ಜೀವಿಸುವ ಹಕ್ಕನ್ನು ಸಂವಿಧಾನವೇ ಕಲ್ಪಿಸಿರುವುದರಿಂದ ಮತ್ತು ಪತಿಯೊಂದಿಗೆ ಜೀವಿಸುವುದಾಗಿ ವಿದ್ಯಾರ್ಥಿನಿ ಪಟ್ಟು ಹಿಡಿದ ಕಾರಣ ತಂದೆಯ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತು. ಅಲ್ಲದೆ ಗಂಡನ ಜೊತೆಗೆ ತೆರಳಲು ವಿದ್ಯಾರ್ಥಿನಿಗೆ ಅನುಮತಿ ನೀಡಿತು.
ಪ್ರಕರಣದ ವಿಚಾರಣೆ ವೇಳೆ ಪೋಷಕರ ಅಳಲು ಕೇಳಿದ ನ್ಯಾಯಮೂರ್ತಿಗಳು, ಹೆತ್ತವರಿಗಿಂತ ದೊಡ್ಡ ದೇವರಿಲ್ಲ. ಸಹಾನು ಭೂತಿಗಿಂತ ದೊಡ್ಡ ಧರ್ಮವಿಲ್ಲ. ಜನ್ಮ ನೀಡಿ ಬೆಳೆಸಿದ ತಂದೆ- ತಾಯಿಯ ಋಣ ತೀರಿಸಲು ಅಸಾಧ್ಯ. ಪ್ರೌಢಾವಸ್ಥೆಗೆ ಬಂದ ಕೂಡಲೇ ತಾವು ಸ್ವತಂತ್ರರು ಎಂದೇಳಿ ಬಯಸಿದ ಸಂಗಾತಿಯನ್ನು ಪ್ರೇಮ ವಿವಾಹವಾಗುವ ಮುನ್ನ ತಮಗಾಗಿ ಪೋಷಕರು ಮಾಡಿದ ತ್ಯಾಗವನ್ನು ಮಕ್ಕಳು ಒಮ್ಮೆ ನೆನೆಪಿಸಿಕೊಳ್ಳಬೇಕು. ಮಕ್ಕಳು ಹೆತ್ತವರಿಗೆ ಇಷ್ಟವಾಗುವ ಕೆಲಸ ಮಾಡಬೇಕೆ ಹೊರತು ಅವರ ನೋವಿಗೆ ಕಾರಣವಾಗಬಾರದು ಎಂದು ಹೇಳಿದರು.
ಮಂಡ್ಯದ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿ ತಂಗಿದ್ದಳು. ಕಾಲೇಜಿನ ವ್ಯಾನ್ ಚಾಲಕನನ್ನು ಪ್ರೀತಿಸಿ ಪೋಷಕರಿಗೆ ತಿಳಿಸದೆ ಪ್ರೇಮ ವಿವಾಹ ಮಾಡಿಕೊಂಡಿದ್ದಳು. ಇದರಿಂದ ತಂದೆ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಮಗಳಿಗೆ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವಿಲ್ಲ. ಆಕೆಯನ್ನು ಪುಸಲಾಯಿಸಿ ವ್ಯಾನ್ ಚಾಲಕ ಮದುವೆಯಾಗಿದ್ದಾನೆ. ಆತನ ಅಕ್ರಮ ಬಂಧನದಲ್ಲಿರುವ ಮಗಳನ್ನು ತಮ್ಮ ವಶಕ್ಕೆ ಒಪ್ಪಿಸಿ ಆದೇಶಿಸುವಂತೆ ಕೋರಿದ್ದರು. ನ್ಯಾಯಾಲಯದ ನಿರ್ದೇಶನದಂತೆ ವಿದ್ಯಾರ್ಥಿನಿ ಮತ್ತು ಆಕೆಯ ಪತಿ ಕೋರ್ಟ್‌ಗೆ ಹಾಜರಾಗಿದ್ದರು.
ಇವತ್ತು ನೀಡಿದ್ದು, ಮುಂದೆ ಪಡೆದುಕೊಳ್ಳುತ್ತಾರೆ
ಮಕ್ಕಳು ಇಂದು ಹೆತ್ತವರಿಗೆ ಏನು ನೀಡುತ್ತಾರೆ, ಅದನ್ನೇ ಮುಂದೆ ಅವರ ಮಕ್ಕಳಿಂದ ಪಡೆದುಕೊಳ್ಳುತ್ತಾರೆ. ಹೆತ್ತವರಿಗಿಂತ ದೊಡ್ಡ ಧರ್ಮವಿಲ್ಲ. ಸಹಾನುಭೂತಿಗಿಂತ ದೊಡ್ಡ ಧರ್ಮವಿಲ್ಲ. ಕೋಪಕ್ಕಿಂತ ಶತ್ರು ಇಲ್ಲ. ಖ್ಯಾತಿ-ಗೌರವಕ್ಕಿಂತ ದೊಡ್ಡ ಆಸ್ತಿ ಇಲ್ಲ. ಕುಖ್ಯಾತಿಯೇ ಮರಣ. ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿದ ತಂದೆ-ತಾಯಿಯ ಋಣವನ್ನು ನೂರು ವರ್ಷವಾದರೂ ತೀರಿಸಲು ಅಸಾಧ್ಯ ಎಂಬುದಾಗಿ ಮನುಸ್ಮತಿ ಹೇಳುತ್ತದೆ. ಆದ್ದರಿಂದ ತಂದೆ-ತಾಯಿ, ಗುರು-ಹಿರಿಯರಿಗೆ ಇಷ್ಟವಾದ ಕೆಲಸಗಳನ್ನೇ ಮಕ್ಕಳು ಮಾಡಬೇಕು. ಪ್ರೀತಿ ಹೃದಯದಿಂದ ಹೃದಯಕ್ಕಿರಬೇಕು ಹೊರತು ಬಾಹ್ಯ ಆಕರ್ಷಣೆಗೆ ಸೀಮಿತವಾಗಬಾರದು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ
ವಿದ್ಯಾರ್ಥಿನಿ, ವ್ಯಾನ್ ಚಾಲಕ ಹೇಳಿದ್ದೇನು?
ವಿಚಾರಣೆ ವೇಳೆ ವಿದ್ಯಾರ್ಥಿನಿ, “ತಾನು ವಯಸ್ಕಳಾಗಿದ್ದು, ಪ್ರೀತಿಸಿ ಮದುವೆಯಾಗಿದ್ದೇನೆ. ಪತಿಯೊಂದಿಗೆ ಜೀವಿಸಲು ಬಯಸಿದ್ದೇನೆ’ ಎಂದು ಹೇಳಿಕೆ ದಾಖಲಿಸಿದಳು. ಪತಿ ಸಹ “ತನ್ನ ಪತ್ನಿಯನ್ನು ಎಂಜಿನಿಯರ್ ಪದವಿ ಓದಿಸುತ್ತೇನೆ. ತನ್ನ ಜೀವನ ಇರುವವರೆಗೂ ಆಕೆ ಕಣ್ಣೀರು ಹಾಕದಂತೆ ನೋಡಿಕೊಳ್ಳುತ್ತೇನೆ’ ಎಂದು ಕೋರ್ಟ್‌ಗೆ ಭರವಸೆ ನೀಡಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಲಯ ಪ್ರಕರಣದಲ್ಲಿ ಅಕ್ರಮ ಬಂಧನ ಇಲ್ಲವಾಗಿದ್ದು ಎಂದು
ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.