Madikeri: ಕರಗೋತ್ಸವದ ಮೂಲಕ ಮಡಿಕೇರಿ ದಸರಾ ಸಂಭ್ರಮ ಆರಂಭ
Team Udayavani, Oct 4, 2024, 1:07 AM IST
ಮಡಿಕೇರಿ: ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವದ ಮೂಲಕ ಐತಿಹಾಸಿಕ ಮಡಿಕೇರಿ ದಸರಾ ಸಂಭ್ರಮ ಗುರುವಾರ ಆರಂಭಗೊಂಡಿತು. ಇತಿಹಾಸ ಪ್ರಸಿದ್ಧ ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ನಗರದ ಪಂಪಿನ ಕೆರೆಯ ಬನ್ನಿ ಮಂಟಪದಲ್ಲಿ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಸಲ್ಲಿಸಿ ಕರಗೋತ್ಸವದ ನಗರ ಸಂಚಾರಕ್ಕೆ ಚಾಲನೆ ನೀಡಲಾಯಿತು.
ಹಾಲೇರಿ ರಾಜವಂಶಸ್ಥರ ಆಳ್ವಿಕೆಯ ಕಾಲದಿಂದ ನಡೆದುಕೊಂಡು ಬಂದಿರುವ ಮಡಿಕೇರಿಯ ದಸರಾ ಉತ್ಸವಕ್ಕೆ ಒಂದೂವರೆ ಶತಮಾನದ ಇತಿಹಾಸವಿದೆ. ನಗರದ ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ದಸರಾ ಉತ್ಸವದಲ್ಲಿ ಅಗ್ರ ಸ್ಥಾನ ನೀಡಲಾಗಿದೆ. ನವರಾತ್ರಿಯ ವಿಶೇಷವಾಗಿ ಕರಗಗಳ ನಗರ ಪ್ರದಕ್ಷಿಣೆ ನಡೆಯಲಿದೆ.
ಐತಿಹಾಸಿಕ ಹಿನ್ನೆಲೆ ಹೊಂದಿರುವ ನಗರದ ರಾಜಾಸೀಟು ಬಳಿಯ ಶ್ರೀಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಕರಗವನ್ನು ಪಿ.ಪಿ.ಚಾಮಿ, ಗೌಳಿಬೀದಿಯ ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯದ ಕರಗವನ್ನು ಪಿ.ಸಿ.ಉಮೇಶ್, ಶ್ರೀದಂಡಿನ ಮಾರಿಯಮ್ಮ ದೇವಾಲಯದ ಕರಗವನ್ನು ಜಿ.ಎ.ಉಮೇಶ್ ಹಾಗೂ ಶ್ರೀಕೋಟೆ ಮಾರಿಯಮ್ಮ ದೇವಾಲಯದ ಕರಗವನ್ನು ಪಿ.ಬಿ.ಅನೀಶ್ ಕುಮಾರ್ ಹೊರುವ ಮೂಲಕ ನಗರ ಪ್ರದಕ್ಷಿಣೆಯನ್ನು ಆರಂಭಿಸಿದರು.
ಕರಗೋತ್ಸವ ಆರಂಭದ ಸಂದರ್ಭ ಮಡಿಕೇರಿ ಕ್ಷೇತ್ರದ ಶಾಸಕ ಡಾ| ಮಂತರ್ ಗೌಡ, ಜಿಲ್ಲಾಧಿಕಾರಿಗಳು ಹಾಗೂ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷ ವೆಂಕಟ್‌ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಪಂಚಾಯತ್ ಸಿಇಒ ವರ್ಣಿತ್ ನೇಗಿ, ಉಪವಿಭಾಗಾಧಿಕಾರಿ ವಿನಾಯಕ ನರ್ವಾಡೆ, ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾಯ ಸಹಿತ ಪ್ರಮುಖರು ಉಪಸ್ಥಿತರಿದ್ದರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.