ಸ್ವ ಉದ್ಯೋಗದ ಸಂಕಲ್ಪ ಮಾಡಿ: ಬಿಎಸ್‌ವೈ
Team Udayavani, Jan 13, 2020, 3:09 AM IST
ಬೆಂಗಳೂರು: ಸರ್ಕಾರಿ ಉದ್ಯೋಗವಲ್ಲ, ಸಣ್ಣಪುಟ್ಟ ಕೈಗಾರಿಕೆಗಳನ್ನೂ ಆರಂಭಿಸಿ ನೂರಾರು ಜನರಿಗೆ ಉದ್ಯೋಗ ನೀಡುವ ಸಂಕಲ್ಪವನ್ನು ಸ್ವಾಮಿ ವಿವೇಕಾ ನಂದ ಜಯಂತಿಯಂದು ಮಾಡಬೇಕು ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸ್ವಾಮಿ ವಿವೇಕಾನಂದರ 158ನೇ ಜಯಂತಿ ಅಂಗವಾಗಿ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಉಚಿತ ವಾಗಿ ಲ್ಯಾಪ್‌ಟಾಪ್ ವಿತರಿಸಿ, ಯುವ ಸಬಲೀಕರಣ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಉದ್ಯೋಗವಲ್ಲ, ಸಣ್ಣಪುಟ್ಟ ಉದ್ದಿಮೆ ಆರಂಭಿಸಿ ನೂರಾರು ಜನರಿಗೆ ಉದ್ಯೋಗ ನೀಡುವ ಸಂಕಲ್ಪ ಮಾಡಬೇಕು. ಈ ರೀತಿ ಸಂಕಲ್ಪ ಮಾಡಿದಾಗ ಮಾತ್ರ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ನಾವೆಲ್ಲರೂ ಪಾಲ್ಗೊಂಡಿರುವುದಕ್ಕೆ ಸಾರ್ಥಕತೆ ಬರುತ್ತದೆ ಎಂದು ಹೇಳಿದರು.
ವಿವೇಕಾನಂದರ ಬದುಕು ಮತ್ತು ಆದರ್ಶ ಅದೆಷ್ಟೋ ಜನರ ಜೀವನವನ್ನೇ ಬದಲಿಸಿದೆ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾಗಿತ್ತು. ಅವರ ವೈಚಾರಿಕ ಚಿಂತನೆ ಅರ್ಥಗರ್ಭಿತವಾಗಿದ್ದು, ಅವುಗಳನ್ನು ಅನುಷ್ಠಾನಕ್ಕೆ ತರಬೇಕು. ದಿನಕ್ಕೆ ಕನಿಷ್ಠ 10 ಪುಟ ಸ್ವಾಮಿ ವಿವೇಕಾನಂದ ಬಗ್ಗೆ ಓದುವುದರಿಂದ ಸ್ಫೂರ್ತಿ, ಸ್ವಾಭಿಮಾನದ ಜತೆಗೆ ಭಾರತೀಯ ಸಂಸ್ಕೃತಿಯ ಪರಿಚಯವಾಗಲಿದೆ ಎಂದು ತಿಳಿಸಿದರು.
ವಿದೇಶಿ ವ್ಯಾಮೋಹ ಬಿಡಿ: ಯುವ ಜನರು ಆಧುನಿಕತೆ ಅಲೆಗೆ ಸಿಲುಕಿ ನಮ್ಮ ದೇಶದ ಧರ್ಮ, ಸಂಸ್ಕೃತಿ, ಪರಂಪರೆ, ಆಚಾರ, ವಿಚಾರಗಳನ್ನು ಮರೆಯುತ್ತಿರುವ ಪರಿಸ್ಥಿತಿ ಬಂದಿದೆ. ಸಾಮಾನ್ಯ ಜನರು ನೀಡುವ ತೆರಿಗೆ ಹಣದಿಂದ ನಿಮ್ಮನ್ನು ವಿದ್ಯಾವಂತರನ್ನಾಗಿಸಿ, ವೈದ್ಯರು, ಎಂಜಿನಿಯರ್‌ಗಳನ್ನಾಗಿ ಮಾಡುತ್ತಿದ್ದೇವೆ. ಆದರೆ, ವಿದೇಶಿ ವ್ಯಾಮೋಹದಿಂದ ಉನ್ನತ ವಿದ್ಯಾಭ್ಯಾಸ ಹೋಗಿ ದೇಶವನ್ನು ಮರೆತು ವಿದೇಶದಲ್ಲಿ ನೆಲೆಬೇಕು ಎಂಬ ಚಿಂತನೆ ಮೂಡುತ್ತಿರುವುದು ಸರಿಯಲ್ಲ.
ಇಂತಹ ಚಿಂತನೆಗಳಿಗೆ ದಯಮಾಡಿ ಅವಕಾಶ ಮಾಡಿ ಕೊಡ ಬೇಡಿ. ಯುವ ಜನತೆ ರಚನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾಭ್ಯಾಸದ ನಂತರ ಸುಂದರ ಬದುಕು ರೂಪಿಸಿಕೊಳ್ಳಲು ಯುವ ಸಬಲೀಕರಣ, ಕೌಶಲ್ಯಾಭಿವೃದ್ಧಿ ತರಬೇತಿ, ವಿವಿಗಳಿಗೆ ಪ್ರೋತ್ಸಾಹದಂತಹ ಹತ್ತಾರು ಕಾರ್ಯ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ನಿಮ್ಮ ತಂದೆ ತಾಯಿಗೆ ಗೌರವ ತರುವುದು, ಅವರ ನಿರೀಕ್ಷೆಗಳನ್ನು ಈಡೇರಿಸುವುದು ಮಾತ್ರವಲ್ಲ, ಸ್ವಂತ ಬಲದಿಂದ ಜೀವನ ಸಾಗಿಸುವ ಹಾಗೂ ವಿದ್ಯಾವಂತರಾಗಿ ನೂರಾರು ಜನರಿಗೆ ಉದ್ಯೋಗ ನೀಡುವ ಸಂಕಲ್ಪ ಮಾಡಬೇಕಿದೆ ಎಂದರು.
ಡಿಸಿಎಂ ಡಾ.ಸಿ.ಎನ್. ಅಶ್ವತ್ಥ ನಾರಾ ಯಣ ಮಾತನಾಡಿ, ವೈಟ್ ಕಾಲರ್ ಉದ್ಯೋಗಗಳ ಮೇಲಿನ ಅತಿಯಾದ ವ್ಯಾಮೋಹ ನಿಲ್ಲಿಸಬೇಕಿದೆ. ಬ್ಲೂ ಕಾಲರ್ ಉದ್ಯೋಗಗಳನ್ನು ಪರಿಗಣಿಸಬೇಕು. ರಾಜ್ಯದಲ್ಲಿ ಕಳೆದ ಹತ್ತು ವರ್ಷದಲ್ಲಿ ಒಟ್ಟು ದಾಖಲಾತಿ ಅನುಪಾತ (ಜಿಇಆರ್) ಶೇ.30ರಿಂದ 60ಕ್ಕೆ ಹೆಚ್ಚಿಸಲು ನಿರ್ಧರಿಸಿದ್ದೇವೆ.
ಇದರಿಂದ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆ ಗಳನ್ನು ಪರಿಹರಿಸಲು ಸಾಧ್ಯವಾಗ ಲಿದೆ ಎಂದು ತಿಳಿಸಿದರು. ರಾಜ್ಯದ ಯುವ ಜನರು ಶಿಕ್ಷಣ ಹಾಗೂ ವೃತ್ತಿ ಶಿಕ್ಷಣದ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳಲು ಅನುಕೂಲ ವಾಗುವಂತೆ ವೃತ್ತಿಪರ ಕೌನ್ಸೆಲಿಂಗ್ ನೀಡುವುದಕ್ಕಾಗಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಯುವ ಸಬಲೀಕರಣ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಪರಿವರ್ತನೆಗೆ ಈ ಕೇಂದ್ರ ಸಹಕಾರಿಯಾಗಲಿದೆ ಎಂದು ಹೇಳಿದರು.
ರಾಮಕೃಷ್ಣ ಮಠದ ಸ್ವಾಮಿ ಮಂಗಲನಾಥನಂದಜೀ ಮಹರಾಜ್ ಅವರು ಆಶೀರ್ವಚನ ನೀಡಿ, ವಿವೇಕಾನಂದರ ಜೀವನ, ಸಾಧನೆ ಹಾಗೂ ತತ್ವಾದರ್ಶಗಳನ್ನು ವಿವರಿಸಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ಮೇಯರ್ ಗೌತಮ್‌ಕುಮಾರ್ ಹಾಗೂ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜಕುಮಾರ್ ಖತ್ರಿ, ಆಯುಕ್ತ ಅನಿರುದ್ಧ ಶ್ರವಣ್, ವಿಶ್ವವಿದ್ಯಾಲಯಗಳ ಕುಲಪತಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ: ಪ್ರಥಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ 1,09,916 ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಾಂಕೇತಿಕವಾಗಿ ಎಂಟು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದರು.
ಭಾರತೀಯ ಕ್ರಿಕೆಟ್ ತಂಡದ ವೇದಾ ಕೃಷ್ಣಮೂರ್ತಿ, ವಿವಿಧ 30 ದೇಶಗಳಲ್ಲಿ ಪ್ರಶಸ್ತಿ ಪಡೆದಿರುವ ಅಗನಾಶಿನಿ ಸಾಕ್ಷ್ಯಚಿತ್ರದ ನಿರ್ದೇಶಕ ಅಶ್ವಿನಿಕುಮಾರ್ ಭಟ್, “ಬೌನ್ಸ್’ ಕಂಪೆನಿ ಸಹ ಸಂಸ್ಥಾಪಕ ವಿವೇಕಾನಂದ ಹಳ್ಳಿಕೇರಿ, ವೆಬ್ ಟೆಕ್ನಾಲಜಿಯಲ್ಲಿ ರಾಷ್ಟ್ರಮಟ್ಟದಲ್ಲಿ ಬೆಳ್ಳಿ ಪದಕ ಪಡೆದಿರುವ ಪ್ರಣವ್ ನುತಲಪಾಟಿ ಸೇರಿದಂತೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಥಮ ರ್‍ಯಾಂಕ್ ಪಡೆದಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ತರಕಾರಿ, ನಿಂಬೆಹಣ್ಣು ಮಾರುತ್ತಿದ್ದೆ: ವೀರ ಸನ್ಯಾಸಿಯಾಗಿದ್ದ ವಿವೇಕಾನಂದರ ಹೆಸರೇ ಸ್ಫೂರ್ತಿ ಹಾಗೂ ಶಕ್ತಿಶಾಲಿಯಾಗಿದೆ. ಯುವಕರು ಮನಸ್ಸು ಮಾಡಿದರೆ ಯಾವುದೇ ಸಾಧನೆ ಮಾಡಬಹುದು ಎಂಬುದನ್ನು ಮರೆಯಬಾರದು. ಏಕೆಂದರೆ, ನಾನು ಹೈಸ್ಕೂಲ್‌ಗೆ ಹೋಗುವಾಗ ಮಂಡ್ಯದಲ್ಲಿ ತರಕಾರಿ ಹಾಗೂ ನಿಂಬೆ ಹಣ್ಣು ಮಾರುತ್ತಿದ್ದೆ. ರಾಜ್ಯದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದೇನೆ.
ರಾಜ್ಯದ ಆರೂವರೆ ಕೋಟಿ ಜನರ ಆಶೀರ್ವಾದದಿಂದ ಇದು ಸಾಧ್ಯವಾಗಿದೆ. ಕೆ.ಆರ್. ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನಾನು ಹಿರಿಯರ ಮಾರ್ಗ ದರ್ಶನದಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯ ವಾಯಿತು. ಬಡ ಮತ್ತು ಸಾಮಾನ್ಯ ಕುಟುಂಬದವರು ಕಠಿಣ ಪರಿಶ್ರಮದಿಂದ ಸಾಧನೆಯ ಹಾದಿಯಲ್ಲಿ ಮೇಲೆ ಬರಲು ಸಾಧ್ಯ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಜೀವನಾನುಭವನ್ನು ವಿದ್ಯಾರ್ಥಿಗಳ ಮುಂದೆ ಬಿಚ್ಚಿಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.