Malali Masjid: ಮಳಲಿ ಮಸೀದಿ: ವಕ್ಫ್ ಬೋರ್ಡ್ ಕಾನೂನು ಹೋರಾಟ
Team Udayavani, Feb 4, 2024, 12:19 AM IST
ಮಂಗಳೂರು: ಗುರುಪುರ ಸಮೀಪದ ಮಳಲಿ ಮಸೀದಿಗೆ ಸಂಬಂಧಿತ ಪ್ರಕರಣವನ್ನು ವಕ್ಫ್ ಬೋರ್ಡ್ ಕಡೆಯಿಂದ ನ್ಯಾಯಾಲಯದಲ್ಲಿ ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದೇವೆ. ಇನ್ನು ಮುಂದೆ ಪ್ರಕರಣದ ವಿಚಾರಣೆ ಮಂಗಳೂರಿನ 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯಲಿದ್ದು, ಮಸೀದಿ ಸಮಿತಿಯೊಂದಿಗೆ ವಕ್ಫ್ ಬೋರ್ಡ್ ಕೂಡ ಪಾರ್ಟಿಯಾಗಲಿದೆ ಎಂದು ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಳಲಿ ಮಸೀದಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳು ನಮ್ಮ ಬಳಿ ಇವೆ. ಅದು ವಕ್ಫ್ ಆಸ್ತಿ. ಈಗಾಗಲೇ ಮಸೀದಿ ಜಾಗದ ಸರ್ವೇ ಆಗಿದ್ದು, ಅಧಿಕೃತ ಗಜೆಟ್ ನೋಟಿಫಿಕೇಶನ್ ಹೊರಡಿಸಲಾಗಿದೆ. ಆರ್‌ಟಿಸಿಯೂ ಮಸೀದಿಯ ಬಳಿ ಇದೆ. ಆರ್‌ಟಿಸಿಗೂ ಮುನ್ನ ಅಡಂಗಲ್‌ನಲ್ಲೂ ಮಸೀದಿ ಇತ್ತು ಎನ್ನುವುದಕ್ಕೆ ಸಾಕ್ಷಿ ಇದೆ. ಮಸೀದಿಯ ನಿರ್ವಹಣೆಗೆ ಪ್ರಾಚೀನ ಕಾಲದಲ್ಲಿ ದೀಪದ ಎಣ್ಣೆ, ಬಳಿಕ ತಸ್ತೀಕ್, ಬ್ರಿಟಿಷ್ ಕಾಲದಲ್ಲಿ ಚಲಾವಣೆಯ ನಾಣ್ಯಗಳ ರೂಪದಲ್ಲಿ ತಸ್ತೀಕ್ ನೀಡಲಾಗಿರುವ ದಾಖಲೆಗಳಿವೆ. ಹೈಕೋರ್ಟ್ ಆದೇಶದ ಪ್ರತಿ ದೊರಕಿದ ಕೂಡಲೇ ಕಾನೂನು ತಜ್ಞರ ಬಳಿ ಸಮಾಲೋಚನೆ ನಡೆಸಿ ಮುಂದಿನ ಹೋರಾಟ ರೂಪಿಸುತ್ತೇವೆ ಎಂದರು.
ಮಳಲಿ ಮಸೀದಿಗೆ ಹಲವು ವರ್ಷಗಳ ಇತಿಹಾಸ ಇದೆ. ಹಿರಿಯ ಸಾಹಿತಿ ಅಮೃತ ಸೋಮೇಶ್ವರ ಅವರ ಬರೆದ “ಅಬ್ಬಕ್ಕ ಸಂಕಥನ’ ಪುಸ್ತಕದಲ್ಲಿಯೂ ಮಳಲಿ ಮಸೀದಿಯ ಬಗ್ಗೆ ಉಲ್ಲೇಖ ಇದೆ. ಮಳಲಿ ಮಸೀದಿಗೆ ಸಂಬಂಧಿಸಿ ಸ್ಥಳೀಯರಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲ ಧರ್ಮದ ಜನರು ಅಲ್ಲಿ ಅನ್ಯೋನ್ಯವಾಗಿದ್ದಾರೆ. ಆದರೆ ಹೊರಗಿನವರು ಬಂದು ವಿವಾದ ಸೃಷ್ಟಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ನಡೆಯುತ್ತಿದೆ ಎಂದರು.
ದೇವಾಲಯ ಎನ್ನಲು ಯಾವುದೇ ದಾಖಲೆ ಇಲ್ಲ
ಮಳಲಿ ಮಸೀದಿ ಇದ್ದ ಜಾಗದಲ್ಲಿ ದೇವಾಲಯ ಇತ್ತು ಎನ್ನುವುದಕ್ಕೆ ಯಾವುದೇ ದಾಖಲೆ ಇಲ್ಲ. ಆದರೆ ಮಸೀದಿ ಇತ್ತು ಎನ್ನುವುದಕ್ಕೆ ಅನೇಕ ದಾಖಲೆಗಳಿವೆ. 2022ರಲ್ಲಿ ಈ ಮಸೀದಿಯನ್ನು ನವೀಕರಣ ಉದ್ದೇಶಕ್ಕೆ ಕೆಡಹುವ ವೇಳೆ ದೇವಸ್ಥಾನದಂತಹ ರಚನೆ ವಿವಾದಕ್ಕೆ ಕಾರಣವಾಯಿತು. ಮಸೀದಿ ನಿರ್ಮಾಣ ಮಾಡಿದ್ದು ಕೇರಳದ ಬಡಗಿಗಳು. ಅವರು ಹಿಂದೂ ದೇವಾಲಯಗಳನ್ನೂ ನಿರ್ಮಾಣ ಮಾಡುತ್ತಿದ್ದರು. ಕೇವಲ ಕೆತ್ತನೆಯನ್ನು ಆಧರಿಸಿ ಅಲ್ಲಿ ಮಸೀದಿ ಇರಲಿಲ್ಲ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಡಾ| ಎ.ಕೆ. ಜಮಾಲ್, ಸದಸ್ಯ ಸೈದುದ್ಧೀನ್ ಬಜಪೆ, ಮಳಲಿ ಪೇಟೆ ಜುಮಾ ಮಸೀದಿ ಆಧ್ಯಕ್ಷ ಅಬ್ದುಲ್ ರಝಾಕ್, ಉಪಾಧ್ಯಕ್ಷ
ಎಂ.ಎ. ಅಬೂಬಕ್ಕರ್, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಕೋರ್ಟ್ ತೀರ್ಪಿನ ಬಳಿಕ ಮುಂದಿನ ಹೆಜ್ಜೆ: ಶಾಸಕ ಡಾ| ಭರತ್ ಶೆಟ್ಟಿ
ಸುರತ್ಕಲ್: ಮಳಲಿ ಮಸೀದಿ ಇರುವ ಸ್ಥಳದಲ್ಲಿ ಹಿಂದೂ ಮಂದಿರದ ಕುರುಹು ಕಂಡುಬಂದ ಬಳಿಕ ಪ್ರಕರಣ ನ್ಯಾಯಾಲಯ ದಲ್ಲಿದ್ದು ತೀರ್ಪಿಗಾಗಿ ಕಾಯಲಾ ಗುತ್ತಿದೆ. ತೀರ್ಪಿನ ಆಧಾರದ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕ ಡಾ| ಭರತ್ ಶೆಟ್ಟಿ ವೈ. ಹೇಳಿದ್ದಾರೆ.
ನ್ಯಾಯಾಲಯದ ತೀರ್ಪಿಗೆ ಗೌರವ ನೀಡಿ ಯಥಾ ಸ್ಥಿತಿ ಕಾಯ್ದುಕೊಂಡಿದ್ದೇವೆ. ವಕ್ಫ್ ಬೋರ್ಡ್ ಇದೀಗ ಮಧ್ಯ ಪ್ರವೇಶ ಮಾಡುವ ಮೂಲಕ ಸರಕಾರವೇ ಇದರ ಹಿಂದೆ ನಿಲ್ಲುವಂತೆ ಕಾಣುತ್ತಿದೆ. ತೀರ್ಪು ಬರುವ ಮೊದಲೇ ನಾವು ಮಸೀದಿ ಅದೇ ಸ್ಥಳದಲ್ಲಿ ಕಟ್ಟುತ್ತೇವೆ ಎನ್ನುವ ಹೇಳಿಕೆ ಸಮಂಜಸವಲ್ಲ. ನಮ್ಮ ನಿಲುವು ಸ್ಪಷ್ಟವಾಗಿದೆ ನ್ಯಾಯಯುತವಾಗಿ ನಾವು ಈ ವಿಚಾರದಲ್ಲಿ ಹೆಜ್ಜೆ ಇಡಲಿದ್ದೇವೆ ಎಂದು ಶಾಸಕ ಡಾ| ಭರತ್ ಶೆಟ್ಟಿ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.