ಜನೌಷಧ ಮಳಿಗೆಗಳಲ್ಲಿ ಮಾಸ್ಕ್ ನೋ ಸ್ಟಾಕ್
Team Udayavani, Mar 5, 2020, 3:07 AM IST
ಬೆಂಗಳೂರು: ಕೊರೊನಾ ಸೋಂಕು ಭೀತಿ ಹಿನ್ನೆಲೆ ಮುಖಗವಸುಗಳಿಗೆ (ಮಾಸ್ಕ್) ತೀವ್ರ ಬೇಡಿಕೆ ಸೃಷ್ಟಿ ಯಾಗಿದೆ. ಆದರೆ, ರಾಜ್ಯಾದ್ಯಂತ ಎಲ್ಲಾ ಜನೌಷಧ ಮಳಿಗೆಗಳಲ್ಲಿ “ಮಾಸ್ಕ್ ನೋ ಸ್ಟಾಕ್’. ಇನ್ನು ಒಂದು ತಿಂಗಳು ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.
ನೆರೆಯ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರು ಪತ್ತೆಯಾದ ಹಿನ್ನೆಲೆ ರಾಜ್ಯ ಸರ್ಕಾರದಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರೂ ಎಚ್ಚರ ದಿಂದ ಇರಬೇಕು ಎಂದು ಸೂಚಿಸಲಾಗಿದೆ. ಹೀಗಾಗಿ, ರಾಜಧಾನಿ ಬೆಂಗಳೂರಿನ ಆಸ್ಪತ್ರೆ, ಬಸ್ ನಿಲ್ದಾಣ, ಉದ್ಯಾನವನ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಹತ್ತು ಮಂದಿಯಲ್ಲಿ ಒಬ್ಬರು ಮಾಸ್ಕ್ ಧರಿಸಿ ಓಡಾಡುತ್ತಿದ್ದಾರೆ.
ಜತೆಗೆ ವಿದೇಶ ಪ್ರಯಾಣಿಕರು ಹೆಚ್ಚು ಚಲನವಲನ ಹೊಂದಿರುವ ರಾಜ್ಯದ ವಿವಿಧ ನಗರಗಳಲ್ಲಿ ಮಾಸ್ಕ್ಗೆ ಬೇಡಿಕೆ ಹೆಚ್ಚಿದೆ. ಅಲ್ಲದೇ ಮಾಸ್ಕ್ ಬೆಲೆಯು ಗಗನಕ್ಕೇರಿದೆ. ಇಂತಹ ಸಂದರ್ಭದಲ್ಲಿ ಕಡಿಮೆ ದರದಲ್ಲಿ ಔಷಧ ಸಲಕರಣೆಗಳನ್ನು ನೀಡುವ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳಲ್ಲಿಯೇ ಮಾಸ್ಕ್ ದಾಸ್ತಾನು ಇಲ್ಲ.
ಜನೌಷಧ ಕೇಂದ್ರಗಳಲ್ಲಿ ಸಿಗುವ ಔಷಧ ಪಟ್ಟಿಯಲ್ಲಿ ಮಾಸ್ಕ್ ಕೂಡಾ ಇದ್ದು, ಎರಡು ರೂ. ದರವಿದೆ. ಆದರೆ, ದಾಸ್ತಾನು ಕೊರತೆಯಿಂದ ಬೆಂಗಳೂರು, ಮಂಗಳೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿಯಂತಹ ಪ್ರಮುಖ ನಗರಗಳ 10ಕ್ಕೂ ಹೆಚ್ಚು ಜನೌಷಧ ಮಳಿಗೆಗಳಿದ್ದರೂ ಒಂದರಲ್ಲಿಯೂ ಮಾಸ್ಕ್ ಲಭ್ಯವಿಲ್ಲ. ಈ ಕುರಿತು ಅಲ್ಲಿನ ಸಿಬ್ಬಂದಿಗೆ ಕಾರಣ ಕೇಳಿದರೆ “ಸದ್ಯ ಸ್ಟಾಕ್ ಇಲ್ಲ, ಯಾವಾಗ ಬರುತ್ತದೆಯೋ ಗೊತ್ತಿಲ್ಲ’ ಎನ್ನುವ ಉತ್ತರ ಬರುತ್ತದೆ.
ಕಳೆದ ಒಂದು ತಿಂಗಳಿಂದ ಇದೇ ಪರಿಸ್ಥಿತಿ: ರಾಜ್ಯದಲ್ಲಿ 600ಕ್ಕೂ ಹೆಚ್ಚು ಜನೌಷಧದ ಮಳಿಗೆಗಳಿದ್ದು, ಬಹುತೇಕ ಮಳಿಗೆಗಳಲ್ಲಿ ಕಳೆದ ಒಂದು ತಿಂಗಳಿಂದ ಮಾಸ್ಕ್ ಮಾರಾಟ ಮಾಡುತ್ತಿಲ್ಲ. ದಾಸ್ತಾನು ಪೂರೈಕೆ ಕೋರಿ ದೇಶ ದಾದ್ಯಂತ ಈ ಕೇಂದ್ರಗಳನ್ನು ನಿರ್ವಹಣೆ ಮಾಡುತ್ತಿರುವ ಬ್ಯೂರೋ ಆಫ್ ಫಾರ್ಮಾ ಪಿಎಸ್‌ಯುಎಸ್ ಆಫ್ ಇಂಡಿ ಯಾಗೆ (ಬಿಪಿಪಿಐ) ಮನವಿ ಮಾಡಿದ್ದರೂ ಇಂದಿ ಗೂ ದಾಸ್ತಾನು ಒದಗಿಸಿಲ್ಲ. ಸದ್ಯ ಕ್ರಮಕೈಗೊಂಡರೂ ದಾಸ್ತಾನು ಮಳಿಗೆ ತಲುಪಲು ಕನಿಷ್ಠ ಒಂದು ತಿಂಗಳು ಬೇಕಾಗುತ್ತದೆ ಎನ್ನುತ್ತಾರೆ ಮಳಿಗೆ ವ್ಯಾಪಾರಿಗಳು.
ಗ್ರಾಹಕರ ಬೇಸರ; ಹೊರಗಿಂದ ತಂದು ಮಾರಾಟ: ಜನೌಷಧ ಕೇಂದ್ರಗಳಲ್ಲಿ ಮಾಸ್ಕ್ ಬೆಲೆ ಕಡಿಮೆ ಎಂಬ ಕಾರಣಕ್ಕೆ ರಾಜ್ಯದ ಎಲ್ಲಾ ಜನೌಷಧ ಕೆಂದ್ರಗಳಲ್ಲಿಯೂ ಮಾಸ್ಕ್ಗೆ ಬೇಡಿಕೆ ಇದೆ. ಅಲ್ಲದೇ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ 120ಕ್ಕೂ ಹೆಚ್ಚು ಮಳಿಗೆಗಳಲ್ಲಿ ಬೇಡಿಕೆ ಹೆಚ್ಚಾಗಿಯೇ ಇದೆ. ಕಳೆದ ಒಂದೂವರೆ ತಿಂಗಳಿಂದ ಕೊರೊನಾ ಸೋಂಕು ಭೀತಿ ಇದ್ದರೂ ಅಗತ್ಯವಾದ ಮಾಸ್ಕ್ಗಳು ಜನೌಷಧಕೇಂದ್ರಗಳಲ್ಲಿ ಲಭ್ಯವಿಲ್ಲದಿರುವುದಕ್ಕೆ ಜನಸಾಮಾನ್ಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹೊರಗಿನಿಂದ ಮಾಸ್ಕ್ ತಂದು ಅರ್ಧದಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ಹುಬ್ಬಳ್ಳಿ ಕೋರ್ಟ್ ಸರ್ಕಲ್ ಬಳಿಯ ಜನೌಷಧ ಮಳಿಗೆ ಸಿಬ್ಬಂದಿ.
ಶೇ.300ರಷ್ಟು ದರ ಹೆಚ್ಚಳ: ಒಂದೆಡೆ ಬೇಡಿಕೆ ಹೆಚ್ಚಿದ್ದು, ಇನ್ನೊಂದೆಡೆ ದಾಸ್ತಾನು ಕೊರತೆ ಇರುವುದರಿಂದ ಮಾಸ್ಕ್ಗೆ ಬೆಲೆಯು ಶೇ. 300 ರಷ್ಟು ಹೆಚ್ಚಳವಾಗಿದೆ. 5 ರೂ. ಇದ್ದ ಸಾಮಾನ್ಯ ಮಾಸ್ಕ್ ದರ 20 ರೂ., 10 ರೂ. ಇದ್ದ ಮಾಸ್ಕ್ 40 ರೂ.ಗೆ ಹೆಚ್ಚಳ ವಾಗಿದೆ. ಇನ್ನೂ ವೈದ್ಯರು ಸೂಚಿಸುವ ಆರು ಪದರ ಗಳ ಮಾಸ್ಕ್ನ ಬೆಲೆ 40 ರೂ. ನಿಂದ 200 ರೂ.ಗೆ ಏರಿಕೆಯಾ ಗಿದೆ. ದರ ಹೆಚ್ಚಳ ಕುರಿತು ಮಾರಾಟ ಮಳಿಗ ಸಿಬ್ಬಂದಿಗೆ ಕೇಳಿದರೆ “ಬೆಲೆ ಹೆಚ್ಚಳವಾಗಿದೆ ಬೇಕಿದ್ದರೆ ತೆಗೆದುಕೊಳ್ಳಿ” ಎಂದು ಹಾರಿಕೆ ಉತ್ತರ ನೀಡುತ್ತಾರೆ. ಇನ್ನು ಜನ ಅನಿವಾರ್ಯ ವಾಗಿ ಹೆಚ್ಚು ಹಣ ನೀಡಿ ಖರೀದಿಸುತ್ತಿದ್ದಾರೆ.
ಕಡಿಮೆ ದರದಲ್ಲಿ 6 ಪದರ ಮಾಸ್ಕ್ಗೆ ಬೇಡಿಕೆ: ಸದ್ಯ ಜನೌಷಧ ಮಳಿಗೆ ಔಷಧಪಟ್ಟಿಯಲ್ಲಿರುವ ಮಾಸ್ಕ್ ಮೂರು ಪದರದ್ದಾಗಿದ್ದು, ಕೊರೊನಾ ವೈರಸ್ ಸೋಂಕಿನಿಂದ ರಕ್ಷಿಸುವ ಆರು ಪದರದ ಮಾಸ್ಕ್ ಮಾರಾಟ ಮಾಡಬೇಕು. ಜತೆಗೆ ಬೆಲೆಯೂ ಅತ್ಯಂತ ಕಡಿಮೆ ನಿಗದಿಪಡಿಸಬೇಕು. ಇದರಿಂದ ಮಾಸ್ಕ್ ಮಾಫಿಯಾಗೆ ಕಡಿವಾಣ ಬೀಳಲಿದೆ ಎಂಬುದು ಆರೋಗ್ಯ ವಲಯ ತಜ್ಞರ ಹಾಗೂ ಸಾರ್ವಜನಿಕರ ಅಭಿಪ್ರಾಯ.
ಸಾಮಾನ್ಯ ದಿನಗಳಿಗಿಂತ ಬೇಡಿಕೆ ಮೂರುಪಟ್ಟು ಹೆಚ್ಚಳವಾಗಿದೆ. ಒಂದು ತಿಂಗಳಿಂದ ದಾಸ್ತಾನು ಕೊರತೆಯಿಂದ ಜನೌಷಧ ಪಟ್ಟಿಯಲ್ಲಿರುವ ಮಾಸ್ಕ್ಗಳ ಮಾರಾಟ ಸಾಧ್ಯವಾಗುತ್ತಿಲ್ಲ. ಶೀಘ್ರ ದಾಸ್ತಾನು ಪೂರೈಕೆಯಾಬೇಕಿದೆ.
-ರುದ್ರೇಶ್, ಹುಬ್ಬಳ್ಳಿ ಕೋರ್ಟ್ ಸರ್ಕಲ್ ಜನೌಷಧ ಮಳಿಗೆ
ಕೊರೊನಾ ಸೋಂಕು ಹಿನ್ನೆಲೆ ಅಗತ್ಯ ಮಾಸ್ಕ್ ಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲು ಸರ್ಕಾರ ಕ್ರಮವಹಿಸಬೇಕು. ಇದರಿಂದ ಖಾಸಗಿ ಮಾಸ್ಕ್ ದಂಧೆ ನಿಲ್ಲಲಿದೆ, ಬಡವರಿಗೂ ಅನುಕೂಲವಾಗಲಿದೆ.
-ಅಂಜನ್‌ಕುಮಾರ್, ನಾಗರಿಕ
ದಾಸ್ತಾನು ಕೊರತೆಯಿಂದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಎಂಎಸ್‌ಐಎಲ್ ನಿರ್ವಹಣೆ ಮಾಡುತ್ತಿರುವ 70ಕ್ಕೂ ಹೆಚ್ಚು ಜನೌಷಧ ಕೇಂದ್ರಗಳಲ್ಲಿ ಮಾಸ್ಕ್ ಮಾರಾಟ ಸಾಧ್ಯವಾಗುತ್ತಿಲ್ಲ.
-ಚಂದ್ರಶೇಖರ್, ಡಿಜಿಎಂ, ಎಂಎಸ್‌ಐಎಲ್
* ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.