ಮತಗಳ ತಾಳೆ: ಫಲಿತಾಂಶ ವಿಳಂಬ
Team Udayavani, May 14, 2019, 3:08 AM IST
ಬೆಂಗಳೂರು: ಲೋಕಸಭಾ ಚುನಾವಣೆಯ ಮತ ಎಣಿಕೆಗೆ ದಿನಗಣನೆ ಆರಂಭವಾಗಿದ್ದು, ಚುನಾವಣಾ ಆಯೋಗ ಸಿದ್ಧತೆಗಳನ್ನು ಚುರುಕುಗೊಳಿಸಿದೆ. ಆದರೆ, ಇವಿಎಂ-ವಿವಿಪ್ಯಾಟ್ ಮತಗಳ ತಾಳೆ ಹಾಕುವ ಬಗ್ಗೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕಾಗಿರುವುದರಿಂದ ಈ ಬಾರಿಯ ಮತ ಎಣಿಕೆ ನಿಧಾನವಾಗಲಿದ್ದು, ಫಲಿತಾಂಶ ವಿಳಂಬವಾಗಲಿದೆ.
ಏಕೆಂದರೆ, ಸುಪ್ರೀಂಕೋರ್ಟ್ ನಿರ್ದೇಶನದಂತೆ ಇವಿಎಂ-ವಿವಿಪ್ಯಾಟ್ ಮತಗಳನ್ನು ತಾಳೆ ಮಾಡಬೇಕಾಗಿದ್ದು, ಇದಕ್ಕಾಗಿ ಸಾಕಷ್ಟು ಸಮಯ ಹಿಡಿಯಲಿದೆ. ಅದಕ್ಕಾಗಿ ಎಲ್ಲ 28 ಲೋಕಸಭಾ ಕ್ಷೇತ್ರಗಳ ಸ್ಪಷ್ಟ ಚಿತ್ರಣ ಹೊರಬೀಳಲು ಸಂಜೆ ಆಗಬಹುದು. ಪ್ರತಿ ವಿಧನಸಭಾ ಕ್ಷೇತ್ರದ 5 ಮತಗಟ್ಟೆಗಳ ವಿವಿಪ್ಯಾಟ್ ಚೀಟಿಗಳನ್ನು ಎಣಿಕೆ ಮಾಡಬೇಕು. ಒಂದು ವಿವಿಪ್ಯಾಟ್‌ನ ಚೀಟಿ ಎಣಿಕೆ ಪೂರ್ಣಗೊಳಿಸಲು ಕನಿಷ್ಠ 45 ನಿಮಿಷ ಬೇಕು. ಅದರಂತೆ ಎಲ್ಲ 5 ವಿವಿಪ್ಯಾಟ್‌ಗಳ ಚೀಟಿಗಳ ಎಣಿಕೆಗೆ ಕನಿಷ್ಠ 3ರಿಂದ 4 ತಾಸು ಬೇಕು. ಇದು ಅಂತಿಮ ಫಲಿತಾಂಶ ವಿಳಂಬವಾಗಲು ಪ್ರಮುಖ ಕಾರಣ.
ಈ ಬಾರಿ ಇವಿಎಂ-ವಿವಿಪ್ಯಾಟ್ ಮತಗಳ ತಾಳೆ ಹಾಕಬೇಕಾಗಿರುವುದರಿಂದ ಮತ ಎಣಿಕೆಯ ಕೊನೆಯಲ್ಲಿ ಮತ ಎಣಿಕೆ ಕೇಂದ್ರದಲ್ಲಿರುವ 14 ಟೇಬಲ್‌ಗಳ ಪೈಕಿ ಕೊನೆಯ ಟೆಬಲ್‌ನ ವಿವಿಪ್ಯಾಟ್‌ನಲ್ಲಿನ ಮುದ್ರಿತ ಚೀಟಿಗಳನ್ನು ತಾಳೆ ಮಾಡಲಾಗುತ್ತದೆ. ಹಾಗಾಗಿ, ವಿವಿಪ್ಯಾಟ್ ಮತಗಳ ತಾಳೆ ಮುಗಿದ ಬಳಿಕವಷ್ಟೇ ಅಂತಿಮ ಫಲಿತಾಂಶ ಘೋಷಿಸಲಾಗುತ್ತದೆ. ಹೀಗಾಗಿ ಅಂತಿಮ ಫಲಿತಾಂಶ ಪ್ರಕಟವಾಗಲು ರಾತ್ರಿ 8 ಗಂಟೆ ಆಗಬಹುದು ಎಂದು ಆಯೋಗದ ಅಧಿಕಾರಿಗಳು ಹೇಳುತ್ತಾರೆ.
ಇವಿಎಂ ಗಳಲ್ಲಿ ಬಿದ್ದ ಮತಗಳನ್ನು ಖಾತರಿಪಡಿಸಿಕೊಳ್ಳಲು ವಿವಿಪ್ಯಾಟ್ ಪದ್ದತಿ ಜಾರಿಗೆ ತರಲಾಗಿದೆ. ಅದರಂತೆ, ಚುನಾವಣಾ ಆಯೋಗವು ಎಲ್ಲ ಅಭ್ಯರ್ಥಿಗಳಿಗೆ ಒಪ್ಪಿತವಾದ ಪ್ರತಿ ವಿಧಾನಸಭಾ ಕ್ಷೇತ್ರದ ಯಾವುದಾದರೂ 5 ಮತಗಟ್ಟೆಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಇವಿಎಂ ನಲ್ಲಿ ಬಿದ್ದ ಮತಗಳನ್ನು ವಿವಿಪ್ಯಾಟ್ ಚೀಟಿಗಳ ಜೊತೆಗೆ ತಾಳೆ ಮಾಡುತ್ತಿತ್ತು. ಆದರೆ, ಪ್ರತಿ ವಿಧಾನಸಭಾ ಕ್ಷೇತ್ರದ ಕನಿಷ್ಠ 5 ಮತಗಟ್ಟೆಗಳಲ್ಲಿ ಇವಿಎಂ-ವಿವಿಪ್ಯಾಟ್ ಮತಗಳನ್ನು ತಾಳೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಹಾಗಾಗಿ, ಈ ಬಾರಿಯ ಮತ ಎಣಿಕೆ ವೇಳೆ ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ನ ಈ ಆದೇಶ ಪಾಲಿಸಬೇಕಿದೆ.
5 ಮತಗಟ್ಟೆಗಳ ವಿವಿಪ್ಯಾಟ್ ಚೀಟಿಗಳ ಎಣಿಕೆ ಜೊತೆಗೆ ಎಣಿಕೆ ಆರಂಭವಾದ ಬಳಿಕ ಕೆಲವು ತಾಂತ್ರಿಕ ಕಾರಣಗಳು ಎದುರಾಗುತ್ತವೆ. ಕೆಲವು ಕಡೆ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಫಲಿತಾಂಶ ವಿಳಂಬವಾಗಲಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಬೇಕಾದ ಅಗತ್ಯ ತರಬೇತಿ ಕೊಡಲಾಗಿದ್ದು, ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳುತ್ತಾರೆ.
1,120 ಮತಗಟ್ಟೆಗಳಲ್ಲಿ “ಮತ ತಾಳೆ’: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 224 ವಿಧಾನಸಭಾ ಕ್ಷೇತ್ರಗಳಿದ್ದು, ಲೋಕಸಭಾ ಚುನಾವಣೆಯಲ್ಲಿ 58,186 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಈಗ ಸುಪ್ರೀಂ ಆದೇಶದಂತೆ ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳಲ್ಲಿ ಅಲ್ಲಿನ ಇವಿಎಂನಲ್ಲಿ ಬಿದ್ದ ಮತಗಳನ್ನು ವಿವಿಪ್ಯಾಟ್‌ನಲ್ಲಿನ ಮುದ್ರಿತ ಚೀಟಿಗಳೊಂದಿಗೆ ತಾಳೆ ಮಾಡಬೇಕು. ಅದರಂತೆ 224 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5 ರಂತೆ 28 ಲೋಕಸಭಾ ಕ್ಷೇತ್ರಗಳಲ್ಲಿ ತಲಾ 40ರಂತೆ ಒಟ್ಟು 1,120 ಮತಗಟ್ಟೆಗಳಲ್ಲಿ ಇವಿಎಂ-ವಿವಿಪ್ಯಾಟ್ ಮತಗಳ ತಾಳೆ ಮಾಡಬೇಕಾಗಿದೆ. ಇದಕ್ಕಾಗಿ ಚುನಾವಣಾ ಆಯೋಗಕ್ಕೆ ಹೆಚ್ಚುವರಿ 5 ಸಾವಿರ ಸಿಬ್ಬಂದಿ ಹಾಗೂ 3 ತಾಸು ಹೆಚ್ಚುವರಿ ಸಮಯ ಬೇಕಾಗುತ್ತದೆ.
ಸುಪ್ರೀಂಕೋರ್ಟ್ ಆದೇಶದಂತೆ ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳಲ್ಲಿ ವಿವಿಪ್ಯಾಟ್ ಮುದ್ರಿತ ಚೀಟಿಗಳನ್ನು ಎಣಿಕೆ ಮಾಡಿ ಇವಿಎಂ ಮತಗಳ ಜತೆ ತಾಳೆ ಹಾಕಬೇಕಾಗಿದೆ. ಇದಕ್ಕಾಗಿ ಸಾಕಷ್ಟು ಸಮಯ ಹಿಡಿಯಲಿದೆ. ಒಂದು ವಿವಿಪ್ಯಾಟ್‌ನ ಚೀಟಿಗಳ ಎಣಿಕೆಗೆ ಕನಿಷ್ಠ 45 ನಿಮಿಷ ಬೇಕು. ಹೀಗಾಗಿ, ಈ ಬಾರಿ ಒಟ್ಟಾರೆ ಅಂತಿಮ ಫಲಿತಾಂಶ ಹೊರಬರಲು ರಾತ್ರಿ 8 ಗಂಟೆ ಆಗಬಹುದು.
-ಸಂಜೀವ್ ಕುಮಾರ್, ರಾಜ್ಯ ಮುಖ್ಯ ಚುನಾವಣಾಧಿಕಾರಿ.
* ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.