ಕೋವಿಡ್ 19 ತಂದ ಸಂಕಷ್ಟ ಸುಧಾರಿಸಲಿ ಬದುಕು
Team Udayavani, May 25, 2020, 6:10 AM IST
ಸಾಂದರ್ಭಿಕ ಚಿತ್ರ.
ಲಾಕ್‌ಡೌನ್‌ನ ನಂತರದಿಂದ ದೇಶಾದ್ಯಂತ ಅಗಣಿತ ಪ್ರಮಾಣದಲ್ಲಿ ಸಂಕಷ್ಟದ ಕಥನಗಳು ಹೊರಹೊಮ್ಮುತ್ತಿವೆ. ಅದರಲ್ಲೂ ವಲಸಿಗ ಕಾರ್ಮಿಕರು ಹಾಗೂ ಬಡವರು ಪಡುತ್ತಿರುವ ಪಾಡಂತೂ ಹೃದಯವಿದ್ರಾವಕವಾಗಿದೆ. ಹಠಾತ್ತನೆ ಅವರ ನಿತ್ಯ ದುಡಿಮೆಯ ಹಾದಿಯೇ ಬಂದ್ ಆಗುತ್ತಿದ್ದಂತೆಯೇ ಈ ಬೃಹತ್ ವರ್ಗ ಸಂಕಷ್ಟಕ್ಕೆ ಈಡಾಯಿತು. ರೋಗಕ್ಕಿಂತಲೂ ಹೆಚ್ಚಾಗಿ ಉಪವಾಸದಿಂದ ಸಾಯುವ ಭಯ ಅನೇಕರಿಗೆ ಕಾಡಿದ್ದು ಸುಳ್ಳಲ್ಲ. ಈ ಕಾರಣಕ್ಕಾಗಿಯೇ, ಉಟ್ಟ ಬಟ್ಟೆಯ ಮೇಲೆಯೇ ಅನ್ಯ ದಾರಿ ತೋಚದೆ ದೇಶಾದ್ಯಂತ ಲಕ್ಷಾಂತರ ಜನ ತಮ್ಮ ಹಳ್ಳಿಗಳಿಗೆ ಹೊರಟುನಿಂತರು. ಸಾರಿಗೆಯ ಅಭಾವ ಎದುರಾದಾಗ ಕೆಲವರಂತೂ ನೂರಾರು ಕಿಲೋಮೀಟರ್ ನಡೆದೇ ಹೊರಟರು. ಬಿಸಿಲಲ್ಲಿ ಬರಿಗಾಲಲ್ಲಿ ನಡೆಯುತ್ತಾ ಹೊರಟವರ ಚಿತ್ರಣಗಳು ಯಾವ ಪ್ರಮಾಣದಲ್ಲಿ ಕೋವಿಡ್ 19 ಮಹಾಮಾರಿಯು ದೇಶದ ಅರ್ಥವ್ಯವಸ್ಥೆಯ ಮೇಲೆ ಆಕ್ರಮಣ ಮಾಡಿದೆ ಎನ್ನುವುದಕ್ಕೆ ದ್ಯೋತಕವಾಗಿದೆ.
ವಲಸಿಗ ಕಾರ್ಮಿಕರು, ಬಡವರು ತಮ್ಮ ಊರುಗಳಿಗೆ ಹಿಂದಿರುಗುವ ವೇಳೆಯಲ್ಲಿ ದುರಂತಗಳೂ ಘಟಿಸಿದವು. ಒಂದು ಘಟನೆಯಲ್ಲಂತೂ ಸುಸ್ತಾಗಿ ರೈಲ್ವೆ ಹಳಿಯ ಮೇಲೆ ಮಲಗಿದವರು ಪ್ರಾಣಕಳೆದುಕೊಂಡರು. ಸಿಕ್ಕ ವಾಹನವನ್ನೇರಿ ಹೋಗುವ ಸಂದರ್ಭದಲ್ಲಿ ಅಪಘಾತಕ್ಕೆ ಗುರಿಯಾಗಿ ಸಾವನ್ನಪ್ಪಿದವರ ಬಗ್ಗೆ ದಿನವೂ ವರದಿಯಾಗುತ್ತಿದೆ. ಅಪಘಾತಕ್ಕೀಡಾದ ತಂದೆಯನ್ನು ಕೂರಿಸಿಕೊಂಡು 1200 ಕಿಮೀ ಸೈಕಲ್ ತುಳಿದು ಊರು ತಲುಪಿದ ಘಟನೆಯೊಂದು ಜಗತ್ತಿನ ಗಮನಸೆಳೆದಿದೆ. ಕೋವಿಡ್ 19 ಸಂಕಟಗಳು ಯಾವ ಪ್ರಮಾಣದಲ್ಲಿದೆ ಎನ್ನುವುದಕ್ಕೆ ಈ ಘಟನೆಗಳು ಚಿಕ್ಕ ಉದಾಹರಣೆಗಳಷ್ಟೇ. ಇನ್ನು ಕೆಲವು ದಿನಗಳಿಂದ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳು ಅನ್ಯ ಭಾಗಗಳಲ್ಲಿ ಸಿಲುಕಿದ್ದ ತಮ್ಮ ರಾಜ್ಯದ ಜನರನ್ನು ಕರೆತಂದಿವೆ-ತರುತ್ತಿವೆ. ಆದರೆ ಈ ವೇಳೆಯಲ್ಲೇ ಹೀಗೆ ಕರೆತಂದ ಜನರಲ್ಲೂ ಕೋವಿಡ್ 19 ಪತ್ತೆಯಾಗುತ್ತಿರುವುದು ಆತಂಕದ ವಿಚಾರವೇ ಹೌದು. ಅದರಲ್ಲೂ ಮಹಾರಾಷ್ಟ್ರದಿಂದ ಹಿಂದಿರುಗಿದವರಲ್ಲೇ ಕೊರೊನಾ ಸೋಂಕು ಹೆಚ್ಚು ಪತ್ತೆಯಾಗುತ್ತಿದ್ದು, ಆ ರಾಜ್ಯದಲ್ಲಿ ಈ ರೋಗ ಯಾವ ಪ್ರಮಾಣದಲ್ಲಿ ಹರಡಿದೆಯೋ ಎಂದು ಆಘಾತವಾಗುವಂತಿದೆ. ಪ್ರಧಾನಿ ಮೋದಿಯವರೇ ಹೇಳಿರುವಂತೆ, ಈ ರೋಗ ಜಾತಿ, ಧರ್ಮ, ದೇಶ, ಬಡವ-ಶ್ರೀಮಂತ ಎಂದು ತಾರತಮ್ಯ ಮಾಡುವುದಿಲ್ಲ. ಆದರೆ, ಇದನ್ನು ಎದುರಿಸುವಲ್ಲಿ ಜನರಲ್ಲಿನ ಸಾಮರ್ಥ್ಯದಲ್ಲಿ ಭಿನ್ನತೆಯಿರುತ್ತದೆ ಎನ್ನುವುದಂತೂ ಸತ್ಯ.
ಇಂದಿಗೂ ದೇಶದ ಬಹುತೇಕ ಸರ್ಕಾರಿ ಆಸ್ಪತ್ರೆಗಳು ದುಸ್ಥಿತಿಯಲ್ಲೇ ಇವೆ. ಇದು ದಶಕಗಳಿಂದ ಆರೋಗ್ಯ ವ್ಯವಸ್ಥೆಯ ಮೇಲೆ ಮಾಡಿಕೊಂಡು ಬರಲಾಗುತ್ತಿರುವ ನಿರ್ಲಕ್ಷ್ಯದ ಪರಿಣಾಮವಷ್ಟೇ. ಇನ್ನು, ಪ್ರತಿ ರಾಜ್ಯದಲ್ಲೂ ಅಭಿವೃದ್ಧಿಯೆನ್ನುವುದು, ಕೆಲವೇ ಪ್ರದೇಶಗಳಿಗೆ ಸೀಮಿತವಾಗುತ್ತಾ ಬಂದಿದ್ದರಿಂದಾಗಿ ಬಹುಪಾಲು ಜನರ ಜೀವನ ಸುಧಾರಣೆಯಿಲ್ಲದೇ ಸೊರಗುತ್ತಲೇ ಸಾಗಿದೆ. ಈ ಕಾರಣಕ್ಕಾಗಿಯೇ, ಅನಿವಾರ್ಯವಾಗಿ ಬಹುದೊಡ್ಡ ಜನವರ್ಗವೊಂದು ನಗರ ಪ್ರದೇಶಗಳಿಗೆ ಬದುಕು ಅರಸಿ ಬರುತ್ತದೆ. ತಮ್ಮ ಹುಟ್ಟೂರುಗಳಲ್ಲಿ ಅನ್ನ ಹುಟ್ಟುತ್ತಿಲ್ಲವೆಂದು, ನಗರಗಳಿಗೆ ಬಂದವರು, ಈಗ ನಗರಗಳಲ್ಲಿಯೂ ಕಷ್ಟವೆದುರಾಗಿ ಹಿಂದಿರುಗುತ್ತಿರುವುದು ಬೇಸರದ ಸಂಗತಿ. ಆದಾಗ್ಯೂ, ಲಾಕ್‌ಡೌನ್ ನಿರ್ಬಂಧಗಳು ಸಡಿಲಗೊಂಡಿರುವುದರಿಂದಾಗಿ, ಈಗ ಅನೇಕ ಕ್ಷೇತ್ರಗಳು ಹಳಿಯೇರಿವೆ, ಕಷ್ಟಕ್ಕೆ ಸಿಲುಕಿರುವವರಿಗೆ ಸಮಾಧಾನ ಸಿಗುತ್ತದೆ ಎನ್ನುವುದು ನಿಜ. ಆದಷ್ಟು ಬೇಗನೇ, ಈ ಸಂಕಷ್ಟ ದೂರವಾಗಿ ಭಾರತೀಯರೆಲ್ಲರ ಬದುಕು ಮತ್ತೆ ಹಳಿಯೇರಲಿ, ಈ ಸಂಕಷ್ಟಗಳ ಪಾಠವನ್ನು ಸರ್ಕಾರಗಳು ಕಲಿಯುವಂತಾಗಲಿ ಎಂಬುದೇ ಎಲ್ಲರ ಆಶಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಸೇನಾ ವಾಹನ ದುರಂತ; ಕೊಡಗಿನ ಯೋಧ ಚಿಂತಾಜನಕ
Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.