![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Dec 13, 2023, 11:39 PM IST
ಬೆಳಗಾವಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನ. 4ರಂದು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರೊಂದಿಗೆ ಅಧಿಕಾರಿಯೊಬ್ಬರು ಅನುಚಿತವಾಗಿ ವರ್ತಿಸಿದ ಪ್ರಕರಣವನ್ನು ಸಭಾಪತಿ ಬಸವರಾಜ ಹೊರಟ್ಟಿ ಅವರು ಹಕ್ಕುಬಾಧ್ಯತಾ ಸಮಿತಿಗೆ ಒಪ್ಪಿಸಿದ್ದಾರೆ.
ಬುಧವಾರ ವಿಧಾನಪರಿಷತ್ತು ಕಲಾಪದಲ್ಲಿ ವಿಷಯ ಪ್ರಸ್ತಾವಿಸಿದ ಬಿಜೆಪಿಯ ಪ್ರತಾಪಸಿಂಹ ನಾಯಕ್, ರೈತರೊಬ್ಬರು ಹೊಲದಲ್ಲಿ ಮನೆ ಕಟ್ಟುವ ವಿಚಾರವಾಗಿ ಜನರೊಂದಿಗೆ ಸ್ಥಳಕ್ಕೆ ಹೊಗಿದ್ದಾಗ, ನಾನು ಶಾಸಕ ಎಂಬುದನ್ನು ಸಹ ಲೆಕ್ಕಿಸದೆ ಪೊಲೀಸ್ ಅಧಿಕಾರಿಗಳು ನನ್ನ ಮೇಲೆ ಹಲ್ಲೆಗೆ ಯತ್ನ ಮಾಡಿದ್ದಾರೆ. ನನ್ನ ಹಕ್ಕಿಗೆ ಚ್ಯುತಿ ಬಂದಿದ್ದು, ಹಕ್ಕುಚ್ಯುತಿ ಮಂಡಿಸುವುದಾಗಿ ತಿಳಿಸಿದರು.
ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಕರಣವನ್ನು ಹಕ್ಕುಬಾಧ್ಯತಾ ಸಮಿತಿಗೆ ಒಪ್ಪಿಸುವುದಾಗಿ ಪ್ರಕಟಿಸಿದರು.
ಬಿಜೆಪಿಯ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ಶಾಸಕರಿಗೆ ಹೆದರಿಸಿದ್ದು, ಶಾಸಕರೊಂದಿಗೆ ಕೈ ಕೈ ಮಿಲಾಯಿಸಿದ್ದು, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸ ಬೇಕೆಂದು ಒತ್ತಾಯಿಸಿದರು.
ಸಭಾಪತಿ ಹೊರಟ್ಟಿ ಮಾತನಾಡಿ, ಪ್ರಕರಣವನ್ನು ಹಕ್ಕುಬಾಧ್ಯತಾ ಸಮಿತಿಗೆ ಒಪ್ಪಿಸಿದ್ದೇನೆ. ಇದೀಗ ನೀವು ಅಧಿಕಾರಿ ಅಮಾನತು ಮಾಡಿ ಎಂದರೆ ನಾನೇನು ಮಾಡಲಿ, ಹಕ್ಕುಚ್ಯುತಿ ಸಮಿತಿಗೆ ನೀಡಿದ್ದನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ, ನೀವು ಬೇಕಿದ್ದರೆ ಅಧಿಕಾರಿಗಳ ಅಮಾನತು ಇನ್ನಿತರ ಕ್ರಮಕ್ಕೆ ಒತ್ತಾಯಿಸಬಹುದು. ಆದರೆ, ಹಕ್ಕುಬಾಧ್ಯತಾ ಸಮಿತಿಯಲ್ಲಿ ಎರಡು ಕಡೆಯವರನ್ನು ಕರೆಸಿ ಸಮಗ್ರವಾಗಿ ವಿಚಾರಣೆ ನಡೆಸಲಾಗುತ್ತದೆ ಎಂದರು.
ಸಚಿವ ರಾಜಣ್ಣ ಮಾತನಾಡಿ, ಪ್ರಕರಣದಲ್ಲಿ ಸರಕಾರ ಯಾರ ರಕ್ಷಣೆಗೂ ನಿಂತಿಲ್ಲ. ಹಕ್ಕುಚ್ಯುತಿ ಸಮಿತಿ ಏನೆಂದು ಹೇಳಲಿ ಅನಂತರ ಕ್ರಮ ಕೈಗೊಳ್ಳುತ್ತೇವೆ ಎಂದರು. ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಪ್ರಕರಣ ಹಕ್ಕುಬಾಧ್ಯತಾ ಸಮಿತಿಗೆ ವಹಿಸಲಾಗಿದ್ದು, ಸಮಿತಿಯಲ್ಲಿ ತೀರ್ಮಾನವಾಗಲಿದೆ ಎಂದರು.
You seem to have an Ad Blocker on.
To continue reading, please turn it off or whitelist Udayavani.