ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!
ಮಾಡರ್ನ್ ಆಧ್ಯಾತ್ಮ
Team Udayavani, Apr 13, 2020, 12:54 AM IST
ಪ್ರತಿಯೊಬ್ಬ ಹುಡುಗಿಗೂ ತಾನು ಸುಂದರವಾಗಿ ಕಾಣಿಸಬೇಕು ಎಂದು ಆಸೆಯಿರುತ್ತದೆ, ಅಂತೆಯೇ ಪ್ರತಿಯೊಬ್ಬ ಹುಡುಗನಿಗೂ ತಾನು ಹ್ಯಾಂಡ್ಸಂ ಆಗಿ ಕಾಣಿಸಬೇಕು ಎಂಬ ಬಯಕೆಯಿರುತ್ತದೆ. ಆದರೆ ಬಾಹ್ಯ ಸೌಂದರ್ಯವೇ ಮುಖ್ಯವೇನು? ಶಾಲೆಯಲ್ಲಿ ಮಗುವೊಂದಕ್ಕೆ ಶಿಕ್ಷಕರೊಬ್ಬರು ಕೇಳಿದರಂತೆ, ‘ನಾನು ಸುಂದರವಾಗಿದ್ದೇನೆ’ ಇದು ಯಾವ ಕಾಲ? ಮಗು ಹೇಳಿತಂತೆ “ಭೂತ ಕಾಲ’! ಈ ಮಾತು ಸತ್ಯವಲ್ಲವೇನು? ಒಂದಲ್ಲ ಒಂದು ದಿನ ನಮ್ಮ ಬಾಹ್ಯ ಸೌಂದರ್ಯವು ಭೂತಕಾಲದ ಸಂಗತಿಯಾಗುತ್ತದೆ ತಾನೆ!
ನನ್ನ ಗೆಳೆಯನೊಬ್ಬ ಹೇಳಿದ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಅವನ ಊರಿನ ಪಕ್ಕ ಒಂದು ಹಳ್ಳಿಯಿದೆಯಂತೆ. ಸುದ್ದಿ ಪತ್ರಿಕೆಗಳೂ ತಲುಪದ ಕುಗ್ರಾಮವದು. ಆದರೂ, ಆ ಗ್ರಾಮದ ವ್ಯಕ್ತಿಯೊಬ್ಬ ದೇಶದ ರಾಷ್ಟ್ರಪತಿಗಳ ಬಗ್ಗೆ ಬಹಳ ಕೇಳಿದ್ದನಂತೆ. ರಾಷ್ಟ್ರಪತಿಗಳು ಮಹಾನ್ ಮೇಧಾವಿಗಳು, ಸಾಧಕರು ಎನ್ನುವುದನ್ನು ಅವನಿಗೆ ಯಾರೋ ಹೇಳಿದ್ದರು.
ಹೀಗೆ ಒಂದು ದಿನ ಆ ರಾಷ್ಟ್ರಪತಿಗಳು ತನ್ನೂರಿನ ಸನಿಹದಲ್ಲಿರುವ ನಗರಕ್ಕೆ ಬರುತ್ತಿದ್ದಾರೆ ಎನ್ನುವ ಸುದ್ದಿ ಅವನಿಗೆ ತಿಳಿಯಿತು. ಹೇಗಾದರೂ ಮಾಡಿ, ರಾಷ್ಟ್ರಪತಿಗಳನ್ನುಭೇಟಿಯಾಗಲೇಬೇಕು ಎಂದು ನಿರ್ಧರಿಸಿದ ಗ್ರಾಮಸ್ಥ ಲಭ್ಯವಿದ್ದ ಸಾರಿಗೆಯನ್ನೇ ಬಳಸಿ ನಗರಕ್ಕೆ ಹೋಗಲು ನಿರ್ಧರಿಸಿದ. ಕೊನೆಗೆ 2-3 ಬಸ್ಸುಗಳನ್ನು ಬದಲಿಸಿ, ನಗರವನ್ನು ತಲುಪಿದ.
ರಾಷ್ಟ್ರಪತಿಗಳನ್ನು ನೋಡಲು ನೆರೆದಿದ್ದ ಸಾವಿರಾರು ಜನರಲ್ಲಿ ಈ ಹಳ್ಳಿಯವನೂ ಹೋಗಿ ನಿಂತ. ರಾಷ್ಟ್ರಪತಿ ಗಳು ಎಂದಾಕ್ಷಣ ಆ ವ್ಯಕ್ತಿಗೆ, ನೀಳಕಾಯದ, ಸ್ಪುರದ್ರೂಪಿ ವ್ಯಕ್ತಿಯ ಬಿಂಬ ತಲೆಯಲ್ಲಿ ಬರಲಾರಂಭಿಸಿತು. ಕುತೂಹಲ ತಡೆಯಲಾಗದೆ, ತನ್ನ ಪಕ್ಕದಲ್ಲೇ ಇದ್ದ ನಗರವಾಸಿಗೆ ಈ ಹಳ್ಳಿಯವ ಕೇಳಿದ- ‘ನೀನು ರಾಷ್ಟ್ರಪತಿಗಳನ್ನು ನೋಡಿದ್ದೀಯಾ? ಹೇಗೆ ಕಾಣಿಸ್ತಾರೆ ಅವರು?”
ನಗರವಾಸಿ ಹೇಳಿದನಂತೆ, “ಅಯ್ಯೋ ನೀವು ನೋಡಿಲ್ವಾ? ಹೊರಗೆಲ್ಲ ಅವರ ಪೋಸ್ಟರ್ ಹಾಕಿದಾರಲ್ವ? ನೋಡೋದಕ್ಕೆ ಹೇಳಿಕೊಳ್ಳುವಂತೆ ಇಲ್ಲ. ಸಾಮಾನ್ಯ ಇದ್ದಾರೆ.’ಅವನು ಹೀಗೆ ಹೇಳುತ್ತಿರುವಾಗಲೇ ಸಾರ್ವಜನಿಕರಿಂದ ಜೋರಾಗಿ ಜೈಕಾರ ಆರಂಭವಾಯಿತು. ಈ ಅಪಾರ ಗುಂಪಿನ ನಡುವಿಂದ ಜಾಗ ಮಾಡಿಕೊಂಡು ಬಂದೇ ಬಿಟ್ಟರು ನೋಡಿ ರಾಷ್ಟ್ರಪತಿಗಳು!
ಅತ್ಯಂತ ವಿನಮ್ರತೆಯಿಂದ ನಡೆದು ಬರುತ್ತಿದ್ದ ಆ ರಾಷ್ಟ್ರಪತಿಗಳು ಸಾವಿರಾರು ಜನರ ನಡುವೆಯೇ ಈ ಹಳ್ಳಿಯ ವ್ಯಕ್ತಿಯನ್ನು ಗಮನಿಸಿದರು. ಒಂದು ಕ್ಷಣ ನಿಂತು ಗ್ರಾಮಸ್ಥನ ಬಳಿ ಬಂದು, ಕೈ ಹಿಡಿದು “ಹೇಗಿದ್ದೀರಿ?’ ಎಂದು ದೇಖರೇಖೀ ವಿಚಾರಿಸಿದರಂತೆ!
ರಾಷ್ಟ್ರಪತಿಗಳು ಅತ್ತ ಹೋದನಂತರ ಆ ಹಳ್ಳಿಯವ ಉತ್ಸಾಹದಿಂದ ಕೂಗಿದನಂತೆ, “ಯಾರದು ಹೇಳಿದ್ದು, ರಾಷ್ಟ್ರಪತಿಗಳು ನೋಡಲು ಸಾಧಾರಣವಾಗಿದ್ದಾರೆ ಅಂತ! ಇಂಥ ಸುಂದರ ವ್ಯಕ್ತಿಯನ್ನು ನಾನು ಜೀವನದಲ್ಲೇ ನೋಡಿರಲಿಲ್ಲ” ಆ ರಾಷ್ಟ್ರಪತಿ ಬೇರ್ಯಾರೂ ಅಲ್ಲ. ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಎಂದು ಕರೆಸಿಕೊಳ್ಳುವ ದಿ. ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರು! ಒಮ್ಮೆ ಕಲಾಂ ಅವರೇ ಹೇಳಿದ್ದರು, ““I am not handsome but I can give my hand to someone who needs help because beauty is required in the heart, not in the face. ನೀವೂ ಹ್ಯಾಂಡ್‌ಸಂ ಆಗಬೇಕೇ? ಹಾಗಿದ್ದರೆ ನಿಮ್ಮ ಹ್ಯಾಂಡ್‌ಗಳನ್ನು ಇನ್ನೊಬ್ಬರ ಸಹಾಯಕ್ಕೆ ಚಾಚಿ. ಆಗ ನಿಮ್ಮಲ್ಲಿ ಎಂದಿಗೂ ಭೂತಕಾಲಕ್ಕೆ ಸೇರದ ಸೌಂದರ್ಯ ಮನೆಮಾಡುತ್ತದೆ!
ಇನ್ನೊಬ್ಬರಂತಾಗುವ ಹಂಬಲ ಹಾಗೂ ಹಣ್ಣಿನ ಕಥೆ ಒಂದು ದಿನ ಹಣ್ಣಿನ ಅಂಗಡಿಯೊಂದರ ಬುಟ್ಟಿಯಲ್ಲಿದ್ದ ನೇರಳೆ ಹಣ್ಣು ಭಗವಂತನಲ್ಲಿ ಬಹಳ ನೋವಿನಿಂದ ಪ್ರಾರ್ಥಿಸಿತು- “ಹೇ ದಯಾಮಯಿ ದೇವರೆ…ನನಗೆ ನೇರಳೆ ಹಣ್ಣಾಗಿ ಇರುವುದಕ್ಕೆ ಇಷ್ಟವಿಲ್ಲ. ನನ್ನನ್ನು ಬೇರೆ ಹಣ್ಣಾಗಿ ಬದಲಾಯಿಸು” ಅಂದಿತು.
ದೇವರು ಕೇಳಿದ- “ಯಾಕಪ್ಪ, ಮತ್ತೇನಾಗಬೇಕಿತ್ತು ನೀನು?’
“ನಾನು ನೇರಳೆ ಹಣ್ಣಾಗುವ ಬದಲು ಮಾವಿನ ಹಣ್ಣಾಗಿ ಇರಬೇಕಿತ್ತು! ಎಲ್ಲರೂ ಅದನ್ನೇ ಇಷ್ಟಪಡುತ್ತಾರೆ. ನೋಡಲ್ಲಿ… ಎಲ್ಲರೂ ಅದನ್ನೇ ಖರೀದಿಸುತ್ತಿದ್ದಾರೆ. ದಯವಿಟ್ಟೂ ನನ್ನನ್ನು ಮಾವಿನ ಹಣ್ಣಾಗಿ ಬದಲಾಯಿಸಿಬಿಡು” ಎಂದು ಕೇಳಿಕೊಂಡಿತು.
ದೇವರು ತಥಾಸ್ತು ಅಂದ. ನೇರಳೆ ಹಣ್ಣು ಕೂಡಲೇ ಮಾವಿನಹಣ್ಣಾಗಿ ಬದಲಾಯಿತು. ಸ್ವಲ್ಪ ಹೊತ್ತಲ್ಲೇ ಗ್ರಾಹಕನೊಬ್ಬ ಅಂಗಡಿಗೆ ಬಂದ. “”ಸರ್ ಒಂದು ಕೆ.ಜಿ. ಫ್ರೆಶ್….. ದ್ರಾಕ್ಷಿ ಹಣ್ಣು ಕೊಡಿ” ಅಂತ ಕೇಳಿದ. ಅವನು
ಮಾವಿನ ಹಣ್ಣಿನತ್ತ ತಿರುಗಿಯೂ ನೋಡಲಿಲ್ಲ! ಬೇಸರಗೊಂಡ ಮಾವಿನಹಣ್ಣು ದೇವರಲ್ಲಿ ಮತ್ತೆ ಪ್ರಾರ್ಥಿಸಿತು. “ಭಗವಂತ, ಆ ವ್ಯಕ್ತಿಗೆ ದ್ರಾಕ್ಷಿ ಇಷ್ಟವಂತೆ. ದ್ರಾಕ್ಷಿ ಯನ್ನು ಎಲ್ಲರೂ ಇಷ್ಟಪಡುತ್ತಾರೆ, ನನ್ನನ್ನು ಕೂಡಲೇ ದ್ರಾಕ್ಷಿಯಾಗಿ ಬದಲಾಯಿಸು.” ಆ ಹಣ್ಣು ಕೂಡಲೇ ದ್ರಾಕ್ಷಿ ಹಣ್ಣಿನ ಗೊಂಚಲಾಗಿ ಬದಲಾಯಿತು.
ಆ ವ್ಯಕ್ತಿ ಆ ಗೊಂಚಲಿಂದ ಒಂದು ದ್ರಾಕ್ಷಿ ಹಣ್ಣುಕಿತ್ತು ಬಾಯಿಗೆ ಹಾಕಿಕೊಂಡ. ಕೂಡಲೇ ಅವನು ಮುಖ ಕಿವುಚಿ “ಅಯ್ಯೋ ದ್ರಾಕ್ಷಿ ಸರಿಯಿಲ್ಲ”ಎಂದು ಉಗುಳಿಬಿಟ್ಟ!
ಇದರಿಂದ ಬೇಸರಗೊಂಡ ದ್ರಾಕ್ಷಿ. “ಭಗವಂತ ನನ್ನನ್ನು ಮೋಸಂಬಿ ಹಣ್ಣಾಗಿ ಮಾಡು. ಅದು ಎಲ್ಲರ ಫೇವರೇಟ್” ಎಂದು ಅಂಗಲಾಚಿತು. ದೇವರು ಮತ್ತೆ ತಥಾಸ್ತು ಅಂದ. ಕೂಡಲೇ ಅದು ಮೋಸಂಬಿಯಾಗಿ ಬದಲಾಯಿತು. ಆ ವ್ಯಕ್ತಿ ಮೋಸಂಬಿಯನ್ನು ಕೈಗೆತ್ತಿಕೊಂಡ. ಮೋಸಂಬಿಗೆ ಖುಷಿಯಾಯಿತು. ಆದರೆ ಆ ವ್ಯಕ್ತಿಯ ದೃಷ್ಟಿ, ಅದೇ ಅಂಗಡಿಯಲ್ಲಿಟ್ಟಿದ್ದ ಬೇರೆ ಹಣ್ಣಿನತ್ತ ಹೋಯಿತು.
ಅವನು ಮನಸ್ಸು ಬದಲಿಸಿ, ಮೋಸಂಬಿಯನ್ನು ಅದರ ಜಾಗದಲ್ಲೇ ಇಟ್ಟು, ಮೂಲೆಯಲ್ಲಿಟ್ಟಿದ್ದ ಆ ಹಣ್ಣನ್ನು ಬುಟ್ಟಿಗೆ ಹಾಕಿಕೊಳ್ಳಲಾರಂಭಿಸಿದ. ಮೋಸಂಬಿಗೆ ಬೇಸರದ ಜತೆಗೆ, ಕುತೂಹಲವೂ ಆಯಿತು. ಗ್ರಾಹಕ ಯಾವ ಹಣ್ಣು ತೆಗೆದುಕೊಳ್ಳುತ್ತಿದ್ದಾನೆ ಎಂದು ನೋಡಿತು.”ನೇರಳೆ ಹಣ್ಣು”! ಆ ವ್ಯಕ್ತಿ
ಆಸೆಯ ಕಣ್ಣುಗಳಿಂದ ನೇರಳೆಹಣ್ಣುಗಳನ್ನು ಆಯ್ದುಕೊಳ್ಳುತ್ತಿದ್ದ! ಮೋಸಂಬಿಗೆ, ಸತ್ಯ ಅರಿವಾಯಿತು. ಎಲ್ಲಾ ಹಣ್ಣಿಗೂ ಅದರದ್ದೇ ಆದ ವಿಶಿಷ್ಟ ಗುಣವಿದೆ. ಯಾವುದೂ ಶ್ರೇಷ್ಠ ಅಲ್ಲ, ಯಾವುದೂ ಕನಿಷ್ಠ ಅಲ್ಲ. ತಾನು ತಾನಾಗಿಯೇ ಇರುವುದು ಒಳಿತು!
ಗೆಳೆಯರೇ…ನಾವೆಲ್ಲರೂ ಒಬ್ಬರಿಗಿಂತ ಒಬ್ಬರು ಭಿನ್ನರಾಗಿದ್ದೇವೆ. ದೇವರು ನಮ್ಮನ್ನು ಪರಸ್ಪರ ಭಿನ್ನವಾಗಿ ಸೃಷ್ಟಿ ಮಾಡಿದ್ದಾನೆ. ನಮ್ಮ ಸ್ವಭಾವಗಳು ಭಿನ್ನವಾಗಿವೆ, ನಾವು ಒಬ್ಬರಿಗಿಂತ ಒಬ್ಬರು ಭಿನ್ನವಾಗಿ ಕಾಣುತ್ತೇವೆ, ನಮ್ಮ ಬೇಕು-ಬೇಡಗಳು ಭಿನ್ನವಾಗಿವೆ. ಈ ಭಿನ್ನತೆಯೇ ನಮ್ಮಲ್ಲಿನ ಶಕ್ತಿ.
ಹೀಗಿರುವಾಗ, ಇನ್ನೊಬ್ಬರಂತಾಗಬೇಕು ಎಂದೇಕೆ ಬಯಸುತ್ತೀರಿ? ಏಕೆ ಹಾಗೆ ಮಾಡುವ ಮೂಲಕ ಸೃಷ್ಟಿಕರ್ತನನ್ನು ಅಪಮಾನಿಸುತ್ತಿದ್ದೀರಿ? ನೇರಳೆ ಹಣ್ಣು ಮಾವಿನ ಹಣ್ಣಿಗಿಂತ ಭಿನ್ನವಾದದ್ದು, ಹಾಗೆಂದು ಅದು ಕನಿಷ್ಠವಾದದ್ದಂತೂ ಅಲ್ಲ. ನೀವು ನೀವಾಗಿರಲು ಖುಷಿಪಡಿ. ನಿಮ್ಮ ಸಾಮರ್ಥ್ಯವನ್ನು, ನಿಮ್ಮ ವಿಶಿಷ್ಟತೆಯನ್ನು ಗುರುತಿಸಿ.
ಇನ್ನೊಬ್ಬರು ಏನು ಮಾಡುತ್ತಿದ್ದಾರೆ ಎಂದಲ್ಲ, ನೀವೇನು ಮಾಡಿದರೆ ಬೆಳೆಯುತ್ತೀರಿ ಎನ್ನುವ ಅರಿವು ನಿಮಗಿರಬೇಕು. ಡೋಂಟ್ ಫಾಲೋ ಪೀಪಲ್, ಫಾಲೋ ಯುವರ್ ಪ್ಯಾಶನ್! ನಿಮ್ಮ ಅಸ್ತಿತ್ವ, ನಿಮ್ಮ ಸಾಮರ್ಥ್ಯ, ನಿಮ್ಮ ಸ್ವಭಾವ ಅಸಲಿ ಎನ್ನುವುದು ಅರಿವಿರಿಲಿ. ಇನ್ನೊಬ್ಬರ ಫೋಟೋಕಾಪಿ ಆಗದಿರಿ. ಇನ್ನೊಬ್ಬರಿಂದ ಸ್ಫೂರ್ತಿ ಪಡೆಯಿರಿ. ಆ ಸ್ಫೂರ್ತಿಯು ನಿಮ್ಮ ಸಾಮರ್ಥ್ಯವನ್ನು ಉದ್ದೀಪಿಸುವಂತಾಗಬೇಕು. ಆದರೆ ನಕಲು ಮಾತ್ರ ಮಾಡಬೇಡಿ.
– ಗೌರ್ ಗೋಪಾಲದಾಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.